ಬಾಬುಸಾಬ್‌ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣ: ಕರ್ತವ್ಯಲೋಪ ಹಿನ್ನೆಲೆ ಬಿಬಿಎಂಪಿ ಅಧಿಕಾರಿ ಅಮಾನತು
ಬೆಂಗಳೂರಿನ ಹೆಣ್ಣೂರು ಬಳಿ ಇರುವ ಬಾಬುಸಾಬ್‌ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಘೋರ ದುರಂತ ಸಂಭವಿಸಿದೆ. ಸಾವಿನ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ನಿಗದಿತ ಅವಧಿಯೊಳಗೆ ಕ್ರಮಕೈಗೊಳ್ಳದ ಹಿನ್ನಲೆ ಬಿಬಿಎಂಪಿ ಹೊರಮಾವು ಉಪವಿಭಾಗದ ಎಇಇ ಕೆ.ವಿನಯ್ ಅಮಾನತುಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ.
ಬೆಂಗಳೂರು, ಅಕ್ಟೋಬರ್ 23: ನಗರದ ಹೆಣ್ಣೂರು ಬಳಿ ಇರುವ ಬಾಬುಸಾಬ್‌ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಘೋರ ದುರಂತ ಸಂಭವಿಸಿದೆ. ಸಾವಿನ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ಹೊರಮಾವು ಉಪವಿಭಾಗದ ಎಇಇ ಕೆ.ವಿನಯ್ ಅಮಾನತುಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ.
ಕಟ್ಟಡ ತೆರವಿಗೆ ಸ್ಥಿರೀಕರಣ ಆದೇಶ ಹೊರಡಿಸಿದ್ದರೂ ಎಇಇ ಕೆ.ವಿನಯ್ ನಿಗದಿತ ಅವಧಿಯೊಳಗೆ ಕ್ರಮಕೈಗೊಂಡಿಲ್ಲ. ಮೇಲ್ನೋಟಕ್ಕೆ 8 ಕಾರ್ಮಿಕರ ಸಾವಿಗೆ ಕಾರಣಕರ್ತರಾಗಿದ್ದಾರೆ. ಹೀಗಾಗಿ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಕಟ್ಟಡ ಮಾಲೀಕಗೆ ಬಿಬಿಎಂಪಿ ಅಧಿಕಾರಿಗಳಿಂದ ಮೂರು ಬಾರಿ ನೋಟಿಸ್
ಕಟ್ಟಡ ಮಾಲೀಕ ಮುನಿರಾಜ್ ರೆಡ್ಡಿಗೆ ಬಿಬಿಎಂಪಿ ಅಧಿಕಾರಿಗಳು ಮೂರು ಬಾರಿ ನೋಟಿಸ್ ನೀಡಿದ್ದರು. ಏಪ್ರಿಲ್ನಲ್ಲೇ ಕಟ್ಟಡ ನಿರ್ಮಾಣ ಬಗ್ಗೆ ಬಿಬಿಎಂಪಿ ನೋಟಿಸ್ ನೀಡಿದ್ರೂ ಮಾಲೀಕ ಯಾವುದೇ ಉತ್ತರ ನೀಡಿರಲಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಟ್ಟಡ ಕುಸಿತ: ಆರಕ್ಕೇರಿದ ಸಾವಿನ ಸಂಖ್ಯೆ, ಮಾಲೀಕ ಅರೆಸ್ಟ್
40X60 ಅಳತೆಯಲ್ಲಿ ನಕ್ಷೆ ಮುಂಜೂರಾತಿ ಪಡೆಯದೆ ಮುನಿರಾಜ್ ರೆಡ್ಡಿ ಕಟ್ಟಡ ನಿರ್ಮಿಸುತ್ತಿದ್ದ. 3 ಅಂತಸ್ತಿನ ಕಟ್ಟಡ ಕಟ್ಟುವಾಗಲೇ ಪಾಲಿಕೆ ದಾಖಲೆ ಕೇಳಿತ್ತು. ಏಪ್ರಿಲ್ನಲ್ಲಿ 1, ಸೆಪ್ಟೆಂಬರ್ನಲ್ಲಿ 2 ನೋಟಿಸ್ ನೀಡಲಾಗಿತ್ತು. ಯಾವುದೇ ನೋಟಿಸ್ಗೂ ಮಾಲೀಕ ಉತ್ತರವನ್ನೇ ನೀಡಿರಲಿಲ್ಲ. ಹೀಗಾಗಿ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.
ಕಟ್ಟಡ ನಿರ್ಮಾಣಕ್ಕೆ ಇರುವ ನಿಯಮಗಳೇನು?
- 2020ರ ಕಟ್ಟಡ ನಿರ್ಮಾಣ ಕಾಯ್ದೆಯ ನಿಯಮ ಪಾಲಿಸಬೇಕು.
- ಪಾಲಿಕೆ ವಲಯಗಳಲ್ಲಿ 3 ಅಂತಸ್ತಿನ ಕಟ್ಟಡಕ್ಕೆ ಮಾತ್ರ ಅನುಮತಿಗೆ ಅವಕಾಶ.
- 3ಕ್ಕಿಂತ ಹೆಚ್ಚು ಅಂತಸ್ತಿನ ಕಟ್ಟಡ ಇದ್ದರೆ ಆಯುಕ್ತರ ಗಮನಕ್ಕೆ ತರಬೇಕು.
- ಬಹು ಅಂತಸ್ತಿನ ಕಟ್ಟಡಕ್ಕೆ ಅವಕಾಶ ಪಾಲಿಕೆ ಆಯುಕ್ತರ ನಿರ್ಧಾರ.
- ರಸ್ತೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಡಬೇಕು.
- ಕಟ್ಟಡ ನಿರ್ಮಾಣ ವೇಳೆ ಸೆಟ್ ಬ್ಯಾಕ್ ಬಿಡಬೇಕು.
- ಪಿಲ್ಲರ್ಗಳ ಗಾತ್ರ, ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಗುಣಮಟ್ಟದ ಪರಿಶೀಲನೆ ವರದಿ ಇರಬೇಕು.
- ಬಹು ಅಂತಸ್ತಿನ ಕಟ್ಟಡ ನಿರ್ಮಾಣ ವೇಳೆ ಸುರಕ್ಷತ ಕ್ರಮ ಅಳವಡಿಸಿರಬೇಕು.
ವರದಿ: ಪ್ರದೀಪ್ ಕ್ರೈಂ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.