ಅಬ್ದುಲ್ ರಜಾಕ್ ತರಿಸಿದ್ದು ನಾಯಿ ಮಾಂಸವಲ್ಲ, ಕುರಿ ಮಾಂಸ: ಲ್ಯಾಬ್ ವರದಿಯಲ್ಲಿ ಕುರಿ ತಳಿ ಪತ್ತೆ
ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಪತ್ತೆಯಾಗಿರುವುದು ನಾಯಿ ಮಾಂಸ ಅಲ್ಲ ಅದು ಕುರಿ ಮಾಂಸ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ. ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿ ಪ್ರಕಟಿಸಿದ ಆಹಾರ ಇಲಾಖೆ, ನಾಯಿ ಮಾಂಸ ಅಲ್ಲ, ಅದು ಕುರಿ ಮಾಂಸ ಅಂತ ವರದಿ ಬಿಡುಗಡೆ ಮಾಡಿದೆ.
ಬೆಂಗಳೂರು, ಜುಲೈ 31: ಇಡೀ ಬೆಂಗಳೂರನ್ನೇ (Bengaluru) ಬೆಚ್ಚಿ ಬೀಳಿಸಿದ್ದ ಕುರಿ ಮಾಂಸದ ಜತೆ ನಾಯಿ ಮಾಂಸ (dog meat) ಬೆರೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಲ್ಯಾಬ್ ರಿಪೋರ್ಟ್ ಬಂದಿದ್ದು, ಅದು ಕುರಿ ಮಾಂಸ ಅನ್ನೋದು ದೃಢವಾಗಿದೆ. ಈ ಬಗ್ಗೆ ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿಯನ್ನು ಆಹಾರ ಇಲಾಖೆ ಪ್ರಕಟಿಸಿದೆ. ಅದು ನಾಯಿ ಮಾಂಸ ಅಲ್ಲ, ಶಿರೋಹಿ ತಳಿಯ ಕುರಿ ಮಾಂಸ ಅಂತಾ ವರದಿಯಲ್ಲಿ ಬಹಿರಂಗ ಪಡಿಸಲಾಗಿದೆ.
ನಾಯಿ ಮಾಂಸವನ್ನು ತರಿಸಲಾಗುತ್ತೆ ಹೋರಾಟಗಾರ ಪುನೀತ್ ಕೆರೆಹಳ್ಳಿ ಗಂಭೀರ ಆರೋಪ ಮಾಡಿದ್ದರು. ಕುರಿ ಮಾಂಸದ ಜತೆ ನಾಯಿ ಮಾಂಸ ಬೆರೆಸಲಾಗಿದೆ ಎಂಬ ಆರೋಪದ ಬೆನ್ನಲ್ಲೆ ಸತ್ಯ ಸತ್ಯತೆ ತಿಳಿಯಲು ಆಹಾರ ಇಲಾಖೆ ಟೆಸ್ಟಿಂಗ್ ಮಾಡಲು ಹೈದರಾಬಾದ್‌ನ ಲ್ಯಾಬ್ಗೆ ಸ್ಯಾಂಪಲ್ ಕಳಿಹಿಸಲಾಗಿತ್ತು. ಸದ್ಯ ಲ್ಯಾಬ್ ರಿಪೋರ್ಟ್ನಲ್ಲಿ ಕುರಿ ಮಾಂಸ ಅನ್ನೋದು ದೃಢವಾಗಿದ್ದು, ಮಾಂಸದ ಬಗ್ಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಪರವಾಗಿ ಪೊಲೀಸ್ ಠಾಣೆಗೆ ಹೋಗಿದ್ದ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್
ಹೈದರಾಬಾದ್‌ನ ನ್ಯಾಷನಲ್ ಮೀಟ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಪರೀಕ್ಷೆ ಮಾಡಲಾಗಿದೆ. S Ovis Aries ಎಂದು ಲ್ಯಾಬ್ ವರದಿಯಲ್ಲಿ ಬಂದಿದೆ. ಅಂದರೆ ಅದು ಕುರಿಯ ವೈಜ್ಞಾನಿಕ ಹೆಸರಾಗಿದ್ದು, ಹೀಗಾಗಿ ಇದು ಕುರಿ ಮಾಂಸವೇ ಎಂದು ಇಲಾಖೆ ಆಯುಕ್ತ ಶ್ರೀನಿವಾಸ್ ಅಧಿಕೃತವಾಗಿ ಹೇಳಿದ್ದಾರೆ.
ಜುಲೈ 26ರಂದು ಜೈಪುರದಿಂದ ಲೋಡ್ಗಟ್ಟಲೇ ಬಂದಿದ್ದ ಬಾಕ್ಸ್ಗಳು ಮೆಜೆಸ್ಟಿಕ್ನಲ್ಲಿ ಅನ್ಲೋಡ್ ಆಗ್ತಿದ್ದಂತೆ ಪುನೀತ್ ಕೆರೆಹಳ್ಳಿ ತಂಡ ದಾಳಿ ಮಾಡಿತ್ತು. ಬಾಕ್ಸ್ಗಳಲ್ಲಿ ಇರೋದು ನಾಯಿ ಮಾಂಸ. ಕುರಿ ಮಾಂಸದ ಜೊತೆ ನಾಯಿ ಮಾಂಸವನ್ನೂ ಮಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಪುನೀತ್ ಕೆರೆಹಳ್ಳಿ 14 ದಿನ ನ್ಯಾಯಾಂಗ ಬಂಧನ
ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಹಾಗೂ ಪುನೀತ್ ಕೆರೆಹಳ್ಳಿ ನಡುವೆ ವಾಗ್ವಾದವೂ ನಡೆದಿತ್ತು. ಬಳಿಕ ನಾಯಿ ಮಾಂಸ ಫೈಟ್ ಪೊಲೀಸ್ ಠಾಣೆ ಹಾಗೂ ಆಹಾರ ಇಲಾಖೆಯ ಮೆಟ್ಟಿಲೇರಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.