Ahinda-Hinda | ರಾಜಕೀಯ ವಿಶ್ಲೇಷಣೆ: ಶಂಖದಿಂದ ಬಂದರೇ ತೀರ್ಥ! ಈ ಗಾದೆ ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತು, ಅದಕ್ಕೇ..

Ahinda-Hinda | ರಾಜಕೀಯ ವಿಶ್ಲೇಷಣೆ: ಶಂಖದಿಂದ ಬಂದರೇ ತೀರ್ಥ! ಈ ಗಾದೆ ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತು, ಅದಕ್ಕೇ..
‘ಹಿಂದ’ ಮತ ಬ್ಯಾಂಕ್ ಸೃಷ್ಟಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ದೆಹಲಿ ನಾಯಕರಿಗೇ ಸಾಬೀತುಪಡಿಸಿಬೇಕು,ಹೀಗಾಗಿಯೇ ದೆಹಲಿ ವಿಮಾ ಏರಿದ್ದಾರೆ ಸಿದ್ದರಾಮಯ್ಯ

Ahinda-Hinda : ತಮ್ಮ ‘ಹಿಂದ’ ಪ್ಲಾನ್​ಗೆ ಯಾರೂ ಕಮಕ್ ಕಿಮಕ್ ಎನ್ನಬಾರದು. ಶಂಖದಿಂದ ಬಂದರೇ ತೀರ್ಥ ಎಂಬ ಗಾದೆ ಮಾತನ್ನು ಅರಿತಿರುವ ಪಕ್ಕಾ ದೇಸೀ ಹುಲಿ ಸಿದ್ದರಾಮಯ್ಯ ತಮ್ಮ ಯೋಜನೆಯ ಪರವಾಗಿ ವರಿಷ್ಠರಿಂದಲೇ ಸಂದೇಶ ರವಾನೆ ಮಾಡಿಸುವ ಉದ್ದೇಶದಿಂದ ದೆಹಲಿ ವಿಮಾನ ಹತ್ತಿದ್ದಾರೆ.

guruganesh bhat

|

Feb 16, 2021 | 2:25 PM

ದೆಹಲಿ: ಕರ್ನಾಟಕ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ದೆಹಲಿ ವಿಮಾನ ಹತ್ತಿದ್ದಾರೆ. ತಮ್ಮ ಮಾಸ್ಟರ್ ​ಪ್ಲಾನ್​ಗಳನ್ನು ಹೊತ್ತು ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರದ ಟವೆಲ್ ಹಾಸಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿರುವ ಅವರ ದೆಹಲಿ ಪ್ರಯಾಣದ ಫಲವನ್ನು ರಾಜ್ಯದ ಎಲ್ಲ ಪಕ್ಷಗಳ ನಾಯಕರು ಎದುರು ನೋಡುತ್ತಿದ್ದಾರೆ. ತಮ್ಮ ಎದುರಾಳಿಗಳನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳದ ಮೈಸೂರು ಭಾಗದ ರಾಜಕೀಯ ಹುಲಿಗೆ ಪಕ್ಷದೊಳಗಿನ ನಾಯಕರಿಗೇ ಪಂಜಿನ ಏಟು ಕೊಡಬೇಕಾದ ಪರಿಸ್ಥಿತಿ ಬಂದಿದೆ. ಸುಖಾಸುಮ್ಮನೆ ದಾಳಿಯಲ್ಲ, ಕೊಟ್ಟ ಪೆಟ್ಟು ಗಾಯ ಮಾಡಲೇಬೇಕು. ಇಲ್ಲದಿದ್ದರೆ ಸ್ವತಃ ಸಿದ್ದರಾಮಯ್ಯರ ಭವಿಷ್ಯದ ಯೋಜನೆಗಳೇ ತಿರುಗಾಮುರುಗಾ ಆಗಲಿದೆ. ಇದಂತೂ ಸ್ಪಷ್ಟವಾಗಿ ಸಿದ್ದರಾಮಯ್ಯರ ಅರಿವಿಗೆ ಬಂದಿದೆ.

ಶಂಖದಿಂದ ಬಂದರೇ ತೀರ್ಥ, ಇದು ಸಿದ್ದರಾಮಯ್ಯರಿಗೆ ಗೊತ್ತು! ‘ಅಹಿಂದ’ದಿಂದ ‘ಹಿಂದ ಸಾಮ್ರಾಜ್ಯ’ ಕಟ್ಟುವ ಮಾಸ್ಟರ್ ​ಪ್ಲಾನ್ ಹಾಕಿರುವ ಸಿದ್ದರಾಮಯ್ಯರ ವಿರುದ್ಧ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ. ಸದ್ಯದ ರಾಜಕೀಯ ಪಗಡೆಯಾಟದಲ್ಲಿ ಹಿಂದ ಎಂಬ ದಾಳ ಉರುಳಿಸುವುದರಿಂದ ಪಕ್ಷಕ್ಕೆ ಹಾನಿಯೇ ಹೊರತು, ಯಾವುದೇ ಪ್ರಯೋಜನವೂ ಆಗದು ಎಂಬುದು ಕಾಂಗ್ರೆಸ್ ನಾಯಕರ ವಾದ.

ಆದರೆ, ಸಿದ್ದರಾಮಯ್ಯ ತಮ್ಮ ಪಟ್ಟು ಸಡಿಲಿಸಲು ಸಿದ್ದರಿಲ್ಲ. ಕಾಂಗ್ರೆಸ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇನ್ನಿತರ ವರಿಷ್ಠರಿಗೆ ತಾವು ಹೂಡಿರುವ ಯೋಜನೆಯನ್ನು ಮನದಟ್ಟು ಮಾಡುವ ದೃಢ ಸಂಕಲ್ಪ ಹೊತ್ತೇ ಅಹಿಂದ ಸಾಮ್ರಾಜ್ಯದ ದೊರೆಯಾಗಿ ಮೆರೆದಿದ್ದ ಟಗರು ಖ್ಯಾತಿಯ ಸಿದ್ದರಾಮಯ್ಯ ದೆಹಲಿ ವಿಮಾನ ಹತ್ತಿದ್ದಾರೆ. ಪಕ್ಷದೊಳಗಿನ ತಮ್ಮ ಯೋಚನೆಗಳ ವಿರೋಧಿಗಳಿಗೆ ಗಾಯವಾಗುವಂತೆ ಏಟು ನೀಡಬೇಕು, ತಮ್ಮ ‘ಹಿಂದ’ ಪ್ಲಾನ್​ಗೆ ಯಾರೂ ಕಮಕ್ ಕಿಮಕ್ ಎನ್ನಬಾರದು. ತಮ್ಮ ಯೋಜನೆಯ ಪರವಾಗಿ ವರಿಷ್ಠರಿಂದಲೇ ಸಂದೇಶ ರವಾನೆ ಮಾಡುವುದು ಅವರ ದೆಹಲಿ ಪ್ರವಾಸದ ಉದ್ದೇಶ. ಶಂಖದಿಂದ ಬಂದರೇ ತೀರ್ಥ (ಅಂದರೆ ಹೈಕಮಾಂಡ್​ನಿಂದ) ಎಂಬ ಗಾದೆ ಮಾತನ್ನು ಪಕ್ಕಾ ದೇಸೀ ಹುಲಿ ಸಿದ್ದರಾಮಯ್ಯ ಚೆನ್ನಾಗಿಯೇ ಅರಿತಿದ್ದಾರೆ.

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಸಿದ್ದರಾಮಯ್ಯಗಾಗಿ ‘ಹಿಂದ ಅಹಿಂದ’ ಬಲೆ ಹೆಣೆಯುತ್ತಿದೆಯೇ ಬಿಜೆಪಿ?

ದೆಹಲಿ ಪ್ರವಾಸ ಕೊಡುವುದೇ ಅಭಯ? ರಾಜಕೀಯ ಮೇಲಾಟ-ಗುದ್ದಾಟಗಳಲ್ಲಿ ಸದ್ಯ ಯಾರಿಗೆ ಯಾವ ಬಾಣ ಹೂಡಬೇಕು, ಮತ್ತು ಎಲ್ಲಿಗೆ ನಾಟುವಂತೆ ಗುರಿ ಇಡಬೇಕು ಎಂದು ಇಷ್ಟು ದಿನ ಯೋಚಿಸಿದ ಅವರಿಗೆ ಪಕ್ಷದ ಇತರ ನಾಯಕರ ಪ್ರತಿರೋಧ ಸವಾಲಾದಂತೆ ಅನಿಸಿತು. ಸವಾಲನ್ನು ಹುಟ್ಟಡಗಿಸಲು ‘ಹಿಂದ’ ಮತ ಬ್ಯಾಂಕ್ ಸೃಷ್ಟಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ದೆಹಲಿ ನಾಯಕರಿಗೇ ಸಾಬೀತುಪಡಿಸಿಬೇಕು.

ತಮ್ಮ ಯೋಜನೆಗೆ ಯಾರೂ ಬೇಲಿ ಹಾಕದಂತೆ ತಡೆಯಲು ದೆಹಲಿ ಪ್ರವಾಸ ಅನಿವಾರ್ಯ. ಬಿಜೆಪಿಯ ಮೋದಿ- ಹಿಂದುತ್ವ-ಅಭಿವೃದ್ಧಿ-ಸ್ವದೇಶೀ ಅಲೆಗಳ ವಿರುದ್ಧ ಸೆಣೆಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಒಂದು ಮಾಸ್ಟರ್ ​ಪ್ಲಾನ್ ಬೇಕೇಬೇಕು. ಅಸ್ತ್ರಕ್ಕೇ ‘ಹಿಂದ’ ಎಂಬ ಹೆಸರು ಎಂಬುದನ್ನು ಸಾಬೀತುಪಡಿಸಲು ಸಿದ್ದರಾಮಯ್ಯ ಸಫಲವಾಗುತ್ತಾರೆ ಎಂಬುದಂತೂ ಕುತೂಹಲಕಾರಿ. ದೆಹಲಿಯಿಂದ ವರ ಪಡೆದೇ ಅವರು ಮರಳಲಿದ್ದಾರೆ ಎನ್ನುತ್ತದೆ ಬಲ್ಲ ಮೂಲಗಳು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಅಹಿಂದ ಹೋರಾಟ ಮಾಡಿಲ್ಲ! ಗುಟುರು ಹಾಕಿದ ಸಿದ್ದರಾಮಯ್ಯ

Follow us on

Related Stories

Most Read Stories

Click on your DTH Provider to Add TV9 Kannada