ಅತುಲ್ ಸಂತ್ರಸ್ತ ಅಲ್ಲ, ನಾನೇ ನಿಜವಾದ ಸಂತ್ರಸ್ತೆ: ಪೊಲೀಸರ ಮುಂದೆ ಸ್ಫೋಟಕ ಅಂಶ ಬಿಚ್ಚಿಟ್ಟ ಪತ್ನಿ

Techie Atul subhash death case: ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಉತ್ತರ ಪ್ರದೇಶ ಮೂಲದ ಅತುಲ್​ ಸುಭಾಷ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ಅತುಲ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಮೃತ ಅತುಲ್ ಪತ್ನಿ ನಿಖಿತಾ ಅವರಿಂದ ಪೊಲೀಸರು ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಪೊಲೀಸರ ಮುಂದೆ ಅತುಲ್ ಪತ್ನಿ ನಿಖಿತಾ ಕೆಲ ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

ಅತುಲ್ ಸಂತ್ರಸ್ತ ಅಲ್ಲ, ನಾನೇ ನಿಜವಾದ ಸಂತ್ರಸ್ತೆ: ಪೊಲೀಸರ ಮುಂದೆ ಸ್ಫೋಟಕ ಅಂಶ ಬಿಚ್ಚಿಟ್ಟ ಪತ್ನಿ
Atul Subhash Wife Nikita
Updated By: ರಮೇಶ್ ಬಿ. ಜವಳಗೇರಾ

Updated on: Dec 18, 2024 | 2:50 PM

ಬೆಂಗಳೂರು, (ಡಿಸೆಂಬರ್ 18): ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದೇಶಾದ್ಯಂತ ಭಾರೀ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತುಲ್​ ಪತ್ನಿ ನಿಖಿತಾ ಸಿಂಘಾನಿಯಾ ಅವರನ್ನು ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಕೆಲ ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಘಟನೆಯಲ್ಲಿ ಅತುಲ್ ಸಂತ್ರಸ್ತ ಅಲ್ಲ. ನಾನೇ ನಿಜವಾದ ಸಂತ್ರಸ್ತೆ ಎಂದು ನಿಖಿತಾ ಪೊಲೀಸರ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ನನ್ನ ಪತಿ ಅತುಲ್ ಸಂತ್ರಸ್ತ ಅಲ್ಲ. ನಿಜವಾದ ಸಂತ್ರಸ್ತೆ ನಾನು. ಅಡುಗೆ ಚೆನ್ನಾಗಿ ಮಾಡಿಲ್ಲ ಎಂದು ಕಿರುಕುಳ ನೀಡುತ್ತಿದ್ದ.ನಾನ್ ವೆಜ್ ಮಾಡದಿದ್ದರೂ ಇವರು ಮಾಡಿ ಎಂದು ಒತ್ತಾಯಿಸುತ್ತಿದ್ದರು. ಇಷ್ಟೆಲ್ಲಾ ಅದರೂ ನಾನು ಮನೆ ಬಿಟ್ಟು ಹೋಗಿರಲಿಲ್ಲ. ಮನೆ ಬಿಟ್ಟು ಹೋಗುವಂತೆ ಮಾಡಿದ್ದು ಸಹ ಅತುಲ್ ಹೊರತು ನಾನಾಗಿಯೇ ಹೋಗಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅತುಲ್​ ಸುಭಾಷ್​ ಆತ್ಮಹತ್ಯೆ: ಪೊಲೀಸರು ಸೃಷ್ಟಿಸಿದ್ದ ವ್ಯೂಹಕ್ಕೆ ಆರೋಪಿಗಳು ಬಿದ್ದಿದ್ದು ಹೀಗೆ

ನಾನು ಮತ್ತು ಅತುಲ್ ಬೇರೆ ಬೇರೆ ಕಡೆ ವಾಸ ಮಾಡುತ್ತಿದ್ದೇವೆ . ಆತ ಮಾಡಿರುವ ಆರೋಪ ಸುಳ್ಳು, ಎಲ್ಲವನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ. 2020 ರಿಂದಲೂ ನಾವು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ. ಆತನ ಸಾವಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನನ್ನ ಯಾಕೆ ನೀವು ಬಂಧಿಸಿದ್ದೀರಿ ಎಂದು ಗೊತ್ತಿಲ್ಲ, ಕಾನೂನಾತ್ಮಕವಾಗಿ ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ನಿಖಿತಾ, ಪೊಲೀಸರು ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಭಾರೀ ಸುದ್ದಿಯಾಗುತ್ತಿದ್ದಂತೆಯೇ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಮನೆ ಬಿಟ್ಟು ನಾಪತ್ತೆಯಾಗಿದ್ದರು. ಆದರೂ ಸಹ ಮಾರತ್ತಹಳ್ಳಿ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿ, ಆರೋಪಿಗಳ ಮೊಬೈಲ್ ಫೋನ್ ಕಾಲ್‌ಗಳು ಮತ್ತು ಲೊಕೇಶನ್‌ಗಳನ್ನು ಬಳಸಿಕೊಂಡು ಅವರನ್ನು ಪತ್ತೆ ಮಾಡಿ ಹರಿಯಾಣದ ಗುರುಗ್ರಾಮ್ ಮತ್ತು ಪ್ರಯಾಗ್‌ರಾಜ್‌ನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ತನಿಖೆ ಚುರುಕುಗೊಂಡಿದ್ದು, ಪೊಲೀಸರು ಎಲ್ಲಾ ಆಯಾಮಾಗಳಲ್ಲಿ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ