ಜಾತಿಗಣತಿ ವರದಿ ಜಾರಿಗೆ ಒತ್ತಾಯಿಸಿ ಶೋಷಿತ ಸಮುದಾಯಗಳ ಸಮಾವೇಶಕ್ಕೆ ಮುಹೂರ್ತ ಫಿಕ್ಸ್, ಸಿಎಂಗೆ ಆಹ್ವಾನ
ಕಾಂತರಾಜು ಅವರು ಜಾತಿ ಗಣತಿ ವರದಿ ಜಾರಿಗೆ ಒತ್ತಾಯಿಸಿ ಅಹಿಂದ ವರ್ಗ ಸಿಡಿದೆದ್ದಿದ್ದು, ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ಮಾಡಲು ತೀರ್ಮಾನಿಸಿದೆ. ಈ ಮೂಲಕ ಜಾತಿ ಗಣತಿ ವರದಿಗೆ ವಿರೋಧಿಸುತ್ತಿರುವ ಪ್ರಬಲ ಸಮುದಾಯಗಳಿಗೆ ಸಂದೇಶ ನೀಡಲು ಶೋಷಿತ ಸಮುದಾಯದ ಒಕ್ಕೂಟ ಮುಂದಾಗಿದೆ.
ಬೆಂಗಳೂರು, (ಡಿಸೆಂಬರ್ 27): ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಕಾಂತರಾಜು ಅವರು ಜಾತಿ ಗಣತಿ ವರದಿ (caste census report) ಜಾರಿಗೆ ಸಂಬಂಧ ಪರ-ವಿರೋಧ ಚರ್ಚೆಗಳು ನಡೆದಿವೆ. ಶೋಷಿತ ಸಮುದಾಯದ ನಾಯಕರುಗಳು ಜಾತಿ ಗಣತಿ ವರದಿ ಜಾರಿ ಮಾಡಲೇಬೇಕೆಂದು ಒತ್ತಾಯಿಸಿದರೆ, ಮತ್ತೊಂದೆಡೆ ಮೇಲ್ವರ್ಗ ಸಮುದಾಯಗಳು ಇದಕ್ಕೆ ವಿರೋಧ ವ್ಯಕ್ತಪಪಡಿಸುತ್ತಿವೆ. ಈ ಪರ-ವಿರೋಧದ ಆರ್ಭಟದ ಮಧ್ಯೆ ಕಾಂತರಾಜು ವರದಿ ಜಾರಿಗೆ ಒತ್ತಾಯಿಸಿ ಶೋಷಿತ ಸಮುದಾಯಗಳ ಒಕ್ಕೂಟ ಬೃಹತ್ ಸಮಾವೇಶ ಮಾಡಲು ತೀರ್ಮಾನಿಸಿದ್ದು, ಇದೀಗ ಅದಕ್ಕೆ ಜನವರಿ 28 ಮುಹೂರ್ತ ಸಹ ಫಿಕ್ಸ್ ಆಗಿದೆ.
ಕಾಂತರಾಜು ವರದಿ ಜಾರಿಗೆ ಒತ್ತಾಯಿಸಿ ಕೋಟೆ ನಾಡು ಚಿತ್ರದುರ್ಗದಲ್ಲಿ ಬೃಹತ್ ಮಟ್ಟದ ಅಹಿಂದ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಹಿಂದೆ ಡಿಸೆಂಬರ್ 30 ಎನ್ನಲಾಗಿತ್ತು . ಆದ್ರೆ, ಅಂತಿಮವಾಗಿ ಜನವರಿ 28 ರಂದು ಅಹಿಂದ ಸಮಾವೇಶ ಆಯೋಜನೆಗೆ ತೀರ್ಮಾನಿಸಲಾಗಿದೆ. ಜನವರಿ 28ಕ್ಕೆ ಚಿತ್ರದುರ್ಗದ ಶ್ರೀ ಬಸವ ಮೂರ್ತಿ ಮಾದರ ಚೆನ್ನಯ್ಯ ಪೀಠದ ಪಕ್ಕದ ಮೈದಾನದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರಬಲ ಸಮುದಾಯಗಳಿಗೆ ಟಕ್ಕರ್ ಕೊಡಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಇನ್ನು ಈ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಇದರ ಜೊತೆ ಅಲ್ಪಸಂಖ್ಯಾತ, ದಲಿತ, ಎಸ್ ಟಿ ರಾಜಕೀಯ ನಾಯಕರಗೂ ಸಹ ಆಹ್ವಾನ ನೀಡಲಾಗಿದೆ. ಈ ಮೂಲಕ ಅಹಿಂದ ವರ್ಗ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಅಹಿಂದ ಸಮಾವೇಶದ ಹಕ್ಕೊತ್ತಾಯಗಳು
- ಹೆಚ್. ಕಾಂತರಾಜು ವರದಿಯನ್ನ ರಾಜ್ಯ ಸರ್ಕಾರ ಸ್ವೀಕರಿಸಿ ಯತಾವತ್ತಾಗಿ ಅಂಗೀಕರಿಸಿ ಜಾರಿ ಗೊಳಿಸಬೇಕು.
- ಕೇಂದ್ರ ಸರ್ಕಾರವು ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಸಬೇಕು.
- EWS ಶೇ.10 % ಮೀಸಲಾತಿಯನ್ನು ರದ್ದು ಪಡಿಸುವಂತೆ ಒತ್ತಾಯಿಸುವುದು.
- ಮಹಿಳಾ ರಾಜಕೀಯ ಮೀಸಲಾತಿ ಕಾಯ್ದೆಯನ್ನ ಕೂಡಲೇ ಜಾರಿ ಮಾಡಬೇಕು, ರಾಜಕೀಯ ಕ್ಷೇತ್ರದಲ್ಲೂ ಒಳ ಮೀಸಲಾತಿ ಕಲ್ಪಿಸಿಬೇಕು.
- ರಾಜಕೀಯ ಮೀಸಲಾತಿಯನ್ನು ಲೋಕಸಭೆ, ವಿಧಾನಸಭೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕು.
- ಜನಸಂಖ್ಯೆ ಅನುಗುಣವಾಗಿ ಶೇಕಡಾವಾರು ಪ್ರಮಾಣದಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕು,ಖಾಸಗಿ ಕ್ಷೇತ್ರಕ್ಕೂ ಮೀಸಲಾತಿ ವಿಸ್ತರಿಸಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:07 pm, Wed, 27 December 23