ಪುನೀತ್ ಕೆರೆಹಳ್ಳಿ ಪರವಾಗಿ ಪೊಲೀಸ್ ಠಾಣೆಗೆ ಹೋಗಿದ್ದ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್
ಬಸವೇಶ್ವರನಗರ ಪೊಲೀಸ್ ಠಾಣೆ ಮುಂದೆ ಅಕ್ರಮವಾಗಿ ಗುಂಪುಗೂಡಿ ಪ್ರತಿಭಟನೆ ನಡೆಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ(Pratap Simha), ಪುನೀತ್ ಕೆರೆಹಳ್ಳಿ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು, ಜು.31: ಪುನೀತ್ ಕೆರೆಹಳ್ಳಿ(Puneeth kerehalli)ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆತನ ಪರವಾಗಿ ಬಸವೇಶ್ವರನಗರ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎ1 ಪುನೀತ್ ಕೆರೆಹಳ್ಳಿ , ಎ2 ಪ್ರತಾಪ್ ಸಿಂಹ ಎಂದು ಉಲ್ಲೇಖಿಸಲಾಗಿದೆ. ಪೊಲೀಸ್ ಠಾಣೆ ಮುಂದೆ ಅಕ್ರಮವಾಗಿ ಗುಂಪುಗೂಡಿ ಪ್ರತಿಭಟನೆ ನಡೆಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ.
ಘಟನೆ ವಿವರ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಜೈಪುರದಿಂದ ಬಂದಿದ್ದ ಲೋಡ್ಗಟ್ಟಲೇ ಬಾಕ್ಸ್ಗಳಲ್ಲಿ ನಾಯಿ ಮಾಂಸ ಇದೆ ಎಂದು ಪುನೀತ್ ಕೆರೆಹಳ್ಳಿ ತಂಡ ದಾಳಿ ಮಾಡಿತ್ತು. ಕುರಿ ಮಾಂಸದ ಜೊತೆ ನಾಯಿ ಮಾಂಸವನ್ನೂ ಮಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿ, ಹೈಡ್ರಾಮಾ ಮಾಡಿದ್ದರು. ಈ ಹಿನ್ನಲೆ ರಸ್ತೆಯಲ್ಲಿ ಗಲಾಟೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ 2ಕೇಸ್ ಹಾಕಿ ಅರೆಸ್ಟ್ ಮಾಡಿದ್ದರು.
ಇದನ್ನೂ ಓದಿ:ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ಆರೋಪ: ಎಸಿಪಿ ವಿರುದ್ಧ ದೂರು, ಪ್ರತಾಪ್ ಸಿಂಹ ಹೇಳಿದ್ದಿಷ್ಟು!
ಬಳಿಕ ಪುನೀತ್ ಕೆರೆಹಳ್ಳಿ ಮೇಲೆ ಎಸಿಪಿ ಚಂದನ್ ಕುಮಾರ್ ಹಲ್ಲೆ ಮಾಡಿದ್ದಾರೆ ಎಂದು ಅವರ ವಿರುದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ಪುನೀತ್ ಕೆರೆಹಳ್ಳಿ ಹಾಗೂ ಶಾಸಕ ಹರೀಶ್ ಪೂಂಜಾ ಅವರು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಅವರ ಬಳಿ ದೂರು ನೀಡಿದ್ದರು. ಜೊತೆಗೆ ಕೆಲವು ಪೊಲೀಸರು ಹೀರೋಗಳಾಗುವುದಕ್ಕೆ ಇತರ ಮಾಡುತ್ತಾರೆ. ಇಂತಹ ಘಟನೆ ಆಗಬಾರದು ಎಂದು ಮನವರಿಕೆ ಮಾಡಲು ಬಂದಿದ್ದೇವೆ ಪೊಲೀಸರ ವಿರುದ್ದ ಕಿಡಿಕಾರಿದ್ದರು. ಇದೀಗ ಪುನೀತ್ ಕೆರೆಹಳ್ಳಿ, ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ದ ಎಫ್ಐಆರ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:40 pm, Wed, 31 July 24