ಸಮಗ್ರ ಕೃಷಿ ಪದ್ಧತಿ: ಶಿಕ್ಷಣ ಸಂಸ್ಥೆಯಲ್ಲಿನ ಕೆಲಸ ಬಿಟ್ಟು ಕೃಷಿ ಕಡೆ ಮುಖ ಮಾಡಿದ ಬಾಗಲಕೋಟೆ ಯುವಕ
ಎಂಟು ಎಕರೆ ಜಮೀನಿನಲ್ಲಿ ಮೂರು ಎಕರೆ ಕಬ್ಬು, ಎರಡು ಎಕರೆ ಜವಾರಿ ಬಾಳೆ ಗಿಡಗಳನ್ನು ಬೆಳೆದಿದ್ದಾರೆ. ಇನ್ನು ವಿಶೇಷ ಎಂದರೆ ಒಂದು ಎಕರೆಯಲ್ಲಿ ಸುಗಂಧರಾಜ ಹೂ, ಪೇರಲೆ, ಶ್ರೀಗಂಧ ಬೆಳೆದು ಸಮಗ್ರ ಕೃಷಿಯಲ್ಲಿ ಯಶಸ್ವಿಯಾಗಿದ್ದು, 10ರಿಂದ12 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಬಾಗಲಕೋಟೆ: ಬಹುತೇಕ ಜನರು ಸ್ವಲ್ಪ ಓದಿದರೆ ಸಾಕು ಯಾವುದೋ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಒಂದು ಕೆಲಸ ಹುಡುಕಿ ನಗರಗಳತ್ತ, ಮುಖ ಮಾಡುತ್ತಾರೆ. ಆದರೆ ಕೆಲವರು ಮಾತ್ರ ಎಷ್ಟೇ ಕಲಿತರೂ ಕೃಷಿ ಕಡೆ ಸಾಕಷ್ಟು ಆಸಕ್ತಿ ಹೊಂದಿರುತ್ತಾರೆ. ಅದರಂತೆ ಇಲ್ಲೊಬ್ಬ ಯುವಕ ಪದವಿ ಓದಿ ಒಂದು ಸಂಸ್ಥೆಯಲ್ಲಿ ಕೆಲಸ ಪಡೆದರೂ ಕೃಷಿ ಕಡೆಗಿನ ತಮ್ಮ ಒಲವಿನಿಂದಾಗಿ ಹೊಲದಲ್ಲಿ ಸಾವಯವ ಕೃಷಿ ಮಾಡಿ ಅದರಲ್ಲೇ ಸುಂದರ ಜೀವನ ಕಟ್ಟಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ಸಂಗಾನಟ್ಟಿ ಗ್ರಾಮದ ನಿವಾಸಿಯಾದ ಸಿದ್ದರಾಮ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಆ ಕೆಲಸ ಬಿಟ್ಟು ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಎಂಟು ಎಕರೆ ಜಮೀನಿನಲ್ಲಿ ಮೂರು ಎಕರೆ ಕಬ್ಬು, ಎರಡು ಎಕರೆ ಜವಾರಿ ಬಾಳೆ ಗಿಡಗಳನ್ನು ಬೆಳೆದಿದ್ದಾರೆ. ಇನ್ನು ವಿಶೇಷ ಎಂದರೆ ಒಂದು ಎಕರೆಯಲ್ಲಿ ಸುಗಂಧರಾಜ ಹೂ, ಪೇರಲೆ, ಶ್ರೀಗಂಧ ಬೆಳೆದು ಸಮಗ್ರ ಕೃಷಿಯಲ್ಲಿ ಯಶಸ್ವಿಯಾಗಿದ್ದು, 10 ರಿಂದ 12 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಸುಗಂಧ ರಾಜ ಗಿಡಗಳ ನಡುವೆ ಪೇರಲೆ ಕೃಷಿ
ಇನ್ನು ಜಮಖಂಡಿ, ರಬಕವಿ ಬನಹಟ್ಟಿ, ಮುಧೋಳ ಭಾಗದ ಬಾಗಲಕೋಟೆ ಜಿಲ್ಲೆಯಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುತ್ತಾರೆ. ಇದರಿಂದ ನಿರಂತರ ಕಬ್ಬಿಗೆ ನೀರು ಹರಿಸಲಾಗಿದ್ದು, ಜಮೀನು ಸವಳು ಜವಳಾಗಿ ಫಲವತ್ತತೆ ಹಾಳಾಗುತ್ತಿದೆ. ಇದರಿಂದ ಸಿದ್ದರಾಮ, ಸ್ವಲ್ಪ ಮಾತ್ರ ಕಬ್ಬು ಬೆಳೆದು ಉಳಿದಂತೆ ಬಾಳೆ, ಪೇರಲ, ಹೂ, ಶ್ರೀಗಂಧ ಹೀಗೆ ವಿವಿಧ ರೀತಿಯ ಬೆಳೆ ಬೆಳೆದು ಭೂಮಿ ಫಲವತ್ತತೆ ಉಳಿಸುವುದರ ಜೊತೆಗೆ ಉತ್ತಮ ಲಾಭ ಪಡೆಯುತ್ತಿದ್ದಾರೆ.

ಬಾಳೆ ಕಾಯಿ ಮತ್ತು ಸುಗಂಧರಾಜ ಪುಷ್ಪ
ಇಲ್ಲಿ ಸಿದ್ದರಾಮ ಸಮಗ್ರ ಕೃಷಿಯನ್ನು ಸಾವಯವ ಪದ್ಧತಿ ಮೂಲಕ ಮಾಡುತ್ತಿರುವುದು ವಿಶೇಷ. ಹೊಲದಲ್ಲಿ ಯಾವುದೇ ರಸಾಯನಿಕ ಬಳಸದೆ ಕೃಷಿ ಮಾಡಿ ಭೂಮಿ ಫಲವತ್ತತೆ ಕಾಪಾಡುತ್ತಿದ್ದಾರೆ. ಹೊಲದಲ್ಲಿ ಡ್ರಿಪ್ ಇರಿಗೇಷನ್ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದು, ಇವರು ಹೊಲದಲ್ಲಿ ಬೆಳೆದ ಹೂವುಗಳು ಇಡೀ ಹೊಲಕ್ಕೆ ಅಲಂಕಾರ ನೀಡಿವೆ. ಸಿದ್ದರಾಮ ಅವರ ಕೃಷಿ ಪದ್ಧತಿಗೆ ಎಲ್ಲರೂ ಮನಸೋತಿದ್ದು, ಇವರಿಂದ ಸಲಹೆ ಪಡೆಯುತ್ತಿದ್ದಾರೆ ಹಾಗೂ ಇವರ ಕೃಷಿ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಗ್ರ ಕೃಷಿ ಪದ್ಧತಿ ಅಳವಡಿಕೆ
ಒಟ್ಟಿನಲ್ಲಿ ಕೃಷಿಯೇ ಬೇಡ ಎಂದು ಕೃಷಿ ಭೂಮಿಗಳನ್ನು ಸೈಟ್ಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿರುವ ಈ ಕಾಲದಲ್ಲಿ ಇರುವ ಜಮೀನಿನಲ್ಲಿಯೇ ಒಬ್ಬ ಪದವೀಧರರಾಗಿ ಕೃಷಿಯಲ್ಲಿ ಸಾಧನೆ ಮಾಡಲು ಮುನ್ನುಗ್ಗುತ್ತಿದ್ದಾರೆ. ಸಿದ್ದರಾಮ ಕೃಷಿ ಸೇವೆ ಮೂಲಕ ಎಲ್ಲರಿಗೂ ಮಾದರಿಯಾಗಿದೆ.

ಜವಾರಿ ಬಾಳೆ ಗಿಡ
ಇದನ್ನೂ ಓದಿ: ಒಂದು ಜಿಲ್ಲೆ, ಒಂದು ಉತ್ಪನ್ನ; ಕರ್ನಾಟಕದ ಯಾವ ಜಿಲ್ಲೆಗೆ ಯಾವ ಉತ್ಪನ್ನ ಎಂಬ ಪಟ್ಟಿ ಇಲ್ಲಿದೆ



