ಹಿಜಾಬ್, ಕೇಸರಿ ಶಾಲು ವಿವಾದದ ನಡುವೆ ಇಂದಿನಿಂದ ಕರ್ನಾಟಕದಲ್ಲಿ ಶಾಲೆ ಆರಂಭ; ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ

| Updated By: sandhya thejappa

Updated on: Feb 14, 2022 | 10:46 AM

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ, ಹೈಕೋರ್ಟ್ ಮಧ್ಯಂತರ ಆದೇಶವನ್ನು ಎಲ್ಲರೂ ಪಾಲಿಸಬೇಕು. ಬುಧವಾರದವರೆಗೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಕಾಲೇಜು ಆರಂಭದ ಬಗ್ಗೆ ಇಂದು ಸಿಎಂ ಸಭೆ ನಡೆಸಲಿದ್ದಾರೆ.

ಹಿಜಾಬ್, ಕೇಸರಿ ಶಾಲು ವಿವಾದದ ನಡುವೆ ಇಂದಿನಿಂದ ಕರ್ನಾಟಕದಲ್ಲಿ ಶಾಲೆ ಆರಂಭ; ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ
ಶಾಲೆಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳು
Follow us on

ಬೆಂಗಳೂರು: ಹಿಜಾಬ್ (Hijab), ಕೇಸರಿ ಶಾಲು ವಿವಾದ ಕೇವಲ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶವನ್ನೇ ವ್ಯಾಪಿಸಿದೆ. ಸದ್ಯ ಕೋರ್ಟ್ ತೀರ್ಮಾನಕ್ಕಾಗಿ ಕಾದು ಕುಳಿತಿದ್ದಾರೆ. ಸಮವಸ್ತ್ರ (Uniform) ಸಂಘರ್ಷದ ಹಿನ್ನೆಲೆ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಆರಂಭಗೊಂಡಿವೆ. 9, 10ನೇ ತರಗತಿ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದ್ದಾರೆ. ಶಾಲೆಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳಿಗೆ ಡಿಸಿ, ಎಸ್ಪಿ ಭೇಟಿ ನೀಡಬೇಕು. ಶಾಲಾ ಆಡಳಿತ ಮಂಡಳಿಗಳ ಜತೆ ಸಂಪರ್ಕದಲ್ಲಿರಬೇಕು. ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಧಿಕಾರಿಗಳು ಮೇಲಿನ ಆದೇಶಗಳಿಗೆ ಕಾಯಬಾರದು. ಸಂದರ್ಭಕ್ಕೆ ತಕ್ಕಂತೆ ನೀವೇ ಕ್ರಮ ಕೈಗೊಳ್ಳಿ ಅಂತ ಜಿಲ್ಲಾಧಿಕಾರಿಗಳು, ಎಸ್ಪಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ, ಹೈಕೋರ್ಟ್ ಮಧ್ಯಂತರ ಆದೇಶವನ್ನು ಎಲ್ಲರೂ ಪಾಲಿಸಬೇಕು. ಬುಧವಾರದವರೆಗೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಕಾಲೇಜು ಆರಂಭದ ಬಗ್ಗೆ ಇಂದು ಸಿಎಂ ಸಭೆ ನಡೆಸಲಿದ್ದಾರೆ. ಶಾಲೆಗಳ ಬಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಪೋಷಕರು ಯಾರೂ ಭಯ ಪಡುವುದು ಬೇಡ ಎಂದಿದ್ದಾರೆ.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ದು ಅತ್ಯಂತ ಕೆಟ್ಟ ಹೇಳಿಕೆ ಎಂದು ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಹಿಂದೂ ಹೆಣ್ಣುಮಕ್ಕಳು ಪ್ಯಾಂಟ್, ಬೇರೆ ಬೇರೆ ಬಟ್ಟೆ ಹಾಕ್ತಾರೆ. ಹಿಜಾಬ್ ಹಾಕಿದ್ರೆ ಮಾತ್ರ ಅತ್ಯಾಚಾರ ಆಗಲ್ವಾ? ಬೇರೆ ಬಟ್ಟೆ ಹಾಕಿದರೆ ಮಾತ್ರ ಅತ್ಯಾಚಾರ ಆಗುತ್ತಾ? ಸೌಂದರ್ಯ ಕಾಣಬಾರದು ಅಂತ ಅದೇಗೆ ಹೇಳ್ತಾರೆ ಜಮೀರ್? ಶಾಸಕ ಜಮೀರ್ ಅಹ್ಮದ್ ಮನಸಿಗೆ ಬಂದಂತೆ ಮಾತಾಡುತ್ತಾರೆ ಅಂತ ಹೇಳಿದರು.

ಕೆಲ ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ:
ಇಂದಿನಿಂದ 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಶುರುವಾಗಿದೆ. ಅಹಿತಕರ ಘಟನೆ ನಡೆಯದಂತೆ ಶಾಲೆಗಳ ಬಳಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆ, ಉಡುಪಿ, ಶಿವಮೊಗ್ಗ, ಮೈಸೂರು, ತುಮಕೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ  ರಾಜ್ಯದ ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿರುವ ಶಾಲೆಗಳ ಬಳಿ ಬಿಗಿಬಂದೋಬಸ್ತ್ ಮಾಡಲಾಗಿದೆ.

ಹಿಜಾಬ್ ಧರಿಸಿ ಕೊಠಡಿಯಲ್ಲಿ ಕುಳಿತಿರುವ ವಿದ್ಯಾರ್ಥಿನಿಯರು:
ಯಾದಗಿರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕೊಠಡಿಯಲ್ಲಿ ಕುಳಿತಿದ್ದಾರೆ. ಈ ಮೂಲಕ ಹೈಕೋರ್ಟ್ ಮಧ್ಯಂತರ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಹಿಜಾಬ್ ಹಾಗೂ ಟೋಪಿ ಧರಿಸಿ ಬಂದಿದ್ದಾರೆ. ಹಿಜಾಬ್ ಧರಿಸಿ ಕುಳಿತರು ಶಿಕ್ಷಕರು ಹಾಗೆ ಪಾಠ ಮಾಡುತ್ತಿದ್ದಾರೆ.

ಉಡುಪಿಯಲ್ಲಿ ಸುಗಮವಾಗಿ ತರಗತಿಗಳು ಆರಂಭ:
ಜಿಲ್ಲೆಯಲ್ಲಿ ಸುಗಮವಾಗಿ ತರಗತಿಗಳು ಆರಂಭವಾಗಿದೆ. ತರಗತಿಗೆ ತೆರಳುವಾಗ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು‌ ಇಟ್ಟು ತರಗತಿ ‌ಹಾಜಾರಾಗುತ್ತಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ತರಗತಿಗಳು ಆರಂಭವಾಗಿದೆ.

ಹಿಜಾಬ್ ತೆಗೆದು ಶಾಲಾ ಕೊಠಡಿ ಪ್ರವೇಶ:
ಬಾಗಲಕೋಟೆಯಲ್ಲಿ ಹೈಸ್ಕೂಲ್​ಗೆ ಹಿಜಾಬ್ ಧರಿಸಿಕೊಂಡು ಕೆಲ ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ಶಾಲೆ ಒಳಗಡೆ ಬಂದು ಹಿಜಾಬ್ ತೆಗೆದು ತರಗತಿ ಕೊಠಡಿಗೆ ಪ್ರವೇಶ ಮಾಡುತ್ತಿದ್ದಾರೆ. ಹಿಜಾಬ್ ಧರಿಸಿ ಬಂದ ಅನ್ಫಿಯಾ ಎಂಬ ವಿದ್ಯಾರ್ಥಿನಿ ಮಾತನಾಡಿ, ನಾವು ಮನೆಯಿಂದ ಹಿಜಾಬ್ ಧರಿಸಿಕೊಂಡು ಬರುತ್ತೇವೆ. ಕ್ಲಾಸ್ ರೂಮಿಗೆ ಹೋಗುವಾಗ ಹಿಜಾಬ್ ತೆಗೆಯುತ್ತೇವೆ. ಮನೆಯಿಂದ ಹಾಕಿಕೊಂಡು ಬರುತ್ತೇವೆ. ಕ್ಲಾಸ್ ರೂಮಲ್ಲಿ ಧರಿಸೋದಿಲ್ಲ. ಮನೆಯಲ್ಲಿ ಹಾಗೂ ಶಿಕ್ಷಕರು ಕ್ಲಾಸ್ ರೂಮಲ್ಲಿ ಹಾಕಬೇಡ ಅಂದಿದ್ದಾರೆ. ನಾವು ಮೊದಲಿಂದಲೂ ಧರಿಸುತ್ತಾ ಬಂದಿದ್ದೇವೆ. ಆದರೆ ಕ್ಲಾಸಲ್ಲಿ ಹಾಕುತ್ತಿರಲಿಲ್ಲ. ಸಮವಸ್ತ್ರ ನಮಗೆ ಮುಖ್ಯ ಅದಕ್ಕೆ ಗೌರವ ಕೊಡುತ್ತೇವೆ. ಮೊನ್ನೆ ನಡೆದ ಗಲಾಟೆಯಿಂದ ನಮಗೆ ಬಹಳ ಭಯ ಆಗಿತ್ತು. ನಮ್ಮ ಧರ್ಮದಲ್ಲಿ ಹಿಜಾಬ್ ಇದೆ. ಆದರೆ ಕ್ಲಾಸ್ ರೂಮಲ್ಲಿ ಹಾಕಬಾರದು ಅಂತ ಅಭಿಪ್ರಾಯಪಟ್ಟಿದ್ದಾಳೆ.

ಬುರ್ಕಾ ತೊಟ್ಟು ಶಾಲೆಗೆ ಆಗಮಿಸಿದ ವಿದ್ಯಾರ್ಥಿನಿ:
ಮಂಡ್ಯದಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬಂದಿದ್ದಾರೆ. ಈ ನಡುವೆ ಓರ್ವ ವಿದ್ಯಾರ್ಥಿನಿ ಬುರ್ಕಾ ತೊಟ್ಟು ಶಾಲೆಗೆ ಆಗಮಿಸಿದ್ದಾಳೆ. ಮಂಡ್ಯದ ರೋಟರಿ ವಿದ್ಯಾಸಂಸ್ಥೆಗೆ ವಿದ್ಯಾರ್ಥಿನಿ ಬುರ್ಕಾ ತೊಟ್ಟು ಆಗಮಿಸಿದ್ದಾಳೆ. ಸದ್ಯ ಶಾಲೆಗಳ ಬಳಿ ಪೊಲೀಸರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ

KERC -ESCOMs: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಿಸ ಬೇಕಾ, ಬೇಡವಾ? ಇಂದಿನಿಂದ ಗ್ರಾಹಕರ ಅಹವಾಲು ಸ್ವೀಕಾರ, ನೀವೇನಂತೀರಿ?

Hijab Row what next? ಅನ್ನೋರಿಗೆ ಶಾಕ್​ ಕೊಟ್ಟ ಶಿಕ್ಷಕಿಯರು, ಮಾದರಿಯಾಗಬೇಕಿದ್ದ ಶಿಕ್ಷಕಿಯರೇ ಸ್ವತಃ ಹಿಜಾಬು ಧರಿಸಿದರು!

Published On - 10:33 am, Mon, 14 February 22