ಉತ್ತರ ಕರ್ನಾಟಕ ರೈತರಿಗೆ ಸಿಹಿ ಸುದ್ದಿ; ಮಳೆ ಕೊರತೆಯ ನಡುವೆಯೂ ಭರ್ತಿಯಾಯ್ತು ಆಲಮಟ್ಟಿ ಜಲಾಶಯ

Almatti Dam water level; ಜಲಾಶಯದಲ್ಲಿ ಪ್ರಸ್ತುತ ಸಂಗ್ರಹಣೆಯು 123.081 ಟಿಎಂಸಿಯಷ್ಟಿದ್ದು, ಇದು ಜಲಾನಯನ ಜಿಲ್ಲೆಗಳ ನೀರಿನ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ. ಜುಲೈ 27 ರಂದು ಕಾಲುವೆಗಳಿಗೆ ನೀರು ಬಿಡುವುದು ಆರಂಭವಾಗಿದ್ದು ಇದು ನವೆಂಬರ್ 23 ರವರೆಗೆ ಮುಂದುವರಿಯಲಿದೆ.

ಉತ್ತರ ಕರ್ನಾಟಕ ರೈತರಿಗೆ ಸಿಹಿ ಸುದ್ದಿ; ಮಳೆ ಕೊರತೆಯ ನಡುವೆಯೂ ಭರ್ತಿಯಾಯ್ತು ಆಲಮಟ್ಟಿ ಜಲಾಶಯ
ಆಲಮಟ್ಟಿ ಜಲಾಶಯ

Updated on: Aug 17, 2023 | 3:54 PM

ಬೆಂಗಳೂರು, ಆಗಸ್ಟ್ 17: ರಾಜ್ಯದಲ್ಲಿ ಮಳೆ ಕೊರತೆಯ ಹೊರತಾಗಿಯೂ, ಒಳಹರಿವು ಕಡಿಮೆಯಿದ್ದರೂ ಆಲಮಟ್ಟಿ ಜಲಾಶಯದಲ್ಲಿ (Almatti Dam) ನೀರಿನ ಪ್ರಮಾಣ ಈ ವರ್ಷ ಇದೇ ಮೊದಲ ಬಾರಿಗೆ ಗರಿಷ್ಠ ಮಟ್ಟ ತಲುಪಿದೆ ಎಂದು ವರದಿಯಾಗಿದೆ. ವಿಜಯಪುರ, ಕಲಬುರಗಿ ಮತ್ತು ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ (North Karnataka) ಹಲವಾರು ಜಿಲ್ಲೆಗಳ ಜೀವನಾಡಿಯಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಅಥವಾ ಆಲಮಟ್ಟಿ ಅಣೆಕಟ್ಟೆ ಮೊದಲ ಬಾರಿಗೆ ತನ್ನ ಗರಿಷ್ಠ ಮಟ್ಟ (519.60 ಮೀಟರ್) ತಲುಪಿದೆ.

ಜುಲೈ 12ರಂದು ಮೊದಲ ಒಳಹರಿವು ಕಂಡಿದ್ದ ಜಲಾಶಯ ಬುಧವಾರ (ಆಗಸ್ಟ್ 16) ಗರಿಷ್ಠ ಮಟ್ಟ ತಲುಪಿದೆ. ಜುಲೈನಲ್ಲಿ ಜಲಾಶಯಕ್ಕೆ ಒಂದೆರಡು ದಿನ 1.50 ಲಕ್ಷ ಕ್ಯೂಸೆಕ್ ಒಳಹರಿವು ಇತ್ತು. ಆಗ ಅಣೆಕಟ್ಟೆ ಬಹುತೇಕ ತುಂಬಿತ್ತು. ಆದರೆ ಆಗಸ್ಟ್‌ನಲ್ಲಿ ಮಳೆ ಕೊರತೆಯಾಗಿರುವುದು ಗರಿಷ್ಠ ಮಟ್ಟದ ನೀರು ಸಂಗ್ರಹ ವಿಳಂಬವಾಗಲು ಕಾರಣವಾಯಿತು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಜಲಾಶಯದಲ್ಲಿ ಪ್ರಸ್ತುತ ಸಂಗ್ರಹಣೆಯು 123.081 ಟಿಎಂಸಿಯಷ್ಟಿದ್ದು, ಇದು ಜಲಾನಯನ ಜಿಲ್ಲೆಗಳ ನೀರಿನ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ. ಜುಲೈ 27 ರಂದು ಕಾಲುವೆಗಳಿಗೆ ನೀರು ಬಿಡುವುದು ಆರಂಭವಾಗಿದ್ದು ಇದು ನವೆಂಬರ್ 23 ರವರೆಗೆ ಮುಂದುವರಿಯಲಿದೆ. ನವೆಂಬರ್ ಮೊದಲ ವಾರದವರೆಗೆ ಒಳಹರಿವು ಚೆನ್ನಾಗಿದ್ದರೆ, ರಾಬಿ ಬೆಳೆಗಳಿಗೂ ನೀರು ಬಿಡಲಾಗುತ್ತದೆ ಎಂದು ವರದಿ ಉಲ್ಲೇಖಿಸಿದ್ದು, ಮಳೆ ಕೊರತೆ ಹೀಗೆಯೇ ಮುಂದುವರಿದರೆ ನೀರು ಬಿಡುವುದು ಕಷ್ಟವಾಗಬಹುದು ಎಂದೂ ಉಲ್ಲೇಖಿಸಿದೆ.

ಇದನ್ನೂ ಓದಿ: ತಮಿಳುನಾಡಿನ ಒತ್ತಡಕ್ಕೆ ಮಣಿಯಿತೇ ಕರ್ನಾಟಕ? 10 ಟಿಎಂಸಿ ನೀರು ಬಿಡಲಾಗುವುದು ಎಂದ ಡಿಸಿಎಂ ಡಿಕೆ ಶಿವಕುಮಾರ್

ಏತನ್ಮಧ್ಯೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯನ್ನು (ಐಸಿಸಿ) ಪುನರ್ ರಚಿಸಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್​​ಬಿ ತಿಮ್ಮಾಪುರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಎಲ್ಲಾ ಚುನಾಯಿತ ಪ್ರತಿನಿಧಿಗಳು, ಸಚಿವರು, ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳು ಮತ್ತು ಜಲಾನಯನ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಇದರ ಸದಸ್ಯರಾಗಿದ್ದಾರೆ.

ಅಲ್ಲದೆ, ವಲಯ ಮುಖ್ಯ ಎಂಜಿನಿಯರ್‌ಗಳು, ಕಾಡಾ ಅಧಿಕಾರಿಗಳು ಸೇರಿದಂತೆ ಏಳು ಅಧಿಕಾರಿಗಳನ್ನು ಅಧಿಕಾರಿ-ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಸ್.ವಿಜಯಲಕ್ಷ್ಮಿ ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us