ಕಲಬುರಗಿ: ಅಮರನಾಥ ಗುಹೆ ಬೇಸ್ ಕ್ಯಾಂಪ್ ಬಳಿ ಶುಕ್ರವಾರ ಸಂಜೆ ದಿಢೀರನೆ ಮೇಘ ಸ್ಪೋಟಗೊಂಡು (Amarnath cloudburst) ಭಾರೀ ಅನಾಹುತ ಸಂಭವಿಸಿದೆ. ಇದರಿಂದ ಉಂಟಾದ ಹಠಾತ್ ಪ್ರವಾಹದಿಂದ ಹತ್ತಾರು ಮಂದಿಯ ಪ್ರಾಣ ತೆತ್ತಿದ್ದಾರೆ. ಇದೇ ವೇಳೆ ಕರ್ನಾಟಕದಿಂದಲೂ ನೂರಾರು ಮಂದಿ ಅಮರನಾಥ ಯಾತ್ರೆಗೆ ತೆರಳಿದ್ದು, ಕೆಲವರು ಸಂಕಷ್ಟ ಅನುಭವಿಸುವಂತಾಗಿದೆ. ಆದರೆ ಪ್ರಾಣ ಹಾನಿಯಂತಹ ಅನಾಹುತ ವರದಿಯಾಗಿಲ್ಲ. ಈ ಮಧ್ಯೆ ಅಮರನಾಥ ಯಾತ್ರೆಗೆ ತೆರಳಿರುವ ಕಲಬುರಗಿ ತಾಲೂಕಿನ ಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಸ್ವಾಮೀಜಿ (bablad mutt swamiji) ಸೇಫ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಸೋಮವಾರ ಕಲಬುರಗಿಯಿಂದ ಅಮರನಾಥ ಯಾತ್ರೆ ಹೋಗಿದ್ದ ಶ್ರೀಗಳು ಸೇರಿದಂತೆ ಒಟ್ಟು 14 ಜನರ ತಂಡ ತೆರಳಿತ್ತು. ಜುಲೈ 7 ರಂದೇ ದರ್ಶನ ಮಾಡಿ, ಸ್ವಾಮೀಜಿ ತಂಡದವರು ಸುರಕ್ಷಿತವಾಗಿ ವಾಪಸಾಗಿದಾರೆ. ಶ್ರೀಗಳು ಅಮರನಾಥದಿಂದ ಸೇಫ್ ಆಗಿ, ವೈಷ್ಣೋ ದೇವಿಯತ್ತ ಪ್ರವಾಸ ಮುಂದುವರಿಸಿದ್ದಾರೆ.
ಶಿವಮೊಗ್ಗ ಮಹಿಳಾ ತಂಡಕ್ಕೆ ದರ್ಶನ ಪಡೆಯದೆ ವಾಪಸಾಗುವ ಅನಿವಾರ್ಯತೆ
ಶಿವಮೊಗ್ಗ ವರದಿ: ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಸಂಭವಿಸಿದ ಮೇಘ ಸ್ಫೋಟದಲ್ಲಿ ಶಿವಮೊಗ್ಗದಿಂದ (Shivamogga) ತೆರಳಿದ್ದ ಮಹಿಳೆಯರ ತಂಡ ಸುರಕ್ಷಿತವಾಗಿದೆ. ಮಾಜಿ ಮೇಯರ್ ಸುರೇಖಾ ಸೇರಿ 16 ಮಹಿಳೆಯರು ಸೇಫ್ ಆಗಿದ್ದಾರೆ. ಸದ್ಯ ಪಹಲ್ಗಾಮ್ ಬೇಸ್ ಕ್ಯಾಂಪ್ನಲ್ಲಿ ಮಹಿಳಾ ತಂಡ ಉಳಿದುಕೊಂಡಿದೆ. ಶ್ರೀನಗರದಿಂದ ಬೆಂಗಳೂರಿಗೆ ಸದ್ಯದಲ್ಲೇ ಈ 16 ಮಹಿಳೆಯರು ವಾಪಸಾಗಲಿದ್ದಾರೆ.
ಜುಲೈ 5 ರಂದು ಪ್ರತಿಕೂಲ ಹವಾಮಾನ ಹಿನ್ನೆಲೆ ಅಮರನಾಥ ದರ್ಶನ ಕಾರ್ಯಕ್ರಮವನ್ನು ಒಂದೊಂದು ದಿನಕ್ಕೂ ಮುಂದೂಡಲ್ಪಟ್ಟಿತ್ತು. ಇನ್ನು ಶಿವಮೊಗ್ಗದ ಮಹಿಳೆಯರ ತಂಡಕ್ಕೆ ನಿಗಧಿಯಾಗಿದ್ದ ಸಮಯದಂತೆ ನಿನ್ನೆ ಶುಕ್ರವಾರವೇ ಅವರು ಅಮರನಾಥ ದರ್ಶನಕ್ಕೆ ಹೋಗಬೇಕಿತ್ತು. ಸ್ಥಳೀಯ ಆಡಳಿತದ ಸೂಚನೆಯಂತೆ ನಿನ್ನೆಯೇ ದರ್ಶನಕ್ಕೆ ತೆರಳಲು ಶಿವಮೊಗ್ಗ ಮಹಿಳೆಯರ ತಂಡವು ಬೇಸ್ ಕ್ಯಾಂಪ್ ಗೆ ಹೋಗಿತ್ತು.
ಬಳಿಕ ದರ್ಶನಕ್ಕೆ ಹೋಗಲಾಗದೇ ಶಿವಮೊಗ್ಗ ಟೀಂ ಬೇಸ್ ಕ್ಯಾಂಪ್ ನಿಂದ ವಾಪಾಸ್ ಬಂದಿದೆ. ನಿನ್ನೆಯ ಮೇಘಸ್ಫೋಟದ ಬಳಿಕ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಹಾಗಾಗಿ ಮಹಿಳೆಯರ ತಂಡವು ಅಮರನಾಥ ಶಿವಲಿಂಗ ದರ್ಶನ ಪಡೆಯದೆ ವಾಪಸ್ ಹೊರಟಿದ್ದಾರೆ.
ಶಿವಮೊಗ್ಗ ಮಹಿಳೆಯರು ಪಹಲ್ಗಾಮ್ ಬೇಸ್ ಕ್ಯಾಂಪ್ ನಿಂದ ಶ್ರೀನಗರ ತಲುಪಿ, ಬಳಿಕ ಬೆಂಗಳೂರಿಗೆ ಬರಲಿದ್ದಾರೆ. ಕಳೆದ ಜುಲೈ 4 ರಂದು ಮಹಿಳಾ ತಂಡವು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿತ್ತು. ಬೆಂಗಳೂರಿನಿಂದ ಹೊರಟಿದ್ದ ತಂಡವು ಮೊದಲು ವೈಷ್ಣೋದೇವಿ ದರ್ಶನ ಪಡೆದು, ಬಳಿಕ ಅಮರನಾಥ ದರ್ಶನಕ್ಕೆ ಹೊರಡಲು ಸಿದ್ಧವಾಗಿತ್ತು. ಆದರೆ ಅಷ್ಟರಲ್ಲಿ ಪ್ರಕೃತಿ ವಿಕೋಪ ಘಟಿಸಿದೆ. ಇದೀಗ ಯಾತ್ರೆ ರದ್ದು ಹಿನ್ನೆಲೆ ಮಹಿಳಾ ತಂಡವು ಸೋಮವಾರ ಶಿವಮೊಗ್ಗಕ್ಕೆ ಹಿಂದಿರುಗಲಿದ್ದಾರೆ.
ಚಿಕ್ಕಮಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ 60 ಜನ ಸುರಕ್ಷಿತ
ಚಿಕ್ಕಮಗಳೂರು ವರದಿ: ಚಿಕ್ಕಮಗಳೂರು ಜಿಲ್ಲೆಯಿಂದ ಅಮರನಾಥ ಯಾತ್ರೆಗೆ ತೆರಳಿದ್ದ 60 ಜನ ಸುರಕ್ಷಿತವಾಗಿದ್ದಾರೆ. 60 ಮಂದಿಯಲ್ಲಿ ಇಬ್ಬರು ಜಮ್ಮುಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. 60 ಜನರನ್ನು ಸೇನಾ ಸಿಬ್ಬಂದಿ ರಕ್ಷಣೆ ಮಾಡಿದ್ದು, 58 ಜನ ಬಲ್ಸಾಲ್ ಬಂಕರ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ರಾಜ್ಯ ಸರ್ಕಾರದ ಸಹಾಯವಾಣಿಗೆ ನೆಟ್ವರ್ಕ್ ಸಮಸ್ಯೆ
ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘಸ್ಫೋಟ ಪ್ರಕರಣದಲ್ಲಿ ಕರ್ನಾಟಕ ರಾಜ್ಯದ 350 ಯಾತ್ರಿಕರು ಸಿಲುಕಿರುವ ಬಗ್ಗೆ ಮಾಹಿತಿಯಿದೆ. ರಾಜ್ಯ ಸರ್ಕಾರ ಸಹಾಯವಾಣಿ ತೆರೆದಿದ್ದು, ನೆಟ್ವರ್ಕ್ ಸಮಸ್ಯೆಯಿಂದ ಈವರೆಗೆ 48 ಕರೆ ಬಂದಿದೆ.
ಬಾಗಲಕೋಟೆ ವರದಿ: ದರ್ಶನದ ಪಡೆದಿರುವ ಇಬ್ಬರೂ ಸೇಫ್
ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘಸ್ಫೋಟದಲ್ಲಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಗ್ರಾಮದ ಕಮತಗಿಯ ದೇವೇಂದ್ರಪ್ಪ ಬಂಡಿ, ಮಲ್ಲಪ್ಪ ದಂಡವತಿ ಸುರಕ್ಷಿತವಾಗಿದ್ದಾರೆ. ದೇವೇಂದ್ರಪ್ಪ, ಮಲ್ಲಪ್ಪ ಸುರಕ್ಷಿತವಾಗಿ ಇರುವುದಾಗಿ ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬಾಗಲಕೋಟೆಯ ಈ ಇಬ್ಬರೂ ಯಾತ್ರಾರ್ಥಿಗಳು ಕಾಶ್ಮೀರದ ಬಾವಟಾಣ್ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ. ಜೂನ್ 23ರಂದು ಕಮತಗಿ ಪಟ್ಟಣದಿಂದ ಪ್ರವಾಸ ಹೋಗಿದ್ದರು. ಸಮಾಧಾನಕರ ಸಂಗತಿಯೆಂದರೆ ಮೇಘಸ್ಫೋಟದ ವೇಳೆಗೆ ಇವರಿಬ್ಬರೂ ಅಮರನಾಥ ಯಾತ್ರೆ ಮುಗಿಸಿ ವಾಪಸಾಗಿದ್ದಾರೆ. ಇಬ್ಬರಿಗೂ ಯಾವುದೇ ತೊಂದರೆಯಿಲ್ಲ, ಸುರಕ್ಷಿತವಾಗಿದ್ದೇವೆ ಎಂದು ದೇವೆಂದ್ರಪ್ಪ ಬಂಡಿ ಟಿವಿ 9ಗೆ ದೂರವಾಣಿ ಮೂಲಕ ಸ್ಪಷ್ಟಪಡಿಸಿದ್ದಾರೆ.
Published On - 2:49 pm, Sat, 9 July 22