ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಾಳೆಯಿಂದಲೇ ಆನ್ಲೈನ್ ತರಗತಿಗಳು ಆರಂಭ, ವೇಳಾಪಟ್ಟಿ ಪ್ರಕಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ
ಪದವಿ ಪುರ್ವ ಕಾಲೇಜುಗಳಲ್ಲಿ ತರಗತಿಗಳನ್ನು ಸೂಕ್ತ ರೀತಿಯಲ್ಲಿ ನಡೆಸುತ್ತಿರುವ ಬಗ್ಗೆ ಆಯಾ ಜಿಲ್ಲೆಗಳ ಉಪ ನಿರ್ದೇಶಕರು ಆಗಾಗ ಕಾಲೇಜುಗಳಿಗೆ ಭೇಟಿ ನೀಡಿ ಖಾತರಿ ಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಬೆಂಗಳೂರು: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಾಳೆಯಿಂದಲೇ (ಗುರುವಾರ) ಅನ್ಲೈನ್ ತರಗತಿಗಳನ್ನು ಆರಂಭಿಸುವಂತೆ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಬುಧವಾರದಂದು ಒಂದು ಸುತ್ತೋಲೆಯನ್ನು ಕಳಿಸಿದೆ. ಅದರರ್ಥ ದ್ವಿತೀಯ ಪಿಯು ಓದುತ್ತಿರುವ ಮಕ್ಕಳಿಗೆ ಜುಲೈ 15ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಇನ್ನೂ ಆರಂಭವಾಗದ ಕಾರಣ ಅನ್ಲೈನ್ ಕ್ಲಾಸ್ಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲೇಬೇಕಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ, ಈ ಬಾರಿ ತರಗತಿಗಳನ್ನು ನಡೆಸಲಿರುವ ವಿಧಾನ ಕಳೆದ ವರ್ಷಕ್ಕಿಂತ ಭಿನ್ನವಾಗಿದೆ. 2020-21 ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪ್ರೀ-ರೆಕಾರ್ಡೆಡ್ ಯೂಟ್ಯೂಬ್ ಲಿಂಕ್ಗಳನ್ನು ಕಳಿಸಿ ತರಗತಿಗಳನ್ನು ನಡೆಸಲಾಗಿತ್ತು. ಸದರಿ ಲಿಂಕ್ಗಳನ್ನು ವಿದ್ಯಾರ್ಥಿಗಳಿಗೆ ಉಪನ್ಯಾಸಕರು ತಾವೇ ರಚಿಸಿಕೊಂಡ ವಿಷಯಾಧಾರಿತ ವಾಟ್ಸ್ಯಾಪ್ ಗ್ರೂಪ್ಗಳಿಗೆ ಕಳಿಸುತ್ತಿದ್ದರು.
ಆದರೆ ಈ ಬಾರಿ ಉಪನ್ಯಾಸಕರು, ತಾವು ಸೇವೆ ನಿರ್ವಹಿಸುತ್ತಿರುವ ಕಾಲೇಜುಗಳಿಂದಲೇ, ಎಮ್ ಎಸ್ ಟೀಮ್, ಗೂಗಲ್ ಮೀಟ್, ಜೂಮ್ ಅಥವಾ ಜಿಯೋ ಮೀಟ್ಗಳನ್ನು ಉಪಯೋಗಿಸಿಕೊಂಡು ಪಾಠ ಮಾಡಲಿದ್ದಾರೆ. ಇದಕ್ಕೆ ಸಂಬಂದಿಸಿದಂತೆ ಪದವಿ ಪೂರ್ವ ಕಾಲೆಜಿನ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಂತೆ ಎಲ್ಲಾ ತರಗತಿಗಳಿಗೆ ಅನ್ವಯವಾಗುವಂತೆ ವೇಳಾ ಪಟ್ಟಿಯನ್ನು ತಯಾರಿಸಿದ್ದಾರೆ. ಅದು ಕೆಳಕಂಡಂತಿದೆ:
ಬೆಳಗ್ಗೆ 10.00 ಗಂಟೆಯಿಂದ 11 ಗಂಟೆ- ಮೊದಲ ಪೀರಿಯಡ್
ಬೆಳಗ್ಗೆ 11.00 ಗಂಟೆಯಿಂದ 12 ಗಂಟೆ- ಎರಡನೇ ಪೀರಿಯಡ್
ಬೆಳಗ್ಗೆ 12.00 ಗಂಟೆಯಿಂದ 12.30ವರಗೆ- ಗಂಟೆವರೆಗೆ ವಿರಾಮ
ಮಧ್ಯಾಹ್ನ 12.30 ರಿಂದ 1.30 ರವರೆಗೆ-ಮೂರನೇ ಪೀರಿಯಡ್
ಮಧ್ಯಾಹ್ನ 1.30 ರಿಂದ 2.30 ರವರೆಗೆ ನಾಲ್ಕನೇ ಪೀರಿಯಡ್
ಈ ವೇಳಾಪಟ್ಟಿಗೆ ಅನುಗುಣವಾಗಿ ಸೂಕ್ತ ಲಿಂಕ್ಗಳನ್ನು ಜನರೇಟ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕಳಿಸಿ ತರಗತಿಗಳನನ್ನು ನಡೆಸಲು ಉಪನ್ಯಾಸಕರಿಗೆ ಸೂಚಿಸಿಲಾಗಿದೆ ಮತ್ತು ಎಲ್ಲ ಉಪನ್ಯಾಸಕರು ಪ್ರತಿದಿನ ಹಾಜರಾತಿಯನ್ನು ತೆಗೆದುಕೊಂಡು ಅದನ್ನು ಪ್ರಿನ್ಸಿಪಾಲರಿಗೆ ನೀಡುವಂತೆ ತಿಳಿಸಲಾಗಿದೆ. ಒಂದ ಪಕ್ಷ ಯಾವುದಾದರೂ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 20 ಕ್ಕಿಂತ ಕಡಿಮೆಯಿದ್ದರೆ ಹತ್ತಿರದ ಕಾಲೇಜಿನ ಅದೇ ವಿಷಯದ ಉಪನ್ಯಾಸಕರಿಗೆ ಸರಿಹೊಂದಿಸಿ ತರಗತಿ ನಡೆಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪದವಿ ಪುರ್ವ ಕಾಲೇಜುಗಳಲ್ಲಿ ತರಗತಿಗಳನ್ನು ಸೂಕ್ತ ರೀತಿಯಲ್ಲಿ ನಡೆಸುತ್ತಿರುವ ಬಗ್ಗೆ ಆಯಾ ಜಿಲ್ಲೆಗಳ ಉಪ ನಿರ್ದೇಶಕರು ಆಗಾಗ ಕಾಲೇಜುಗಳಿಗೆ ಭೇಟಿ ನೀಡಿ ಖಾತರಿ ಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಜುಲೈ 7ರಿಂದಲೇ ಉಪನ್ಯಾಸಕರು ಕಾಲೇಜುಗಳಿಗೆ ಹಾಜರಾಗುತ್ತಿರುವುದರಿಂದ ಮತ್ತು ಪ್ರಸಕ್ತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ ಆರಂಭವಾಗಿರದ ಕಾರಣ ತರಗತಿಗಳನ್ನು ಆರಂಭಿಸಲೇ ಬೇಕಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು ತಾವಿರುವ ಕಾಲೇಜುಗಳಿಂದ ಪಾಠಗಳನ್ನು ತೆಗೆದುಕೊಳ್ಳಬೇಕು ಅಂತ ಹೇಳಲಾಗಿದೆ.
ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುವುದಿಲ್ಲವಾದರೂ ಪ್ರತಿಯೊಂದು ಕಾಲೇಜಲ್ಲಿ ಕೋವಿಡ್-19 ಸಂಬಂಧಿಸಿದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಪಾಠ ಮಾಡಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಹಾಗೆಯೇ, ಸದರಿ ವ್ಯವಸ್ಥೆಯನ್ನು ಎಲ್ಲ ಕಾಲೇಜಿಗಳು ಅನೂಚಾನಾಗಿ ಪಾಲಿಸುತ್ತಿರುವ ಬಗ್ಗೆ ಉಪ ನಿರ್ದೇಶಕರುಗಳು ಕೇಂದ್ರ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ರಾಜ್ಯದಲ್ಲಿ ಕೊವಿಡ್-19 ಸೋಂಕಿನ ಪ್ರಕರಣಗಳು ಸಂಪೂರ್ಣವಾಗಿ ಇಳಿಮುಖಗೊಂಡಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ಪುನಾರಂಭಿಸಬಹುದೆಂದು ಹೈಕೋರ್ಟ್ ಹೇಳಿದ್ದರೂ ಆತಂಕದಲ್ಲಿರುವ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕಾಲೇಜುಗಳನ್ನು ಮುಚ್ಚಿರುವುದು ವಿದ್ಯಾರ್ಥಿಗಳ ಓದಿನ ಮೇಲೆ ಬೇರೆ ರೀತಿಯ ಪರಿಣಾಮ ಬಿರುತ್ತಿರುವುದರಿಂದ ನಾಳೆಯಿಂದ ಶೈಕ್ಷಣಿಕ ವರ್ಷ ಆರಂಭ ಎಂದು ಹೇಳಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಈ ಸಲ ಭಿನ್ನ ರೀತಿಯಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಲು ನಿರ್ಧರಿಸಿದೆ.
Published On - 8:31 pm, Wed, 14 July 21