ಬೆಂಗಳೂರು: ಅನ್ನಭಾಗ್ಯ ಯೋಜನೆ ಅಡಿ (Anna Bhagya Scheme) ಉಚಿತವಾಗಿ ಹೆಚ್ಚುವರಿ 5 ಕೆಜಿ ಅಕ್ಕಿ (Rice) ನೀಡುವ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆಯಿತು. ಕೇಂದ್ರ ಸರ್ಕಾರ (Union Government) ಅಕ್ಕಿ ನೀಡಲು ನಿರಾಕರಿಸಿದೆ ಎಂದು ಕಾಂಗ್ರೆಸ್ (Congress) ಆರೋಪಿಸಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅಕ್ಕಿ ಕೊರತೆ ಹಿನ್ನೆಲೆಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಒಂದು ಕೆಜಿ ಅಕ್ಕಿಗೆ 34 ರೂ. ನಂತೆ ಫಲಾನುಭವಿಗಳಿಗೆ ತಿಂಗಳಿಗೆ 170 ರೂ. ನೀಡಲು ಸಚಿವ ಸಂಪುಟ ನಿರ್ಧರಿಸಿತ್ತು. ಇದು ನಿನ್ನೆ (ಜುಲೈ.01) ರಿಂದ ಜಾರಿಗೆಯಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿ ಉಳಿತಾಯವಾಗುತ್ತದೆ.
ಹೌದು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಿಂದ ರಾಜ್ಯ ಸರ್ಕಾರಕ್ಕೆ ತಿಂಗಳಿಗೆ 123 ಕೋಟಿ ರೂ. ಹಣ ಉಳಿತಾಯವಾಗಲಿದೆ. ರಾಜ್ಯದಲ್ಲಿ 1.14 ಕೋಟಿ ಪಡಿತರ ಚೀಟಿಗಳಿದ್ದು, 4.30 ಕೋಟಿ ಫಲಾನುಭವಿಗಳಿದ್ದಾರೆ. ತಲಾ 5 ಕೆಜಿಯಂತೆ ಅಕ್ಕಿ ವಿತರಣೆ ಮಾಡಲು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಇದರ ಸಾಗಣೆ ವೆಚ್ಚ, ಕಮೀಷನ್ ಎಲ್ಲ ಲೆಕ್ಕ ಹಾಕಿದರೆ ಮಾಸಿಕ 123 ಕೋಟಿ ರೂ. ತಗಲುತ್ತದೆ. ಅಂದರೇ ಹೆಚ್ಚುವರಿ 5 ಕೆಜಿ ಅಕ್ಕಿ ಫಲಾನುಭವಿಗಳ ಕೈಗೆ ತಲುಪಿಸಲು ಸರ್ಕಾರ 856 ಕೋಟಿ ರೂ. ವ್ಯಯ ಮಾಡಬೇಕಿತ್ತು.
ಇದನ್ನೂ ಓದಿ: ಇಂದಿನಿಂದ ಅನ್ನಭಾಗ್ಯ ಜಾರಿ, ಅಕ್ಕಿ ಬದಲು ಖಾತೆಗೆ ಬೀಳಲಿದೆ ಹಣ
ಪ್ರತಿ ಕೆಜಿಗೆ ಸಾಗಣೆ ವೆಚ್ಚ 1.10 ರೂ. ಸಗಟು ಕಮೀಷನ್ 35 ಪೈಸೆ ಹಾಗೂ ಚಿಲ್ಲರೆ ಕಮೀಷನ್ 1.84 ರೂ. ನಂತೆ 4.30 ಕೋಟಿ ಫಲಾನುಭವಿಗಳಿಗೆ ಅಕ್ಕಿ ವಿತರಿಸಲು 856 ಕೋಟಿ ರೂ. ವ್ಯಯವಾಗುತ್ತಿತ್ತು. ಆದರೆ ಇದೀಗ ಹಣ ವರ್ಗಾವಣೆಯಿಂದ ಸಾಗಣೆ ವೆಚ್ಚ, ಸಗಟು ಮತ್ತು ಚಿಲ್ಲರೆ ಕಮೀಷನ್ ಹಣ ಉಳಿತಾಯವಾಗಲಿದೆ.
ಇನ್ನು ಪ್ರತಿ ವ್ಯಕ್ತಿಗೆ 170 ರೂ. ಹಣ ನೀಡುವುದರಿಂದ ಮಾಸಿಕ 733 ಕೋಟಿ ರೂ. ಸರ್ಕಾರ ಎತ್ತಿಡಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ ಪ್ರತಿ ಕೆಜಿಗೆ 2.69 ಪೈಸೆ ಉಳಿತಾಯವಾಗುತ್ತೆ. ಅಂದರೇ ರಾಜ್ಯ ಸರ್ಕಾರಕ್ಕೆ ತಿಂಗಳಿಗೆ 123 ಕೋಟಿ ರೂ. ಹಣ ಉಳಿತಾಯವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ