ಬರಗಾಲ, ಫೆಬ್ರವರಿ ಅಂತ್ಯದ ವೇಳೆಗೆ ಕುಡಿಯುವ ನೀರಿಗೆ ಹಾಹಾಕಾರ

ಬೇಸಿಗೆಯಲ್ಲಿ ಕುಡಿಯುವ ನೀರಿನ ಬಿಕ್ಕಟ್ಟನ್ನು ನಿವಾರಿಸುವುದು ತನ್ನ ಆದ್ಯತೆಯಾಗಿದೆ ಎಂದು ಸರ್ಕಾರವು ಹೇಳಿದೆ. ಆದರೂ ಕೂಡ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ ರಾಜ್ಯವು ಕುಡಿಯುವ ನೀರಿನ ಕೊರತೆಯನ್ನು ಎದುರಿಸಬಹುದು ಎಂದು ರಾಜ್ಯ ವಿಪತ್ತು ನಿರ್ವಹಣಾ ವಿಭಾಗದ ಮೂಲಗಳು ತಿಳಿಸಿವೆ.

ಬರಗಾಲ, ಫೆಬ್ರವರಿ ಅಂತ್ಯದ ವೇಳೆಗೆ ಕುಡಿಯುವ ನೀರಿಗೆ ಹಾಹಾಕಾರ
ಸಾಂದರ್ಭಿಕ ಚಿತ್ರ
Follow us
|

Updated on:Dec 27, 2023 | 1:31 PM

ಬೆಂಗಳೂರು, ಡಿಸೆಂಬರ್​ 27: ಬರದಿಂದ ತತ್ತರಿಸಿರುವ ಕರ್ನಾಟಕಕ್ಕೆ ಬೇಸಿಗೆಯಲ್ಲಿ (Karnataka Drought) ಕುಡಿಯುವ ನೀರಿನ (Drinking Water) ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೆಚ್ಚಿನ ಜಲಾಶಯಗಳಿಗೆ (Dam) ಒಳಹರಿವು ಕುಂಟಿತವಾಗಿದೆ. ಇದರಿಂದ ಪಟ್ಟಣಗಳು ​​ಮತ್ತು ನಗರಗಳಲ್ಲಿ ನೀರಿನ ಅಭಾವ ಉಂಟಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಮುಂಬರುವ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ತಜ್ಞರು, ನೀರನ್ನು ವಿವೇಚನಾಯುಕ್ತವಾಗಿ ಬಳಸಲು ಜನರಿಗೆ ಸಲಹೆ ನೀಡಿದ್ದಾರೆ.

ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಲಾಶಯಗಳ ನೀರನ್ನು ಕುಡಿಯಲು ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲು ನಿರ್ಧರಿಸಿದೆ. ಇದರಿಂದಾಗಿ ಈಗಾಗಲೇ ಮುಂಗಾರು ವೈಫಲ್ಯದಿಂದ ಸಂಕಷ್ಟದಲ್ಲಿರುವ ರೈತರಿಗೆ ಇನ್ನಷ್ಟು ತೊಂದರೆಯಾಗಲಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSDMC) ಪ್ರಕಾರ, 895 ಟಿಎಂಸಿ ಅಡಿ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲ ಪ್ರಮುಖ ಜಲಾಶಯಗಳಲ್ಲಿ ಈಗ ಕೇವಲ 394 ಟಿಎಂಸಿ ಅಡಿ ನೀರು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಗಳಲ್ಲಿ 668 ಟಿಎಂಸಿ ಅಡಿ ನೀರಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳ ಒಟ್ಟು ಸಾಮರ್ಥ್ಯ 114 ಟಿಎಂಸಿ ಅಡಿಯಷ್ಟಿದೆ. ಆದರೆ ಇಲ್ಲಿಯವರೆಗೆ ಕೇವಲ 52 ಟಿಎಂಸಿ ಅಡಿ ನೀರು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 83 ಟಿಎಂಸಿ ಅಡಿ ನೀರು ಇತ್ತು.

ಮುಂಬರುವ ತಿಂಗಳುಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವುದಿಲ್ಲ. ಹೀಗಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಇನ್ನಷ್ಟು ಕುಸಿಯಲಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಬಿಕ್ಕಟ್ಟನ್ನು ನಿವಾರಿಸುವುದು ತನ್ನ ಆದ್ಯತೆಯಾಗಿದೆ ಎಂದು ಸರ್ಕಾರವು ಹೇಳಿದೆ. ಆದರೂ ಕೂಡ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ ರಾಜ್ಯವು ಕುಡಿಯುವ ನೀರಿನ ಕೊರತೆಯನ್ನು ಎದುರಿಸಬಹುದು ಎಂದು ರಾಜ್ಯ ವಿಪತ್ತು ನಿರ್ವಹಣಾ ವಿಭಾಗದ ಮೂಲಗಳು  ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಕುಡಿಯುವ ನೀರಿ ಸಮಸ್ಯೆ: ಗದಗದಲ್ಲಿ ಆತಂಕ ಹೊರಹಾಕಿದ ಸಚಿವ ಹೆಚ್​ಕೆ ಪಾಟೀಲ್

ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗಾಗಿ ಬೋರ್​​ವೆಲ್​ಗಳನ್ನು ಅವಲಂಬಿಸಿರುವ ಪ್ರದೇಶಗಳ ಬೇಸಿಗೆಯ ಕರಿಚಾಯೆ ಬೀಳಲಿದೆ. ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳ ಪ್ರಕಾರ, ಮಳೆಯ ಕೊರತೆಯಿಂದಾಗಿ ರೈತರು ಬೋರ್‌ವೆಲ್‌ಗಳನ್ನು ಕೊರೆಯುವ ಮೂಲಕ ಅಂತರ್ಜಲ ಮೂಲವನ್ನು ಅತಿಯಾಗಿ ಬಳಸಿಕೊಂಡಿದ್ದಾರೆ. “ಹಲವು ಸ್ಥಳಗಳಲ್ಲಿ, ಬೋರ್‌ವೆಲ್‌ಗಳು ಸಹ ಬತ್ತಿವೆ” ಎಂದು ಅವರು ಹೇಳಿದರು.

ಈಗಾಗಲೆ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಿರುವ ಪ್ರದೇಶಗಳಲ್ಲಿ ಟ್ಯಾಂಕರ್​ ಮೂಲಕ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕೆಎಸ್‌ಎನ್‌ಡಿಎಂಸಿಯ ಮಾಜಿ ನಿರ್ದೇಶಕ ಮತ್ತು ಈಗ ವೈಜ್ಞಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಜಿಎಸ್ ಶ್ರೀನಿವಾಸ್ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಹೆಚ್ಚು ನೀರು ಅಗತ್ಯವಿರುವ ಬೆಳೆಗಳನ್ನು ಬೆಳೆಯದಂತೆ ಈ ಹಿಂದೆಯೇ ರೈತರಿಗೆ ಮನವಿ ಮಾಡಲಾಗಿತ್ತು. ನೀರು ಪೋಲು ಮತ್ತು ನಲ್ಲಿ ಸೋರಿಕೆಯನ್ನು ತಪ್ಪಿಸಬೇಕು ಎಂದು ಅವರು ಜನರನ್ನು ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:28 pm, Wed, 27 December 23