ಬಾಗಲಕೋಟೆ: ನಿಂತಲ್ಲೇ ಕಿಕ್ ಕೊಡೋ ಡಿಜೆ ಮ್ಯೂಸಿಕ್.. ಹೆಜ್ಜೆ ಹೆಜ್ಜೆಗೂ ಹೆಚ್ಚಾಗೋ ಜೋಶ್.. ತಾಳ ಮೇಳ ಕಿವಿಗೆ ಬೀಲ್ತಾ ಇದ್ರೆ ಕುಣೀಬೇಕು ಅನ್ಸುತ್ತೆ.. ಎಲ್ಲರ ಜೊತೆ ಎಲ್ಲವನ್ನೂ ಮರೆತು ಮೈ ಮನ ಕುಣಿಸ್ಬೇಕು ಅನ್ಸುತ್ತೆ.. ಅತ್ತ ರೋಡ್ ತುಂಬಾ ಕುಣಿಯೋರ ಗ್ಯಾಂಗ್.. ಇತ್ತ ಭಕ್ತಿಯ ಅಲೆಯಲ್ಲೇ ತೇಲೋ ಮಂದಿ.. ಸರ್ವಾಲಂಕಾರಗಳಲ್ಲಿ ಕಂಗೊಳಿಸೋ ದೇವನನ್ನ ನೋಡ್ತಾ ಜನ ಭಕ್ತಿಯಲ್ಲಿ ಕಳೆದೋಗಿದ್ರು.
ತೆಂಗಿನ ಕಾಯಿ ತೂರೋದೇ ಜಾತ್ರೆಯ ವಿಶೇಷ:
ಬಾಗಲಕೋಟೆ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯ ಸಂಭ್ರಮವಿದು. ಈ ಜಾತ್ರೆಯಲ್ಲಿ ವಿಶೇಷ ಅಂದ್ರೆ ತೆಂಗಿನ ಕಾಯಿ ತೂರೋದು. ಜಾತ್ರೆಗೆ ಬರೋ ಭಕ್ತರು ಮೂಟೆಗಟ್ಟಲೇ ತಂದ ತೆಂಗಿನಕಾಯಿಯನ್ನ ದೇವಸ್ಥಾನದ ಆವರಣದಲ್ಲಿ ತೂರಾಡಿ ಸಂಭ್ರಮ ಪಡುತ್ತಾರೆ. ತೂರಿದ ತೆಂಗಿನಕಾಯಿಯನ್ನು ಹಿಡಿಯೋದಕ್ಕೆ ಯುವಕರು ಮುಗಿಬೀಳ್ತಾರೆ. ಈ ತೆಂಗಿನಕಾಯಿ ತೂರುವ ಸಂಭ್ರಮವನ್ನು ನೋಡ್ಬೇಕು ಅಂತಾನೇ ಸಾವಿರಾರು ಜನ ಬರ್ತಾರೆ. ಮಾರುತೇಶ್ವರನಿಗೆ ಪೂಜೆ ಸಲ್ಲಿಸಿ ಜಾತ್ರೆಯ ಸಂಭ್ರಮ ಕಂಡು ಸಂಭ್ರಮ ಪಡುತ್ತಾರೆ.
ಜಾತ್ರೆಗೆ ನೂರಾರು ವರ್ಷಗಳ ಇತಿಹಾಸ:
ಇನ್ನು ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹನುಮದೇವರ ಹೊತ್ತ ಪಲ್ಲಕ್ಕಿ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಜಾತ್ರೆಗೆ ಬಂದ ಭಕ್ತರೆಲ್ಲರೂ ಪಲ್ಲಕ್ಕಿ ಮೆರವಣಿಗೆ ವೇಳೆ ಹೂವು, ಮಂಡಕ್ಕಿಯನ್ನ ಪಲ್ಲಕ್ಕಿ ಮೇಲೆ ತೂರಿ ಭಕ್ತಿ ಸಮರ್ಪಿಸಿದರು. ಇನ್ನು ಈ ಜಾತ್ರೆಯಲ್ಲಿ ತೆಂಗಿನ ಕಾಯಿ ತೂರುವ ಹಿನ್ನೆಲೆಗೆ ನೂರಾರು ವರ್ಷಗಳ ಇತಿಹಾಸವಿದೆ.
ಹಿಂದೆ ಮಾರುತೇಶ್ವರ ದೇವರಿಗೆ ಭಕ್ತನೊಬ್ಬ ಬೇಡಿಕೆ ಈಡೇರಿದಾಗ ತೆಂಗಿನ ಕಾಯಿ ತೂರಿ ಹರಕೆ ತೀರಿಸಿದ್ದನಂತೆ. ಅಂದಿನಿಂದ ಈ ಹನುಮನಿಗೆ ಬೇಡಿಕೊಂಡವರೆಲ್ಲರೂ ದೇವಸ್ಥಾನಕ್ಕೆ ತೆಂಗಿನಕಾಯಿ ತೂರುತ್ತಾ ಹರಕೆ ಸಮರ್ಪಿಸ್ತಾರೆ. ಮನೆ ಮಾಳಿಗೆ ಮೇಲೆ ನಿಂತು ಸಾವಿರಾರು ತೆಂಗಿನಕಾಯಿಗಳನ್ನು ಆಕಾಶಕ್ಕೆ ಮೇಲ್ಮುಖ ಮಾಡಿ ತೂರ್ತಾರೆ.
ಹೀಗೆ ತೂರಿ ಬಂದ ತೆಂಗಿನಕಾಯಿಯನ್ನ ಹಿಡಿಯೋಕೆ ಅಂತ್ಲೇ ಕೆಲವ್ರು ಸರ್ಕಸ್ ಮಾಡ್ತಾರೆ. ಜಾತ್ರೆಗಳು ಅಂದ್ರೆನೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಜಾತ್ರೆಯಲ್ಲೂ ಒಂದೊಂದು ರೀತಿಯ ಆಚರಣೆಗಳಿರುತ್ತವೆ. ಅದ್ರಂತೆ ಈ ಜಾತ್ರೆಯಲ್ಲಿ ತೆಂಗಿನಕಾಯಿ ತೂರೋದು ಪ್ರತೀತಿಯಾಗಿ ಬಂದಿದ್ದು, ಇದು ಇಲ್ಲಿನ ಜನರ ನಂಬಿಕೆಯೂ ಆಗಿದೆ.
Published On - 6:49 am, Wed, 18 December 19