ಕೆಆರ್ಎಸ್ ಬಳಿ ಓಡಾಡುತ್ತಿದ್ದ ಒಂದು ಚಿರತೆ ಬೋನಿಗೆ, ಇನ್ನೊಂದು ಚಿರತೆಗಾಗಿ ಮುಂದುವರಿದ ಹುಡುಕಾಟ
ಉತ್ತರ ಗೇಟ್ ಬಳಿ ಇರಿಸಲಾಗಿದ್ದ ಬೋನ್ಗೆ ಚಿರತೆ ಬಿದ್ದಿದ್ದು, ಅಧಿಕಾರಿಗಳು ಸ್ವಲ್ಪಮಟ್ಟಿನಲ್ಲಿ ನಿರಾಳರಾಗಿದ್ದಾರೆ. ಆದರೆ, ಮತ್ತೊಂದು ಚಿರತೆ ಇದ್ದು ಅದರ ಚಲನವಲನಗಳ ಬಗೆಗೆ ನಿಗಾ ಇರಿಸಲಾಗಿದೆ.
ಮಂಡ್ಯ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ಎಸ್ನಲ್ಲಿನ ಬೃಂದಾವನ, ಮುಖ್ಯದ್ವಾರ ಸೇರಿದಂತೆ ಹಲವು ಕಡೆಗಳಲ್ಲಿ ಕಾಣಿಸಿಕೊಂಡು ಪ್ರವಾಸಿಗರ, ಅಧಿಕಾರಿಗಳ ನಿದ್ದೆಕೆಡಿಸಿದ್ದ ಚಿರತೆ ಕಡೆಗೂ ಬೋನಿಗೆ ಬಿದ್ದಿದೆ. ಆದರೆ ಅಧಿಕಾರಿಗಳಲ್ಲಿ ಆತಂಕ ಮಾತ್ರ ಮುಂದುವರೆದಿದೆ. ಏಕೆಂದರೆ ಕೆಆರ್ಎಸ್ನಲ್ಲಿ ಕಾಣಿಸಿಕೊಂಡಿದ್ದು, ಒಂದಲ್ಲ ಎರಡು ಚಿರತೆಗಳು ಎನ್ನುವುದು ಗಮನಿಸಬೇಕಾದ ವಿಚಾರ.
ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಒಂದಕ್ಕಿಂತಲೂ ಒಂದು ಸುಂದರವಾಗಿದೆ. ಇನ್ನೂ ಈ ಪ್ರದೇಶಗಳು ಪ್ರತಿನಿತ್ಯ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿರುತ್ತವೆ. ಆ ಪೈಕಿ ಪ್ರಮುಖವಾದ ತಾಣ ಎಂದರೆ ಕೆಆರ್ಎಸ್ನ ಬೃಂದಾವನ. ಸುಂದರ ಪರಿಸರ ಹೊಂದಿರುವ ಕೆಆರ್ಎಸ್ ಬೃಂದಾವನದ ಸೌಂದರ್ಯವನ್ನ ನೋಡುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
ಕೆಆರ್ಎಸ್ ಮೈಸೂರಿಗೆ ಹತ್ತಿರವಿರುವ ಕಾರಣದಿಂದಾಗಿ ಮೈಸೂರಿಗೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಕೆಆರ್ಎಸ್ಗೂ ಭೇಟಿ ನೀಡುತ್ತಾರೆ. ಹೀಗಾಗಿಯೇ ದಿನೇ ದಿನೇ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿರುವ ಕೆಆರ್ಎಸ್ ಬೃಂದಾವನದಲ್ಲಿ ಇತ್ತೀಚೆಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಕಾರಣ ಇಲ್ಲಿ ಒಂದು ಚಿರತೆ ವಾಸ ಮಾಡಲಾರಂಭಿಸಿದ್ದು. ಕತ್ತಲಾಗುತ್ತಲೇ ಕೆಆರ್ಎಸ್ನ ಬೃಂದಾವನ, ಮುಖ್ಯದ್ವಾರ ಸೇರಿದಂತೆ ಎಲ್ಲೆಂದರಲ್ಲಿ ಅಡ್ಡಾಡುತ್ತಿತ್ತು. ಈ ಬಗ್ಗೆ ನಿಗಾವಹಿಸಿದ್ದ ಅಧಿಕಾರಿಗಳು ಇರಿಸಿದ್ದ ಬೋನ್ಗೆ ಚಿರತೆ ಬಿದ್ದಿದ್ದು ಅಧಿಕಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಹಳ್ಳಿಗಾಡಿನ ಪ್ರದೇಶದಲ್ಲಿ, ಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ವಿಶ್ವವಿಖ್ಯಾತ ಎಂಬ ಖ್ಯಾತಿಗೆ ಒಳಗಾಗಿರುವ ಕೆಆರ್ಎಸ್ನ ಬೃಂದಾವನದಲ್ಲೇ ಸುತ್ತಾಡುತ್ತಿರುವುದು ಸ್ಥಳೀಯರಲ್ಲಷ್ಟೇ ಅಲ್ಲದೆ, ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಲ್ಲೂ ಆತಂಕವನ್ನುಂಟು ಮಾಡಿತ್ತು. ಹೀಗಾಗಿಯೇ ಇಲ್ಲಿನ ಸಿಬ್ಬಂದಿಗಳು ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿ ಡ್ಯಾಂನಲ್ಲಿ ಬೋನ್ ಇರಿಸಿದ್ದರು. ಈಗ ಚಿರತೆ ಬೋನಿಗೆ ಬಿದ್ದಿದೆ ಎಂದು ನೆಮ್ಮದಿಯಾಗಿರುವ ಹಾಗಿಲ್ಲ. ಏಕೆಂದರೆ ಡ್ಯಾಂನಲ್ಲಿ ಕಾಣಿಸಿಕೊಂಡಿದ್ದು, ಒಂದಲ್ಲ ಎರಡು ಚಿರತೆಗಳು ಹೀಗಾಗಿಯೇ ಡ್ಯಾಂ ಉತ್ತರ ಗೇಟ್ ಬಳಿ ಹಾಗೂ ದಕ್ಷಿಣದ ಗೇಟ್ ಬಳಿಯಲ್ಲಿ 2 ಬೋನ್ಗಳನ್ನ ಇರಿಸಲಾಗಿತ್ತು.
ಸದ್ಯ ಉತ್ತರ ಗೇಟ್ ಬಳಿ ಇರಿಸಲಾಗಿದ್ದ ಬೋನ್ಗೆ ಚಿರತೆ ಬಿದ್ದಿದ್ದು, ಅಧಿಕಾರಿಗಳು ಸ್ವಲ್ಪಮಟ್ಟಿನಲ್ಲಿ ನಿರಾಳರಾಗಿದ್ದಾರೆ. ಆದರೆ, ಮತ್ತೊಂದು ಚಿರತೆ ಇದ್ದು ಅದರ ಚಲನವಲನಗಳ ಬಗೆಗೆ ನಿಗಾ ಇರಿಸಲಾಗಿದೆ.
ವಿಶ್ವಖ್ಯಾತಿಯನ್ನ ಪಡೆದಿರುವ ಕೆಆರ್ಎಸ್ನ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಇದೀಗಾ ಒಂದು ಚಿರತೆ ಬೋನಿಗೆ ಬಿತ್ತು ಎನ್ನುತ್ತಿರುವಾಗಲೇ ಇನ್ನೊಂದು ಚಿರತೆ ಇರಬಹುದು ಎಂಬುದು ಅಧಿಕಾರಿಗಳ ನೆಮ್ಮದಿ ಕೆಡಿಸಿದ್ದು, ಆ ಚಿರತೆಯ ಸೆರೆಗಾಗಿ ಎಲ್ಲಾ ರೀತಿಯ ಪ್ರಯತ್ನವನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ.
ಇದನ್ನೂ ಓದಿ: Leopard Attack: ತೋಟಕ್ಕೆ ಹೋದವರ ಮೇಲೆ ಚಿರತೆ ದಾಳಿ; ನಾಯಿಯೊಂದಿಗೆ ಲಾಕ್ ಆಗಿದ್ದ ಚಿರತೆಯೇ ಇರಬಹುದೆಂಬ ಅನುಮಾನ