
ಬೆಂಗಳೂರು, ಡಿಸೆಂಬರ್ 13: ಕಲಬುರಗಿ (Kalaburagi) ಜಿಲ್ಲೆಯ ಆಳಂದ (Aland) ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ (Vote Theft) ನಡೆದಿದೆ ಎಂಬ ಆರೋಪ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಭಾವಿ ನಾಯಕನ ಪಾತ್ರ ಸಿಐಡಿ ತನಿಖೆಯಲ್ಲಿ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಎಸ್‌ಐಟಿ ತಂಡ ಬೆಂಗಳೂರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಚಾರ್ಜ್‌ಶೀಟ್ ಸಲ್ಲಿಸಿದೆ. ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ ಒಟ್ಟು 7 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿದ್ದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್ ಗುತ್ತೇದಾರ್ ಪಾತ್ರವಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಆದೇಶದಂತೆ ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಬಳಿಕ ಸುಮಾರು 22 ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದರು. ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಷಯವನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಪ್ರಸ್ತಾಪಿಸಿ ಆರೋಪ ಮಾಡಿದ್ದರು.
ತನಿಖೆಯ ವೇಳೆ ಆಳಂದ ಕ್ಷೇತ್ರದಲ್ಲಿ 5,994 ಮತದಾರರ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂಬುದು ಪತ್ತೆಯಾಗಿತ್ತು. ಮತದಾರರ ಹೆಸರು ಅಳಿಸಲು ಸೈಬರ್ ಸೆಂಟರ್ ಬಳಸಿಕೊಂಡು ಹಣ ಪಾವತಿ ಮಾಡಲಾಗಿದೆ ಎಂಬ ಆರೋಪ ತನಿಖೆಯಲ್ಲಿ ಹೊರಬಿದ್ದಿತ್ತು.
ಪ್ರಕರಣದಲ್ಲಿ, ಪ್ರತಿ ಮತದಾರರ ಹೆಸರು ಅಳಿಸಲು 80 ರೂ. ಹಣ ಪಾವತಿಸಲಾಗಿದೆ ಎಂಬ ಆರೋಪವಿದ್ದು, 2022ರ ಡಿಸೆಂಬರ್‌ನಿಂದ 2023ರ ಫೆಬ್ರವರಿವರೆಗೆ 6,018 ಮತಗಳ ರದ್ದತಿಗೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿತ್ತು ಎಂಬ ಆರೋಪವೂ ಇದೆ. ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತಗಳ್ಳತನ ಮಾಡಲು ಹಣ ಪಾವತಿ ಮಾಡಿಸಿದ್ದರು ಎಂಬ ಆರೋಪವನ್ನೂ ಚಾರ್ಜ್‌ಶೀಟ್‌ನಲ್ಲಿ ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಆಳಂದ ಮತಗಳವು ಕೇಸ್, SIT ತನಿಖೆಗೆ ಸ್ಫೋಟಕ ತಿರುವು: ಮತಪಟ್ಟಿಯಿಂದ ಹೆಸರು ತೆಗೆಯಲು ಡೀಲ್, ರಹಸ್ಯ ಬಯಲು
ಸುಭಾಷ್ ಗುತ್ತೆದಾರ್ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆ ಸ್ಪರ್ಧಿಸಿದ್ದರು. ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಲು ಹಣ ಪಾವತಿ ಮಾಡಿದ್ದಾರೆ ಎಂಬ ಆರೋಪ ಇವರೂ ಸೇರಿದಂತೆ ಇತರ ಆರೋಪಿಗಳ ಮೇಲಿದೆ. ಅಳಂದದಲ್ಲಿ 2023ರಲ್ಲಿ ಮತಪಟ್ಟಿಯಿಂದ ಹೆಸರುಗಳನ್ನು ತೆಗೆಯಲು 6,018 ಅರ್ಜಿಗಳ ಸಲ್ಲಿಕೆಯಾಗಿದ್ದವು. ಕಲಬುರಗಿ ಡೇಟಾ ಸೆಂಟರ್ನಿಂದ 75 ಮೊಬೈಲ್ ನಂಬರ್ಗಳನ್ನು ಬಳಸಿಕೊಂಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಡೇಟಾ ಸೆಂಟರ್ನವನು ಪ್ರತಿ ಅರ್ಜಿಗೂ 80 ರೂ.ನಂತೆ 4.8 ಲಕ್ಷ ರೂ. ಪಡೆದಿದ್ದ ಎಂಬ ಆರೋಪವಿದೆ. ಇದರ ಹಿಂದೆ ಗುತ್ತೆದಾರ್ ಕೈವಾಡ ಇದೆ ಎಂಬ ಆರೋಪವೂ ಕೇಳಿಬಂದಿತ್ತು.
Published On - 7:24 am, Sat, 13 December 25