SSLC ಪರೀಕ್ಷೆ ವಂಚಿತ ವಿದ್ಯಾರ್ಥಿನಿ ಮನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ; ಆಗಸ್ಟ್ ತಿಂಗಳ ಪರೀಕ್ಷೆಗೆ ತಯಾರಾಗಲು ಕಿವಿಮಾತು
ಆಗಸ್ಟ್ನಲ್ಲಿ ಪರೀಕ್ಷೆ ನೀಡುವ ಭರವಸೆ ವ್ಯಕ್ತಪಡಿಸಿರುವ ಸುರೇಶ್ ಕುಮಾರ್ ಆಕೆಗೆ ಇನ್ನೆಂದೂ ಆತ್ಮಹತ್ಯೆಯ ಯೋಚನೆ ಮಾಡಬಾರದೆಂದು ತಿಳಿಹೇಳಿದ್ದು, ಆಕೆಯಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರು: ಶುಲ್ಕ ಪಾವತಿಸದ ಕಾರಣಕ್ಕಾಗಿ ಎಸ್ಎಸ್ಎಲ್ಸಿ ಪರೀಕ್ಷೆಯಿಂದ (SSLC Exam 2021) ವಂಚಿತಳಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ (Student) ಮನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ (S Suresh Kumar) ಭೇಟಿ ನೀಡಿದ್ದಾರೆ. ಸದರಿ ಪರೀಕ್ಷೆಗೆ ಅವಕಾಶ ಸಿಗದೇ ಇರುವುದಕ್ಕೆ ಧೃತಿಗೆಡುವ ಅವಶ್ಯಕತೆ ಇಲ್ಲ. ಆಗಸ್ಟ್ ತಿಂಗಳಲ್ಲಿ ಮತ್ತೆ ಪರೀಕ್ಷೆ ನೀಡಲಾಗುವುದು, ಎಲ್ಲಾ ರೀತಿಯ ಅನುಕೂಲಗಳನ್ನೂ ಮಾಡಿಕೊಡಲಾಗುವುದು ಎಂದು ಧೈರ್ಯ ತುಂಬಿದ್ದಾರೆ.
ಕೊರಟಗೆರೆ ಮೂಲದ ಬಾಲಕಿ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯಾಗಿದ್ದು, ಕಳೆದ ವರ್ಷದ ಶಾಲಾ ಶುಲ್ಕ, ವಸತಿ ಮತ್ತು ಊಟದ ಶುಲ್ಕ ಬಾಕಿಯಿರುವ ಕಾರಣಕ್ಕೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. 9ನೇ ತರಗತಿಯಲ್ಲಿ ಶೇ.96 ಅಂಕ ಗಳಿಸಿರುವ ವಿದ್ಯಾರ್ಥಿನಿ ಈ ಬಾರಿ ಹಣವಿಲ್ಲದ ಕಾರಣಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳುವುದು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಅದೃಷ್ಟವಶಾತ್ ಪೋಷಕರು ತಕ್ಷಣವೇ ಗಮನಿಸಿದ ಪರಿಣಾಮ ಅವಘಡ ಸಂಭವಿಸಿಲ್ಲ.
ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇರವಾಗಿ ವಿದ್ಯಾರ್ಥಿನಿಯ ಮನೆಗೆ ಧಾವಿಸಿದ್ದಾರೆ. ಅಲ್ಲಿಗೆ ತೆರಳಿ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರೊಂದಿಗೆ ಮಾತನಾಡಿ, ಆಗಸ್ಟ್ನಲ್ಲಿ ನೀಡಲಾಗುವ ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ. ಈಗ ಪ್ರವೇಶಾತಿ ಸಿಕ್ಕಿಲ್ಲವೆಂದ ಮಾತ್ರಕ್ಕೆ ಆಗಸ್ಟ್ ತಿಂಗಳಲ್ಲಿ ನಡೆಸುವ ಪರೀಕ್ಷೆಗೆ ಯಾವುದೇ ತೊಂದರೆ ಆಗುವುದಿಲ್ಲ. ಆಗಲೂ ಹೊಸ ವಿದ್ಯಾರ್ಥಿಯಾಗಿಯೇ ಪರೀಕ್ಷೆ ಬರೆಯಬಹುದು. ಹೆದರುವ ಅವಶ್ಯಕತೆ ಇಲ್ಲ ಎಂದು ಮನವೊಲಿಸಿದ್ದಾರೆ.
ಆಗಸ್ಟ್ನಲ್ಲಿ ಪರೀಕ್ಷೆ ನೀಡುವ ಭರವಸೆ ವ್ಯಕ್ತಪಡಿಸಿರುವ ಸುರೇಶ್ ಕುಮಾರ್ ಆಕೆಗೆ ಇನ್ನೆಂದೂ ಆತ್ಮಹತ್ಯೆಯ ಯೋಚನೆ ಮಾಡಬಾರದೆಂದು ತಿಳಿಹೇಳಿದ್ದು, ಆಕೆಯಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳೀಯ ಶಿಕ್ಷಣಾಧಿಕಾರಿಗಳೊಂದಿಗೆ ವಿದ್ಯಾರ್ಥಿನಿ ನಿವಾಸಕ್ಕೆ ಭೇಟಿ ನೀಡಿರುವ ಅವರು ವಿದ್ಯಾರ್ಥಿನಿಗೆ ಹಾಗೂ ಆಕೆಯ ಪೋಷಕರಿಗೆ ಧೈರ್ಯ ತುಂಬುವ ಮಾತುಗಳನ್ನು ಹೇಳಿದ್ದಾರೆ.
ಈ ಸಮಸ್ಯೆ ಗಮನಕ್ಕೆ ಬಂದಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿನಿಗೆ ಬರುವ ಆಗಸ್ಟ್ನಲ್ಲಿ ಪರೀಕ್ಷೆ ತೆಗೆದುಕೊಳ್ಳಲು ತಿಳಿಸಿದ್ದರು. ಆದರೆ, ನೊಂದ ವಿದ್ಯಾರ್ಥಿನಿ ಪ್ರಸಕ್ತ ಸಾಲಿನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಅಲ್ಲದೇ ಕೊರೊನಾ ಸೋಂಕಿತ ಮಕ್ಕಳಿಗೂ ಎಕ್ಸಾಂ ಬರೆಯಲು ಅವಕಾಶ ನೀಡಿದ್ದೀರಾ, ಅವರಿಗೆ ಪ್ರತ್ಯೇಕ ಕೊಠಡಿ ಅಥವಾ ಕೊವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಿದ್ದೀರಾ, ಪರೀಕ್ಷೆ ಬರೆಯುವ ಉತ್ಸಾಹ ಇರುವ ನನಗೆ ಮಾತ್ರ ಅವಕಾಶ ಏಕಿಲ್ಲ ಎಂದು ಅಳಲು ತೋಡಿಕೊಂಡಿದ್ದರು.
ಇದನ್ನೂ ಓದಿ: ಶುಲ್ಕ ಸಮರಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಯಿಂದ ವಂಚಿತಳಾದ ಪ್ರತಿಭಾನ್ವಿತ ವಿದ್ಯಾರ್ಥಿನಿ