ಉಡುಪಿ: ಜಿಲ್ಲೆಯಲ್ಲಿ ಪಂಜುರ್ಲಿ ದೈವದ ಕಾರಣಿಕ ಮತ್ತೊಮ್ಮೆ ಸಾಬೀತಾಗಿದ್ದು, ಕೊರೋನಾ ಕಾಲಘಟ್ಟದಲ್ಲಿ ಊಹಿಸಲೂ ಸಾಧ್ಯವಿಲ್ಲದಂತಹ ಮಾದರಿಯಲ್ಲಿ ಸುಂದರ ದೇವಾಲಯವೊಂದು ತಲೆಯೆತ್ತಿ ನಿಂತಿದೆ. ಪವಾಡ ಸದೃಶವಾಗಿ ನಿರ್ಮಾಣವಾದ ಈ ದೇವಾಲಯ ಲಾಕ್ಡೌನ್ನಲ್ಲಿ ನಿರ್ಮಾಣವಾಗಿದ್ದು, ಇಡೀ ಊರಿನವರ ಪರಿಶ್ರಮದಲ್ಲಿ ಸಂಪೂರ್ಣಗೊಂಡಿದೆ.
ಕರಾವಳಿಯಲ್ಲಿ ದೈವಗಳ ಪವಾಡ ಪದೇ ಪದೇ ಸದ್ದು ಮಾಡುತ್ತದೆ. ಕೊರೋನಾ ಕಾಲಘಟ್ಟದಲ್ಲಿ ಅಂತಹ ಪವಾಡವೊಂದು ಮರುಕಳಿಸಿದ್ದು, ಉಡುಪಿಯ ಕೊಡವೂರು ಸಮೀಪದ ಕಂಗೊಟ್ಟು ಎಂಬಲ್ಲಿರುವ ಈ ಸುಂದರ ದೇವಾಲಯವನ್ನು ನೋಡಿದರೆ ಇದರ ನಿರ್ಮಾಣಕ್ಕೆ ಮುಂದಾದ ಊರ ಜನರ ಶ್ರದ್ಧೆ ಮತ್ತು ಭಕ್ತಿ ಎದ್ದು ಕಾಣುತ್ತದೆ.
ದೇವಾಲಯವನ್ನು ನಿರ್ಮಾಣ ಮಾಡಬೇಕು ಎಂದು ದೃಢ ಸಂಕಲ್ಪ ಮಾಡಿದ್ದಾಗಲೇ ಎದುರಾಗಿದ್ದು, ಕರೋನಾಘಾತ. ಕ್ಷೇತ್ರದ ದೈವ ಪಂಜುರ್ಲಿಯ ಮೇಲೆ ಭಾರ ಹಾಕಿದ ಗ್ರಾಮಸ್ಥರು ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಿಸಿಯೇ ಬಿಟ್ಟರು. ಇವರ ಪಾಲಿಗೆ ಶಾಪವೇ ವರವಾಗಿ ಪರಿಣಮಿಸಿದ್ದು ನಿಜಕ್ಕೂ ವಿಸ್ಮಯವೇ ಸರಿ.
ಕೋರೋನಾ ಬಂದಾಗ ಲಾಕ್ಡೌನ್ ಘೋಷಣೆಯಾಯಿತು. ಲಾಕ್ಡೌನ್ ಘೋಷಣೆಯಾಗಿದ್ದೇ ತಡ ಪರವೂರ ಜನರೆಲ್ಲ ಊರಿಗೆ ಬಂದು ನೆಲೆಸಿದ್ದು, ಊರ ಯುವಕರು ಕೂಡ ಎಲ್ಲಾ ಕೆಲಸ ಬಿಟ್ಟು ಮನೆಯಲ್ಲೇ ಉಳಿಯುವಂತಾಯಿತು. ದೈವದ ಪ್ರೇರಣೆಯೇ ಇರಬೇಕು, ಖಾಲಿ ಕುಳಿತವರೆಲ್ಲಾ ಕರಸೇವೆ ಆರಂಭಿಸಿದ್ದು, ರಾತ್ರಿ-ಹಗಲು ಒಂದು ಮಾಡಿ ದೈವ ಸ್ಥಾನ ನಿರ್ಮಾಣದಲ್ಲಿ ತೊಡಗಿಸಿಕೊಂಡರು.
ಸಾಫ್ಟ್ ವೇರ್ ಇಂಜಿನಿಯರ್ಗಳು, ಖಾಸಗಿ ಕಂಪೆನಿಗಳಲ್ಲಿ ದುಡಿಯುವವರು, ಸರ್ಕಾರಿ ನೌಕರರು, ಕುಶಲ ಕರ್ಮಿಗಳು ಹೀಗೆ ಪ್ರತಿಯೊಬ್ಬರೂ ಕಾರ್ಮಿಕರಾಗಿ ಪ್ರತಿಯೊಂದು ಕೆಲಸವನ್ನೂ ತಮ್ಮ ಕೈಯಾರೆ ನಡೆಸಿದರು. ಕರಸೇವಕರ ಆರು ತಿಂಗಳ ಪರಿಶ್ರಮ ಸುಂದರ ದೇವಾಲಯದ ರೂಪದಲ್ಲಿ ತಲೆ ಎತ್ತಿ ನಿಂತಿದ್ದು, ಈ ಊರಿನ ಜನ ಇದನ್ನು ಶ್ರೀ ಅಣ್ಣಪ್ಪ ಪಂಜುರ್ಲಿ ಪವಾಡ ಎಂದೇ ಭಾವಿಸುತ್ತಾರೆ.
ಈ ಕ್ಷೇತ್ರದಲ್ಲಿ ಕಾರಣಿಕದ ದೈವ ಅಣ್ಣಪ್ಪ ಪಂಜುರ್ಲಿಯ ಅನೇಕ ಪವಾಡಗಳು ನಡೆದಿವೆ. ನ್ಯಾಯಾಲಯದಲ್ಲಿ ತೀರ್ಮಾನವಾಗದೆ ಉಳಿದ ಪ್ರಕರಣಗಳು ಇತ್ಯರ್ಥವಾಗಿದೆ. ದೈವಕ್ಕೆ ಕಂಬಳ ಸೇವೆಯನ್ನು ಕೊಟ್ಟು ಸಮಸ್ಯೆಗಳನ್ನು ಬಗೆಹರಿಸಿಕೊಂಡ ಸಾವಿರಾರು ಭಕ್ತರಿದ್ದಾರೆ. ಈಗ ನೋಡನೋಡುತ್ತಿದ್ದಂತೆ ಕರಸೇವಕರಿಂದಲೇ ದೈವಸ್ಥಾನ ನಿರ್ಮಾಣವಾಗಿ ಕ್ಷೇತ್ರದ ಶಕ್ತಿಯನ್ನು ಮತ್ತೊಮ್ಮೆ ಸಾಬೀತಾಗಿದೆ ಎಂದು ಸ್ಥಳೀಯರಾದ ಸಂತೋಷ ಶೆಟ್ಟಿ ಹೇಳಿದ್ದಾರೆ.
ಎಲ್ಲವೂ ಊಹಿಸಿದಂತೆ ಆಗಿದ್ದರೆ ಸುಮಾರು 2.45 ಕೋಟಿ ರೂ. ವೆಚ್ಚದಲ್ಲಿ ದೈವಸ್ಥಾನ ನಿರ್ಮಾಣವಾಗಬೇಕಿತ್ತು. ಆದರೆ ಲಾಕ್ಡೌನ್ ಇವರ ಪಾಲಿಗೆ ವರದಾನವಾಯಿತು. ಕರಸೇವಕರು ಕೇವಲ 90 ಲಕ್ಷ ವೆಚ್ಚದಲ್ಲಿ ದೈವಸ್ಥಾನ ನಿರ್ಮಿಸಿ ಮಾನವ ಶಕ್ತಿಯ ಪರಿಚಯ ಮಾಡಿಸಿದ್ದಾರೆ. ಹೀಗಾಗಿ ಜನರು ದೈವಸ್ಥಾನವನ್ನು ಲಾಕ್ಡೌನ್ ಟೆಂಪಲ್ ಎಂದು ಕರೆಯುತ್ತಿದ್ದಾರೆ.
ತುಳುನಾಡ ಬ್ರಹ್ಮರು, ವೀರಭದ್ರ ದೇವರು, ಸಿರಿ, ಅಬ್ಬಗ-ದಾರಗ, ರಕ್ತೇಶ್ವರಿ, ನಂದಿಗೋಣ ಕಲ್ಕುಡ ಹಾಗೂ ಬಬ್ಬರ್ಯ ದೈವಗಳನ್ನು ಪುನಃ ಇಲ್ಲಿ ಪ್ರತಿಷ್ಠಾಪನೆ ಆಗುತ್ತಿದ್ದು, ಕೇವಲ ಕರ ಸೇವೆಯಿಂದಲೇ ನಿರ್ಮಾಣವಾದ ಈ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ ಕರಾವಳಿಗರನ್ನು ಕೈಬೀಸಿ ಕರೆಯುತ್ತಿದೆ.
ಇದನ್ನೂ ಓದಿ: Ram Temple Construction Fund ಮಂದಿರ ನಿರ್ಮಾಣಕ್ಕೆ 500100 ರೂ. ದೇಣಿಗೆ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್