ರಾಜಕೀಯ ವಿಶ್ಲೇಷಣೆ | ಸಿದ್ದರಾಮಯ್ಯಗಾಗಿ ‘ಹಿಂದ – ಅಹಿಂದ’ ಬಲೆ ಹೆಣೆಯುತ್ತಿದೆಯೇ ಬಿಜೆಪಿ?
ಅಹಿಂದ ಎಂಬುದು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಎಂಬ ಪದಗಳ ಮೊದಲ ಅಕ್ಷರಗಳನ್ನ ಸೇರಿಸಿ ಸೃಷ್ಟಿಸಿದ ಅತಿ ಬಲಾಢ್ಯ ಮತಬ್ಯಾಂಕ್. ಅಹಿಂದದ ‘ಅ‘ ಅಂದರೆ ಅಲ್ಪಸಂಖ್ಯಾತರನ್ನು ಬಿಟ್ಟು ಸಿದ್ದರಾಮಯ್ಯ ಅವರು ಕಟ್ಟಹೊರಟಿರುವುದೇ ಹಿಂದ.
ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗಗಳನ್ನು ‘ಅಹಿಂದ’ ಎಂಬ ಪದಪುಂಜದ ಮೂಲಕ ಸಂಘಟಿಸಿ, ಅದನ್ನೇ ಅಧಿಕಾರದ ಏಣಿ ಆಗಿಸಿಕೊಂಡವರು ಸಿದ್ದರಾಮಯ್ಯ. ಇದೀಗ ಈ ಸೂತ್ರದಲ್ಲಿ ‘ಅ’ ಕೈಬಿಟ್ಟಂತೆ ಕಾಣಿಸುತ್ತಿರುವ ಈ ಪಳಗಿದ ರಾಜಕಾರಿಣಿ, ‘ಹಿಂದ’ ಅಂದರೆ ಹಿಂದುಳಿದವರು ಮತ್ತು ದಲಿತರನ್ನು ಕೇಂದ್ರೀಕರಿಸಿ ಮತ್ತೊಂದು ರಾಜಕೀಯ ದಾಳ ಉರುಳಿಸಲು ಸಿದ್ಧರಾದಂತೆ ಇದೆ. ಇದಕ್ಕೆ ಅವಕಾಶ ನೀಡಬಾರದೆಂಬ ರಕ್ಷಣಾತ್ಮಕ ಆಟಕ್ಕೆ ಮುಂದಾಗಿರುವ ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಲು ಮುಂದಾಗಿದೆ. ಅಹಿಂದ ಮತಗಳ ಒಗ್ಗೂಡಿಸುವಿಕೆಯಿಂದಲೇ ಮುನ್ನೆಲೆಗೆ ಬಂದ ಅನುಭವಿ ರಾಜಕೀಯ ಪಟುವನ್ನು ಇನ್ನೊಮ್ಮೆ ಮುನ್ನೆಲೆಗೆ ಬರಲು ಬಿಡಬಾರದೆಂಬ ನಿಟ್ಟಿನಲ್ಲಿ ಬಿಜೆಪಿ ಯೋಚಿಸುತ್ತಿದೆ.
1972ರಲ್ಲಿ ದೇವರಾಜ್ ಅರಸು ಅವರು ಅಧಿಕಾರಕ್ಕೇರಲು ಪ್ರಮುಖ ಕಾರಣವಾದ ‘ಅಹಿಂದ’ ಮತಗಳ ಒಗ್ಗೂಡಿಸುವಿಕೆಯ ತಂತ್ರವನ್ನೇ ಸಿದ್ದರಾಮಯ್ಯ ಬಳಸಿಕೊಂಡರು. ಸಾಂಪ್ರದಾಯಿಕವಾಗಿ ಕರ್ನಾಟಕದ ರಾಜಕಾರಣವನ್ನು ಬಿಗಿಮುಷ್ಟಿಯಲ್ಲಿ ಹಿಡಿದಿದ್ದ ಲಿಂಗಾಯತ ಮತ್ತು ಒಕ್ಕಲಿಗ ಮತ ಬ್ಯಾಂಕ್ಗಳನ್ನು ಒಡೆದು ಹೊಸ ವರ್ತುಲವನ್ನು ಕಟ್ಟಿದ್ದು ಸಹ ಇದೇ ‘ಅಹಿಂದ’. ಆದರೆ, ಈಗ ಸಿದ್ದರಾಮಯ್ಯ ಇನ್ನೊಂದು ದಾಳ ಉರುಳಿಸಿರುವುದು ಸಹಜವಾಗಿಯೇ ಬಿಜೆಪಿಯ ನಿದ್ದೆಗೆಡಿಸಿದೆ.
ತಮಗೆ ಅಧಿಕಾರದ ರುಚಿ ಉಣಿಸಿದ ‘ಅಹಿಂದ’ದಲ್ಲಿ ‘ಅ’ ತೊರೆದು ‘ಹಿಂದ’ ಮತಗಳ ಸಾಮ್ರಾಜ್ಯ ನಿರ್ಮಿಸಲು ಹೊರಟಿದ್ದಾರೆ ಸಿದ್ದರಾಮಯ್ಯ. ಅವರ ಈ ಪ್ರಯತ್ನಕ್ಕೆ ತೊಡರುಗಾಲು ಕೊಡಲು ಯತ್ನಿಸುತ್ತಿರುವ ಬಿಜೆಪಿ, ಸಿದ್ದರಾಮಯ್ಯನವರ ಸುದೀರ್ಘ ರಾಜಕೀಯ ಹಾದಿಯಲ್ಲಿ ಅವರಿಂದಾಗಿ ಅಧಿಕಾರ ವಂಚಿತರಾದವರ ಹೆಸರುಗಳನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿದೆ.
ಡಿ.ಕೆ.ಶಿವಕುಮಾರ್ರನ್ನು ಸೋಲಿಸುವ ಸಂಚು ಸಿದ್ದರಾಮಯ್ಯಗೆ ಇರಬಹುದೇ? ಟ್ವಿಟರ್ನಲ್ಲಿ ಸಿದ್ದರಾಮಯ್ಯರ ವಿರುದ್ಧದ ಅಲೆ ಹಬ್ಬಿಸುವ ಯೋಜನೆಯಲ್ಲಿ ಬಿಜೆಪಿ ತೊಡಗಿದೆ. ಇದೇ ನಿಟ್ಟಿನಲ್ಲಿ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿದೆ. ಸಿದ್ದರಾಮಯ್ಯ ಅವರಿಂದ ಹಿನ್ನಡೆ ಅನುಭವಿಸಿದ ರಾಜಕಾರಣಿಗಳನ್ನು ಎಳೆದು ತಂದಿದೆ. ತಮ್ಮ ಸ್ವಕ್ಷೇತ್ರ ಬಾದಾಮಿಗೆ ಭೇಟಿ ನೀಡಿದಾಗ ಮತ್ತೆ ಮುಖ್ಯಮಂತ್ರಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯರ ಹೇಳಿಕೆಯನ್ನೇ ಇಟ್ಟುಕೊಂಡು ಟ್ವೀಟ್ ಮಾಡಿರುವ ಬಿಜೆಪಿ, ಸಿಎಂ ಆಗಿದ್ದಾಗಲೇ ಸ್ವಂತ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತ ಕಹಿ ಗುಳಿಗೆಯನ್ನು ಮುಂದಿಟ್ಟು ಅಣಕವಾಡಿದೆ.
ಅಷ್ಟಕ್ಕೇ ಬಿಡದೇ, 2013ರಲ್ಲಿ ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಉಪಾಯವೇ ಕಾರಣ ಎಂದು ಹೇಳಿದೆ. ಅದೇ ರೀತಿ 2023ರಲ್ಲಿ ಡಿ.ಕೆ.ಶಿವಕುಮಾರ್ರನ್ನು ಸೋಲಿಸುವ ಸಂಚು ಸಿದ್ದರಾಮಯ್ಯ ಅವರಿಗೆ ಇರಬಹುದೇ? ಎಂದು ಅನುಮಾನವನ್ನೂ ವ್ಯಕ್ತಪಡಿಸಿದೆ.
ವೀರಶೈವ-ಲಿಂಗಾಯತ ಎಂದು ಸಮಾಜ ಒಡೆಯಲು ಹೋಗಿದ್ದು ನೀವೇ ಅಲ್ವೇ @siddaramaiah?
ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಎಂಬ ಸಮಾವೇಶ ಮಾಡಿಕೊಂಡು ತಾನು ಜಾತ್ಯಾತೀತ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಲು ನಿಮ್ಮ ಮನಸ್ಸು ಒಪ್ಪುತ್ತದೆಯೇ?
ಜಾತಿ ಧರ್ಮದ ನಡುವೆ ಬೆಂಕಿ ಹಚ್ಚುವವರು ಜಾತ್ಯಾತೀತರು ಹೇಗಾಗುತ್ತಾರೆ?#BetrayerSiddaramaiah
— BJP Karnataka (@BJP4Karnataka) February 11, 2021
ಅಹಿಂದ- ಹಿಂದ, ಏನಿದು? ಅಹಿಂದ ಎಂಬುದು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಎಂಬ ಪದಗಳ ಮೊದಲ ಅಕ್ಷರಗಳನ್ನ ಸೇರಿಸಿ ಸೃಷ್ಟಿಸಿದ ಅತಿ ಬಲಾಢ್ಯ ಮತಬ್ಯಾಂಕ್. ಅಹಿಂದದ ‘ಅ’ ಅಂದರೆ ಅಲ್ಪಸಂಖ್ಯಾತರನ್ನು ಬಿಟ್ಟು ಸಿದ್ದರಾಮಯ್ಯ ಅವರು ಕಟ್ಟಹೊರಟಿರುವುದೇ ಹಿಂದ. ಮೊನ್ನೆಯಷ್ಟೇ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ನ ಎಚ್.ಎಮ್.ರೇವಣ್ಣ ಕುರುಬ ಸಮುದಾಯದ ಪೀಠಾಧಿಪತಿಗಳನ್ನು ಸೇರಿಸಿಕೊಂಡು ಮಾಡಿದ ಸಮಾವೇಶದಲ್ಲಿ ಕಾಣಿಸಿಕೊಳ್ಳದ ಸಿದ್ದರಾಮಯ್ಯರಿಗೆ ಹಿಂದ ಸಮಾವೇಶದ ಅನಿವಾರ್ಯ ಕಾಣಿಸಿಕೊಂಡಿದೆ ಎನ್ನಲಾಗಿದೆ. 2005ರಲ್ಲಿ ಸಮಾವೇಶ ನಡೆಸಿ ಅಹಿಂದ ಮತಗಳನ್ನು ಒಗ್ಗೂಡಿಸಿದ್ದ ಸಿದ್ದರಾಮಯ್ಯರ ಹೊಸ ಪ್ರಯತ್ನಕ್ಕೆ ಕಲ್ಲು ಹಾಕುವ ಪ್ರಯತ್ನದಲ್ಲಿ ಬಿಜೆಪಿ ಸತತವಾಗಿ ನಿರತವಾಗಿದೆ.
ದೇವೇಗೌಡರು ಬೆಳೆಸಿದ ಪಕ್ಷದಲ್ಲಿ ನಾಯಕನಾಗಿ ಬೆಳೆದ @siddaramaiah, ಕೊನೆಗೆ ಅವರನ್ನೇ ತುಳಿದು ಕಾಂಗ್ರೆಸ್ಗೆ ಬಂದಿರಿ.
ಇಲ್ಲಿ ಖರ್ಗೆ, ಪರಮೇಶ್ವರ, ಡಿಕೆಶಿ ಅವರಿಗೆ ಅನ್ಯಾಯ ಮಾಡಿದಿರಿ.
ಈಗ ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತುತ್ತೇನೆಂದು ಹೇಳುತ್ತಿದ್ದೀರಿ.
ನೀವು ತುಳಿದಿರುವುದಕ್ಕೆ ಲೆಕ್ಕವೇ ಇಲ್ಲ!#BetrayerSiddaramaiah
— BJP Karnataka (@BJP4Karnataka) February 11, 2021
ಈಗ ರಾಜ್ಯಸಭೆಯ ವಿಪಕ್ಷ ನಾಯಕರಾಗಿ ನೇಮಕವಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಮ್ಮೆಯಾದರೂ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಇಚ್ಛೆಯಿತ್ತು. ಆದರೆ, ಈವರೆಗೂ ಅದು ಸಾಧ್ಯವಾಗದಿರಲು ಸಿದ್ದರಾಮಯ್ಯ ಕಾರಣ ಎಂಬ ಮಾತು ಆಗಾಗ ಕೇಳಿಬರುತ್ತವೆ. ಈ ವಾದವನ್ನು ಸಹ ಬಳಸಿಕೊಂಡಿರುವ ಬಿಜೆಪಿ, ‘ದಲಿತ’ ಎಂಬ ಕಾರಣವೊಡ್ಡಿ ಮಲ್ಲಿಕಾರ್ಜುನ ಖರ್ಗೆ ಅವರಿಂದ ಮುಖ್ಯಮಂತ್ರಿ ಗಾದಿಯನ್ನು ಸಿದ್ದರಾಮಯ್ಯ ಅವರೇ ದೂರ ಮಾಡಿದರು ಎಂದು ಬಹಿರಂಗವಾಗಿ ಆರೋಪಿಸಿದೆ.
ಆದರೆ, ಅದೇ ‘ದಲಿತ ಮತಗಳನ್ನೂ ಕ್ರೋಡೀಕರಿಸಲು ಹೊರಟಿದ್ದೀರಾ ಎಂದು ಅವರನ್ನು ಪ್ರಶ್ನಿಸಿದೆ. ದೇವೇಗೌಡರ ಆಪ್ತ ಶಿಷ್ಯನಾಗಿ ಬೆಳೆದು, ನಂತರ ಅವರನ್ನೇ ತುಳಿದು ಕಾಂಗ್ರೆಸ್ಗೆ ಪಕ್ಷಾಂತರವಾಗಿದ್ದಾಗಿಯೂ ದೂರಿರುವ ಬಿಜೆಪಿ ಸಿದ್ದರಾಮಯ್ಯ ಅಧಿಕಾರದ ಹಳಿಗೆ ಏರಲು ಬಳಸಿದ ಪಟ್ಟುಗಳನ್ನು ನೆನಪಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ವಿರೋಧಿ ಅಲೆ ಸೃಷ್ಟಿಸುವ ಪ್ರಯತ್ನದಲ್ಲಿ ಬಿಜೆಪಿ ಪ್ರಯತ್ನ ಎಷ್ಟರಮಟ್ಟಿಗೆ ಯಶ ಕಾಣುವುದು ಎಂಬುದನ್ನು ತಿಳಿಯಲು ಇಡೀ ರಾಜಕೀಯ ಪಡಸಾಲೆಯೇ ಕುತೂಹಲದಿಂದ ಕಾಯುತ್ತಿದೆ. ಏಕೆಂದರೆ, ಸಿದ್ದರಾಮಯ್ಯ ಎಂದರೆ ಸಾಮಾನ್ಯ ರಾಜಕಾರಣಿಯಲ್ಲ,ಅವರೊಬ್ಬ ಪಳಗಿದ ಅನುಭವಿ ಎಂಬುದನ್ನು ಕರ್ನಾಟಕದ ಯಾವುದೇ ರಾಜಕೀಯ ನಾಯಕರೂ ಮರೆಯಲಾರರು. ಬಿಜೆಪಿ ಹಾಕಿರುವ ಈ ಪಟ್ಟಿಗೆ ಸಿದ್ದರಾಮಯ್ಯ ಪ್ರತಿಪಟ್ಟು ಹಾಕದೆ ಇರಲಾರರು ಎಂಬ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತಿವೆ.
ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ಕುರುಬ ರ‍್ಯಾಲಿಗೆ ಬೆದರಿ ತಪ್ಪು ನಡೆ ಇಡಲು ಮುಂದಾಗಿದ್ದಾರಾ ಸಿದ್ದರಾಮಯ್ಯ?