Karnataka Hijab Hearing: ಅರ್ಜಿದಾರರ ಮಾಹಿತಿ ನೀಡದಂತೆ ನಿರ್ಬಂಧಿಸಲು ಮನವಿ; ವಿಚಾರಣೆ ನಾಳೆಗೆ ಮುಂದೂಡಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 14, 2022 | 5:48 PM

Karnataka News Live Updates: ಒಂದೊಮ್ಮೆ ಸಮವಸ್ತ್ರ ಕಿರಿಕ್ ಅಥವಾ ಗಲಾಟೆ ಎದುರಾದರೆ ತಕ್ಷಣಕ್ಕೆ ಡಿಡಿಪಿಐ ಗಮನಕ್ಕೆ ತರುವಂತೆ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಕೆಲವು ಸೂಚನೆ ನೀಡಿದೆ.

Karnataka Hijab Hearing: ಅರ್ಜಿದಾರರ ಮಾಹಿತಿ ನೀಡದಂತೆ ನಿರ್ಬಂಧಿಸಲು ಮನವಿ; ವಿಚಾರಣೆ ನಾಳೆಗೆ ಮುಂದೂಡಿಕೆ
ಪ್ರಾತಿನಿಧಿಕ ಚಿತ್ರ

ಹಿಜಾಬ್ (Hijab), ಕೇಸರಿ ಶಾಲು ವಿವಾದದಿಂದ ಬಂದ್ ಆಗಿದ್ದ ಶಾಲೆ ಇಂದಿನಿಂದ ಮತ್ತೆ ಆರಂಭವಾಗಿದೆ. ಆತಂಕದಲ್ಲಿಯೇ ಶಿಕ್ಷಣ ಇಲಾಖೆ ಫ್ರೌಢ ಶಾಲೆಗಳ ಆರಂಭಕ್ಕೆ ಮುಂದಾಗಿದೆ. ಬಿಗಿ ಭದ್ರತೆಯಲ್ಲಿ ಇಂದಿನಿಂದ 9 ಮತ್ತು 10 ನೇ ತರಗತಿ ಆರಂಭವಾಗಿದೆ. ಹಿಜಾಬ್ ಸಂಘರ್ಷದಿಂದ ಸರ್ಕಾರ ಮೂರು ದಿನ ರಜೆ ನೀಡಿತ್ತು. ಈ ಮಧ್ಯೆ, ಹಿಜಾಬ್ ವಿವಾದ ಪ್ರಕರಣದ ವಿಚಾರಣೆ ಕರ್ನಾಟಕ ಹೈಕೋರ್ಟ್​ನಲ್ಲಿ ನಡೆಯುತ್ತಿದೆ. ಇಂದು ವಿಚಾರಣೆಯನ್ನು ಮಂಗಳವಾರಕ್ಕೆ (ಫೆಬ್ರವರಿ 15) ಮುಂದೂಡಿ ಆದೇಶ ನೀಡಲಾಗಿದೆ.  ಇದೇ ವೇಳೆ,  ಮಾಧ್ಯಮಗಳಲ್ಲಿ ಅರ್ಜಿದಾರರ ಮಾಹಿತಿ ನೀಡದಂತೆ ನಿರ್ಬಂಧಿಸಲು ಮನವಿ ಮಾಡಲಾಗಿದೆ. ಅರ್ಜಿದಾರರು ಅಪ್ರಾಪ್ತ  ವಿದ್ಯಾರ್ಥಿನಿಯರು ಆಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್ ಮನವಿ ಮಾಡಿದ್ದಾರೆ. 

LIVE NEWS & UPDATES

The liveblog has ended.
  • 14 Feb 2022 05:20 PM (IST)

    Karnataka Hijab Hearing Live: ಎಲ್ಲಾ ಒಪ್ಪಿದರೆ ಯೂಟ್ಯೂಬ್ ನೇರಪ್ರಸಾರ ನಿಲ್ಲಿಸಲು ಪರಿಶೀಲಿಸಬಹುದು

    ಅರ್ಜಿದಾರರ ಪರವಾಗಿ ನಮ್ಮ ವಾದವೂ ಇದೆ ಎಂದು ಕೇರಳದ ಹಿರಿಯ ವಕೀಲ ಕಾಳೀಶ್ವರಮ್ ರಾಜ್ ಹೇಳಿದ್ದಾರೆ. ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಕಲಾಪ ವರದಿಯಾಗುತ್ತಿದೆ. ಇದರಿಂದ ಬೇರೆ ರಾಜ್ಯಗಳ ಚುನಾವಣೆ ಮೇಲೆ ಪ್ರಭಾವ ಸಾಧ್ಯತೆ ಇದೆ ಎನ್ನಲಾಗಿದೆ. ಅರ್ಜಿದಾರರ ಪರ ರವಿವರ್ಮಕುಮಾರ್ ವಾದ ಮಂಡಿಸಿದ್ದಾರೆ. ಎಲ್ಲ ಒಪ್ಪಿದರೆ ಯೂಟ್ಯೂಬ್ ನೇರಪ್ರಸಾರ ನಿಲ್ಲಿಸಲು ಪರಿಶೀಲಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ. ಹಲವು ವಕೀಲರಿಂದ ವಾದಿಸಲು ಹಕ್ಕುಮಂಡನೆ ಮಾಡಲಾಗಿದೆ. ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಲಾಗಿದೆ.

  • 14 Feb 2022 04:44 PM (IST)

    Karnataka Hijab Hearing Live: ಕಾನೂನು ಸುವ್ಯವಸ್ಥೆ ಕಾರಣ ಕೊಟ್ಟು ನಮ್ಮ ಹಕ್ಕು ತಡೆಯಬಹುದೇ

    ಶಾಸಕ ನೇತೃತ್ವದ ಸಮಿತಿಗೆ ಇಂತಹ ಅಧಿಕಾರ ನೀಡುವಂತಿಲ್ಲವೇ? ಇಂತಹ ಯಾವುದಾದರೂ ಹೈಕೋರ್ಟ್ ತೀರ್ಪಿದ್ದರೆ ನೀಡಿ? ಎಂದು ದೇವದತ್ ಕಾಮತ್​ಗೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಆ ರೀತಿಯ ತೀರ್ಪು ಇರುವುದೇ ಪರಿಶೀಲಿಸುತ್ತೇನೆ ಎಂದು ದೇವದತ್ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾರಣ ಕೊಟ್ಟು ನಮ್ಮ ಹಕ್ಕು ತಡೆಯಬಹುದೇ. ನನ್ನ ಧಾರ್ಮಿಕ ಸ್ವಾತಂತ್ರ್ಯ ಆಚರಿಸಲು ಸರ್ಕಾರ ತಡೆಯುತ್ತಿರುವುದೇಕೆ. ಕಾನೂನು ಸುವ್ಯವಸ್ಥೆ ನೆಪದಲ್ಲಿ ನಮ್ಮ ಹಕ್ಕನ್ನು ನಿರ್ಬಂಧಿಸುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಹಿಜಾಬ್ ನಿರ್ಬಂಧಕ್ಕೆ ಕಾನೂನು ಸುವ್ಯವಸ್ಥೆ ಕಾರಣ ನೀಡಿದೆಯೇ? ಸರ್ಕಾರ ಹಾಗೆಂದು ಹೇಳಿದರೆ ನಿಮ್ಮ ವಾದ ಪರಿಶೀಲಿಸುತ್ತೇವೆ ಎಂದು ಹೈಕೋರ್ಟ್ ಹೇಳಿದೆ. ಸರ್ಕಾರದ ಆದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾರಣ ನೀಡಿದೆ. ಕನ್ನಡ ಆದೇಶದ ಇಂಗ್ಲಿಷ್ ತರ್ಜುಮೆಯಲ್ಲಿ ತಪ್ಪಾಗಿದೆ ಎಂದು ಎಜಿ ಹೇಳಿದ್ದಾರೆ. ಹೀಗಾಗಿ ಹೊಸ ಭಾಷಾಂತರದ ಪ್ರತಿಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

  • 14 Feb 2022 04:43 PM (IST)

    Karnataka Hijab Hearing Live: ಶಾಸಕರಿಗೇ ಸಮವಸ್ತ್ರ ಅಧಿಕಾರ ನೀಡಿದ್ದು ಸರಿಯಲ್ಲ

    ಸರ್ಕಾರದ ಆದೇಶ ಬರೆದವರು ಸಂವಿಧಾನದ 25 ನೇ ವಿಧಿ ಓದಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ಶಾಸಕ ನೇತೃತ್ವದ ಸಮಿತಿಗೆ ನೀಡಿದೆ. ಸಂವಿಧಾನ ಸರ್ಕಾರಕ್ಕೆ ನೀಡಿರುವ ಅಧಿಕಾರವನ್ನು ಸಮಿತಿ ನೀಡುವಂತಿಲ್ಲ ಎಂದು ಕಾಲೇಜು ಅಭಿವೃದ್ದಿ ಸಮಿತಿಯ ಅಧಿಕಾರವ್ಯಾಪ್ತಿಯನ್ನು ದೇವದತ್ ಪ್ರಶ್ನಿಸಿದ್ದಾರೆ. ಶಾಸಕರ ಅಭಿಪ್ರಾಯವನ್ನು ಪಡೆಯಲು ಆಕ್ಷೇಪವಿಲ್ಲ. ಆದರೆ ಶಾಸಕರಿಗೇ ಸಮವಸ್ತ್ರ ಅಧಿಕಾರ ನೀಡಿದ್ದು ಸರಿಯಲ್ಲ. ಸರ್ಕಾರ ಕೇವಲ ಸಮವಸ್ತ್ರದ ಅಧಿಕಾರ ಮಾತ್ರ ನೀಡಿದೆಯಲ್ಲವೇ, ಸಂವಿಧಾನದ 25(1) ರ ಅಧಿಕಾರವನ್ನು ನೀಡಿದೆಯೇ ಎಂದು ಸಿಜೆ ಕೇಳಿದ್ದಾರೆ. ಸಮವಸ್ತ್ರದೊಂದಿಗೆ ಧಾರ್ಮಿಕ ಸ್ವಾತಂತ್ರ್ಯವನ್ನೂ ಸಮಿತಿ ನಿರ್ಧರಿಸುತ್ತಿದೆ. ಆದರೆ ಕಾಲೇಜು ಅಭಿವೃದ್ದಿ ಸಮಿತಿಗೆ ಈ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.

  • 14 Feb 2022 04:14 PM (IST)

    Karnataka Hijab Hearing Live: ಸರ್ಕಾರ ತನ್ನ ಜವಾಬ್ದಾರಿಯನ್ನು ಇತರರಿಗೆ ಹಸ್ತಾಂತರಿಸುವಂತಿಲ್ಲ

    ಖುರಾನ್ ಇಸ್ಲಾಂ ಧರ್ಮದ ಮೊದಲ ಮೂಲವಾಗಿದೆಯಲ್ಲವೇ ಎಂದು ದೇವದತ್ ಕಾಮತ್ ಗೆ ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ನಾನು ಖುರಾನ್ ನಲ್ಲಿ ಹೇಳಿರುವ ಎಲ್ಲವನ್ನೂ ಪ್ರಸ್ತಾಪಿಸುವುದಿಲ್ಲ. ಆದರೆ ನಮ್ಮ ಪ್ರಶ್ನೆ ಇರುವುದು ಹಿಜಾಬ್ ಕುರಿತು ಮಾತ್ರ. ಇಸ್ಲಾಂ ಧರ್ಮಕ್ಕೆ ನಾಲ್ಕು ಮೂಲಗಳಿವೆ. ಖುರಾನ್, ಹದೀತ್, ಇಜ್ಮಾ, ಕಿಯಾಸ್ ಈ ಮೂಲಗಳು. ಆದರೆ ಖುರಾನ್ ನಲ್ಲಿರುವ ಯಾವುದನ್ನೂ ಇಸ್ಲಾಂ ವಿರೋಧಿ ಎನ್ನಲಾಗದು ಎಂದು ದೇವದತ್ ಕಾಮತ್ ಉತ್ತರ ನೀಡಿದ್ದಾರೆ. ಹಿಜಾಬ್ ಧರಿಸುವುದು ಧಾರ್ಮಿಕ ಸ್ವಾತಂತ್ರ್ಯದ ಭಾಗ. ಸರ್ಕಾರ ನಿರ್ಣಯದ ಅಧಿಕಾರವನ್ನು ಹಸ್ತಾಂತರಿಸಿದ್ದು ಸರಿಯಲ್ಲ. ಕಾಲೇಜು ಅಭಿವೃದ್ಧಿ ಸಮಿತಿಗೆ ಹೊಣೆ ನೀಡಿದ್ದು ಸರಿಯಲ್ಲ. ಸರ್ಕಾರ ತನ್ನ ಜವಾಬ್ದಾರಿಯನ್ನು ಇತರರಿಗೆ ಹಸ್ತಾಂತರಿಸುವಂತಿಲ್ಲ ಎಂದು ಹೇಳಿದ್ದಾರೆ.

  • 14 Feb 2022 04:13 PM (IST)

    Karnataka Hijab Hearing Live: ಅವರ ಆಚರಣೆ ನಮಗೆ ಏನನ್ನಿಸುತ್ತದೆ ಎಂಬುದು ಮುಖ್ಯವಲ್ಲ

    ಸಾಮಾಜಿಕ ಕಲ್ಯಾಣ, ಸುಧಾರಣೆಗಾಗಿಯೂ ನಿರ್ಬಂಧಿಸಬಹುದಲ್ಲವೇ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ಹೌದು ಆ ಕಾರಣಕ್ಕಾಗಿಯೂ ಧಾರ್ಮಿಕ ಆಚರಣೆ ನಿರ್ಬಂಧಿಸಬಹುದು. ಆದರೆ ಬಿಜಾಯ್ ಎಮ್ಯಾನುಯಲ್ ಕೇಸಿನಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಅವರ ಆಚರಣೆ ನಮಗೆ ಏನನ್ನಿಸುತ್ತದೆ ಎಂಬುದು ಮುಖ್ಯವಲ್ಲ. ಅವರಿಗೆ ಅದು ಅತ್ಯಗತ್ಯ ಆಚರಣೆಯೇ ಎಂದು ಪರಿಶೀಲಿಸಬೇಕು ಎಂದು ಹೈಕೋರ್ಟ್ ಪ್ರಶ್ನೆಗೆ ದೇವದತ್ ಕಾಮತ್ ಉತ್ತರಿಸಿದ್ದಾರೆ. ರಾಜ್ಯ ಸರ್ಕಾರವೂ ಕೆಲ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಹೈಕೋರ್ಟ್ ಹೇಳಿದೆ. ತ್ರಿವಳಿ ತಲಾಖೆ ಪ್ರಕರಣ ಉಲ್ಲೇಖಿಸುತ್ತಿರುವ ದೇವದತ್ ಕಾಮತ್, ಖುರಾನ್ ನಲ್ಲಿ ಉಲ್ಲೇಖಿಸಿರುವುದೆಲ್ಲಾ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂದು ಹೇಳಿದ್ದಾರೆ.

  • 14 Feb 2022 04:13 PM (IST)

    Karnataka Hijab Hearing Live: ಕಾಲೇಜು ಅಭಿವೃದ್ದಿ ಸಮಿತಿಗೆ ಹಿಜಾಬ್ ನಿರ್ಬಂಧಿಸುವ ಅಧಿಕಾರವಿಲ್ಲ

    ಕಾಲೇಜು ಅಭಿವೃದ್ಧಿ ಸಮಿತಿಗೆ ಸರ್ಕಾರ ಹೆಚ್ಚಿನ ಅಧಿಕಾರ ನೀಡಿದೆ. ಕಾಲೇಜು ಅಭಿವೃದ್ದಿ ಸಮಿತಿಗೆ ಹಿಜಾಬ್ ನಿರ್ಬಂಧಿಸುವ ಅಧಿಕಾರವಿಲ್ಲ. ಸಂವಿಧಾನದ 25(2) ಓದುತ್ತಿರುವ ದೇವದತ್, ಸಾಮಾಜಿಕ ಕಲ್ಯಾಣ, ಸುಧಾರಣೆ ಎಂಬ ಪದ ಬಿಟ್ಟು ಉಳಿದುದನ್ನು ದೇವದತ್ ಓದಿದ್ದಾರೆ. ದೇವದತ್ ಬಿಟ್ಟ ಪದಗಳನ್ನೂ ನ್ಯಾ.ಕೃಷ್ಣ ದೀಕ್ಷಿತ್ ನೆನಪಿಸಿದ್ದಾರೆ. ಅತ್ಯಗತ್ಯ ಧಾರ್ಮಿಕ ಆಚರಣೆಗಳೂ ಪರಿಪೂರ್ಣ ಹಕ್ಕೇ? ಸರ್ಕಾರ ಈ ಆಚರಣೆಗಳಿಗೂ ನಿಬಂಧನೆ ವಿಧಿಸಬಹುದೇ? ಎಂದು ದೇವದತ್ ಕಾಮತ್ ರಿಗೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯಕ್ಕೆ ವಿರುದ್ಧವಾಗಿದ್ದರೆ ನಿರ್ಬಂಧಿಸಬಹುದು ಎಂದು ಕಾಮತ್ ಹೇಳಿದ್ದಾರೆ.

  • 14 Feb 2022 03:49 PM (IST)

    Karnataka Hijab Hearing Live: ಅರ್ಜಿದಾರ ವಿದ್ಯಾರ್ಥಿನಿಯರು ಹಲವು ವರ್ಷಗಳಿಂದ ಹಿಜಾಬ್ ಧರಿಸಿದ್ದಾರೆ

    ರತಿಲಾಲ್ ಗಾಂಧಿ ಪ್ರಕರಣದ ತೀರ್ಪು ಉಲ್ಲೇಖ ಮಾಡಲಾಗಿದೆ. ಜೈನ್ ಧರ್ಮದ ಆಚರಣೆಗಳಿಗೆ ಸಂಬಂಧಿಸಿದ ಕೇಸ್​ನಲ್ಲಿ ಧರ್ಮದ ಹೊರಗಿನ ವ್ಯಕ್ತಿಗಳು ಆಕ್ಷೇಪಿಸುವಂತಿಲ್ಲ ಎಂದಿತ್ತು. ಬಿಜಾಯ್ ಎಮ್ಯಾನುಯಲ್ ಕೇಸ್ ಉಲ್ಲೇಖಿಸಿದ ದೇವದತ್ ಈ ಬಗ್ಗೆ ವಾದಿಸಿದ್ದಾರೆ. ರಾಷ್ಟ್ರಗೀತೆ ಹಾಡದಿರುವುದು ಅಪರಾಧವಲ್ಲ ಎಂದಿದ್ದ ಕೋರ್ಟ್. ಜೊರಾಷ್ಟ್ರಿಯನ್ ಧರ್ಮದಲ್ಲಿ ನಿಷಿದ್ಧವಿತ್ತು. ಹೀಗಾಗಿ ರಾಷ್ಟ್ರಗೀತೆ ಹಾಡದೇ, ಗೌರವಪೂರ್ವಕವಾಗಿ ನಿಂತಿದ್ದರು. ಸುಪ್ರೀಂಕೋರ್ಟ್ ಇದರಲ್ಲಿ ತಪ್ಪೇನೂ ಇಲ್ಲವೆಂದು ಹೇಳಿತ್ತು. ಅರ್ಜಿದಾರ ವಿದ್ಯಾರ್ಥಿನಿಯರು ಹಲವು ವರ್ಷಗಳಿಂದ ಹಿಜಾಬ್ ಧರಿಸಿದ್ದಾರೆ ಎಂದು ದೇವದತ್ ಕಾಮತ್ ತಿಳಿಸಿದ್ದಾರೆ.

  • 14 Feb 2022 03:49 PM (IST)

    Karnataka Hijab Hearing Live: ಬಾಂಬೆ ಹೈಕೋರ್ಟ್ ಬಾಲಕಿಯರ ಶಾಲೆಗೆ ಹಿಜಾಬ್ ಅಗತ್ಯವಿಲ್ಲ ಎಂದಿತ್ತು

    ಬಾಂಬೆ ಹೈಕೋರ್ಟ್ ತೀರ್ಪನ್ನು ಸರ್ಕಾರ ಉಲ್ಲೇಖಿಸಿದೆ. ಬಾಲಕಿಯರ ಶಾಲೆಗೆ ಹಿಜಾಬ್ ಧರಿಸಿ ಬರಲು ಅವಕಾಶ ನೀಡಿರಲಿಲ್ಲ. ಹೈಕೋರ್ಟ್ ಬಾಲಕಿಯರ ಶಾಲೆಗೆ ಹಿಜಾಬ್ ಅಗತ್ಯವಿಲ್ಲ ಎಂದಿತ್ತು. ಆದರೆ ಸರ್ಕಾರ ಹೇಳುತ್ತಿರುವ ಈ ತೀರ್ಪುಗಳು ಅನ್ವಯವಾಗಲ್ಲ. ಸರ್ಕಾರ ಮದ್ರಾಸ್ ಹೈಕೋರ್ಟ್ ನ ಮತ್ತೊಂದು ತೀರ್ಪನ್ನು ಉಲ್ಲೇಖಿಸಿದೆ. ಅದು ಸೀರೆ ಧರಿಸಲೇಬೇಕೆ ಎಂಬ ಪ್ರಶ್ನೆ. ಸಂವಿಧಾನದ 25(1)ರಡಿ ಧಾರ್ಮಿಕ ಸ್ವಾತಂತ್ರ್ಯದ ಪ್ರಶ್ನೆಯಾಗಿರಲಿಲ್ಲ. ಶಿರೂರು ಮಠ ಕೇಸಿನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆಹಾರ ಹಾಗೂ ಉಡುಪುಗಳೂ ಧಾರ್ಮಿಕ ಆಚರಣೆಯಾಗಿರಬಹುದು. ಅತ್ಯಗತ್ಯ ಧಾರ್ಮಿಕ ಆಚರಣೆಗಳಾಗಿರಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ವಿವಿಧ ವಿಚಾರಗಳನ್ನು ಉಲ್ಲೇಖಿಸಿ ವಾದ ಮಂಡಿಸಲಾಗಿದೆ.

  • 14 Feb 2022 03:48 PM (IST)

    Karnataka Hijab Hearing Live: ಸಂವಿಧಾನದ 30 ನೇ ವಿಧಿ ಉಲ್ಲೇಖಿಸಿ ದೇವದತ್ ಕಾಮತ್ ವಾದ

    ಸಂವಿಧಾನದ 30 ನೇ ವಿಧಿಯಡಿ ಹೆಚ್ಚಿನ ಹಕ್ಕಿದೆ. ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಸಂವಿಧಾನದತ್ತ ಹಕ್ಕಿದೆ. ಆದರೆ ಇದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಲ್ಲ. ಹಿಜಾಬ್ ಧರಿಸಿ ಬರಬೇಕೇ ಬೇಡವೆ ಎಂದು ಶಿಕ್ಷಣ ಸಂಸ್ಥೆ ನಿರ್ಧರಿಸಬಹುದು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ನಿರ್ಧರಿಸಬಹುದು. ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು ಎಂದು ಕಾಮತ್ ಹೇಳಿದ್ದಾರೆ. ಮಲೇಷಿಯಾ ಕೋರ್ಟ್ ತೀರ್ಪಿಗೆ ವ್ಯತಿರಿಕ್ತ ತೀರ್ಪುಗಳಿವೆಯೇ ಎಂದು ದೇವದತ್ ಕಾಮತ್ ಗೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ನನಗೆ ಗೊತ್ತಿರುವಂತೆ ಅಂತಹ ತೀರ್ಪುಗಳಿಲ್ಲ ಎಂದು ದೇವದತ್ ಕಾಮತ್ ತಿಳಿಸಿದ್ದಾರೆ.

  • 14 Feb 2022 03:42 PM (IST)

    Karnataka Hijab Hearing Live: ಮದ್ರಾಸ್ ಹೈಕೋರ್ಟ್ ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆ ಎಂದಿತ್ತು

    ಹಿಜಾಬ್ ಬಗ್ಗೆ ಕೇಂದ್ರೀಯ ವಿದ್ಯಾಲಯದ ನಿಯಮಗಳಲ್ಲೇ ಹೇಳಲಾಗಿದೆ. ಮತದಾರರ ಪಟ್ಟಿಯಲ್ಲಿ ಮುಸ್ಲಿಂ ಮಹಿಳೆಯ ಫೋಟೋ ಪ್ರಶ್ನಿಸಲಾಗಿತ್ತು. ಅಜ್ಮಲ್ ಖಾನ್ ಎಂಬುವರು ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಪರದಾ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ. ಆದರೆ ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆ ಎಂದಿತ್ತು. ಈ ವೇಳೆ, ಮಲೇಷಿಯಾ ಕೋರ್ಟ್​ನ ತೀರ್ಪನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಮಲೇಷಿಯಾ ಜಾತ್ಯಾತೀತ ದೇಶವೇ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಇಲ್ಲ, ಮಲೇಷಿಯಾ ಇಸ್ಲಾಮಿಕ್ ದೇಶ ಎಂದು ದೇವದತ್ ಉತ್ತರ ನೀಡಿದ್ದಾರೆ. ನಮ್ಮ ದೇಶದಲ್ಲಿ ಹಿಜಾಬ್ ಪರವಾಗಿ ತೀರ್ಪುಗಳಿವೆ. ಕೇರಳ ಹೈಕೋರ್ಟ್ ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆ ಎಂದಿದೆ. ನ್ಯಾ. ಮುಹಮ್ಮದ್ ಮುಷ್ತಾಕ್ ಈ ತೀರ್ಪು ನೀಡಿದ್ದರು. ನಂತರ ಮತ್ತೊಂದು ಪ್ರಕರಣದಲ್ಲಿ ಇನ್ನೊಂದು ಪ್ರಶ್ನೆ ಎದ್ದಿತ್ತು. ಆದರೆ ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಹಕ್ಕು, ಹಾಗೂ ವೈಯಕ್ತಿಕ ಆಚರಣೆಯ ಹಕ್ಕಿನ ಪ್ರಶ್ನೆ ಬಂದಿತ್ತು ಎಂದು ತಿಳಿಸಿದ್ದಾರೆ.

  • 14 Feb 2022 03:39 PM (IST)

    Karnataka Hijab Hearing Live: ಕೇಂದ್ರೀಯ ವಿದ್ಯಾಲಯಗಳಲ್ಲಿ ಈಗಲೂ ಹಿಜಾಬ್​ಗೆ ಅವಕಾಶವಿದೆ

    ಯಾವುದೇ ಆಚರಣೆ ಧರ್ಮದ ಅವಿಭಾಜ್ಯ ಅಂಶ ಎಂದು ವ್ಯಕ್ತಿ ನಂಬಬಹುದು. ಆಗ ಆಚರಣೆ ಧರ್ಮದ ಅವಿಭಾಜ್ಯ ಅಂಶ ಎಂದು ಪರಿಗಣಿಸಬಹುದು. ಈ ವಿದ್ಯಾರ್ಥಿಗಳು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದರೇ ಎಂದು ಸಿಜೆ ಕೇಳಿದ್ದಾರೆ. ಕಾಲೇಜಿಗೆ ದಾಖಲಾದಾಗಿನಿಂದಲೂ ಹಿಜಾಬ್ ಧರಿಸುತ್ತಿದ್ದರು. ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸುತ್ತಿದ್ದರು. ವಿದ್ಯಾರ್ಥಿನಿಯರು ಈ ಆಚರಣೆಯನ್ನು ತಪ್ಪದೇ ಪಾಲಿಸುತ್ತಿದ್ದಾರೆ. ಹಿಜಾಬ್ ಧರಿಸಬೇಕು, ಉದ್ದದ ನಿಲುವಂಗಿ ಧರಿಸಬೇಕೆಂದು ಧರ್ಮಗ್ರಂಥದಲ್ಲಿದೆ ಎಂದು ದೇವದತ್ ಕಾಮತ್ ಹೇಳಿದ್ದಾರೆ. 2016 ರಲ್ಲಿ ಹೈಕೋರ್ಟ್ ವಿಚಾರಣೆ ನಡೆಸುವಾಗ ಸಿಬಿಎಸ್‌ಇ ಪರಿಷ್ಕೃತ ಆದೇಶ ನೀಡಿತ್ತು. ಹಿಜಾಬ್ ಧರಿಸಿ ಬರುವವರು ಅರ್ಧ ಗಂಟೆ ಮುಂಚೆ ಬರುವಂತೆ ಆದೇಶಿಸಿತ್ತು. ಹಿಜಾಬ್ ಪರಿಶೀಲನೆ ನಡೆಸಲು ನಮಗೆ ಆಕ್ಷೇಪ ಇಲ್ಲ. ಕೇಂದ್ರೀಯ ವಿದ್ಯಾಲಯಗಳಲ್ಲಿ ಈಗಲೂ ಹಿಜಾಬ್​ಗೆ ಅವಕಾಶವಿದೆ. ಉಡುಪಿನ ಬಣ್ಣ ಹೋಲುವ ಹಿಜಾಬ್ ಧರಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

  • 14 Feb 2022 03:14 PM (IST)

    Karnataka Hijab Hearing Live: ಸಿಜೆ ಕೇಳಿರುವ ಪ್ರಶ್ನೆಗೆ ದೇವದತ್ ವಾದ ಮಂಡನೆ

    ನ್ಯಾಯಮೂರ್ತಿಗಳ ಸಾಲು ಸಾಲು ಪ್ರಶ್ನೆಗಳಿಗೆ ಹೈಕೋರ್ಟ್​ಗಳ ತೀರ್ಪು ಉಲ್ಲೇಖಿಸುತ್ತಿರುವ ದೇವದತ್, ಮೆಡಿಕಲ್ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿನಿ ತೆರಳುತ್ತಿದ್ದರು. ಹಿಜಾಬ್ ಧರಿಸಲು ಅನುಮತಿ ನೀಡಿರಲಿಲ್ಲ. ಆಗ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದಾಗ ತೀರ್ಪು ನೀಡಿದೆ. ಅತ್ಯಗತ್ಯವಾದ ಧಾರ್ಮಿಕ ಆಚರಣೆಗಳಿಗೂ ಮಾನದಂಡಗಳಿವೆ. ಷರಿಯಾ ಕಾನೂನಿನ ಬಗ್ಗೆಯೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ತೀರ್ಪಿನಲ್ಲಿರುವ ಹದೀತ್, ಖುರಾನ್ ಉಲ್ಲೇಖವನ್ನು ವಕೀಲರು ಓದುತ್ತಿದ್ದಾರೆ. ಪೇಜ್ 30ರಲ್ಲಿರುವ ಪ್ಯಾರಾ 20ರಲ್ಲಿ ಧಾರ್ಮಿಕ ಗ್ರಂಥ ಉಲ್ಲೇಖಿಸಲಾಗಿದೆ ಎಂದು ದೇವದತ್ ವಾದ ಮಂಡಿಸುತ್ತಿದ್ದಾರೆ.

  • 14 Feb 2022 03:07 PM (IST)

    Karnataka Hijab Hearing Live: ದೇವದತ್ ಕಾಮತ್​ಗೆ ನ್ಯಾಯಮೂರ್ತಿಗಳ ಪ್ರಶ್ನೆ

    ಸಿನಿಮಾದ ಕೆಲ ಅಂಶಗಳು ಕೆಲ ಜನರಿಗೆ ಆಕ್ಷೇಪವಿರಬಹುದು, ಹಾಗೆಂದು ಸಿನಿಮಾ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪನ್ನು ದೇವದತ್ ಉಲ್ಲೇಖಿಸಿದ್ದಾರೆ. ನೇರವಾಗಿ ನಾವು ಕೇಳಿದ ಪ್ರಶ್ನೆಗೆ ಉತ್ತರಿಸಿ ಎಂದು ಸಿಜೆ ಮರು ಪ್ರಶ್ನಿಸಿದೆ. ಸರ್ಕಾರಿ ಆದೇಶ ಸಂಪೂರ್ಣ ಕಾನೂನುಬಾಹಿರವಾಗಿದೆಯೇ? ಸರ್ಕಾರಿ ಆದೇಶದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆಯೇ? ಕೆಲ ತೀರ್ಪುಗಳ ಹಿನ್ನೆಲೆಯಲ್ಲಿ ಸರ್ಕಾರ ಅಭಿಪ್ರಾಯ ಹೇಳಿದೆಯಲ್ಲವೇ ಎಂದು ಸಿಜೆ ಕೇಳಿದ್ದಾರೆ. ಹೌದು, ಸರ್ಕಾರ ಹಿಜಾಬ್ ನಿರ್ಬಂಧಿಸಬಹುದೆಂದು ಹೇಳಿದೆ ಎಂದು ಸಂವಿಧಾನದ 25 ನೇ ವಿಧಿಯನ್ನು ದೇವದತ್ ಕಾಮತ್ ಓದುತ್ತಿದ್ದಾರೆ.

  • 14 Feb 2022 03:00 PM (IST)

    Karnataka Hijab Hearing Live: ದೇವದತ್ ಕಾಮತ್​ಗೆ ಸಿಜೆ ರಿತುರಾಜ್ ಅವಸ್ತಿ ಮರು ಪ್ರಶ್ನೆ

    ಸಂವಿಧಾನದ 25(1) ರಡಿ ಇರುವ ಹಕ್ಕುಗಳನ್ನು ಸಾರ್ವಜನಿಕ ಸುವ್ಯವಸ್ಥೆ ಕಾರಣಕ್ಕೆ ಮಾತ್ರ ನಿರ್ಬಂಧಿಸಬಹುದು. ಕಾಲೇಜು ಅಭಿವೃದ್ದಿ ಸಮಿತಿಗೆ ಸರ್ಕಾರ ಹೆಚ್ಚಿನ ಅಧಿಕಾರ ನೀಡಿದೆ. ಸಂವಿಧಾನದ 25(1)ನೇ ವಿಧಿಯ ರಕ್ಷಣೆ ಹೊಣೆ ಸಮಿತಿಗೆ ನೀಡಿದೆ. ಸರ್ಕಾರದ ಈ ನಡೆ ಸಂಪೂರ್ಮ ಕಾನೂನುಬಾಹಿರವಾಗಿದ್ದು, ನೀವು ಹೇಳುತ್ತಿರುವ ಹಕ್ಕು ನಿರ್ಬಂಧರಹಿತ ಪರಿಪೂರ್ಣ ಹಕ್ಕೇ? ಎಂದು ದೇವದತ್ ಕಾಮತ್​ಗೆ ಸಿಜೆ ರಿತುರಾಜ್ ಅವಸ್ತಿ ಪ್ರಶ್ನೆ ಮಾಡಿದ್ದಾರೆ. ಸಂವಿಧಾನದ 25(1) ರಲ್ಲಿ ಮೂರು ಬಗೆಯ ನಿರ್ಬಂಧವಿದೆ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯದ ಪ್ರಶ್ನೆಯಿದ್ದರೆ ನಿರ್ಬಂಧ ವಿಧಿಸಲಾಗುವುದು. ಈ ಕೇಸಿನಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕಾರಣಕ್ಕೆ ನಿರ್ಬಂಧಿಸಲಾಗಿದೆ. ಸಾರ್ವಜನಿಕ ಸುವ್ಯವಸ್ಥೆ ಎಂದರೇನು ವಿಶ್ಲೇಷಿಸಿ ಎಂದು ಸಿಜೆ ಕೇಳಿದ್ದಾರೆ.

  • 14 Feb 2022 02:47 PM (IST)

    Karnataka Hijab Case Live: ದೇವದತ್ ಕಾಮತ್ ವಾದ ಮಂಡನೆ ಆರಂಭ

    ಶಾಲೆ ಅಭಿವೃದ್ದಿ ಸಮಿತಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಶಾಲೆಗಳಲ್ಲಿ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸುವಂತೆ ಸೂಚಿಸಲಾಗಿದೆ. ಕೆಲವರ ಉಡುಪಿನಿಂದ ಸಮವಸ್ತ್ರ ಸಂಹಿತೆಗೆ ಧಕ್ಕೆಯಾಗಿದೆ. 3 ಹೈಕೋರ್ಟ್​ಗಳ ತೀರ್ಪನ್ನು ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ಸರ್ಕಾರದ ಸಮವಸ್ತ್ರ ಆದೇಶವನ್ನು ಕಾಮತ್  ಓದುತ್ತಿದ್ದಾರೆ. ಸರ್ಕಾರಿ ಶಾಲೆಗಳು ಸಮವಸ್ತ್ರ ಧರಿಸಬೇಕು, ಖಾಸಗಿ ಶಾಲೆಗಳು ಆಡಳಿತ ಮಂಡಳಿ ಸೂಚಿಸಿದ ಸಮವಸ್ತ್ರ ಧರಿಸಬೇಕು. ಪಿಯು ವಿದ್ಯಾರ್ಥಿಗಳು ಕಾಲೇಜು ಅಭಿವೃದ್ದಿ ಸಮಿತಿ ನಿರ್ಧರಿಸಿದ ಸಮವಸ್ತ್ರ ತೊಡಬೇಕು. ಸರ್ಕಾರಿ ಆದೇಶದಲ್ಲಿ ಹೀಗೆಂದು ಉಲ್ಲೇಖಿಸಲಾಗಿದೆ. ಹಿಜಾಬ್ ಸಂವಿಧಾನದ 25(1) ರಲ್ಲಿ ಬರುವುದಿಲ್ಲವೆಂದು ಹೇಳಿದೆ. ಇದು ಸಂಪೂರ್ಣ ತಪ್ಪೆಂದು ನಾನು ನಿರೂಪಿಸಬಲ್ಲೆ ಎಂದು ದೇವದತ್ ಕಾಮತ್ ವಾದ ಮಂಡಿಸುತ್ತಿದ್ದಾರೆ.

  • 14 Feb 2022 02:44 PM (IST)

    Karnataka Hijab Case Live: ಹೈಕೋರ್ಟ್​ನಲ್ಲಿ ಹಿಜಾಬ್ ಕೇಸ್ ವಿಚಾರಣೆ ಶುರು

    ಬೆಂಗಳೂರು: ತರಗತಿಗಳಲ್ಲಿ ಹಿಜಾಬ್, ಕೇಸರಿ ಶಾಲು ಧರಿಸುವ ವಿಚಾರವಾಗಿ ಇಂದು ಹೈಕೋರ್ಟ್ ಪೂರ್ಣ ಪೀಠದಲ್ಲಿ ವಿಚಾರಣೆ ಆರಂಭವಾಗಿದೆ. 6 ರಿಟ್ ಅರ್ಜಿ, ಕೆಲ ಮಧ್ಯಂತರ ಅರ್ಜಿಗಳ ವಿಚಾರಣೆ ಮಾಡಲಿದ್ದು, ಈಗಾಗಲೇ ರಾಜ್ಯ ಸರ್ಕಾರ ವಿವರವಾದ ಆಕ್ಷೇಪಣೆ ಸಲ್ಲಿಸಿದೆ. ದೇವದತ್ ಕಾಮತ್ ವಾದ ಮಂಡನೆ ಆರಂಭವಾಗಿದ್ದು, ಸರ್ಕಾರದ ಆದೇಶ ವಿವೇಚನಾ ರಹಿತವಾಗಿದೆ. ಸರ್ಕಾರದ ಸಮವಸ್ತ್ರ ಆದೇಶವನ್ನು ಕಾಮತ್ ಓದುತ್ತಿದ್ದಾರೆ.

  • 14 Feb 2022 01:02 PM (IST)

    Karnataka Hijab Case Live: ಜಮೀರ ಅಹಮ್ಮದ ಹೇಳಿಕೆ ಖಂಡನೀಯ; ಪ್ರಮೋದ ಮುತಾಲಿಕ್

    ಜಮಖಂಡಿ: ಹಿಜಾಬ್ ವಿಚಾರ ಕುರಿತು ಮಾಜಿ ಸಚಿವ ಜಮೀರ ಅಹಮ್ಮದ ಹೇಳಿಕೆ ನೀಡಿರುವುದನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಖಂಡಿಸಿದ್ದಾರೆ. ಹಿಜಾಬ್ ಇಲ್ಲದೇ ಇರೋದ್ರಿಂದ ಅತ್ಯಾಚಾರಗಳಾಗುತ್ತಿವೆ ಎನ್ನುವ ಜಮೀರ ಅಹಮ್ಮದ ಹೇಳಿಕೆ ನಿರ್ಲಜ್ಜದ ಹೇಳಿಕೆಯಾಗಿದ್ದು, ಇಡೀ ಮಹಿಳೆಯರಿಗೆ ಅವಮಾನ ಮಾಡುವ ಸಂಗತಿಯಾಗಿದೆ. ಈ ದೇಶದಲ್ಲಿ ಹಿಂದೂ ಮಹಿಳೆಯರು ಹಿಜಾಬ್ ಇಲ್ಲದೇ ಜೀವನ ಮಾಡ್ತಾ ಇದ್ದಾರೆ. ಹಿಜಾಬ್ ಇಲ್ಲದ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆಯಾ? ಮಾತನಾಡ ಬೇಕಾದ್ರೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡಿ. ಅದು ಬಿಟ್ಟು ಹಿಜಾಬ್ ಸಮರ್ಥನೆ ಮಾಡಿಕೊಳ್ಳುವುದಕ್ಕೆ ಅದನ್ನ ಅತ್ಯಾಚಾರಕ್ಕೆ ಹೋಲಿಸುವುದು ಎಂದ್ರೆ ನಾನು ಅದನ್ನ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

  • 14 Feb 2022 12:41 PM (IST)

    Karnataka Hijab Case Live: ನಮಗೆ ಶಾಲೆ ಅಗತ್ಯವಿಲ್ಲ, ಹಿಜಾಬ್ ಮುಖ್ಯ

    ಶಿವಮೊಗ್ಗ: ನಾವು ಹುಟ್ಟಿದಾಗಿನಿಂದಲೂ ಹಿಜಾಬ್ ಹಾಕುತ್ತಿದ್ದೇವೆ. ಹೀಗಾಗಿ ನಾವು ಈಗಲೂ ಹಿಜಾಬ್ ಹಾಕುತ್ತೇವೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ ಎಂದು  ಟಿವಿ9ಗೆ ವಿದ್ಯಾರ್ಥಿನಿ ತಾನಿಯಾ ಬಾನು ಹೇಳಿಕೆ ನೀಡಿದ್ದಾಳೆ. ಯಾರೇ ಹೇಳಿದರೂ ನಾವು ಹಿಜಾಬ್ ತೆಗೆಯುವುದಿಲ್ಲ. ನಮಗೆ ಶಾಲೆ ಅಗತ್ಯವಿಲ್ಲ, ಹಿಜಾಬ್ ಮುಖ್ಯವಾಗಿದೆ. ನಮ್ಮ ಧರ್ಮದಲ್ಲಿ ಹಿಜಾಬ್ ಮುಖ್ಯವಾಗಿದೆ ಎಂದು ತಾನಿಯಾ ಆರೋಪಿಸಿದ್ದಾಳೆ.

  • 14 Feb 2022 12:32 PM (IST)

    Karnataka Hijab Case Live: ಈ ಸಮಸ್ಯೆಗೆ ನಾನು ಕಾರಣ ಅನ್ನೋ ಆರೋಪ ಸುಳ್ಳು; ಶಾಸಕ ರಘುಪತಿ ಭಟ್

    ಉಡುಪಿ: ಇಂದು ಕೆಲ ವಿದ್ಯಾರ್ಥಿನಿಯರು ಕಾಲೇಜು ಆರಂಭಿಸುವಂತೆ ಮನವಿ ಕೊಟ್ಟಿದ್ದಾರೆ. ಈ ಬಗ್ಗೆ ಇಂದು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಲಿದ್ದೇನೆ‌ ಎಂದು ಶಾಸಕ ರಘುಪತಿ ಭಟ್ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಉಡುಪಿಯ ವಿಚಾರವಾಗಿ ಮತ್ತು ಕಾಲೇಜುಗಳ ಓಪನ್ ಮಾಡುವ ಕುರಿತಾಗಿ ಮಾತ್ರ ಚರ್ಚೆ ಮಾಡಲಿದ್ದೇನೆ ಎಂದರು. ಅಧಿವೇಶನದಲ್ಲಿ ವಿರೋಧಪಕ್ಷದವರ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿದೆ. ಅಲ್ಲಿ ನನ್ನ ಮೇಲೆ ಯಾವುದೇ ಆರೋಪ ಮಾಡಿದರೂ ಅದಕ್ಕೆ ಉತ್ತರಿಸಲು ಸಾಕ್ಷಿಗಳಿವೆ. ಯಾರು ಏನೇ ಪ್ರಶ್ನೆ ಕೇಳಿದರೂ ಉತ್ತರಿಸಲು ನಾನು ತಯಾರಾಗಿದ್ದೇನೆ. ಯಾಕೆಂದರೆ ಈ ಸಮಸ್ಯೆಗೆ ನಾನು ಕಾರಣ ಅನ್ನೋ ಆರೋಪ ಸುಳ್ಳು ಎಂದು ಹೇಳಿದ್ದಾರೆ.

  • 14 Feb 2022 12:23 PM (IST)

    Karnataka Hijab Case Live: ನಾವು ಒಂದೇ ತಾಯಿಯ ಮಕ್ಕಳು: ವಿಜಯಪುರದಲ್ಲಿ ಭಾವೈಕ್ಯತೆ ಮೆರೆದ ವಿದ್ಯಾರ್ಥಿಗಳು

    ವಿಜಯಪುರ: ಹಿಜಾಬ್ ಕೇಸರಿ ಶಾಲು ವಿವಾದದ ನಡುವೆ ವಿದ್ಯಾರ್ಥಿನಿಯರು ಭಾವೈಕ್ಯತೆ ಮೆರೆದಿರುವಂತಹ ಘಟನೆ ನಗರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ನಡೆದಿದೆ. ಪರಸ್ಪರ ಆಲಿಂಗಸಿ, ಹಸ್ತಲಾಘವ ಮಾಡಿ ಪರಸ್ಪರರನ್ನು ಹಿಂದೂ ಮುಸ್ಲೀಂ ವಿದ್ಯಾರ್ಥಿನಿಯರು ಬರ ಮಾಡಿಕೊಂಡಿದ್ದಾರೆ. ಜತೆಗೆ ನಮಗೆ ಹಿಜಾಬ್‌ ಕೇಸರಿ ಶಾಲಿಗಿಂತ ಶಾಲೆ – ಕಾಲೇಜುಗಳು ಆರಂಭವಾಗಬೇಕೆಂದು ಹೇಳಿಕೆ ನೀಡಿದ್ದಾರೆ. ನಾವೆಲ್ಲಾ ಭಾರತಾಂಬೆ ಮಕ್ಕಳು. ಶಾಲಾ ಪ್ರವೇಶಕ್ಕೂ ಮುನ್ನ ಭಾವೈಕ್ಯತೆ ಮೆರೆದ ವಿದ್ಯಾರ್ಥಿನಿಯರು ಹಿಜಾಬ್ ಕೇಸರಿ ಶಾಲಿನಿಂದ ನಮ್ಮಲ್ಲಿ ಒಡಕಾಗಬಾರದು. ನಾವು ಒಂದೇ ತಾಯಿ ಮಕ್ಕಳು. ನಮಗೆ ಹಿಜಾಬ್ ಕೇಸರಿ ಶಾಲು ಬೇಡಾ. ಶಾಲಾ ತರಗತಿಯಲ್ಲಿ ನಾವು ಹಾಜಾಬ್ ಹಾಕಲ್ಲಾ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

  • 14 Feb 2022 12:12 PM (IST)

    Karnataka Hijab Case Live: ಚಿತ್ರದುರ್ಗ ಸರ್ಕಾರಿ ಪ್ರೌಢಶಾಲೆಗೆ ಡಿಸಿ ಕವಿತಾ ಮನ್ನಿಕೇರಿ ಭೇಟಿ

    ಚಿತ್ರದುರ್ಗ: ರಾಜ್ಯದಲ್ಲೆ ಶಾಲೆಗಳು ಆರಂಭವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಸರ್ಕಾರಿ ಪ್ರೌಢಶಾಲೆಗೆ ಡಿಸಿ ಕವಿತಾ ಮನ್ನಿಕೇರಿ ಭೇಟಿ ನೀಡಿದ್ದಾರೆ. ಬಳಿಕ ಹೇಳಿಕೆ ನೀಡಿದ ಅವರು, ಜಿಲ್ಲೆಯಲ್ಲಿ ಸದ್ಯ ಪ್ರೌಢಶಾಲೆಗಳಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಕೋರ್ಟ್ ಮದ್ಯಂತರ ಆದೇಶ ಪಾಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕೋರ್ಟ್ ಮದ್ಯಂತರ ಆದೇಶ ಪಾಲನೆ ಆಗುತ್ತಿದೆ ಎಂದು ಹೇಳಿದರು. ಈ ವೇಳೆ ಡಿಸಿಗೆ ಡಿಡಿಪಿಐ ರವಿಶಂಕರ ರೆಡ್ಡಿ ಸಾಥ್ ನೀಡಿದರು.

  • 14 Feb 2022 12:06 PM (IST)

    Karnataka Hijab Case Live: ಗದಗನ ವಿವಿಧ ಶಾಲೆಗಳಿಗೆ ಎಸ್.ಪಿ ಶಿವಪ್ರಕಾಶ್ ಭೇಟಿ

    ಗದಗ: ರಾಜ್ಯಾದ್ಯಂತ ಇಂದು ಶಾಲೆಗಳು ಪುನಾರಂಭ ಹಿನ್ನೆಲೆ, ಗದಗನ ವಿವಿಧ ಶಾಲೆಗಳಿಗೆ ಎಸ್.ಪಿ ಶಿವಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಜಿಲ್ಲೆಯಾದ್ಯಂತ ಶಾಂತಿಯುತ ವಾತಾವರಣವಿದ್ದು, ಪೋಷಕರ ಮನವೊಲಿಸಿ ಅಹಿತಕರ ಘಟನೆಯಾಗದಂತೆ ಕ್ರಮವಹಿಸಲಾಗಿದೆ. ನರಗುಂದ ಶಾಲೆಯಲ್ಲಿ ಬುರ್ಕಾ ಹಾಕಿದ್ದ ವಿದ್ಯಾರ್ಥಿಗೆ ತಿಳುವಳಿಕೆ ನೀಡಿದ್ದೇವೆ. ಆಕೆಯನ್ನ ಮನವೊಲಿಸಿ ಬುರ್ಕಾತೆಗೆಸಿದ್ದೇವೆ. ಉಳಿದಂತೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ಶಾಲೆಗಳು ಆರಂಭವಾಗಿವೆ ಎಂದು ಹೇಳಿದ್ದಾರೆ.

  • 14 Feb 2022 11:41 AM (IST)

    Karnataka Hijab Case Live: ಮಕ್ಕಳನ್ನು ಬಳಸಿಕೊಂಡು ರಾಜಕಾರಣ ಮಾಡಬಾರದು; ಡಿ.ಕೆ.ಶಿವಕುಮಾರ್

    ರಾಮನಗರ: ನಮಗೆ ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ಈ ಸಂದರ್ಭದಲ್ಲಿ ತೊಂದರೆ ಕೊಡುವುದು ಸರಿಯಲ್ಲ. ಮಕ್ಕಳನ್ನು ಬಳಸಿಕೊಂಡು ರಾಜಕಾರಣ ಮಾಡಬಾರದು ಎಂದು ಹಿಜಾಬ್, ಕೇಸರಿ ಶಾಲು ವಿವಾದ ವಿಚಾರ ಕುರಿತು ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಕೇಸರಿ ಧ್ವಜ ಮನೆ, ಮಠಗಳಲ್ಲಿ ಇಟ್ಟುಕೊಳ್ಳಲಿ ಅಭ್ಯಂತರವಿಲ್ಲ. ಆದರೆ ರಾಷ್ಟ್ರಧ್ವಜದ ಸ್ಥಳಕ್ಕೆ ಕೇಸರಿ ಧ್ವಜ ಹಾಕುವುದು ದೇಶದ್ರೋಹವಾಗಿದೆ. ಹಾಗೆ ಹೇಳಿದ ಸಚಿವನ ಮೇಲೆ ಕೇಸ್ ದಾಖಲಿಸಿ ಬಂಧಿಸಲಿ ಎಂದು ಹೇಳಿದ್ದಾರೆ.

  • 14 Feb 2022 11:33 AM (IST)

    Karnataka Hijab Case Live: ಜಮೀರ್‌ ಅವರು ಕ್ಷಮೆ ಕೇಳಬೇಕು; ಸದಸ್ಯ ರವಿ ಕುಮಾರ್ ಹೇಳಿಕೆ

    ಬೆಂಗಳೂರು: ಜಮೀರ್ ಅವ್ರು ನೆನ್ನೆ ನೀಡಿರೋ ಹೇಳಿಕೆಯನ್ನ ನಾನೂ ವಿರೋಧಿಸುತ್ತೇನೆ ಎಂದು ಪರಿಷತ್ ಸದಸ್ಯ ರವಿ ಕುಮಾರ್ ಹೇಳಿಕೆ ನೀಡಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಗಳನ್ನ ತಡೆಯಬೇಕು ಅಂದ್ರೆ ಹಿಜಾಬ್ ಧರಿಸಲೇಬೇಕ? ಜಮೀರ್ ತ್ರೇತಾಯುಗದಲ್ಲಿ ಇದಾರ‍? ಈ ವಿಚಾರವಾಗಿ ಕೂಡಲೇ ಜಮೀರ್‌ ಅವರು ಕ್ಷಮೆ ಕೇಳಬೇಕು. ಇಲ್ಲವಾದರೇ ಕಾಂಗ್ರೆಸ್‌ನ ಡಿಕೆಶಿವಕುಮಾರ್, ಸಿದ್ದರಾಮಯ್ಯ ಅವರಲ್ಲಿ ಜಮೀರ್ ಮೇಲೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

  • 14 Feb 2022 11:17 AM (IST)

    Karnataka Hijab Case Live: ಹಿಜಾಬ್, ಬುರ್ಕಾ ತೆರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ‌‌‌‌

    ಬಾಗಲಕೋಟೆ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಹಿಜಾಬ್, ಬುರ್ಕಾ ತೆರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ‌‌‌‌ ಮಾಡಲಾಗಿದೆ. ಬಾಗಲಕೋಟೆ ಸರಕಾರಿ ಪ್ರೌಢಶಾಲೆಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಹಿಜಾಬ್ ,ಬುರ್ಕಾ ತೆಗೆದಿಟ್ಟು ಕ್ಲಾಸ್ ರೂಮ್​ಗೆ ಹೋಗಲು ಅವಕಾಶ ಮಾಡಲಾಗಿದೆ. ಹಿಜಾಬ್ ಬುರ್ಕಾ ತೆಗೆದಿಟ್ಟು ವಿದ್ಯಾರ್ಥಿನಿಯರು ಕ್ಲಾಸ್ ರೂಮ್ ಒಳಹೋಗಿದ್ದಾರೆ.

  • 14 Feb 2022 11:10 AM (IST)

    Karnataka Hijab Case Live: ಹಿಜಾಬ್ ತೆಗೆಯಲ್ಲ, ಬೇಕಾದ್ರೆ ಮಾಸ್ಕ್ ತೆಗೆಯುತ್ತೇವೆ; ಪಟ್ಟು ಹಿಡಿದ ಪೋಷಕರು

    ಬೆಳಗಾವಿ: ಬೆಳಗಾವಿಯ ಸರ್ದಾರ್ ಸರ್ಕಾರಿ ಹೈಸ್ಕೂಲ್‌ಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಬರುತ್ತಿದ್ದಾರೆ. ಹಿಜಾಬ್ ತೆಗೆದು ಒಳಹೋಗುವಂತೆ ಶಾಲಾ ಸಿಬ್ಬಂದಿ ಮನವಿ ಮಾಡಿಕೊಂಡರು, ಹಿಜಾಬ್ ತೆಗೆಯಲ್ಲ, ಬೇಕಾದ್ರೆ ಮಾಸ್ಕ್ ತೆಗೆಯುತ್ತೇವೆ ಎಂದು ಪೋಷಕರು ಪಟ್ಟು ಹಿಡಿದರು. ಈ ವೇಳೆ ಪೋಷಕರು ಶಾಲಾ ಸಿಬಂದ್ಧಿಯನ್ನು ತರಾಟೆಗೆ ತೆಗೆದುಕೊಂಡದರು. ಬಳಿಕ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಶಾಲೆಯ ಒಳಹೋಗಿದ್ದಾರೆ.

  • 14 Feb 2022 11:01 AM (IST)

    Karnataka Hijab Case Live: ಮಕ್ಕಳ ಶಿಕ್ಷಣ ದೃಷ್ಟಿಯಿಂದ ಈ ವಿವಾದ ಬೇಗ ಮುಗಿಯಬೇಕು; ಅಳಲು ತೋಡಿಕೊಂಡ ಮುಸ್ಲಿಂ ಪೋಷಕರು

    ಶಿವಮೊಗ್ಗ: ನನ್ನ ಎರಡು ಹೆಣ್ಣು ಮಕ್ಕಳನ್ನು ಹಿಜಾಬ್ ಹಾಕಿ ಶಾಲೆಗೆ ಬಿಟ್ಟಿರುವೆ. ಹಿಜಾಬ್ ಧರಿಸುವುದು ಮುಸ್ಲಿಂ ಧರ್ಮದಲ್ಲಿ ಕಡ್ಡಾಯವಿದೆ ಎಂದು ಶಿವಮೊಗ್ಗದ ಕಸ್ತೂರ ಬಾ ಬಾಲಕಿಯರ ಪ್ರೌಢಶಾಲೆ ಬಳಿ ಟಿವಿ 9ಗೆ ಮುಸ್ಲಿಂ ಪೋಷಕರು ತಬಸಮ್ ಹೇಳಿಕೆ ನೀಡಿದ್ದಾರೆ. ಸರ್ಕಾರ ದ ಆದೇಶದಂತೆ ಮಕ್ಕಳನ್ನು ಶಾಲೆಗೆ ಕಳುಹಿಸಿರುವೆ. ಶಾಲೆಯ ಕ್ಯಾಂಪಸ್ ಒಳಗೆ ಹಿಜಾಬ್ ಧರಿಸಿ ಹೋಗಲು ಅವಕಾಶ ಇದೆ. ಆದರೆ ಕ್ಲಾಸ್ ರೂಂ ಒಳಗೆ ಏನು ಮಾಡುತ್ತಾರೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ವಿವಾದದ ಮೊದಲು ಹಿಜಾಬ್ ಧರಿಸಿಯೇ ಮಕ್ಕಳು ಕ್ಲಾಸ್ ರೂಂನಲ್ಲಿ ಪಾಠ ಕೇಳುತ್ತಿದ್ದು, ಅನಗತ್ಯವಾಗಿ ಕೇಸರಿ ಶಾಲು ವಿವಾದ ಶುರುವಾಗಿದೆ. ಮಕ್ಕಳಿಗೆ ಹಿಜಾಬ್ ಅಷ್ಟೇ ಶಿಕ್ಷಣವೂ ಕೂಡಾ ಮುಖ್ಯವಾಗಿದೆ. ಹಾಗಾಗಿ ಮಕ್ಕಳ ಶಿಕ್ಷಣ ದೃಷ್ಟಿಯಿಂದ ಈ ವಿವಾದ ಮುಗಿಯಬೇಕು ಎಂದು ಹೇಳಿದ್ದಾರೆ.

  • 14 Feb 2022 10:48 AM (IST)

    Karnataka Hijab Case Live: ಸ್ವಇಚ್ಛೆಯಿಂದ ಹಿಜಾಬ್ ತೆಗೆದು ತರಗತಿಗಳಿಗೆ ಎಂಟ್ರಿಕೊಟ್ಟ ವಿದ್ಯಾರ್ಥಿಗಳು

    ಕೊಪ್ಪಳ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ವಿಚಾರವಾಗಿ ಹೈಕೋರ್ಟ್ ಮದ್ಯಂತರ ತೀರ್ಪಿನ ಬಳಿಕ ಇಂದಿನಿಂದ ಹೈಸ್ಕೂಲ್ ಗಳು ಆರಂಭವಾಗಿವೆ. ಜಿಲ್ಲೆಯ ಗಂಗಾವತಿಯಲ್ಲಿ ಶಾಲೆಗೆ ವಿಧ್ಯಾರ್ಥಿಗಳು ಆಗಮಿಸುತ್ತಿದ್ದಾರೆ. 10 ಗಂಟೆಯ ಬಳಿಕ ತರಗತಿಗಳು ಆರಂಭವಾಗಲಿದ್ದು, ಕೆಲ ವಿಧ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದು, ಶಾಲಾ ಕಾಂಪೌಂಡ್ ಒಳಗಡೆ ಬರುತ್ತಲೇ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಹಿಜಾಬ್ ತೆಗೆದು ತರಗತಿಗಳಿಗೆ ಎಂಟ್ರಿಕೊಟ್ಟಿದ್ದಾರೆ.

  • 14 Feb 2022 10:41 AM (IST)

    Karnataka Hijab Case Live: ಶಾಲಾ ಸಮವಸ್ತ್ರ ಧರಿಸಿಕೊಂಡು ಬರಲು ಮಾತ್ರ ಅವಕಾಶ; ಜಿಲ್ಲಾಧಿಕಾರಿ ಹೇಳಿಕೆ

    ಕಲಬುರಗಿ: ಶಾಲಾ ಸಮವಸ್ತ್ರ ಧರಿಸಿಕೊಂಡು ಬರಲು ಮಾತ್ರ ಅವಕಾಶ ಇದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಹೇಳಿಕೆ ನೀಡಿದ್ದಾರೆ. ಎಲ್ಲರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಶಿಕ್ಷಕರು ಹಿಜಾಬ್ ಧರಿಸಿಕೊಂಡು ಬರೋ ಬಗ್ಗೆ ನಾನು ಮಾತನಾಡೋದಿಲ್ಲಾ, ನ್ಯಾಯಾಲಯದ ತೀರ್ಪಿನಲ್ಲಿ ಶಿಕ್ಷಕರ ಉಡುಪಿನ ಬಗ್ಗೆ ಯಾವುದೇ ಉಲ್ಲೇಖ ಇಲ್ಲಾ. ಪ್ರಕರಣ ನ್ಯಾಯಾಲಯದಲ್ಲಿರೋದರಿಂದ ಅದರ ಬಗ್ಗೆ ಕಮೆಂಟ್ ಮಾಡಲ್ಲ. ಕಲಬುರಗಿ ಜಿಲ್ಲೆಯಲ್ಲಿ ಎಲ್ಲಿಯೂ 144 ಸೆಕ್ಷನ್ ವಿಧಿಸಿಲ್ಲಾ, ಆದರೆ ಜಿಲ್ಲಾದ್ಯಂತ ಎಲ್ಲಾ ಕಡೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

  • 14 Feb 2022 10:35 AM (IST)

    Karnataka Hijab Case Live: ಹಿಜಾಬ್ – ಕೇಸರಿ ಸಂಘರ್ಷದ ಹಿನ್ನೆಲೆ ಬಹುತೇಕ ಶಾಲೆಗಳಲ್ಲಿ ಪೊಲೀಸ್ ಬಂದೋಬಸ್ತ

    ದಾವಣಗೆರೆ: ಹಿಜಾಬ್ – ಕೇಸರಿ ಸಂಘರ್ಷದ ಹಿನ್ನೆಲೆಯಲ್ಲಿ ಬಹುತೇಕ ಶಾಲೆಗಳಲ್ಲಿ ಪೊಲೀಸ್ ಬಂದೋಬಸ್ತ ನೀಡಲಾಗಿದೆ. ನಗರದ ರಾಜನಹಳ್ಳಿ ಸೀತಮ್ಮ ಸರ್ಕಾರಿ ಹೈಸ್ಕೂಲ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪ ಸಂಖ್ಯಾತರ ಸಮೂದಾಯದ ಮಕ್ಕಳಿದ್ದಾರೆ. ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ಶಾಲೆಗಳಿಗೆ ಬರುತ್ತಿದ್ದು, ನಂತರ ಕ್ಲಾಸ್ ರೂಮ್​ಗೆ ಮಾತ್ರ ಸಮವಸ್ತ್ರದಲ್ಲಿ ಹೋಗುತ್ತಿದ್ದಾರೆ. ಇನ್ನೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.

  • 14 Feb 2022 10:26 AM (IST)

    Karnataka Hijab Case Live: ದೇವನಹಳ್ಳಿಯಲ್ಲಿ ಎಂದಿನಂತೆ ಶಾಲೆಗಳತ್ತ ಆಗಮಿಸುತ್ತಿರುವ ವಿದ್ಯಾರ್ಥಿಗಳು

    ದೇವನಹಳ್ಳಿ: ಕೇಸರಿ ಮತ್ತು ಹಿಜಬ್ ವಿವಾದ ಹಿನ್ನೆಲೆ ರಾಜ್ಯದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಇಂದಿನಿಂದ ಜಿಲ್ಲೆಯಲ್ಲಿ ಹೈಸ್ಕೂಲ್ಗಳು ಪ್ರಾರಂಭವಾಗಿದ್ದು, ಶಾಲೆಗಳ‌ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ವಿದ್ಯಾರ್ಥಿಗಳು ಎಂದಿನಂತೆ ಶಾಲೆಗಳತ್ತ ಆಗಮಿಸುತ್ತಿದ್ದಾರೆ. ಹಿಜಾಬ್ ಇಲ್ಲದೆ ಎಂದಿನಂತೆ ಯೂನಿಪಾರ್ಮ್ ಧರಿಸಿ ವಿದ್ಯಾರ್ಥಿಗಳು ಬರುತ್ತಿದ್ದು, ಮಕ್ಕಳನ್ನು ಹೊರತು ಪಡಿಸಿ ಯಾರೂ ಗುಂಪು ಸೇರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕಳೆದ ಎರಡು ದಿನಗಳಿಂದ ಮುಸ್ಲಿಂ ಮುಖಂಡರ ಸಭೆ ಕರೆದು ಪೊಲೀಸರು ಜಿಲ್ಲಾಡಳಿತ ಮನವೊಲಿಸಿತ್ತು.

  • 14 Feb 2022 10:08 AM (IST)

    ಹೈಕೋರ್ಟ್ ಮಧ್ಯಂತರ ಆದೇಶವನ್ನು ಎಲ್ಲರೂ ಪಾಲಿಸಬೇಕು -ಸಚಿವ ಆರಗ ಜ್ಞಾನೇಂದ್ರ

    ಹೈಕೋರ್ಟ್ ಮಧ್ಯಂತರ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಬೆಂಗಳೂರಿನಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಬುಧವಾರದವರೆಗೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಕಾಲೇಜು ಆರಂಭದ ಬಗ್ಗೆ ಇಂದು ಸಿಎಂ ಸಭೆ ನಡೆಸಲಿದ್ದಾರೆ. ಶಾಲೆಗಳ ಬಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಪೋಷಕರು ಯಾರೂ ಭಯ ಪಡುವುದು ಬೇಡ ಎಂದರು.

  • 14 Feb 2022 10:05 AM (IST)

    ಹಿಜಾಬ್ ತೆಗೆಯಲ್ಲ, ಬೇಕಾದ್ರೆ ಮಾಸ್ಕ್ ತೆಗೆಯುತ್ತೇವೆ

    ಬೆಳಗಾವಿಯ ಸರ್ದಾರ್ ಸರ್ಕಾರಿ ಹೈಸ್ಕೂಲ್‌ಗೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ಹೀಗಾಗಿ ಹಿಜಾಬ್ ತೆಗೆದು ಒಳಹೋಗುವಂತೆ ಶಾಲಾ ಸಿಬ್ಬಂದಿ ಮನವಿ ಮಾಡಿಕೊಂಡಿದ್ದು ಹಿಜಾಬ್ ತೆಗೆಯಲ್ಲ, ಬೇಕಾದ್ರೆ ಮಾಸ್ಕ್ ತೆಗೆಯುತ್ತೇವೆ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ. ಬಳಿಕ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಾಲೆ ಒಳಬಂದಿದ್ದಾರೆ.

  • 14 Feb 2022 10:01 AM (IST)

    ಪ್ರೌಢ ಶಾಲೆಗೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಕಿರ್ತನಾ ಭೇಟಿ

    ಬೀದರ್ ನಗರದ ಓಲ್ಡ್ ಸಿಟಿಯಲ್ಲಿನ ಬಾಲಕಿಯರ ಪ್ರೌಢ ಶಾಲೆಗೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಕಿರ್ತನಾ ಭೇಟಿ ನೀಡಿ ಪ್ರೌಢ ಶಾಲೆಯ ಸ್ಥಿತಿ ಗತಿ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದು ತೆರಳಿದ್ದಾರೆ. ನಗರದ ಎಲ್ಲಾ ಪ್ರೌಢ ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.

  • 14 Feb 2022 09:58 AM (IST)

    ಹಿಜಾಬ್ ವಿವಾದ: ಶಿಕ್ಷಣ ಇಲಾಖೆ ಅಧಿಕಾರಿಗಳ ರಜೆ ಕ್ಯಾನ್ಸಲ್

    ಹಿಜಾಬ್-ಕೇಸರಿ ಶಾಲು ಗಲಾಟೆ ನಂತರ ಇಂದು ಶಾಲೆ ಆರಂಭ ಹಿನ್ನಲೆಯಲ್ಲಿ ಜಿಲ್ಲೆಯ ವಾತಾವರಣ ತಿಳಿ ಆಗುವವರೆಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ರಜೆ ಕ್ಯಾನ್ಸಲ್ ಮಾಡಲಾಗಿದೆ. ಡಿಡಿಪಿಐ, ಡಿಡಿಪಿಯು, ಬಿಇಓ, ಬಿಆರ್​ಸಿ ಕೋ ಆರ್ಡಿನೇಟರ್​ಗಳ ರಜೆ ಕ್ಯಾನ್ಸಲ್ ಮಾಡಲಾಗಿದೆ. ಜಿಲ್ಲೆಯಲ್ಲಿ ಎದ್ದಿರುವ ಗಲಭೆ ವಾತಾವರಣ ತಿಳಿಯಾಗುವವರೆಗೂ ಅಧಿಕಾರಿಗಳಿಗೆ ರಜೆ ಇಲ್ಲ.

  • 14 Feb 2022 09:55 AM (IST)

    ಗೇಟ್​ ಬಳಿಯೇ ಹಿಜಾಬ್ ತೆಗೆಸಿ ಶಾಲೆ ಒಳಗೆ ಪ್ರವೇಶ ಕೊಟ್ಟ ಆಡಳಿತ ಮಂಡಳಿ

    ಮಂಡ್ಯ:ಬುರ್ಕಾ ಹಾಗೂ ಹಿಜಾಬ್ ತೊಟ್ಟು ಬಂದ ವಿದ್ಯಾರ್ಥಿನಿಯರನ್ನ ಶಾಲೆ ಆಡಳಿತ ಮಂಡಳಿಯವರು ತಡೆದು ನಿಲ್ಲಿಸಿದ್ದಾರೆ. ಶಾಲೆಯ ಗೇಟ್ ಬಳಿಯೇ ತಡೆದು ನಿಲ್ಲಿಸಿದ್ದಾರೆ. ಬುರ್ಕಾ ತೆಗೆದು ಶಾಲೆಗೆ ಹೋಗುವಂತೆ ಸೂಚಚಿದ್ದು ಹಿಜಾಬ್ ತೆಗೆದ ನಂತರವೇ ಶಾಲೆಯ ಒಳಗೆ ಹೋಗಲು ಅವಕಾಶ ನೀಡಲಾಗಿದೆ.

  • 14 Feb 2022 09:51 AM (IST)

    ಪೋಷಕರ ಜೊತೆಗೆ ಶಾಲೆಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳು

    ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಬೆನ್ನಲ್ಲೇ ಇಂದಿನಿಂದ ಹೈಸ್ಕೂಲ್ ಶಾಲೆಗಳು ಆರಂಭವಾಗಿವೆ. ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡಿದ್ದು ಪೋಷಕರ ಜೊತೆಗೆ ಶಾಲೆಗೆ ಆಗಮಿಸುತ್ತಿದ್ದಾರೆ. ಈಗಾಗಲೇ ತುಮಕೂರು ಜಿಲ್ಲೆಯ ಶಾಲೆಗಳ ಸುತ್ತಮುತ್ತ 144 ಸೆಕ್ಷನ್ ಆದೇಶ ಜಾರಿ ಮಾಡಲಾಗಿದೆ. ಶಾಲೆಯ 200 ಮೀಟರ್ ಸುತ್ತಮುತ್ತ 144 ಸೆಕ್ಷನ್ ಜಾರಿಯಲ್ಲಿದೆ. ಶಾಲೆಯ ಸುತ್ತಮುತ್ತ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ.

  • 14 Feb 2022 09:48 AM (IST)

    ಸಿಎಂ ಭೇಟಿ ಮಾಡಿ ಆಯುಕ್ತ ಕಮಲ್ ಪಂತ್

    ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆರ್​ಟಿ ನಗರದ ಸಿಎಂ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಇಂದಿನಿಂದ ಪ್ರೌಢಶಾಲಾ ತರಗತಿಗಳು ಆರಂಭ ಹಿನ್ನಲೆ ಪೊಲೀಸ್ ಬಿಗಿ ಬಂದೋಬಸ್ತ್ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ.

  • 14 Feb 2022 09:34 AM (IST)

    ಹಿಜಾಬ್ ತಗೆದು ತರಗತಿಗೆ ಎಂಟ್ರಿ

    ಶಾಲೆಗೆ ಹಿಜಾಬ್ ಧರಿಸಿಕೊಂಡು ಬರುವ ವಿದ್ಯಾರ್ಥಿಗಳು, ಶಾಲೆಗೆ ಬಂದ ಬಳಿಕ ಹಿಜಾಬ್ ತೆಗೆದು ತರಗತಿಯಲ್ಲಿ ಕೂರುತ್ತಿದ್ದಾರೆ.

  • 14 Feb 2022 09:33 AM (IST)

    ವಕೀಲ ದೇವದತ್ತ್ ಕಾಮತ್‌ಗೆ ಬೆಂಬಲ ನೀಡಿದ ರಾಮಕೃಷ್ಣ‌ ಆಶ್ರಮದ ಸ್ವಾಮೀಜಿ

    ಹಿಜಾಬ್ ಪರವಾಗಿ ವಾದಿಸುತ್ತಿರುವ ವಕೀಲ ದೇವದತ್ತ್ ಕಾಮತ್‌ಗೆ ರಾಮಕೃಷ್ಣ‌ ಆಶ್ರಮದ ಸ್ವಾಮೀಜಿ ಬೆಂಬಲ ನೀಡಿದ್ದಾರೆ. ಕಾರವಾರ ಶ್ರೀರಾಮಕೃಷ್ಣ ಆಶ್ರಮದ ಶ್ರೀ ಭಾವೇಶಾನಂದ ಸ್ವಾಮೀಜಿ  ಬೆಂಬಲ ನೀಡಿದ್ದಾರೆ. ಸ್ವಾಮೀಜಿ‌ ನೀಡಿದ‌ ಬೆಂಬಲವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ವಕೀಲ ದೇವದತ್ತ್ ಕಾಮತ್ ಶೇರ್ ಮಾಡಿಕೊಂಡಿದ್ದಾರೆ. ತಾನು ಬೆಂಬಲ ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಶ್ರೀ ಭಾವೇಶಾನಂದ ಸ್ವಾಮೀಜಿ, ಹಿಜಾಬ್ ಪರವಾಗಿ ವಾದಿಸಿದ ಕೂಡಲೇ ದೇವದತ್ತ್ ಕಾಮತ್ ಅವರನ್ನು ಹಿಂದೂ ವಿರೋಧಿ ಅನ್ನೋದು ಸರಿಯಲ್ಲ. ರಾಜಕೀಯ ಪಕ್ಷಗಳು ಹಿಜಾಬ್ ಹಾಗೂ ಕೇಸರಿ ಶಾಲನ್ನು ತಮ್ಮ ದಾಳವಾಗಿ ಬಳಸಿಕೊಳ್ಳುತ್ತಿವೆ. ಸರಕಾರ ನಿಗದಿಪಡಿಸಿದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕು. ಸಮವಸ್ತ್ರ ನಿಗದಿಪಡಿಸದ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅರ್ಧಂಬರ್ಧ ವಸ್ತ್ರ ಧರಿಸದಂತೆ ನೋಡಿಕೊಳ್ಳಬೇಕಿದೆ. ಮುಸ್ಲಿಂ ಮಹಿಳೆಯರು ಕೂಡಾ ರಾಮಕೃಷ್ಣ ಆಶ್ರಮಕ್ಕೆ ಬಂದು ನಮಾಜ್ ಮಾಡಿದ್ದಾರೆ, ಕುರಾನ್ ಕೂಡಾ ಓದಿದ್ದಾರೆ. ನಾವು ಎಲ್ಲಾ ಧರ್ಮೀಯರು ಯಾವುದೇ ಬೇಧ-ಭಾವವಿಲ್ಲದೇ ಇರಬೇಕು. ಶಾಲಾ- ಕಾಲೇಜುಗಳಲ್ಲಿ ಪೂಜೆ, ಪುನಸ್ಕಾರ, ನಮಾಜ್ ಯಾವ ಧರ್ಮಾಚರಣೆಯೂ ಬೇಡ ಅಂತ ಸ್ವಾಮೀಜಿ ತಿಳಿಸಿದ್ದಾರೆ.

  • 14 Feb 2022 09:30 AM (IST)

    ನವ ಭಾರತ ಮೋದಿ ನೇತೃತ್ವದಲ್ಲಿ ನಡೆಯುತ್ತಿದೆ; ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

    ದೇಶದಲ್ಲಿ ಹೆಚ್ಚುತ್ತಿರುವ ಹಿಜಾಬ್ ವಿವಾದಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ದೇಶ ಸಂವಿದಾನದ ಪ್ರಕಾರ ನಡೆಯುತ್ತಿದೆ. ಷರಿಯತ್ ಕಾನೂನುಗಳ ಪ್ರಕಾರ ಅಲ್ಲ. ನವ ಭಾರತ ಮೋದಿ ನೇತೃತ್ವದಲ್ಲಿ ನಡೆಯುತ್ತಿದೆ. ಘಾಜ್ವಾ- ಇ -ಹಿಂದ್ ಎಂದಿಗೂ ಸಾಕಾರವಾಗುದಿಲ್ಲ ಅಂತ ಹೇಳಿದರು.

  • 14 Feb 2022 09:28 AM (IST)

    ಬೇರೆ ಬಟ್ಟೆ ಹಾಕಿದ್ರೆ ರೇಪ್ ಆಗುತ್ತಾ?; ಜಮೀರ್ ಹೇಳಿಕೆಗೆ ಆರಗ ಪ್ರತಿಕ್ರಿಯೆ

    ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆರಗ ಜ್ಞಾನೇಂದ್ರ, ಜಮೀರ್​ದು ಅಂತ್ಯತ ಕೆಟ್ಟ ಸ್ಟೇಟ್​ಮೆಂಟ್. ಹಾಗಿದ್ರೆ ಹಿಂದೂ ಹುಡುಗಿಯರು  ಪ್ಯಾಂಟ್, ಬೇರೆ ಬೇರೆ ಬಟ್ಟೆ ಹಾಕ್ತಾರೆ. ಹಿಜಾಬ್ ಹಾಕಿದ್ರೆ ಮಾತ್ರ ರೇಪ್ ಆಗೋಲ್ವಾ? ಬೇರೆ ಬಟ್ಟೆ ಹಾಕಿದ್ರೆ ರೇಪ್ ಆಗುತ್ತಾ? ಬ್ಯೂಟಿ ಕಾಣಬಾರದು ಅಂತ ಅದು ಹೇಗೆ ಹೇಳ್ತಾರೆ ಜಮೀರ್? ಅವರ ಬ್ಯೂಟಿ ಕಾಣಿಸಬೇಕು ಎಷ್ಟೋ ಹೆಣ್ಮಕ್ಕಳು ಅಂದವಾಗಿ ಇರ್ತಾರೆ. ಜಮೀರ್ ಮನಸ್ಸಿಗೆ ಬಂದಾಗೇ ಮಾತಾಡ್ತಾರೆ. ಜಮೀರ್ ಅಹ್ಮದ್ ವಿಶಾಲವಾಗಿ ಯೋಚನೆ ಮಾಡಬೇಕು ಅಂತ ಹೇಳಿದರು.

  • 14 Feb 2022 09:26 AM (IST)

    ಪೋಷಕರು ಯಾರು ಕೂಡ ಭಯ ಪಡೋದು ಬೇಡ; ಆರಗ ಜ್ಞಾನೇಂದ್ರ

    ಎಲ್ಲರಿಗೂ ಹೈಕೋರ್ಟ್​ನ ಮಧ್ಯ0ತರ ತೀರ್ಪು ಗೊತ್ತಿದೆ. ಅದನ್ನ ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಕೊವಿಡ್​ನಿಂದಾಗಿ ಈಗಾಗಲೇ ಸರಿಯಾಗಿ ಶಾಲೆ ನಡೆದಿಲ್ಲ. ಇನ್ನು ಶೇ.80 ರಷ್ಟು ಸಿಲಬಸ್ ಕೂಡ ಮುಗ್ದಿಲ್ಲ. ಬುಧವಾರದವರೆಗೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಇವತ್ತು ಸಿಎಂ ಒಂದು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕಾಲೇಜು ಓಪನ್ ಮಾಡೋ ಬಗ್ಗೆ ನಿರ್ಧಾರ ಕೈಗೊಳ್ತಿವಿ. ತುಂಬಾ ಲೇಟ್ ಮಾಡೋಲ್ಲ ಈ ವಿಷಯದ ಬಗ್ಗೆ. ಶಾಲೆಗಳ ಬಳಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಶಾಲಾ ಆಡಳಿತ ಮಂಡಳಿ ತೆಗೆದುಕೊಂಡ ಕ್ರಮಕ್ಕೆ ಸಪೋರ್ಟಿವ್ ಆಗಿ ಪೊಲೀಸರು ಇರ್ತಾರೆ. ಪೋಷಕರು ಯಾರು ಕೂಡ ಭಯ ಪಡೋದು ಬೇಡ. ನಿನ್ನೆ ಉಡುಪಿಯಲ್ಲಿ ನಡೆದ ಶಾಂತಿ ಸಭೆ ನನಗೆ ಸಂತಸ ತಂದಿದೆ. ಕೋರ್ಟ್ ಆದೇಶ ಪಾಲಿಸ್ತೀವಿ ಅಂತ ಹೇಳಿದ್ದಾರೆ. ಇದೆ ರೀತಿ ಎಲ್ಲಾ ಕಡೆ ಕೂಡ ಪಾಲನೆ ಮಾಡಿ ಸಾಮರಸ್ಯದಿಂದ ಬದುಕಬೇಕು ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

  • 14 Feb 2022 09:24 AM (IST)

    ವಿದ್ಯಾಸಾಗರ ಶಾಲೆಗೆ ಬೆಂಗಳೂರು ದ. ತಹಶೀಲ್ದಾರ್ ಭೇಟಿ

    ವಿದ್ಯಾಸಾಗರ ಶಾಲೆಗೆ ಬೆಂಗಳೂರು ದ. ತಹಶೀಲ್ದಾರ್ ಬಾಲಕೃಷ್ಣ ಭೇಟಿ ನೀಡಿದ್ದಾರೆ. ಶಾಲೆ ವಾತಾವರಣ ಹೇಗಿದೆ ಎಂಬುದರ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ.

  • 14 Feb 2022 09:22 AM (IST)

    ಎನೇ ತೊಂದರೆ ಆದ್ರು 112 ಗೆ ಕಾಲ್ ಮಾಡಿ; ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್

    ಯಾರು ಆತಂಕ ಪಡುವ ಅಗತ್ಯವಿಲ್ಲ. ಎನೇ ತೊಂದರೆ ಆದ್ರು 112 ಗೆ ಕಾಲ್ ಮಾಡಿ. ಜಿಲ್ಲೆಗೆ ಆರ್​ಐಆಫ್ ತಂಡ ಬಂದಿದೆ. ಮೂರು ಕೆಎಸ್​ಆರ್ ಪಿ ತುಕಡಿಗಳಿವೆ. ಜೊತೆಗೆ ಗೃಹ ರಕ್ಷಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಇದ್ದಾರೆ. ಯಾರು ಆತಂಕ ಪಡುವ ಪರಿಸ್ಥಿತಿ ಇಲ್ಲ. ಶಾಲೆಗಳನ್ನ ಆರಂಭಿಸಬಹುದು ಅಂತ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಹೇಳಿಕೆ ನೀಡಿದ್ದಾರೆ.

  • 14 Feb 2022 09:21 AM (IST)

    ಇಂದೇ ವಾದ ಮಂಡನೆ ಪೂರ್ಣವಾಗುವ ಸಾಧ್ಯತೆ ಕಡಿಮೆ

    ಇಂದೇ ವಾದ ಮಂಡನೆ ಪೂರ್ಣವಾಗುವ ಸಾಧ್ಯತೆ ಇಲ್ಲ. ಹಲವು ಅರ್ಜಿಗಳಿರುವುದರಿಂದ‌  ವಾದ ಮಂಡನೆ ಪೂರ್ಣಗೊಳಿಸಲು ಇನ್ನೂ ಕೆಲ ದಿನ ಬೇಕು. ಎಲ್ಲರ ವಾದ ಕೇಳಿದ‌‌ ನಂತರವೇ ಅಂತಿಮ ತೀರ್ಪು ತೆಗೆದುಕೊಳ್ಳಲಾಗುವುದು. ಈಗಾಗಲೇ ಮಧ್ಯಂತರ ಆದೇಶ ಪ್ರಶ್ನಿಸಿ ‘ಸುಪ್ರೀಂ’ಗೆ ಅರ್ಜಿ ಹಾಕಲಾಗಿದೆ. ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಿಸಿರುವ ಹಿನ್ನೆಲೆ ಅಂತಿಮ ತೀರ್ಪಿಗಾಗಿ ವಾದ ಮಂಡನೆ ಮುಂದುವರಿಕೆ ಸಾಧ್ಯತೆಯಿದೆ.

  • 14 Feb 2022 09:19 AM (IST)

    ರಾಯಚೂರಿನಲ್ಲಿ ಹಿಜಾಬ್ ಹಾಕಿಕೊಂಡೇ ಶಾಲೆಗೆ ಬಂದ ವಿದ್ಯಾರ್ಥಿನಿಯರು

    ರಾಯಚೂರಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡೇ ಶಾಲೆಗೆ ಬಂದಿದ್ದಾರೆ. ರಾಯಚೂರು ನಗರದ ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ನಮಗೇನು ಗೊತ್ತಿಲ್ಲಅಂತ ಹಿಜಾಬ್ ಹಾಕಿರೊ‌ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಮಾದ್ಯಮಗಳಲ್ಲಿ ಇಶ್ಯು ಆಗ್ತಿರೋದು ಗೊತ್ತಿತ್ತು . ಆದ್ರೆ ನಮಗೆ ಹಿಜಾಬ್,ಕೇಸರಿ ಶಾಲು ಹಾಕಬಾರದು ಅಂತ ಹೇಳಿದ್ದರು ಅಂತ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.

  • 14 Feb 2022 09:18 AM (IST)

    ಯಾವುದೇ ಆತಂಕವಿಲ್ಲದೆ ಶಾಲೆಯತ್ತ ಬರುತ್ತಿರುವ ವಿಧ್ಯಾರ್ಥಿಗಳು

    ಇಂದಿನಿಂದ ಹೈಸ್ಕೂಲ್ ಪ್ರಾರಂಭವಾದ ಹಿನ್ನಲೆ ಕಲಬುರಗಿ ನಗರದ ಸರಕಾರಿ ಫ್ರೌಡಶಾಲೆಗೆ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಯಾವುದೇ ಆತಂಕವಿಲ್ಲದೆ ಶಾಲೆಯತ್ತ ಬರುತ್ತಿರುವ ವಿಧ್ಯಾರ್ಥಿಗಳು, ಶಾಲಾ ಸಮವಸ್ತ್ರ ಧರಿಸಿ ಶಾಲೆಗೆ ಹಾಜರಾಗುತ್ತಿದ್ದಾರೆ.

  • 14 Feb 2022 09:14 AM (IST)

    ಇಂದು 2.30 ಕ್ಕೆ ಹೈಕೋರ್ಟ್ ಪೂರ್ಣ ಪೀಠದಲ್ಲಿ ಅರ್ಜಿ ವಿಚಾರಣೆ

    ತರಗತಿಗಳಲ್ಲಿ ಹಿಜಾಬ್, ಕೇಸರಿ ಶಾಲು ಧರಿಸುವ ವಿಚಾರಕ್ಕೆ ಸಂಬಂಧಿಸಿ ಇಂದು 2.30 ಕ್ಕೆ ಹೈಕೋರ್ಟ್ ಪೂರ್ಣ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಮಧ್ಯಂತರ ಆದೇಶ ನೀಡಿದ ನಂತರ ಇಂದು ವಿಚಾರಣೆ ನಡೆಯಲಿದೆ. ವಿಚಾರಣೆ ವೇಳೆ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಹೈಕೋರ್ಟ್ ಪ್ರಶ್ನಿಸುವ ಸಾಧ್ಯತೆಯಿದೆ. ಅಡ್ವೊಕೆಟ್ ಜನರಲ್ ಈ ಬಗ್ಗೆ ಮಾಹಿತಿ ನೀಡುವ ನಿರೀಕ್ಷೆಯಿದೆ. ಸರ್ಕಾರ ಕೈಗೊಂಡ ಕ್ರಮದ‌ ವಿವರಣೆಯನ್ನು ಎಜಿ ನೀಡಲಿದ್ದಾರೆ. ಇಂದು ಸಂಜಯ್ ಹೆಗ್ಡೆ, ದೇವದತ್ ಕಾಮತ್ ವಾದ ಮುಂದುವರಿಕೆ ಮಾಡಬಹುದು. ಅಂತಿಮ ತೀರ್ಪಿಗಾಗಿ ವಕೀಲರು ವಾದ ಮುಂದುವರಿಸುತ್ತಾರೆ.

  • 14 Feb 2022 09:11 AM (IST)

    ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರ ಹಿಂದೇಟು

    ಬೆಂಗಳೂರಿನ ವಿದ್ಯಾಸಾಗರ ಶಾಲೆಯಲ್ಲಿ ವಿವಾದ ನಡೆದ ಹಿನ್ನೆಲೆ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರ ಹಿಂದೇಟು ಹಾಕುತ್ತಿದ್ದಾರೆ.

  • 14 Feb 2022 09:10 AM (IST)

    ಇಂದು ಹೈಕೋರ್ಟ್​ನ ವಿಸ್ತೃತ ಪೀಠದಲ್ಲಿ ಮತ್ತೆ ವಿಚಾರಣೆ

    ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ ಇಡೀ ರಾಜ್ಯಕ್ಕೆ ಆವರಿಸಿದೆ.  ಇಂದು ಹೈಕೋರ್ಟ್​ನ ವಿಸ್ತೃತ ಪೀಠದಲ್ಲಿ ಮತ್ತೆ ವಿಚಾರಣೆ ನಡೆಯಲಿದೆ. ಕೋರ್ಟ್​ ತೀರ್ಮಾನಕ್ಕಾಗಿ ಇಡೀ ರಾಜ್ಯ ಕಾದು ಕುಳಿತಿದೆ.

  • 14 Feb 2022 09:09 AM (IST)

    ಮೈಸೂರಿನಲ್ಲಿ ಶಾಲೆಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿ

    ಮೈಸೂರಿನ ಸೂಕ್ಷ್ಮ ಪ್ರದೇಶದ ಶಾಲೆಗಳಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಮೈಸೂರಿನ ಅಶೋಕ ರಸ್ತೆಯ ಶಾಲೆಗೆ ಒಬ್ಬರು ಎಎಸ್ಐ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್, ಒಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಯಾವುದೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ವಿದ್ಯಾರ್ಥಿನಿ ಶಾಲೆಗೆ ಹಿಜಾಬ್ ಧರಿಸಿ ಬಂದಿದ್ದಾಳೆ.

  • 14 Feb 2022 09:07 AM (IST)

    ಹಿಜಾಬ್ ಬಗ್ಗೆ ನಾನು ಯಾವುದೇ ಮಾತು ಆಡಿಲ್ಲ; ವಿದ್ಯಾಸಾಗರ ಶಾಲೆಯ ಶಿಕ್ಷಕಿ ಶಶಿಕಲಾ ಹೇಳಿಕೆ

    ಹಿಜಾಬ್ ಬಗ್ಗೆ ನಾನು ಯಾವುದೇ ಮಾತು ಆಡಿಲ್ಲ. ತರಗತಿಯಲ್ಲಿಯೂ ಹಿಜಾಬ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಈ ವಿವಾದ ಹೇಗೆ ಬಂದು ಅಂತಾ ನಂಗೆ ಶಾಕ್ ಆಗಿದೆ. ನಾನು ಯಾವುದೇ ಕೆಟ್ಟು ಮಾತು ವಿದ್ಯಾರ್ಥಿಗಳಿಗೆ ಹೇಳಿಲ್ಲ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಗಲಾಟೆ ಮಾಡಬೇಡಿ ಅಂತಾ ಹೇಳಿದೆ. ಬುದ್ದಿವಂತ ಇದ್ದು ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳು ಹೆಸರಗಳನ್ನ ಬೋರ್ಡ್ ಮೇಲೆ ಬರೆದಿದ್ದೇನೆ. KLS ಅಂತಾ ಹೆಸರು ಬರೆದು ಗಲಾಟೆ ಮಾಡಬೇಡಿ ಅಂತಾ ಹೇಳಿದೆ ಅಷ್ಟೇ. ನಾನು ಹಿಜಾಬ್ ಬಗ್ಗೆ ಯಾವುದೇ ಮಾತು ಆಡಿಲ್ಲ. ನನ್ನ ಮೇಲಿರುವ ಆರೋಪ ಸುಳ್ಳು ಅಂತ ವಿದ್ಯಾಸಾಗರ ಶಾಲೆಯ ಶಿಕ್ಷಕಿ ಶಶಿಕಲಾ ಹೇಳಿಕೆ ನೀಡಿದ್ದಾರೆ.

  • 14 Feb 2022 09:06 AM (IST)

    ಸಿಲಿಕಾನ್ ಸಿಟಿಗೂ ಹಿಜಾಬ್ ಬೆಂಕಿ ಹಚ್ಚಲು ಸ್ಕೆಚ್

    ಬೆಂಗಳೂರಿಗೆ ಹಿಜಾಬ್ ಸಂಘರ್ಷ ತಂದು ದೊಡ್ಡ ಮಟ್ಟದಲ್ಲಿ ಗಲಾಟೆ ಮಾಡೊ ಪ್ಲಾನ್ ರೂಪಿಸಲಾಗಿತ್ತಾ? ಎಂಬ ಪ್ರಶ್ನೆ ಮೂಡಿದೆ. ಬೆಂಗಳೂರಿನ ಚಂದ್ರಾಲೇಔಟ್ ವಿದ್ಯಾಸಾಗರ ಶಾಲೆಯಲ್ಲಿ ಹಿಜಾಬ್ ಗಲಾಟೆ ನಡೆಸಲು ಕಾರಣ ಏನು? ಎಂಬ ಅನುಮಾನ ಮೂಡಿದೆ. ಈ ಶಾಲೆಯ ಸುತ್ತಮುತ್ತ ಹೆಚ್ಚು ಮುಸ್ಲಿಂ ಜನರ ಹೆಚ್ಚಾಗಿದ್ದಾರೆ. ಶಾಲೆಯ ಮಾಲೀಕರು ಮಾಜಿ ಬಿಜೆಪಿ ಕಾರ್ಪೋರೇಟರ್ ಆಗಿದ್ದವರು. ಈ ಶಾಲೆಯಲ್ಲಿ ಹಿಜಾಬ್ ಸಂಘರ್ಷ ತಂದ್ರೆ ಹೆಚ್ಚು ಕಾವು ಪಡೆದುಕೊಳ್ಳುತ್ತೆ. ಹೆಚ್ಚು ಮುಸ್ಲಿ ನಿವಾಸಿಗಳು ಇರೊದರಿಂದ ದೊಡ್ಡ ಮಟ್ಟದಲ್ಲಿ ಗಲಾಟೆಯಾಗುತ್ತೆ. ಹೀಗಾಗಿಯೇ ವಿದ್ಯಾಸಾಗರ ಶಾಲೆಯನ್ನ ಟಾರ್ಗಟ್ ಮಾಡಲಾಗಿತ್ತಾ? ಎಂಬ ಶಂಕೆ ಮೂಡಿದೆ.

  • 14 Feb 2022 09:04 AM (IST)

    ವಿಜಯಪುರ ಜಿಲ್ಲೆಯ 636 ಹೈಸ್ಕೂಲ್​ಗಳು ಆರಂಭ

    ಹೈಕೋರ್ಟ್ ಮಧ್ಯಂತರ ತೀರ್ಪಿನ ಬಳಿಕ ಇಂದಿನಿಂದ ಹೈಸ್ಕೂಲ್​ಗಳು ಆರಂಭವಾಗಿದೆ. ವಿಜಯಪುರ ಜಿಲ್ಲೆಯ 636 ಹೈಸ್ಕೂಲ್​ಗಳು ಆರಂಭವಾಗಿದೆ. 10 ಗಂಟೆಯ ಬಳಿಕ ತರಗತಿಗಳು ಆರಂಭವಾಗುತ್ತದೆ. ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ವಿಚಾರವಾಗಿ ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಪೋಷಕರಿಗೆ ಹಾಗೂ ಅನ್ಯರಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಓರ್ವ ಎಸ್​ಪಿ, ಓರ್ವ ಎಎಸ್​ಪಿ, ಐವರು ಡಿಎಸ್​ಪಿ, 19 ಜನ ಇನ್ಸ್‌ಪೆಕ್ಟರ್, 45 ಪಿಎಸ್ಐ , 70 ಎಎಸ್ಐ,670 ಪೊಲೀಸ್ ಕಾನ್​ಸ್ಟೇಬಲ್​, ಒಂದು ಐಆರ್​ಬಿ ತುಕಡಿ, ಆರು ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.

  • 14 Feb 2022 08:57 AM (IST)

    ನಾವು ಶಾಲೆಯವರೆಗೆ ಹಿಜಾಬ್ ಧರಿಸಿಕೊಂಡು ಬರುತ್ತೇವೆ; ಶಿವಮೊಗ್ಗದಲ್ಲಿ ವಿದ್ಯಾರ್ಥಿನಿ ಹೇಳಿಕೆ

    ಇಂದು ಎಸ್​ ಎಸ್ಎಲ್​ಸಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತೆ ಪರೀಕ್ಷೆ ನಡೆಯಲಿದೆ. ಈ ವೇಳೆ ಟಿವಿ9 ಜೊತೆ ಮಾತನಾಡಿದ ವಿದ್ಯಾರ್ಥಿನಿ  ಶಾಲೆ ವರೆಗೆ ಹಿಜಾಬ್ ಧರಿಸಿ ಬರುತ್ತೇನೆ. ಕ್ಲಾಸ್ ರೂಂ ನಲ್ಲಿ ಮಾತ್ರ ಹಿಜಾಬ್ ಧರಿಸುವುದಿಲ್ಲ. ನಾವು ಎಲ್ಲ ಒಂದೇ. ನಾವೂ ಎಲ್ಲರೂ ಸಮಾನತೆಯಿಂದ ಇರಬೇಕು. ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯವಾಗಿ ಇದೆ. ಆದ್ರೆ ಕ್ಲಾಸ್ ರೂಂ ಒಳಗೆ ನಾನು ಹಿಜಾಬ್ ಧರಿಸುವುದಿಲ್ಲ ಅಂತ ವಿದ್ಯಾರ್ಥಿನಿ ಹೇಳಿದ್ದಾಳೆ.

  • 14 Feb 2022 08:54 AM (IST)

    ಮುಂದಿನ ಆದೇಶದ ವರೆಗೆ 144 ಸೆಕ್ಷನ್ ಜಾರಿ ಮಾಡಿ ಬಾಗಲಕೋಟೆ ಡಿಸಿ ಆದೇಶ

    ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಹೊರತು ಪಡಿಸಿ ಶಾಲೆ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಗಲಾಟೆ ಹಿನ್ನೆಲೆ 144 ಜಾರಿ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಎಲ್ಲಾ ಶಾಲೆಗಳ ಸುತ್ತಮುತ್ತ 144 ಸೆಕ್ಷನ್ ಜಾರಿಯಾಗಿದೆ. ಮುಂದಿನ ಆದೇಶದ ವರೆಗೆ 144 ಸೆಕ್ಷನ್ ಜಾರಿ ಮಾಡಿ ಬಾಗಲಕೋಟೆ ಡಿಸಿ ಆದೇಶ ನೀಡಿದ್ದಾರೆ. ಶಾಲೆ ಸುತ್ತಮುತ್ತ ಇರುವ ಅಂಗಡಿ ತೆರೆಯಲು ಅವಕಾಶನ ಇದೆ. ಆದರೆ ಅಂಗಡಿ ಸುತ್ತಮುತ್ತ ಜನ ಗುಂಪುಗೂಡುವಂತಿಲ್ಲ‌.ನಿಷೇಧಾಜ್ಞೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಸುವಂತಿಲ್ಲ. ಯಾವುದೇ ಮಾರಕಾಸ್ತ್ರಗಳು ಹಾಗೂ ಸ್ಪೋಟಕ ವಸ್ತುಗಳನ್ನ ಹಿಡಿದು ಓಡಾಡುವಂತಿಲ್ಲ‌. ಯಾವುದೇ ಸಭೆ, ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಅಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • 14 Feb 2022 08:53 AM (IST)

    ಗೃಹ ಸಚಿವರ ತವರು ಜಿಲ್ಲೆಯಲ್ಲಿ ಹೈ ಅಲರ್ಟ್

    ಗೃಹ ಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿ  ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಇಂದಿನಿಂದ ಪ್ರೌಢ ಶಾಲೆ ಅರಂಭವಾದ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

  • 14 Feb 2022 08:51 AM (IST)

    ತುಮಕೂರಿನಲ್ಲಿ 144 ಸೆಕ್ಷನ್ ಜಾರಿ

    ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆ ತುಮಕೂರು ಜಿಲ್ಲೆಯ ಎಲ್ಲಾ ಶಾಲೆಗಳ ಸುತ್ತಮುತ್ತ 144 ಸೆಕ್ಷನ್ ಜಾರಿಯಾಗಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ 144 ಸೆಕ್ಷನ್ ಜಾರಿ ಇರುತ್ತದೆ. ಶಾಲೆಯ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಇರುತ್ತದೆ. ಶಾಲೆಯ ಗುರುತಿನ ಚೀಟಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಶಾಲೆಯ ಒಳಗೆ ಹೋಗಲು ಅವಕಾಶ. ಶಾಲೆ ಸುತ್ತಮುತ್ತ ಇರುವ ಅಂಗಡಿ ತೆರೆಯಲು ಅವಕಾಶ. ಆದರೆ ಅಂಗಡಿ ಸುತ್ತಮುತ್ತ ಜನ ಗುಂಪುಗೂಡುವಂತಿಲ್ಲ‌. ನಿಷೇಧಾಜ್ಞೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಸುವಂತಿಲ್ಲ. ಯಾವುದೇ ಮಾರಕಾಸ್ತ್ರಗಳು ಹಾಗೂ ಸ್ಪೋಟಕ ವಸ್ತುಗಳನ್ನ ಹಿಡಿದು ಓಡಾಡುವಂತಿಲ್ಲ‌. ಯಾವುದೇ ಸಭೆ, ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ತುಮಕೂರು ಡಿಸಿ ವೈಎಸ್ ಪಾಟೀಲ್ ಆದೇಶ ನೀಡಿದ್ದಾರೆ.

  • 14 Feb 2022 08:49 AM (IST)

    ಹೊರಗಿನವರಿಗೆ ಶಾಲೆಯಲ್ಲಿ ಪ್ರವೇಶವಿಲ್ಲ; ದಾವಣಗೆರೆ ಜಿಲ್ಲಾಧಿಕಾರಿ ಆದೇಶ

    ಮುನ್ನೆಚ್ಚರಿಕೆ ಕ್ರಮವಾಗಿ‌ ದಾವಣಗೆರೆ ಜಿಲ್ಲೆಯಾದ್ಯಂತ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಇಂದು ಬೆಳಿಗ್ಗೆ ಆರು ಗಂಟೆಯಿಂದ ನಾಳೆ ಬೆಳಿಗ್ಗೆ ಆರು ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.  ಶಾಲೆಗಳಲ್ಲಿ‌ ಮೊಬೈಲ್ ನಿಷೇಧ ಮಾಡಲಾಗಿದೆ. ಹೊರಗಿನವರಿಗೆ ಶಾಲೆಯಲ್ಲಿ ಪ್ರವೇಶವಿಲ್ಲ. ಅಗತ್ಯವಿದ್ದರೇ ಮಾತ್ರ ಪಾಲಕರು ಶಾಲೆಗೆ ಹೋಗಬಹುದು ಅಂತ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

  • 14 Feb 2022 08:44 AM (IST)

    ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ; ಮೈಸೂರು ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ

    ಮೈಸೂರಿನ ಶಾಲಾ ಕಾಲೇಜುಗಳ ಬಳಿ ನಿಷೇಧಾಜ್ಞೆ ಜಾರಿಯಾಗಿದೆ. ಶಾಲಾ ಕಾಲೇಜುಗಳ ಬಳಿ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮಕೈಗೊಳ್ಳಲಾಗಿದೆ. ಶಾಲೆಗಳ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಶಾಲೆಗಳ ಬಳಿ ಜಮಾವಣೆಯಾಗದಂತೆ ಎಚ್ಚರಿಕೆ ನೀಡಲಾಗಿದೆ ಅಂತ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ತಿಳಿಸಿದ್ದಾರೆ.

  • 14 Feb 2022 08:42 AM (IST)

    ರಾಜ್ಯದ ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ

    ಹಿಜಾಬ್, ಕೇಸರಿ ಶಾಲು ವಿವಾದದ ನಡುವೆ ಶಾಲೆ ಆರಂಭವಾಗಿದೆ. ಅಹಿತಕರ ಘಟನೆ ನಡೆಯದಂತೆ ಶಾಲೆಗಳ ಬಳಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆ, ಉಡುಪಿ, ಶಿವಮೊಗ್ಗ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ ಇದೆ. ಸೂಕ್ಷ್ಮ ಪ್ರದೇಶಗಳಲ್ಲಿರುವ ಶಾಲೆಗಳ ಬಳಿ ಬಿಗಿಬಂದೋಬಸ್ತ್ ಮಾಡಲಾಗಿದೆ.

  • 14 Feb 2022 08:41 AM (IST)

    ಬೆಂಗಳೂರಿನ ವಿದ್ಯಾಸಾಗರ ಶಾಲೆಯಲ್ಲಿ ಗಲಾಟೆ ಸಾಧ್ಯತೆ!

    ಬೆಂಗಳೂರಿನ ವಿದ್ಯಾಸಾಗರ ಶಾಲೆಯಲ್ಲಿ ಗಲಾಟೆ ನಡೆಯುವ ಸಾಧ್ಯತೆ ಹೆಚ್ಚಿದೆ. ಶಿಕ್ಷಕಿ ಬಹಿರಂಗ ಕ್ಷಮೆಯಾಚಿಸುವಂತೆ ಪೋಷಕರು ಪಟ್ಟು ಹಿಡಿದಿದ್ದಾರೆ. ಇಂದು ಕೆಲ ಪೋಷಕರು ಶಾಲೆ ಬಳಿ ಸೇರಿ ಗಲಾಟೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಚಂದ್ರಾಲೇಔಟ್‌ನ ವಿದ್ಯಾಸಾಗರ ಶಾಲೆ ಬಳಿ ಭದ್ರತೆ ಮಾಡಲಾಗಿದೆ. ಶಾಲೆಯ 100 ಮೀ. ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಹಾಕಿ ಭದ್ರತೆ ಮಾಡಲಾಗಿದೆ. ಪೊಲೀಸ್ ಬಿಗಿ ಭದ್ರತೆಯ ನಡುವೆ ಇಂದು ಶಾಲೆ ಆರಂಭವಾಗಿದೆ.

  • 14 Feb 2022 08:39 AM (IST)

    ಹಿಜಾಬ್ ಕಿಚ್ಚಿನ ಹೊತ್ತಲ್ಲೇ ಶಾಲೆಗಳ ಬಾಗಿಲು ಓಪನ್

    ರಾಜ್ಯದಲ್ಲಿ ಹಿಜಾಬ್ ವಿವಾದ ಕಿಚ್ಚು ಹೊತ್ತಿದೆ. ಈ ನಡುವೆ ಬಂದ್ ಆಗಿದ್ದ ಪ್ರೌಢಶಾಲೆಗಳು ಇಂದಿನಿಂದ ಆರಂಭವಾಗಿದೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಅಂತಾ  ಡಿಸಿಗಳು, ಎಸ್‌ಪಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳಿಗೆ ಡಿಸಿ, ಎಸ್‌ಪಿ ಭೇಟಿ ನೀಡಬೇಕು. ಶಾಲಾ ಆಡಳಿತ ಮಂಡಳಿಗಳ ಜತೆ ಸಂಪರ್ಕದಲ್ಲಿರಬೇಕು. ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಸಣ್ಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ. ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಸಭೆ ನಡೆಸಬೇಕು.  ಅಧಿಕಾರಿಗಳು ಮೇಲಿನ ಆದೇಶಗಳಿಗೆ ಕಾಯಬಾರದು. ಸಂದರ್ಭಕ್ಕೆ ತಕ್ಕಂತೆ ನೀವೇ ಕ್ರಮ ತೆಗೆದುಕೊಳ್ಳಬೇಕು. ಶಾಲಾ ಆಡಳಿತ ಮಂಡಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾಧಿಕಾರಿ, ಎಸ್ ಪಿ ಜೊತೆ ಸಂಬಂಧಪಟ್ಟ ಸಚಿವರು ನಿರಂತದ ಸಂಪರ್ಕದಲ್ಲಿರಬೇಕು. ಅಹಿತಕರ ಘಟನೆ ನಡೆಯಬಹುದಾದ ಶಾಲೆಗಳ ಬಳಿ ಪೊಲೀಸರ ಹದ್ದಿನ ಕಣ್ಣಿಡಬೇಕು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯುತವಾಗಿರಬೇಕು ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

  • Published On - Feb 14,2022 8:31 AM

    Follow us