
ಬೀದರ್: ವಯೋವೃದ್ಧೆಯೊಬ್ಬರನ್ನು ಅಪರಿಚಿತರು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಪಲಾಪುರ ಗ್ರಾಮದಲ್ಲಿ ನಡೆದಿದೆ. ಆಸ್ತಿ ಆಸೆಗಾಗಿ ವೃದ್ಧೆ ಕಮಲಮ್ಮ(75) ಎಂಬುವವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೊಲೆಯಾದ ಕಮಲಮ್ಮರಿಗೆ ಯಾರೂ ಕುಟುಂಬಸ್ಥರು ಹಾಗೂ ಸಂಬಂಧಿಕರಿರಲಿಲ್ಲ ಎಂದು ತಿಳಿದುಬಂದಿದೆ. ಆದರೆ, ಒಬ್ಬಂಟಿಯಾಗಿದ್ದ ವೃದ್ಧೆ 35 ಎಕರೆಯಷ್ಟು ಜಮೀನು ಹೊಂದಿದ್ದರು ಎಂದು ಹೇಳಲಾಗಿದೆ. ಹಾಗಾಗಿ, ಈಕೆಯ ಆಸ್ತಿಯನ್ನು ಪಡೆದುಕೊಳ್ಳಲು ಕಿರಾತಕರು ಕಮಲಮ್ಮರಿಗೆ ಕಲ್ಲಿನಿಂದ ಹೊಡೆದು ಕೊಲೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಜನವಾಡ ಪೊಲೀಸರು ಭೇಟಿ ಕೊಟ್ಟು, ಪರಿಶೀಲನೆ ನಡೆಸಿದರು.