AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಇವರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಲು ಅನುಮತಿ ಕೂರಿ ಟಿಜೆ ಅಬ್ರಾಹಂ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು
ಸಿಎಂ ಸಿದ್ದರಾಮಯ್ಯ
ಪ್ರಸನ್ನ ಗಾಂವ್ಕರ್​
| Edited By: |

Updated on:Aug 06, 2024 | 1:11 PM

Share

ಬೆಂಗಳೂರು, ಆಗಸ್ಟ್​​ 06: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಪ್ರಭಾವ ಬಳಸಿ ಜಮೀನು ಡಿನೋಟಿಫೈ (Land Denotify) ಮಾಡಿದ್ದಾರೆಂದು ಮೈಸೂರು (Mysore) ಮೂಲದ ಸ್ನೇಹಮಯಿ ಕೃಷ್ಣ ಎಂಬುವರು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ (Thawar Chand Gehlot)​ ಅವರಿಗೆ ದಾಖಲೆಗಳ ಸಮೇತ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ರಾಜ್ಯಪಲರಿಗೆ‌ ದೂರು ನೀಡಲಾಗಿದೆ.

ಮೈಸೂರು ತಾಲೂಕು ವರುಣ ಹೋಬಳಿಯ ಉತ್ತನಹಳ್ಳಿ ಗ್ರಾಮದಲ್ಲಿನ 1.39 ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನ ಇಲ್ಲದವರಿಗೆ ಮತ್ತು ಹಿಂದುಳಿದವರಿಗೆ ನೀಡಲು ಜಿಲ್ಲಾಡಳಿತ 1972ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿತ್ತು. ಬಳಿಕ ಜಮೀನಿನ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ಹಂಚಲಾಗಿತ್ತು. ಆದರೆ, ಸದರಿ ಜಮೀನಿನಲ್ಲಿ ಮೂಲಭೂತ ಸೌಕರ್ಯ ಇಲ್ಲದ ಕಾರಣ ಫಲಾನುಭವಿಗಳು ಮನೆ ನಿರ್ಮಾಣ ಮಾಡಿರಲಿಲ್ಲ. ಈ ಜಮೀನು ಖಾಲಿ ಬಿದ್ದಿತ್ತು.

30 ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದಿನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಈ 1.39 ಎಕರೆ ಜಮೀನನ್ನು ಮಾರಪ್ಪ ಎಂಬ ಹೆಸರಿನ ವ್ಯಕ್ತಿಗೆ ಡಿನೋಟಿಫೈ ಮಾಡುವಂತೆ ಕೋರುತ್ತಾರೆ. ಆದರೆ, ಮಾರಪ್ಪ ಮತ್ತು ಈ ಜಮೀನಿಗೆ ಯಾವುದೇ ಸಂಬಂಧವಿರುದಿಲ್ಲ. ಮಾರಪ್ಪನ ತಂದೆ ಹೆಸರಿನಲ್ಲಿ ಬೇರೊಂದು ಜಾಗದಲ್ಲಿ ಜಮೀನು ಇದೆ.

ಇದನ್ನೂ ಓದಿ: ಶಾಸಕರನ್ನೆಲ್ಲ ತೋಳಗಳಂತೆ ಹಣ ಕೀಳಲು  ಬಿಟ್ಟಿದ್ದಾರೆ, ಆಯಕಟ್ಟಿನ ಪೋಸ್ಟಿಂಗ್​ಗೆ ಕೊಡಬೇಕು ಕೋಟಿ: ಭಾಸ್ಕರ್ ರಾವ್ ಆರೋಪ

ಸಿದ್ದರಾಮಯ್ಯ ಪತ್ರ ಆಧರಿಸಿ ಜಿಲ್ಲಾಡಳಿತ 14 ತಿಂಗಳ ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಪ್ಪ ಎಂಬುವರ ಹೆಸರಿಗೆ 1.39 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೂಲ ಜಮೀನಿನ ಮಾಲೀಕರು ಮರಪ್ಪ ಅಲ್ಲ, ಆದರೂ ಅವರ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ. ಈ ವಿಚಾರ ತಿಳಿದ ಫಲಾನುಭವಿಗಳು 2011ರಲ್ಲಿ ಅಂದಿನ ಜಿಲ್ಲದಾಧಿಕಾರಿಗಳಿಗೆ ಪತ್ರ ಬರೆದು, ನಮ್ಮ ಜಮೀನು ನಮಗೆ ನೀಡುವಂತೆ ಮನವಿ ಮಾಡುತ್ತಾರೆ. ಆರೋಪದ ದಾಖಲೆಗಳನ್ನು ಮುಂದಿಟ್ಟು ಸ್ನೇಹಮಯಿ ಕೃಷ್ಣ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಕ್ರಮ ಡಿನೋಟಿಫೈ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯಪಾಲರು ಡೆಲ್ಲಿ ಏಜೆಂಟ್ ಪ್ರತಿನಿಧಿಯಾಗಿದ್ದಾರೆ: ಕೃಷ್ಣಭೈರೇಗೌಡ

ರಾಜ್ಯಪಾಲರು ದೆಹಲಿ ಏಜೆಂಟ್​ ಪ್ರತಿನಿಧಿಯಾಗಿದ್ದಾರೆ. ಸುಪ್ರೀಂ ಕೋರ್ಟ್​​ನಿಂದ ಛೀಮಾರಿ ಹಾಕಿಸಿಕೊಂಡ ಅಬ್ರಾಹಂನಿಂದ ದೂರು ಪಡೆಯುತ್ತಾರೆ. ಅಬ್ರಾಹಂನಿಂದ ದೂರು ಪಡೆದು ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟೀಸ್ ಕೊಡುತ್ತೀರಿ. ಆದರೆ, ಜನಾರ್ಧನ ರೆಡ್ಡಿ ವಿರುದ್ಧ ಲೋಕಾಯುಕ್ತ ನಿಮಗೆ ದೂರು ನೀಡಿದೆ. ಆದರೂ ಯಾಕೆ ಜನಾರ್ಧನರೆಡ್ಡಿ ಅವರಿಗೆ ಶೋಕಾಸ್​ ನೋಟಿಸ್​​ ಕೊಡಲಿಲ್ಲ? ತಾಯಿ, ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿ ಶಶಿಕಲಾ ಜೊಲ್ಲೆ ಕಮಿಷನ್ ಹೊಡೆದಿದ್ದಾರೆ. ನೀರಾಣಿ ಮೇಲೆಯೂ ಲೋಕಾಯುಕ್ತ ದೂರು ಕೊಟ್ಟಿದೆ. ಆದರೆ, ಇವರಿಗೆ ಶೋಕಾಸ್​​ ನೋಟಿಸ್​ ಕೊಟ್ಟಿಲ್ಲ. ಸಿದ್ದರಾಮಯ್ಯ ವಿರುದ್ದ ಕೊಟ್ಟ ದೂರಿಗೆ ಕೆಲವೇ ಗಂಟೆಯಲ್ಲಿ ನೋಟೀಸ್ ಕೊಡುತ್ತಾರೆ ಎಂದು ಸಚಿವ ಕೃಷ್ಣಭೈರೇಗೌಡ ರಾಜ್ಯಪಾಲರ ವಿರುದ್ಧ ವಾಗ್ದಾಳಿ ಮಾಡಿದರು.

ಕರ್ನಾಟಕದಲ್ಲಿ ನೀರಿನಿಂದ ಮೀನು ಹೊರಬಂದಂತೆ ಆಗಿದೆ. ಬಿಜೆಪಿ ಹೆಬ್ಬಾವಿನಂತೆ ಬಾಯಿ‌ ತೆರೆದು ಕುಳಿತಿದೆ. ಕೊನೆಗೆ ಜೆಡಿಎಸ್​ನ ಬಾಯಿಗೆ ಹಾಕಿಕೊಂಡು ಬಿಜೆಪಿ ತನ್ನ ಜೇಬಿಗೆ ಇಟ್ಟುಕೊಳ್ಳುತ್ತೆ. ಮುಂದೆ ಜೆಡಿಎಸ್, ಕುಮಾರಣ್ಣ ಬಿಜೆಪಿ ಹೇಳಿದಂತೆ ಕೇಳಿಕೊಂಡು ಇರಬೇಕಾಗುತ್ತೆ. ಧ್ವೇಷ ಸಾಧನೆ ಬಿಟ್ಟು ರಾಜ್ಯಕ್ಕೆ ಅಭಿವೃದ್ದಿ ಮಾಡಿ. ಇಲ್ಲ ಇದೇ ರೀತಿ ಪಿತೂರಿ ಮುಂದುವರೆಸಿದರೆ ಕನ್ನಡಿಗರು ನಿಮ್ಮ ಬೀದಿಗಿಳಿಯುತ್ತಾರೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:03 pm, Tue, 6 August 24