ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಹುತೇಕ ರೈತರು ಮೆಕ್ಕೆಜೋಳವನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಅದರಲ್ಲೂ ಈ ಬಾರಿ ಮೇ ಕೊನೆಯ ವಾರದಲ್ಲಿ ಮಳೆರಾಯನ ಆಗಮನವಾಗಿದ್ದು, ಹಾವೇರಿ ಜಿಲ್ಲೆಯ ಬಹುತೇಕ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ರೈತರ ನಿರೀಕ್ಷೆಗೂ ಮೀರಿ ಮೆಕ್ಕೆಜೋಳದ ಬೆಳೆ ಬೆಳೆಯುತ್ತಿದೆ. ಆದರೆ ಒಂದು ತಿಂಗಳ ಬೆಳೆ ಇರುವಾಗಲೆ ಮೆಕ್ಕೆಜೋಳಕ್ಕೆ ಲದ್ದಿ ಹುಳುವಿನ ಕಾಟ ಶುರುವಾಗಿದೆ. ಇದು ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರನ್ನು ಹೈರಾಣಾಗಿಸಿದೆ.
ಕೃಷಿ ವಿಜ್ಞಾನಿಗಳ ಭೇಟಿ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹನುಮಾಪುರ ಗ್ರಾಮದ ಗುಡ್ಡಪ್ಪ ನಿಂಗಪ್ಪ ಎಂಬ ರೈತರ ಜಮೀನಿಗೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಅಶೋಕ.ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಒಂದು ವಾರದಿಂದ ಮಳೆ ಬಿಡುವಾಗಿರುವುದರಿಂದ 25-30 ದಿನಗಳ ಗೋವಿನ ಜೋಳದ ಬೆಳೆಗೆ ತೀವ್ರವಾಗಿ ಈ ಕೀಟದ ಬಾಧೆ ಕಂಡು ಬಂದಿದೆ. ಹೀಗಾಗಿ ವಿಜ್ಞಾನಿ ಡಾ.ಅಶೋಕ.ಪಿ ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಈಗಾಗಲೆ ಜಿಲ್ಲೆಯ ಕೆಲ ಭಾಗಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯಲಾದ ಮೆಕ್ಕೆಜೋಳ ಬೆಳೆಯಲ್ಲಿ ಈ ಸೈನಿಕ ಹುಳುವಿನ ನಿರ್ವಹಣೆಗಾಗಿ ರೈತರು ಸಮಗ್ರ ನಿರ್ವಹಣಾ ಕ್ರಮಗಳಾದ ಹೊಲದ ಸುತ್ತಮುತ್ತಲಿನ ಕಳೆಯ ಸಸ್ಯಗಳನ್ನು / ಕಸಗಳನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಬಾಧೆಗೊಳಗಾಗಿರುವ ಪ್ರದೇಶದ ಪ್ರತಿಯೊಬ್ಬ ರೈತರು ತಮ್ಮ ಹೊಲದಲ್ಲಿ ಸಾಮೂಹಿಕವಾಗಿ ಸಂಜೆ 7 ರಿಂದ 9 ವರೆಗೆ ದೀಪದ ಬಲೆಗಳನ್ನು ಇಟ್ಟು ಪಂತಗಗಳಿಗೆ ಆಕರ್ಷಿಸಿ ನಾಶಪಡಿಸಬೇಕು. ಹೊಲದ ಸುತ್ತಲೂ ಬೊದು ಹರಿ ತೆಗೆದು ಅದರಲ್ಲಿ ಮೇಲಾಥಿಯಾನ್ ಅಥವಾ ಪೆನ್ವಲರೇಟ್ ಕೀಟನಾಶಕಗಳನ್ನು ಹಾಕಿ ಕೀಟವು ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಹೊಗದಂತೆ ತಪ್ಪಿಸಲು ಸಾಮೂಹಿಕವಾಗಿ ಈ ಕ್ರಮಗಳನ್ನು ಅಳವಡಿಸಬೇಕು ಎಂದು ವಿಜ್ಞಾನಿ ಡಾ.ಅಶೋಕ.ಪಿ ಸಲಹೆ ನೀಡಿದ್ದಾರೆ.
ಬೆಳೆ ರಕ್ಷಣೆಗೆ ಏನು ಮಾಡಬೇಕು?
ಮರಿಹುಳುಗಳು ಒಂದು ಅಥವಾ ಎರಡನೇ ಹಂತದಲ್ಲಿದಾಗ ಮತ್ತು ಬೆಳೆಗಳ ಎತ್ತರ ಕಡಿಮೆ ಇದ್ದಲ್ಲಿ ಇದರ ಹತೋಟಿಗಾಗಿ ಕೀಟನಾಶಕಗಳಾದ ಎಮಾಮೆಕ್ಟಿನ್ ಬೆಂಜೊಯೇಟ್ ಪ್ರತಿ ಲೀಟರ್ ನೀರಿಗೆ 0.25 ಗ್ರಾಂ ನಂತೆ ಅಥವಾ ಲ್ಯಾಂಬ್ಡಾಸೈಹ್ಯಾಲೊಥ್ರಿನ್ ಶೇ. 4.9, ಇಸಿ ಪ್ರತಿ ಲೀಟರ್ ನೀರಿಗೆ 0.5 ಮಿ. ಲೀಟರ್ನಂತೆ ಬೆರೆಸಿ ಸಿಂಪಡನೆ ಮಾಡಬಹುದು.
ಎಲೆಗಳು ಕೆಂಪಾಗಿ ಕಾಣುತ್ತಿದ್ದು, ಇದು ರಂಜಕದ ಕೊರತೆಯಾಗಿರುತ್ತದೆ. ಜೊತೆಗೆ ಎಲೆಯ ಅಂಚಿನಲ್ಲಿ ಮತ್ತು ಮಧ್ಯದ ಭಾಗದಲ್ಲಿ ಬಿಳಿಯ ಪಟ್ಟಿಗಳು ಕಾಣಿಸುತ್ತಿದ್ದು, ಇದು ಸತುವಿನ ಕೊರತೆ ಆಗಿರುತ್ತದೆ. ಈ ಬೆಳೆಯ ಎಲೆಗಳು ಕೆಂಪಾಗಿ ಮತ್ತು ಬೆಳ್ಳಗೆ ಕಂಡುಬಂದ ತಕ್ಷಣ 19:19:19 ನೀರಿನಲ್ಲಿ ಕರಗುವ ರಸಗೊಬ್ಬರ (ಪ್ರತಿ ಲೀಟರ್ ನೀರಿಗೆ 5 ಗ್ರಾಂ) ಹಾಗು ಜಿಂಕ್ ಸಲ್ಫೇಟ್ (ಪ್ರತಿ ಲೀಟರ್ ನೀರಿಗೆ 2.5 ಗ್ರಾಂ) ಮಿಶ್ರಣ ಮಾಡಿ ಸಿಂಪಡನೆ ಮಾಡಬೇಕು. 15 ದಿನಗಳ ನಂತರ ಕೊರತೆ ಇದ್ದರೆ, ಮತ್ತೊಮ್ಮೆ ಸಿಂಪಡನೆ ಮಾಡುವ ಅವಶ್ಯಕತೆ ಇದೆ ಎಂದು ವಿಜ್ಞಾನಿಗಳಾದ ಡಾ.ರಾಜಕುಮಾರ ತಿಳಿಸಿದ್ದಾರೆ.
ಇಳುವರಿಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ
ಜಿಲ್ಲೆಯಲ್ಲಿ ಸತತವಾಗಿ ಏಕ ಬೆಳೆಯಾಗಿ ಗೋವಿನ ಜೋಳ ಬೆಳೆಯುತ್ತಿದ್ದಾರೆ. ಈ ಬೆಳೆಯು ಎಕದಳದ ಧಾನ್ಯದ ಗುಂಪಿಗೆ ಸೇರಿದ್ದು, ಬೇರೆ ಬೆಳೆಗೆ ಹೋಲಿಸಿದಾಗ ಸತತವಾಗಿ ಬೆಳೆಯುವುದರಿಂದ ಹೆಚ್ಚಾಗಿ ಪೋಷಕಾಂಶಗಳನ್ನು ಹೀರಿಕೊಂಡು ಮಣ್ಣಿನಲ್ಲಿ ಕೊರತೆ ಉಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಾಗಿ ಮೂಲ ರಸಗೊಬ್ಬರಗಳನ್ನು ಬಳಸುತ್ತಿದ್ದು, ಸಾವಯವ ಗೊಬ್ಬರಗಳಾದ ತಿಪ್ಪೆ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳ ಬಳಸುವಿಕೆ ಪ್ರಮಾಣ ಕಡಿಮೆಯಾಗಿರುತ್ತದೆ. ಇದರಿಂದಾಗಿ ಮಣ್ಣಿನಲ್ಲಿ ಲಘು ಪೋಷಕಾಂಶಗಳ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. (ಉದಾ : ಸತು, ಕಬ್ಬಿಣ, ಮೆಗ್ನಿಶಿಯಂ) ಈ ಲಘು ಪೋಷಕಾಂಶಗಳಿಂದ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಕುಂಠಿತವಾಗುತ್ತದೆ.
ಕೃಷಿ ವಿಜ್ಞಾನ ಕೇಂದ್ರದ ಡಾ. ಅಶೋಕ. ಪಿ, ಮಣ್ಣು ವಿಜ್ಞಾನಿಯಾದ ಡಾ. ರಾಜಕುಮಾರ ಜಿ. ಆರ್, ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಡಾ. ಸಂತೋಷ ಹೆಚ್.ಎಮ್ ನೇತೃತ್ವದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಲದ್ದಿ ಹುಳುವಿನ ಬಾಧೆಗೆ ಒಳಗಾದ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ರೈತರಿಗೆ ಸಲಹೆ, ಸೂಚನೆ ನೀಡಿದ್ದು, ರೈತರಲ್ಲಿ ಸ್ವಲ್ಪಮಟ್ಟಿಗೆ ಆತಂಕ ದೂರವಾಗಿದೆ
ಇದನ್ನೂ ಓದಿ:
ಲಾಕ್ಡೌನ್ನಿಂದ ಬಾಡುತ್ತಿದೆ ರೈತರ ಬದುಕು; 80 ಸಾವಿರ ಖರ್ಚು ಮಾಡಿ ಬೆಳೆದ ಬೀಟ್ರೂಟ್ನಿಂದ 80 ರೂ. ಲಾಭವಿಲ್ಲ
ಬೆಳೆಯಲ್ಲಿ ಪೋಷಕಾಂಶ ಕಾಪಾಡಲು ಮತ್ತು ರೈತರ ಆದಾಯ ವೃದ್ಧಿಗೆ ಹಲವು ಕ್ರಮ ಘೋಷಿಸಿದ ಕೇಂದ್ರ ಸರ್ಕಾರ