ಮಂಡ್ಯ: ರಾತ್ರಿ ಗಸ್ತು ಕರ್ತವ್ಯಕ್ಕೆ ನಿಯೋಜನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಎಸ್ಐ ಮೇಲೆ ಎಎಸ್ಐ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಸರಾಳು ಪೊಲೀಸ್ ಠಾಣೆಯ ಮಹಿಳಾ ಎಸ್ಐ ಜಯಗೌರಿ ಮೇಲೆ ಅದೇ ಠಾಣೆಯ ಎಎಸ್ಐ ಶಿವನಂಜೇಗೌಡ ಹಲ್ಲೆ ನಡೆಸಿದ್ದಾರೆ. ನ. 9ರಂದು ಎಎಸ್ಐ ಶಿವನಂಜೇಗೌಡ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಅಂದು ಸಂಜೆ 4 ಗಂಟೆ ಸುಮಾರಿಗೆ ಮುಖ್ಯಮಂತ್ರಿಗಳ ಬಂದೋಬಸ್ತ್ ಕರ್ತವ್ಯ ಮುಗಿಸಿ ಎಸ್ಐ ಜಯಗೌರಿ ಠಾಣೆಗೆ ವಾಪಸಾಗಿದ್ದರು. ಬಳಿಕ ಅಂದು ರಾತ್ರಿ ಗಸ್ತು ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜನೆ ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ.
ಕತ್ತಿನ ಪಟ್ಟಿ ಎಳೆದಾಡಿ ಹಲ್ಲೆ: ಸಿಬ್ಬಂದಿ ಇಲ್ಲದ ಕಾರಣ ಈಗ ಮನೆಗೆ ಹೋಗಿ ವಿಶ್ರಾಂತಿ ಪಡೆದು ರಾತ್ರಿ ಗಸ್ತಿಗೆ ಬನ್ನಿ ಎಂದು ಎಎಸ್ಐ ಶಿವನಂಜೇಗೌಡಗೆ ಎಸ್ಐ ಜಯಗೌರಿ ಸೂಚಿಸಿದ್ದಾರೆ. ಈ ವೇಳೆ ಬೆಳಗ್ಗೆಯಿಂದ ಕರ್ತವ್ಯ ನಿರ್ವಹಿಸಿದ್ದೀನಿ, ರಾತ್ರಿ ಗಸ್ತಿಗೆ ನಾನ್ಯಾಕೆ ಹೋಗಲಿ ಎಂದು ಎಎಸ್ಐ ಜಗಳವಾಡಿದ್ದಾರೆ. ನಂತರ ರೈಟರ್ ಕೊಠಡಿಯಲ್ಲಿ ಎಸ್ಐ ಜಯಗೌರಿ ಅವರ ಯೂನಿಫಾರ್ಮ್ ಕತ್ತಿನ ಪಟ್ಟಿ ಎಳೆದಾಡಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಐಪಿಸಿ ಸೆಕ್ಷನ್ 323, 354, 504, 506 ಅಡಿ ಎಫ್ಐಆರ್ ದಾಖಲಾಗಿದೆ.