ಹಾಲು-ಹಣದ ಸೋರಿಕೆಗೆ ಬ್ರೇಕ್! ಹಾಲು ಉತ್ಪನ್ನಗಳ ಮಾರಾಟವೂ ಹೆಚ್ಚಳ: ರೈತರಿಗೆ ಬಂಪರ್ ಲಾಭಾಂಶ ನೀಡಿದ ಹಾಲು ಉತ್ಪಾದಕರ ಸಂಘ

ರಾಜ್ಯದ ಅನೇಕ ಒಕ್ಕೂಟಗಳು ಸದ್ಯ ನಷ್ಟದಲ್ಲಿವೆ. ಆದರೆ ಕಲಬುರಗಿ ಕೆಎಂಎಫ್ ಲಾಭ ಗಳಿಸಿದ್ದು ಇದಕ್ಕೆ ಪ್ರಮುಖ ಕಾರಣ, ಒಕ್ಕೂಟದ ಆಡಳಿತದಲ್ಲಿ ಮಾಡಿರುವ ಅನೇಕ ಬದಲಾವಣೆಗಳು. ಹಾಲು ಮತ್ತು ಹಣದ ಸೋರಿಕೆಯನ್ನು ನಿಲ್ಲಿಸಿದ್ದರಿಂದ ಒಕ್ಕೂಟಕ್ಕೆ ಹೆಚ್ಚಿನ ಲಾಭವಾಗುತ್ತಿದೆ.

ಹಾಲು-ಹಣದ ಸೋರಿಕೆಗೆ ಬ್ರೇಕ್! ಹಾಲು ಉತ್ಪನ್ನಗಳ ಮಾರಾಟವೂ ಹೆಚ್ಚಳ: ರೈತರಿಗೆ ಬಂಪರ್ ಲಾಭಾಂಶ ನೀಡಿದ ಹಾಲು ಉತ್ಪಾದಕರ ಸಂಘ
ಕಲಬುರಗಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ
Follow us
preethi shettigar
| Updated By: ಪೃಥ್ವಿಶಂಕರ

Updated on:Jan 27, 2021 | 1:22 PM

ಕಲಬುರಗಿ: ನಗರದಲ್ಲಿರುವ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಅನೇಕ ವರ್ಷಗಳಿಂದ ಹಾಲು ಉತ್ಪಾದಕರಿಗೆ ನೆರವು ನೀಡಿರುವ ಸುದ್ದಿಗಿಂತ ಬೇರೆ ಕಾರಣಗಳಿಂದಲೇ ಹೆಚ್ಚು ಸುದ್ದಿಯಾಗಿತ್ತು. ಒಕ್ಕೂಟದ ವಿರುದ್ಧ ಹಾಲು ಉತ್ಪಾದಕರ ಆಕ್ರೋಶ, ಪ್ರೋತ್ಸಾಹ ಧನದ ಗೋಲ್​ ಮಾಲ್ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳಿಂದ ಕೆಎಂಎಫ್ ಸುದ್ದಿಯಾಗಿತ್ತು.

ಆದರೆ ಇದೇ ಮೊದಲ ಬಾರಿಗೆ ಈ ಒಕ್ಕೂಟವು ರೈತರಿಗೆ 2 ಕೋಟಿ ರೂಪಾಯಿ ಲಾಭಾಂಶ ನೀಡುವ ಮೂಲಕ ವಿಶಿಷ್ಟವಾಗಿ ಗಣರಾಜ್ಯೋತ್ಸವದ ಕೊಡುಗೆ ನೀಡಿದೆ. ಆ ಮೂಲಕ ಕೆಎಂಎಫ್ ಬದಲಾವಣೆಯನ್ನು ತೋರಿಸುವುದರ ಜೊತೆಗೆ, ಒಕ್ಕೂಟವು ಇನ್ನು ಮುಂದೆ ಹಾಲು ಉತ್ಪಾದಕರ ಜೊತೆ ಸದಾ ಇರಲಿದೆ ಎಂಬುದು ಎತ್ತಿತೋರಿದೆ.

ಹಾಲು ಉತ್ಪಾದಕರಿಗೆ ಭರ್ಜರಿ ಕೊಡುಗೆ: ಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವ ಒಕ್ಕೂಟದ ಅಧ್ಯಕ್ಷ್ಯ ಆರ್. ಕೆ. ಪಾಟೀಲ್, ರೈತರಿಗೆ 2 ಕೋಟಿ ರೂಪಾಯಿ ಲಾಭಾಂಶ ನೀಡುವುದಾಗಿ ಘೋಷಿಸಿದ್ದಾರೆ. ರೈತರಿಂದ ಖರೀದಿಸುವ ಹಾಲಿಗೆ ಹೆಚ್ಚಿನ ಹಣ ನೀಡುವ ಮೂಲಕ ಲಾಭಾಂಶವನ್ನು ಹಂಚಲು ಕೆಎಂಎಫ್ ಮುಂದಾಗಿದೆ. ಆಕಳಿನ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಮತ್ತು ಪ್ರತಿ ಲೀಟರ್ ಎಮ್ಮೆ ಹಾಲಿಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚಿತ್ರಣ

ಇದರಿಂದ ಆಕಳಿನ ಪ್ರತಿ ಲೀಟರ್ ಹಾಲಿಗೆ 27.60 ರೂಪಾಯಿ, ಪ್ರತಿ ಲೀಟರ್ ಎಮ್ಮೆ ಹಾಲಿಗೆ 34.80 ರೂಪಾಯಿ ಹಣ ಹಾಲು ಉತ್ಪಾದಕರಿಗೆ ಸಿಗಲಿದ್ದು, ಜನವರಿ 26 ರಿಂದ ಮೇ ಅಂತ್ಯದವರೆಗೆ ಹಾಲು ಉತ್ಪಾದಕರಿಗೆ ಹೆಚ್ಚುವರಿ ಹಣ ನೀಡಲಾಗುತ್ತದೆ. ಇದರ ಜೊತೆಗೆ ಹಾಲು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ, ಪಶು ಆಹಾರದ ಮೇಲಿನ ದರವನ್ನು ಕೂಡ ಕಡಿಮೆ ಮಾಡಲಾಗಿದೆ. ಪ್ರತಿ ಟನ್ ಪಶು ಆಹಾರದ ಮೇಲೆ 1000 ರೂಪಾಯಿ ರಿಯಾಯತಿ ನೀಡುವ ಮೂಲಕ ಹಾಲು ಉತ್ಪಾದಕರಿಗೆ ಒಕ್ಕೂಟ ಭರ್ಜರಿ ಗಿಪ್ಟ್ ನೀಡಿದೆ.

ಲಾಭಾಂಶ ನೀಡಿಕೆ ಒಕ್ಕೂಟದ ಇತಿಹಾಸದಲ್ಲಿಯೇ ಮೊದಲು! ರಾಜ್ಯದಲ್ಲಿ ಒಟ್ಟು 16 ಹಾಲು ಒಕ್ಕೂಟಗಳಿವೆ. ಅದರಲ್ಲಿ ದಕ್ಷಿಣ ಕನ್ನಡ ಒಕ್ಕೂಟ ಹೊರತುಪಡಿಸಿ, ಬೇರೆ ಯಾವ ಒಕ್ಕೂಟವು ಇಷ್ಟೊಂದು ಲಾಭಾಂಶವನ್ನು ರೈತರಿಗೆ ನೀಡಿಲ್ಲ. ಇನ್ನು ಪ್ರತಿ ಬಾರಿ ಸರ್ಕಾರ ಹಾಲಿನ ಬೆಲೆಯನ್ನು ಹೆಚ್ಚಿಸಿದಾಗ ಮಾತ್ರ ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಲೆ ಸಿಗುತ್ತಿತ್ತು. ಆದರೆ ಇದೀಗ ಕಲಬುರಗಿ, ಬೀದರ್, ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಾಭ ಗಳಿಸಿದ್ದರಿಂದ ಹೆಚ್ಚುವರಿ ಲಾಭಾಂಶವನ್ನು ನೀಡಿದೆ. ಇದು ಒಕ್ಕೂಟದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎನ್ನುವುದು ಮತ್ತೊಂದು ಹೆಮ್ಮೆಯ ವಿಷಯವಾಗಿದೆ.

ರೈತರಿಗೆ ಲಾಭ ನೀಡಲು ಮುಂದಾದ ಹಾಲು ಒಕ್ಕೂಟ

ಒಕ್ಕೂಟಕ್ಕೆ ಲಾಭವಾಗಿದ್ದು ಹೇಗೆ? ರಾಜ್ಯದ ಅನೇಕ ಒಕ್ಕೂಟಗಳು ಸದ್ಯ ನಷ್ಟದಲ್ಲಿವೆ. ಆದರೆ ಕಲಬುರಗಿ ಕೆಎಂಎಫ್ ಲಾಭ ಗಳಿಸಿದ್ದು ಇದಕ್ಕೆ ಪ್ರಮುಖ ಕಾರಣ, ಒಕ್ಕೂಟದ ಆಡಳಿತದಲ್ಲಿ ಮಾಡಿರುವ ಅನೇಕ ಬದಲಾವಣೆಗಳು. ಹಾಲು ಮತ್ತು ಹಣದ ಸೋರಿಕೆಯನ್ನು ನಿಲ್ಲಿಸಿದ್ದರಿಂದ ಒಕ್ಕೂಟಕ್ಕೆ ಹೆಚ್ಚಿನ ಲಾಭವಾಗುತ್ತಿದೆ. ಇದರ ಜೊತೆಗೆ ನಂದಿನಿ ಉತ್ಪನ್ನಗಳನ್ನು ಹೆಚ್ಚಿನ ಜನರು ಇದೀಗ ಖರೀದಿಸುತ್ತಿದ್ದಾರೆ.

ಜೊತೆಗೆ ಲಾಕ್ ಡೌನ್ ಸಮಯದಲ್ಲಿ ಮಹಾರಾಷ್ಟ್ರದಿಂದ ಬರುತ್ತಿದ್ದ ಹಾಲು ನಿಂತಿತ್ತು. ಹೀಗಾಗಿ ಬಹುತೇಕರು ನಂದಿನಿ ಹಾಲು ಮತ್ತು ನಂದಿನಿ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಖರೀದಿಸಿದ್ದರಿಂದ ಒಕ್ಕೂಟಕ್ಕೆ ಹೆಚ್ಚಿನ ಲಾಭ ಬಂದಿದೆ. ಬಂದಿರುವ ಲಾಭವನ್ನು ರೈತರಿಗೆ ನೀಡುವ ಮೂಲಕ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವುದು ಒಕ್ಕೂಟದ ಉದ್ದೇಶವಾಗಿದೆ. ಹೀಗಾಗಿ ಲಾಭಾಂಶವನ್ನು ಬೇರೆ ಕಡೆ ಖರ್ಚು ಮಾಡದೆ, ಅದನ್ನು ರೈತರಿಗೆ ನೀಡಲು ಮುಂದಾಗಿದೆ.

ಒಕ್ಕೂಟ ಮೊದಲ ಬಾರಿಗೆ ಹೆಚ್ಚಿನ ಲಾಭಾಂಶವನ್ನುಗಳಿಸಿದೆ. ಬಂದ ಲಾಭವನ್ನು ಹಾಲು ಉತ್ಪಾದಕರಿಗೆ ನೀಡಲು ನಿರ್ಧರಿಸಲಾಗಿದೆ. ಆ ಮೂಲಕ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸವುದು ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ. ಈ ಭಾಗದಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಒಕ್ಕೂಟ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹಾಲು ಉತ್ಪಾದಕರ ಜೊತೆ ಒಕ್ಕೂಟ ಸದಾ ಇರುತ್ತದೆ ಎಂದು ಕಲಬುರಗಿ, ಬೀದರ್​, ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಆರ್. ಕೆ. ಪಾಟೀಲ್ ಹೇಳಿದ್ದಾರೆ.

ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಅವ್ಯವಹಾರ ಆರೋಪ: ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ

Published On - 1:21 pm, Wed, 27 January 21