ನಟಿ ಲೀಲಾವತಿ ನಿಧನ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಮತ್ತಿತರರಿಂದ ಸಂತಾಪ ಸೂಚನೆ

ಕನ್ನಡದ ಹಿರಿಯ ನಟಿ ಲೀಲಾವತಿ ಅವರು ವಯೋ ಸಹಜ ಅನಾರೋಗ್ಯ ಹಾಗೂ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರ ಅಗಲಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ನಟಿ ಲೀಲಾವತಿ ನಿಧನ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಮತ್ತಿತರರಿಂದ ಸಂತಾಪ ಸೂಚನೆ
ಹಿರಿಯ ನಟಿ ಲೀಲಾವತಿ
Follow us
| Updated By: Rakesh Nayak Manchi

Updated on:Dec 08, 2023 | 9:49 PM

ಬೆಂಗಳೂರು, ಡಿ.8: ಕನ್ನಡದ ಹಿರಿಯ ನಟಿ ಲೀಲಾವತಿ (Leelavati) ಅವರು ವಯೋ ಸಹಜ ಅನಾರೋಗ್ಯ ಹಾಗೂ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi), ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ವಿಪಕ್ಷ ನಾಯಕ ಆರ್.ಅಶೋಕ ಸೇರಿದಂತೆ ಅನೇಕರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಹೆಸರಾಂತ ನಟಿ ಲೀಲಾವತಿ ನಿಧನದ ಸುದ್ದಿ ಕೇಳಿ ದುಃಖವಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾಋಎ. ಸಿನಿಮಾದ ನೈಜ ಪ್ರತೀಕವಾದ ಅವರು ಹಲವು ಚಲನಚಿತ್ರಗಳಲ್ಲಿ ನಟನೆ ಮಾಡಿದ್ದಾರೆ, ತಮ್ಮ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆ ಅಲಂಕರಿಸಿದ್ದರು. ಹಿರಿಯ ನಟಿ ಲೀಲಾವತಿಯವರ ವೈವಿಧ್ಯಮಯ ಪಾತ್ರಗಳು ಅದ್ಭುತ ಪ್ರತಿಭೆಯನ್ನ ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನಮ್ಮ ಸಂತಾಪ ಸೂಚಿಸುತ್ತೇನೆ, ಓಂ ಶಾಂತಿ ಎಂದು ಮೋದಿ ಸಂತಾಪ ಸೂಚಿಸಿದರು.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದೆ. ಹಲವು ದಶಕಗಳ ಕಾಲ ತಮ್ಮ‌ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಮೇರು ನಟಿಯರಲ್ಲಿ ಲೀಲಾವತಿ ಅವರೂ ಒಬ್ಬರು. ಅವರೊಬ್ಬ ಕಲಾತಪಸ್ವಿ. ತಮ್ಮ ಮನೋಜ್ಞ ಅಭಿನಯದಿಂದ ಅಮ್ಮ ಎಂದೇ ಖ್ಯಾತಿ ಪಡೆದಿದ್ದರು. ಕಪ್ಪು ಬಿಳುಪು ಚಿತ್ರದಿಂದ ಆಧುನಿಕ ಚಿತ್ರರಂಗದವರೆಗೂ ಕ್ರಿಯಾಶೀಲರಾಗಿ ಕಲಾಸೇವೆ ಸಲ್ಲಿಸಿದ್ದರು. ನಾಯಕಿಯಾಗಿ, ಪೋಷಕ ನಟಿಯಾಗಿ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಿನಿರಸಿಕರ ಮನದಲ್ಲಿ ಮನೆಮಾಡಿದ್ದರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಮರಿಸಿದ್ದಾರೆ.

ಇದನ್ನೂ ಓದಿ: ಲೀಲಾವತಿಯವರ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಎಲ್ಲಿ? ಯಾವಾಗ?

ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲೂ ಬಹಳಷ್ಟು ಏಳು ಬೀಳುಗಳನ್ನು ಕಂಡಿದ್ದರು. ಲೀಲಾವತಿ ಅವರು ಇಳಿ ವಯಸ್ಸಿನಲ್ಲೂ ಹೋರಾಟದ ಬದುಕು ನಡೆಸಿದ್ದಾರೆ. ಅವರ ಜೀವನ ಪ್ರೀತಿ, ಉತ್ಸಾಹ, ಪ್ರಾಣಿ ದಯೆ, ಕಲ್ಲು ಮುಳ್ಳುಗಳ ಭೂಮಿಯಲ್ಲಿ ಬೆಳೆ ತೆಗೆದ ರೀತಿ ಸೇರಿದಂತೆ ಅವರ ಪ್ರತಿ ಹೆಜ್ಜೆಯೂ ಬೇರೆಯವರಿಗೆ ಆದರ್ಶವಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.

ಇತ್ತೀಚೆಗೆ ಅನಾರೋಗ್ಯದ ನಡುವೆಯೂ ನನ್ನ ಮನೆಗೆ ಬಂದು ಅವರು ಕಟ್ಟಿರುವ ಆಸ್ಪತ್ರೆ ಉದ್ಘಾಟನೆಗೆ ಆಹ್ವಾನಿಸಿದ್ದರು. ಅವರ ಇಚ್ಛೆಯಂತೆ ನಾನು ಹೋಗಿ ಆಸ್ಪತ್ರೆ ಉದ್ಘಾಟನೆ ಮಾಡಿ, ಆ ತಾಯಿಯ ಆಶೀರ್ವಾದ ಪಡೆದು ಬಂದಿದ್ದೆ. ಲೀಲಾವತಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಈ ನೋವಿನ ಕ್ಷಣದಲ್ಲಿ ನಾವು ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಜತೆ ನಿಲ್ಲುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು, ಬಹುಭಾಷಾ ಕಲಾವಿದರಾದ ಲೀಲಾವತಿ ಅವರ ನಿಧನದ ವಾರ್ತೆ ಕೇಳಿ ಬಹಳ ನೋವುಂಟಾಯಿತು. ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬಿ ಬೆಳ್ಳಿತೆರೆಯ ಮೇಲೆ ಅವುಗಳ ಹೆಜ್ಜೆಗುರುತುಗಳು ಮೂಡುವಂತೆ ಮಾಡಿದವರು ಅವರು. ಅಮ್ಮ, ಅಕ್ಕ, ಅತ್ತೆ ಸೇರಿ ಅನೇಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದರು ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸ್ಮರಿಸಿದ್ದಾರೆ.

ಭಕ್ತ ಕುಂಬಾರ, ವೀರ ಕೇಸರಿ, ಭಾಗ್ಯದೇವತೆ, ಸೋತು ಗೆದ್ದವಳು, ನಂದಾದೀಪ, ವಿಧಿ ವಿಲಾಸ, ಸಂತ ತುಕಾರಾಂ, ರಣಧೀರ ಕಂಠೀರವ ಸೇರಿ ಅವರು ನಟಿಸಿದ್ದ ಅನೇಕ ಚಿತ್ರಗಳು ಕನ್ನಡಿಗರ ಮನೆ ಮನಗಳನ್ನು ತುಂಬಿರುತ್ತವೆ. ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Leelavathi: ರಾಜ್​ಕುಮಾರ್​ ಜತೆ 36 ಚಿತ್ರಗಳಲ್ಲಿ ನಟಿಸಿದ್ದ ಲೀಲಾವತಿ: ಕಷ್ಟದಲ್ಲೇ ಬೆಳೆದ ನಟಿಯ ಬದುಕಿನ ಕಥೆ ಇಲ್ಲಿದೆ..

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಲೀಲಾವತಿ ಅವರು ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದಕ್ಷಿಣ ಭಾರತದ ಸುಮಾರು 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಅವರ ಅಗಲಿಕೆಯಿಂದ ಕಲಾಪ್ರಪಂಚ ತನ್ನ ಮಾತೃಸದೃಶ ಕಲಾವಿದೆಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿ ವರ್ಗದವರಲ್ಲಿ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ಬಹುಭಾಷಾ ನಟಿ ಲೀಲಾವತಿ ನಿಧನರಾಗಿದ್ದು ಅತ್ಯಂತ ದುಃಖ‌ ತಂದಿದೆ. ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು, ಅವರ ಆತ್ಮಕ್ಕೆ ಚಿರಶಾಂತಿ‌ಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟ್ವೀಟ್ ಮಾಡಿದ್ದಾರೆ.

ಹಿರಿಯ ನಟಿ ಲೀಲಾವತಿ ನಿಧನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಲೀಲಾವತಿ ಖ್ಯಾತರಾಗಿದ್ದರು. ಹಿರಿಯ ನಟಿ ಲೀಲಾವತಿ ನಿಧನದ ಸುದ್ದಿ ಕೇಳಿ ಮನಸ್ಸಿಗೆ ದುಃಖವಾಯಿತು. ಹಿರಿಯ ನಟಿ ಲೀಲಾವತಿ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಕಲಾರಂಗ ಒಬ್ಬ ಮನೆಯ ಹಿರಿಯರನ್ನು ಕಳೆದುಕೊಂಡು ಬಡವಾದಂತಾಗಿದೆ. ಕನ್ನಡ ಚಿತ್ರರಂಗದ ಮೇರು ನಟರಾದ ಡಾ.ರಾಜಕುಮಾರ್ ಸೇರಿದಂತೆ ದಿಗ್ಗಜ ನಟರೊಂದಿಗೆ ವಿಭಿನ್ನ ಪಾತ್ರಗಳನ್ನು ಮಾಡಿ ಎಲ್ಲರ ಮನೆ ಮಾತಾಗಿದ್ದರು. ಪುತ್ರನಿಗೆ ತಾಯಿ ಅಗಲಿಕೆ ದುಃಖವನ್ನು ಭರಿಸುವ ಶಕ್ತಿ ಭಗವಂತ‌ ಕರುಣಿಸಲಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Fri, 8 December 23

ತಾಜಾ ಸುದ್ದಿ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ