ಬೆಂಗಳೂರು: ಲಾಕ್ಡೌನ್ ತಂದೊಡ್ಡಿದ್ದ ಸಂಕಷ್ಟಗಳಿಂದ ಬಳಲಿದ್ದ ರಾಜ್ಯದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಈ ಹಿಂದೆ ಪರಿಹಾರ ಘೋಷಿಸಿತ್ತು. ಮೇ 6ರಂದು ಘೋಷಣೆ ಮಾಡಿದ್ದ ಸಿಎಂ ಯಡಿಯೂರಪ್ಪ ಪ್ರತಿ ಚಾಲಕನಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ, ಈವರೆಗೂ ಕೇವಲ1,20,000ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮಾತ್ರ ಪರಿಹಾರ ನೀಡಿರುವುದಾಗಿ ಸಾರಿಗೆ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಅಂದಾಜು 7,75,000 ಆಟೋ ಹಾಗೂ ಟ್ಯಾಕ್ಸಿ ಚಾಲಕರು ಇದ್ದಾರೆ ಎಂದು ಕಳೆದ ಬಾರಿ ಘೋಷಣೆ ವೇಳೆ ಮುಖ್ಯಮಂತ್ರಿ ಹೇಳಿದ್ದರು. ಹೀಗಾಗಿ, ಪರಿಹಾರಕ್ಕಾಗಿ ಚಾಲಕರು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪೈಕಿ ನಾನಾ ಕಾರಣವೊಡ್ಡಿ ಭಾಗಶಃ ಅರ್ಜಿಗಳನ್ನ ಸಾರಿಗೆ ಇಲಾಖೆ ರದ್ದು ಮಾಡಿದೆ.
ಕೊನೆಗೆ 2,44,000 ಆಟೋ ಹಾಗೂ ಟ್ಯಾಕ್ಸಿ ಚಾಲಕರನ್ನ ಮಾತ್ರ ಪರಿಹಾರ ಪಡೆಯಲು ಪರಿಗಣಿಸಿದೆ. ಈ ಪೈಕಿ 1,20,000 ಚಾಲಕರಿಗೆ 5 ಸಾವಿರ ರೂಪಾಯಿ ಪರಿಹಾರ ನೀಡಿರುವ ಬಗ್ಗೆ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಉಳಿದವರಿಗೆ ಪರಿಹಾರ ನೀಡಲು ಹಣ ಬಿಡುಗಡೆ ಮಾಡುವಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ.