ಚಿಕಿತ್ಸೆ ಹೆಸರಿನಲ್ಲಿ ಲಕ್ಷ ಲಕ್ಷ ಸುಲಿಗೆ ಆರೋಪ, ಪೀಪಲ್ ಟ್ರೀ ಆಸ್ಪತ್ರೆ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ದೇಶಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಿ, ಖಾಸಗಿ ಎನ್ನದೇ ಆಸ್ಪತ್ರೆಗಳು ಭರ್ತಿಯಾಗಿವೆ. ಆದ್ರೆ ಕೆಲ ಖಾಸಗಿ ಆಸ್ಪತ್ರೆಗಳು ಮಾತ್ರ ಈ ಸಂದರ್ಭದಲ್ಲಿ ಅಕ್ಷರಶಃ ಅಮಾನವೀಯವಾಗಿ ವರ್ತಿಸ್ತಿವೆ. ಈಗ ಇಂತದ್ದೇ ಆರೋಪ ನಗರದ ಪ್ರತಿಷ್ಠಿತ ಆಸ್ಪತ್ರೆ ವಿರುದ್ಧವೂ ಕೇಳಿ ಬಂದಿದೆ.
ಬೆಂಗಳೂರು: ಕೊವಿಡ್ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ಶೇಕಡ50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಅಂತಾ ಸರ್ಕಾರದ ಆದೇಶವೇ ಇದೆ. ಆದ್ರೆ ರೋಗಿಗಳು ಫುಲ್ ಫಿಲ್ ಅಂತಾ ಲೆಕ್ಕಾ ತೋರಿಸ್ತಿರೋ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎಷ್ಟರಮಟ್ಟಿಗೆ ಚಿಕಿತ್ಸೆ ಸಿಗ್ತಿದೆ ಅನ್ನೋ ಪ್ರಶ್ನೆ ಸದ್ಯದ ಕೆಲ ಘಟನೆಗಳಿಂದ ಉದ್ಭವವಾಗಿದೆ.
ಕೊರೊನಾ ಸೋಂಕಿತನಿಗೆ ಐಸಿಯುನಲ್ಲಿ ಸೂಕ್ತ ಆಕ್ಸಿಜನ್ ನೀಡದೆ ಸಾವಿಗೆ ಕಾರಣವಾಗಿರುವುದಲ್ಲದೇ. ಬರೋಬ್ಬರಿ 6 ಲಕ್ಷ ಬಿಲ್ ಪಾವತಿಸದೆ ಶವ ನೀಡುವುದಿಲ್ಲ ಎಂದಿರುವ ಆರೋಪ ಗೊರಗುಂಟೆಪಾಳ್ಯದ ಪೀಪಲ್ ಟ್ರೀ ಆಸ್ಪತ್ರೆ ವಿರುದ್ಧ ಕೇಳಿ ಬಂದಿದ್ದು, ತಡರಾತ್ರಿ ಸ್ಥಳೀಯರು ಸೇರಿದಂತೆ ಸೋಂಕಿತನ ಕುಟುಂಬಸ್ಥರು ಮಾಜಿ ಕಾರ್ಪೋರೇಟರ್ ಜಿ.ಕೆ ವೆಂಕಟೇಶ್ ನೇತೃತ್ವದಲ್ಲಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಮುನಿರತ್ನ ಆಗಮಿಸಬೇಕು ಹಾಗೂ ಆಸ್ಪತ್ರೆ ಪರವಾನಗಿ ರದ್ದಾಗಬೇಕು ಅಂತಾ ಪ್ರತಿಭಟನಾಕಾರರು ಆಗ್ರಹಿಸಿದ್ರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶಾಸಕ ಮುನಿರತ್ನ ಸಹ ಈ ಆಸ್ಪತ್ರೆ ವಿರುದ್ಧ ಆರೋಪ ಇದೇ ಮೊದಲೇನಲ್ಲ, ಇಡೀ ಕಟ್ಟಡವೇ ಕಾನೂನಾತ್ಮಕವಾಗಿಲ್ಲ, ಅಗ್ನಿ ಅವಘಡವಾದರೆ ತುರ್ತು ಸ್ಪಂದನೆಗೆ ಸಹ ಸುರಕ್ಷತಾ ಕ್ರಮಗಳನ್ನ ಅನುಸರಿಸದ ಇದೊಂದು ಸಾವಿನ ಮನೆ ಅಂತಾ ಹರಿಹಾಯ್ದರು.
ಆಸ್ಪತ್ರೆಗ ಬಳಿಗೆ ಶಾಸಕರು ಬಂದು ಮಾತುಕತೆಗೆ ಆಹ್ವಾನಿಸಿದ್ರೂ ಆಸ್ಪತ್ರೆ ಪರವಾಗಿ ಯಾರೊಬ್ಬರೂ ಸಹ ಮಾತನಾಡಲು ಮುಂದೆ ಬರಲಿಲ್ಲ. ಒಟ್ನಲ್ಲಿ ಖಾಸಗಿ ಆಸ್ಪತ್ರೆಗಳ ಅಂಧಾದರ್ಬಾರ್‌ಗೆ ಹಿಡಿದ ಕೈನ್ನಡಿಯಂತೆ ಕಂಡು ಬಂದ ಪೀಪಲ್ ಟ್ರೀ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಮನವಿ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಇನ್ನಾದರೂ ಕೊವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವ ಮೂಲಕ ಪೀಪಲ್ ಟ್ರೀ ಆಸ್ಪತ್ರೆ ಪೀಪಲ್ ಫ್ರೆಂಡ್ಲಿ ಆಗಬೇಕಿದೆ.