ಬಾಗಲಕೋಟೆ: ಶಿಕ್ಷಕನ ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಹೆಸರನ್ನು ನೋಡೋದೆ ಚೆಂದಾ!

‘ರೋಣಿ ಮಳೆಗೆ ಬಿತ್ತಿದರೆ ಓಣೆಲ್ಲ ಕಾಳು' ಎಂಬ ಜನಪದರ ಮಾತು ಜನಜನಿತವಾಗಿದೆ. ಆದರೆ ಈ ರೋಹಿಣಿ ಮಳೆಗೂ ಮೊದಲಿನ ಕೃತಿಕಾ ಮಳೆಯ ಈ ರೀತಿಯ ಫಸಲು, ಮತ್ತೊಂದು ಹೊಸ ನಾಣ್ನುಡಿ ಹುಟ್ಟು ಹಾಕಿದೆ ಎಂದು ಸ್ಥಳೀಯ ರೈತ ಯಲ್ಲಪ್ಪ, ಶಿಕ್ಷಕರ ಕೃಷಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ: ಶಿಕ್ಷಕನ ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಹೆಸರನ್ನು ನೋಡೋದೆ ಚೆಂದಾ!
ಹೆಸರು ಕಾಳು ಬೆಳೆ

ಬಾಗಲಕೋಟೆ: ಸಾಮಾನ್ಯವಾಗಿ ಹೆಸರು ಬೆಳೆ ಎಷ್ಟು ಎತ್ತರ ಬೆಳೆಯುತ್ತದೆ ಅಬ್ಬಬ್ಬಾ ಅಂದರೆ ಒಂದರಿಂದ ಮೂರು ಗೇಣು ಎತ್ತರ ಬೆಳೆಯಬಹುದು. ಆದರೆ ಬಾಗಲಕೋಟೆಯ ರೈತರೊಬ್ಬರ ಹೊಲದಲ್ಲಿ ಹೆಸರು ಬೆಳೆ ಮೊಣಕಾಲು ಎತ್ತರಕ್ಕೆ ಬೆಳೆದು ರೈತಾಪಿ ವರ್ಗದ ಆಶ್ಚರ್ಯಕ್ಕೆ ಕಾರಣವಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಮಟ್ಟಿ ಗ್ರಾಮದ ಜಮೀನೊಂದರಲ್ಲಿನ ತಿಂಗಳು ಹೆಸರಿನ ಬೆಳೆ (Green Gram) ಸಮೃದ್ಧ ಫಸಲಿನಿಂದಾಗಿ ಎಲ್ಲರ ಕಂಗಳನ್ನು ಸೆಳೆಯುತ್ತಿದೆ. ಹುನಗುಂದ-ಬಾಗಲಕೋಟೆ ರಾಜ್ಯ ಹೆದ್ದಾರಿ 50ಕ್ಕೆ ಹೊಂದಿಕೊಂಡಿರುವ ಶಿಕ್ಷಕ ಶರಣಪ್ಪ ತೋಳಮಟ್ಟಿಯವರ ನಾಲ್ಕು ಎಕರೆ ಜಮೀನಿನಲ್ಲಿ ಈ ಅಪರೂಪದ ಹೆಸರು ಬೆಳೆಯನ್ನು ಕಾಣಬಹುದಾಗಿದೆ. ಶಿಕ್ಷಕ ಶರಣಪ್ಪ ಮೂಲತಃ ಕೃಷಿಕ ಕುಟುಂಬದವರಾಗಿದ್ದು, ತಮ್ಮ ಬಿಡುವಿನ ಅವಧಿಯಲ್ಲಿ ಕೃಷಿ ಕೆಲಸದಲ್ಲಿ ನಿರತರಾಗುತ್ತಾರೆ.

ಕೃತಿಕಾ ಮಳೆಗೆ ಬಿತ್ತಿದರೆ ಉತ್ತಮ ಫಸಲು ಬರುತ್ತಾ?
ಶಿಕ್ಷಕ ಶರಣಪ್ಪ ಈ ರೀತಿಯ ಸಮೃದ್ಧ ಹೆಸರು ಬೆಳೆದಿದ್ದು ಇದೆ ಮೊದಲು. ಶರಣಪ್ಪ ಅವರು ಚಿಕ್ಕವರಿದ್ದಾಗ ಅವರ ತಂದೆ ಕೃತಿಕಾ ಮಳೆಯ ವೇಳೆ ಬಿತ್ತನೆ ಮಾಡುವ ಅವಕಾಶ ಸಿಕ್ಕರೆ ಬಿತ್ತಿ ನೋಡು. ಅಪರೂಪದ ಬೆಳೆ ಜತೆ ಅಷ್ಟೇ ಸಮೃದ್ಧ ಬೆಳೆ ನಿನ್ನದಾಗುತ್ತದೆ ಎಂದು ಹೇಳಿದ್ದರಂತೆ. ಅವರ ಮಾತಿನಂತೆ ಈ ವರ್ಷ ಕೃತಿಕಾ ಮಳೆ ಚೆನ್ನಾಗಿ ಆದ ಪರಿಣಾಮ ಹೊಲದಲ್ಲಿ ಹಸಿರು ಬೆಳೆ ಮೊಣಕಾಲುದ್ದ ಬೆಳೆದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಕೃತಿಕಾ ಮಳೆಯ ತತಿಗೆ ಈ ಬಿತ್ತನೆ ಮಾಡಿದರೆ ಉತ್ತಮ ಎಂಬ ಹಿರಿಯರ ಮಾತು ಸತ್ಯ ಎಂದು ಸಾರುವುದಕ್ಕೋಸ್ಕರವೇನೋ ಎನ್ನುವಂತೆ ಇಷ್ಟೊಂದು ಪ್ರಮಾಣದ ಬೆಳೆ ಬೆಳೆದಿದೆ ಎಂದು ಶಿಕ್ಷಕ ಶರಣಪ್ಪ ತೋಳಮಟ್ಟಿ ತಿಳಿಸಿದ್ದಾರೆ.

ಸಾವಯವ ಗೊಬ್ಬರ ಮಾತ್ರ ಬಳಕೆ
ಶರಣಪ್ಪ ಈ ಹಿಂದೆ ಎರಡು ಬಾರಿ ಬ್ಯಾಡಗಿ ಮೆಣಸಿನಕಾಯಿ ಬೆಳೆಗಳನ್ನು ಬೆಳೆದಿದ್ದರು. ಆದರೆ ಈ ಬಾರಿ ಅದನ್ನು ಬದಲಿಸಿ ಹೆಸರು ಬಿತ್ತಿದ್ದಾರೆ. ಮೆಣಸಿನಕಾಯಿ ಒಣಗಿದ ಗಿಡಗಳನ್ನು ಪುಡಿಯಾಗುವಂತೆ ಕತ್ತರಿಸಿ ಮಣ್ಣಿನಲ್ಲಿ ಬೆರೆಸಿ, ಮೇಲೆ ಕೋಳಿ ಗೊಬ್ಬರ ಹಾಕಿದ ಪರಿಣಾಮ ಭೂಮಿ ಹೆಚ್ಚಿನ ಫಲವತ್ತತೆ ಪಡೆದಿದೆ. ಹೀಗಾಗಿ ಈ ರೀತಿಯ ಮಾದರಿ ಬೆಳೆ ಬೆಳೆಯಲು ಸಹಾಯಕವಾಗಿದೆ. ಮೊಣಕಾಲಿನ ಮೇಲೆ ಎತ್ತರವಾಗಿ, ಅಷ್ಟೇ ವಿಶಾಲವಾಗಿ ಹರಡಿದ ಹೆಸರು ಬೆಳೆಯ ಎಲೆಗಳೂ ಸಹ ಅಂಗೈ ಅಗಲ ಮೀರುತ್ತಿದ್ದು ಸುತ್ತಲಿನ ರೈತರ ಆಕರ್ಷಣೆಯ ಕೇಂದ್ರವಾಗಿದೆ. ಈ ಸುದ್ದಿ ಎಲ್ಲೆಡೆ ಹರಡುತ್ತಿರುವುದರಿಂದ ದಿನೇದಿನೇ ಹೊಲಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ.

grame green

ಶಿಕ್ಷಕನ ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಹೆಸರು ಕಾಳು ಬೆಳೆ

‘ರೋಣಿ ಮಳೆಗೆ ಬಿತ್ತಿದರೆ ಓಣೆಲ್ಲ ಕಾಳು’ ಎಂಬ ಜನಪದರ ಮಾತು ಜನಜನಿತವಾಗಿದೆ. ಆದರೆ ಈ ರೋಹಿಣಿ ಮಳೆಗೂ ಮೊದಲಿನ ಕೃತಿಕಾ ಮಳೆಯ ಈ ರೀತಿಯ ಫಸಲು, ಮತ್ತೊಂದು ಹೊಸ ನಾಣ್ನುಡಿ ಹುಟ್ಟು ಹಾಕಿದೆ ಎಂದು ಸ್ಥಳೀಯ ರೈತ ಯಲ್ಲಪ್ಪ, ಶಿಕ್ಷಕರ ಕೃಷಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ: ರವಿ ಮೂಕಿ

ಇದನ್ನೂ ಓದಿ:
ಕೋಲಾರ ಜಿಲ್ಲೆಯಲ್ಲಿ ಶುರುವಾಗಿದೆ ನೇರಳೆ ಕ್ರಾಂತಿ, ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದ ರೈತರ ಮುಖದಲ್ಲಿ ಮಂದಹಾಸ

ಹಡಿಲು ಭೂಮಿಯಲ್ಲಿ ಚೆಂಡು ಹೂ ಬೆಳೆದು ಭರಪೂರ ಫಸಲು ಪಡೆದ ಕಾರ್ಕಳದ ರೈತ; ಲಾಕ್​ಡೌನ್​ನಿಂದ ಕಂಗಾಲು