ಬನಶಂಕರಿ- ಆದಿಶಕ್ತಿಯ ಅವತಾರಗಳಲ್ಲಿ ಪ್ರಮುಖ ಅವತಾರಿ ಶಾಕಂಭರಿ: ಇತಿಹಾಸ, ಹಿನ್ನೆಲೆ ಏನು?
ರಾಜ್ಯದಲ್ಲಿ ಕೊರೊನಾ ಸೋಂಕು ದಿನೇದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಬಾಗಲಕೋಟೆ ಜಿಲ್ಲೆ ಬದಾಮಿಯಲ್ಲಿ ಇಂದು ನಡೆಯಬೇಕಿದ್ದ ಸುಪ್ರಸಿದ್ಧ ಬನಶಂಕರಿ ಜಾತ್ರೆಯನ್ನು ರದ್ದುಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ. ಜಾತ್ರೆ ರದ್ದುಗೊಳಿಸಿದರೂ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಆದರೆ ದೇಗುಲದಲ್ಲಿಂದು ಪೂಜಾ ಕೈಂಕರ್ಯಗಳಿಗಷ್ಟೇ ಅವಕಾಶವಿದ್ದು, ರಥೋತ್ಸವ, ಪಲ್ಲಕ್ಕಿ ಉತ್ಸವ ವೇಳೆ ಭಕ್ತರಿಗೆ ಅವಕಾಶವಿಲ್ಲ.
ಆದಿಶಕ್ತಿಯ ಅವತಾರಗಳಲ್ಲಿ ಒಂದು ಪ್ರಮುಖ ಅವತಾರ ಶಾಕಂಭರಿಯ ಅವತಾರ. ಈಕೆ ಕರ್ನಾಟಕ , ಮಹಾರಾಷ್ಟ್ರ, ರಾಜಸ್ಥಾನ ಓಡಿಶಾಗಳಲ್ಲಿ ಅನೇಕರ ಕುಲದೇವತೆ. ಬನಶಂಕರಿ (ವನಶಂಕರಿ), ಶತಾಕ್ಷಿ, ಶಾಕಂಭರಿ, ದುರ್ಗೆ ಎಂದು ಶಿಷ್ಟರಿಂದಲೂ, ಜನಪದರಿಂದಲೂ, ನಗರ – ಅರಣ್ಯವಾಸಿಗಳಿಂದಲೂ ಪೂಜೆಗೊಳ್ಳುತ್ತಿರುವಾಕೆ. ಉಗ್ರರೂಪದಲ್ಲಿ ವೃಕ್ಷ ದೇವತೆಯಾಗಿ, ಅರಣ್ಯದೇವತೆಯಾಗಿ ಚೌಡಮ್ಮ , ಯಕ್ಷಿ ಮೊದಲಾದ ರೂಪಗಳಲ್ಲಿ ಕಾಡುಮೇಡುಗಳಲ್ಲಿ ಸಂಚರಿಸುತ್ತಾ ಇರುತ್ತಾಳಂತೆ. ದೇವೀಭಾಗವತ ಮಹಾಪುರಾಣ ಹಾಗು ಶಿವ ಮಹಾಪುರಾಣದ ಉಮಾಸಂಹಿತೆ, ಸ್ಕಂದಪುರಾಣಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಈಕೆಯ ಕಥೆ ಬರುತ್ತದೆ.
ಹಿರಣ್ಯಾಕ್ಷನ ಪುತ್ರ ರುರು, ಅವನ ಮಗ ದುರ್ಗಮ. ಅವನು ನಾರದರ ಬಳಿ ದೇವತೆಗಳ ಶಕ್ತಿಯ ರಹಸ್ಯವೇನು ಎಂದು ಕೇಳುತ್ತಾನೆ. ಆಗ ನಾರದರು ’ನೀವು ಹೊಟ್ಟೆತುಂಬಲು ತಿನ್ನುತ್ತೀರಿ. ತಿಂದದ್ದು ಜೀರ್ಣವಾಗಿ ಹೋಗುತ್ತದೆ. ದೇವತೆಗಳಿಗೆ ಹವಿಸ್ಸೇ ಆಹಾರ. ಬ್ರಾಹ್ಮಣರು, ಋಷಿ ಮುನಿಗಳು ಹೋಮ ಮಾಡುವಾಗ ವೇದಮಂತ್ರಗಳನ್ನು ಹೇಳುತ್ತಾ ತುಪ್ಪ, ಪಾಯಸ ಮೊದಲಾದ ಅಹುತಿ ಹಾಕುತ್ತಾರಲ್ಲ ಅದು ಅತ್ಯಲ್ಪವಾದರೂ ಮಂತ್ರಪೂತವಾದ್ದರಿಂದ ಅದನ್ನು ಅಗ್ನಿಯ ಮೂಲಕ ತಿನ್ನುವ ದೇವತೆಗಳಿಗೆ ಅಪಾರ ಶಕ್ತಿ ಸಂಚಯವಾಗುತ್ತದೆ. ಅದಕ್ಕೆ ಪ್ರತಿಯಾಗಿ ದೇವತೆಗಳು ಭೂಮಿಯ ಮೇಲೆ ಮಳೆ ಸುರಿಸುತ್ತಾರೆ. ಈ ಗುಟ್ಟು ಗೊತ್ತಿದ್ದ ನಿನ್ನ ದೊಡ್ದಜ್ಜ ಹಿರಣ್ಯಕಶಿಪು ತನ್ನನ್ನೇ ಕುರಿತು ಹೋಮ ಮಾಡಲು ಋಷಿ ಮುನಿಗಳಿಗೆ ಆಜ್ಞಾಪಿಸಿದ್ದ. ಇದರಿಂದ ದೇವತೆಗಳೆಲ್ಲರೂ ಬಲಗುಂದಿದಾಗ ಭಗವಂತನು ದೇವತೆಗಳ ಪ್ರಾರ್ಥನೆಯಂತೆ ಅವರನ್ನು ಉಳಿಸಲು ನರಸಿಂಹನಾಗಿ ಹಿರಣ್ಯಕಶಿಪುವನ್ನು ಕೊಂದು ಹಾಕಬೇಕಾಯ್ತು’ ಎಂದು ಹೇಳುತ್ತಾರೆ.
ಆಗ ದುರ್ಗಮನಿಗೆ ಬಲವಂತದಿಂದ ತಾನು ಹವಿಸ್ಸು ಪಡೆದರೆ ಪ್ರಯೋಜನವಿಲ್ಲವೆಂದು ಅನ್ನಿಸುತ್ತದೆ. ತಾನೇ ಬ್ರಹ್ಮನನ್ನು ಕುರಿತು ಘೋರವಾದ ತಪಸ್ಸನ್ನಾಚರಿಸುತ್ತಾನೆ . ಬ್ರಹ್ಮ ಪ್ರತ್ಯಕ್ಷನಾದಾಗ ಸಕಲ ವೇದ ವಿದ್ಯೆಗಳೂ ತನ್ನ ವಶವಾಗಬೇಕು ಎಂದು ಬೇಡಿಕೊಳ್ಳುತ್ತಾನೆ. ಬ್ರಹ್ಮ ಯಥಾಪ್ರಕಾರ ತಥಾಸ್ತು ಎಂದು ಮಾಯವಾಗುತ್ತಾನೆ. ದುರ್ಗಮ ವೇದಗಳಿಗೆ ಒಡೆಯನಾದ ಮೇಲೆ ಭೂಮಿಯ ಮೇಲಿದ್ದ ಜ್ಞಾನಿಗಳಿಗೆ ವೇದಗಳು ಮರೆತು ಹೋಗುತ್ತವೆ. ಯಜ್ಞಯಾಗಾದಿಗಳು ನಿಂತು ಹೋಗುತ್ತವೆ. ದೇವತೆಗಳಿಗೆ ಆಹಾರವಿಲ್ಲದೆ ನಿತ್ರಾಣರಾಗುತ್ತಾರೆ. ಭೂಮಿಯ ಮೇಲೆ ಮಳೆ ಸುರಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸತತ ನೂರುವರ್ಷಗಳ ಅನಾವೃಷ್ಟಿಯಿಂದ ಭೀಕರ ಬರಗಾಲ ಎದುರಾಗುತ್ತದೆ. ಭೂಮಿಯ ಮೇಲಿನ ನದಿ, ಕೆರೆ , ಸರೋವರ , ಬಾವಿಗಳು ಬತ್ತಿಹೋಗುತ್ತವೆ. ಮಾನವರ, ಗೋ-ಮಹಿಷಗಳ ಶವಗಳು ಎಲ್ಲೆಂದರಲ್ಲಿ ಬೀಳುತ್ತವೆ. ಗಿಡಮರಗಳು ಒಣಗಿಹೋಗುತ್ತವೆ. ಅಳುದುಳಿದ ಮಾನವರು ಶವಗಳಂತೆ ಸಂಚರಿಸುತ್ತಾ ಇರುತ್ತಾರೆ.
ತಾಯಿ ಬನಶಂಕರಿಗೆ ಬಗೆಬಗೆಯ ತರಕಾರಿ, ಸೊಪ್ಪು, ಹಣ್ಣುಗಳಿಂದ ಬೆಳಗಿನ ಪೂಜೆ | TV9Kannada
ಬಲಹೀನರಾದ ದೇವತೆಗಳ ಹಾಗು ಋಷಿಮುನಿಗಳ ನೇತೃತ್ವದಲ್ಲಿ ಎಲ್ಲರೂ ಒಣಗಿ ಹೋಗಿರುವ ಹಿಮಾಲಯದ ಬುಡದಲ್ಲಿ ಮಹಾಮಾಯೆಯನ್ನು ಪ್ರಾರ್ಥಿಸುತ್ತಾರೆ. ನಿನಗೆ ಸ್ತೋತ್ರಮಾಡಲೂ ಶಕ್ತಿ ಇಲ್ಲದವರಾಗಿದ್ದೇವೆ ಎಂದು ರೋಧಿಸುತ್ತಾ ಗೋಳಿಡುತ್ತಾರೆ. ಅಳಲೂ ಶಕ್ತಿ ಇಲ್ಲದ ತನ್ನ ಮಕ್ಕಳ ಸ್ಥಿತಿ ನೋಡಿ ಜಗನ್ಮಾತೆ ಪಾರ್ವತಿಗೆ ಅಪಾರ ದುಃಖವಾಗುತ್ತದೆ. ಆಕೆ ನೀಲಪರ್ವತದಂತೆ ಕಪ್ಪಾದ ವರ್ಣ, ನೀಲ ಪದ್ಮದಂತಹ ಮೂರು ಕಣ್ಣುಗಳು, ಮಾತೃತ್ವದ ಪ್ರತೀಕವಾದ ತುಂಬುಸ್ತನಗಳು, ಕಾಳಮೇಘದಂತೆ ಹರಡಿರುವ ಕೇಶರಾಶಿ, ಕೈಗಳಲ್ಲಿ ಧನುರ್ಬಾಣಗಳು, ಕಮಲ, ಹಣ್ಣು, ತರಕಾರಿ, ಗೆಡ್ಡೆ, ಗೆಣಸು, ಧಾನ್ಯ, ಸೊಪ್ಪು ಚಿಗುರುಗಳು, ಜಲಕುಂಭಗಳನ್ನು ಧರಿಸಿ ವಿಶ್ವರೂಪವನ್ನು ಧರಿಸಿ ಸಹಸ್ರಸೂರ್ಯರಂತೆ ಬೆಳಗುತ್ತಾ ಕರುಣಾರಸ ಸಾಗರವೇ ಉಕ್ಕಿ ಬಂದಂತೆ ಪ್ರತ್ಯಕ್ಷಳಾಗುತ್ತಾಳೆ. ನಿಶ್ಶಕ್ತರಾದ ಪ್ರಜೆಗಳನ್ನು ನೋಡಿ ದುಃಖದಿಂದ ಅಳಲು ಪ್ರಾರಂಭಿಸುತ್ತಾಳೆ.
ಅವಳ ಕಣ್ಣೀರು ಹೊರಬರಲು ಎರಡು ಕಣ್ಣುಗಳು ಸಾಲದೆ ಅಕೆಯ ಮೈತುಂಬಾ ಕಣ್ಣುಗಳು ಮೂಡುತ್ತವೆ. ದೇವಿ ಸತತವಾಗಿ ಒಂಬತ್ತು ದಿನ ಅಳುತ್ತಾಳೆ . ಸಾವಿರಾರು ಕಣ್ಣೀರಿನ ಕೋಡಿಗಳು ಹರಿಯುತ್ತದೆ. ಆ ನೀರಿನಿಂದ ಕೆರೆ ಕುಂಟೆ ಸರೋವರಗಳು ತುಂಬುತ್ತವೆ. ಹಳ್ಳ ನದಿಗಳು ಉಕ್ಕಿ ಹರಿಯುತ್ತವೆ. ತನ್ನ ಕೈಲಿರುವ ಹಸಿವು, ಜಡತೆ , ಮರಣಗಳನ್ನು ನೀಗುವ ರಸಫಲಗಳನ್ನು ನೀಡಿ ಭಕ್ತರನ್ನು ಕಾಪಾಡುತ್ತಾಳೆ. ತನ್ನ ಮೈಯಿಂದಲೇ ಶಾಕಗಳನ್ನು ಸೃಷ್ಟಿಸಿ ವಿಶ್ವದ ಜೀವಿಗಳನ್ನು ಸಲಹುತ್ತಾಳೆ. ದೇವಿ ನೀಡಿದ ಆಹಾರವನ್ನು ತಿಂದ ಎಲ್ಲರೂ ಚೈತನ್ಯಭರಿತರಾಗುತ್ತಾರೆ.
ಅಷ್ಟರಲ್ಲಿ ದುರ್ಗಮನು 101 ಅಕ್ಷೋಹಿಣಿ ಸೈನ್ಯದೊಡನೆ ದೇವಿ ಇರುವಲ್ಲಿಗೆ ಬರುತ್ತಾನೆ. ಆಗ ದೇವಿ ತನ್ನ ಭಕ್ತರ ರಕ್ಷಣೆಗಾಗಿ ಅವರ ಸುತ್ತಲೂ ದೊಡ್ಡದಾದ ತೇಜೋಮಯ ಪ್ರಭಾವಳಿಯೊಂದನ್ನು ಸೃಷ್ಟಿಸಿ ತಾನು ಅದರ ಹೊರಗೆ ನಿಂತುಕೊಂಡು ದುರ್ಗಮನನ್ನು ಎದುರಿಸುತ್ತಾಳೆ. ಆಗ ದೇವಿಯ ಶರೀರದಿಂದ ಕಾಳಿಕಾ, ತಾರಾ, ಬಾಲಾ, ಬಗಳಾ , ಭುವನೇಶ್ವರಿ, ಲಲಿತಾ, ತ್ರಿಪುರಾ, ಮಾತಂಗೀ, ಕಮಲಾ, ಛಿನ್ನಮಸ್ತಾ, ಗುಹ್ಯಕಾಳಿ, ಧೂಮಾವತಿ ಎಂಬ ದೇವಿಯರೂ ಅರವತ್ತನಾಲ್ಕು ಯೋಗಿನಿಯರೂ, ಅರವತ್ತನಾಲ್ಕು ಕೋಟಿ ಮಾತೃಕೆಯರೂ ಹೊರಬರುತ್ತಾರೆ. 10 ದಿನಗಳವರೆಗೆ ನಡೆದ ಯುದ್ಧದಲ್ಲಿ ದೇವಿಯ ಸೈನ್ಯ ದುರ್ಗಮನ 100 ಅಕ್ಷೋಹಿಣಿ ಸೈನ್ಯವನ್ನು ನಾಶ ಮಾಡುತ್ತದೆ.
ತನ್ನ ಅಂತ್ಯವು ಖಚಿತವೆಂದರಿತ ದುರ್ಗಮನು 11ಯ ದಿನ ರಕ್ತವರ್ಣದ ವಸ್ತ್ರ, ಗಂಧ, ಪುಷ್ಪಗಳಿಂದ ಅಲಂಕೃತನಾಗಿ ಯುದ್ಧ ಆರಂಭವಾಗುವ ಮೊದಲು ರಣರಂಗದಲ್ಲಿ ದೇವಿಯ ಮುಂದೆ ಬಂದು ತನ್ನ ಮರಣದ ನಂತರ ಸದ್ಗತಿದೊರೆಯಬೇಕು ದೇವಿಯು ತನ್ನ ಹೆಸರಿನಿಂದಲೇ ಕರೆಯಲ್ಪಡಬೇಕು ಹಾಗು ತನಗೆ ಇಷ್ಟವಾದ ಕೆಂಪು ವಸ್ತ್ರ, ಗಂಧ, ಪುಷ್ಪಗಳಿಂದಲೇ ಪೂಜೆಯನ್ನು ಪಡೆಯಬೇಕು ಎಂದು ವರವನ್ನು ಪಡೆಯುತ್ತಾನೆ.
ನಂತರ ಎರಡು ಪ್ರಹರಗಳಷ್ಟುಗಳ ಕಾಲನಡೆದ ಭೀಕರ ಯುದ್ಧದಲ್ಲಿ ರಾಕ್ಷಸ ಸೈನ್ಯ ನಿರ್ನಾಮವಾಗುತ್ತದೆ. ದುರ್ಗಮನ ಸೇನಾಧಿಪತಿ ಅರುಣ ರಣರಂಗದಿಂದ ಪಲಾಯನ ಮಾಡುತ್ತಾನೆ. ಕೊನೆಗೆ ದೇವಿ ಹದಿನೈದು ಬಾಣಗಳನ್ನು ಒಟ್ಟಿಗೆ ಪ್ರಯೋಗಿಸಿ ದುರ್ಗಮನನ್ನು ರಥಸಹಿತನಾಗಿ ಧೂಳಿಪಟಮಾಡಿ ಅವನನ್ನು ಅಂತ್ಯಗೊಳಿಸುತ್ತಾಳೆ. ಅವನಿಂದ ಹೊರಟ ತೇಜಸ್ಸು ದೇವಿಯನ್ನು ಸೇರುತ್ತವೆ. ವೇದಗಳು ದೇವಿಯ ವಶವಾಗುತ್ತವೆ. ವೇದಗಳನ್ನು ಋಷಿ ಮುನಿಗಳ ಕೈಗೆ ಕೊಟ್ಟ ದೇವಿ ಜ್ಞಾನವು ನನ್ನದೇ ಇನ್ನೊಂದು ರೂಪ. ಇದನ್ನು ಕಾಪಾಡುವುದು ನಿಮ್ಮ ಕರ್ತವ್ಯ ಎಂದು ಹೇಳಿ ಕೈಲಾಸಕ್ಕೆ ಹಿಂತಿರುಗುತ್ತಾಳೆ.
ಸ್ಕಂಧ ಪುರಾಣದಲ್ಲಿ ಕತೆ ಇನ್ನೂ ಮುಂದುವರೆಯುತ್ತದೆ. ದೇವಿ ದುರ್ಗಮನನ್ನು ಕೊಂದನಂತರ ಉಗ್ರ ರೂಪಧರಿಸಿ ತಿಲಕಾರಣ್ಯದಲ್ಲಿ (ಈಗಿನ ಬದಾಮಿಯ ಬಳಿಯ ಚೊಳಚಗುಡ್ಡ) ಅಲೆಯುತ್ತಾ ಇದ್ದಳಂತೆ. ನಂತರ ಸೀತೆಯನ್ನು ಅರಸುತ್ತಾ ಬಂದ ಶ್ರೀರಾಮನ ಬೇಡಿಕೆಯಂತೆ ಶಾಂತಳಾಗಿ ಅಲ್ಲೇ ನೆಲಸಿದಳಂತೆ. ವನದಲ್ಲಿ ನೆಲೆಸಿದ್ದರಿಂದ ವನಶಂಕರಿಯೆಂದೂ, ನೂರಾರು ಕಣ್ಣುಗಳನ್ನು ಧರಿಸಿದ್ದರಿಂದ ಶತಾಕ್ಷಿಯೆಂದೂ, ತನ್ನ ದೇಹದಿಂದ ಶಾಕಗಳನ್ನು ಭರಿಸಿದ್ದರಿಂದ ಶಾಕಂಭರಿಯೆಂದೂ, ದುರ್ಗಮನನ್ನು ಕೊಂದದ್ದರಿಂದ ದುರ್ಗೆಯೆಂದೂ ಹೆಸರಾಗುತ್ತಾಳೆ. (ಸಂಗ್ರಹ -ರವಿ ಶಾಸ್ತ್ರಿ)
ಕೊರೊನಾ ಹೆಚ್ಚಳ: ಭಕ್ತರಿಗೆ ಇಲ್ಲ ದರುಶನ ರಾಜ್ಯದಲ್ಲಿ ಕೊರೊನಾ ಸೋಂಕು ದಿನೇದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಬಾಗಲಕೋಟೆ ಜಿಲ್ಲೆ ಬದಾಮಿಯಲ್ಲಿ ಇಂದು ನಡೆಯಬೇಕಿದ್ದ ಸುಪ್ರಸಿದ್ಧ ಬನಶಂಕರಿ ಜಾತ್ರೆಯನ್ನು ರದ್ದುಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ. ಜಾತ್ರೆ ರದ್ದುಗೊಳಿಸಿದರೂ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಆದರೆ ದೇಗುಲದಲ್ಲಿಂದು ಪೂಜಾ ಕೈಂಕರ್ಯಗಳಿಗಷ್ಟೇ ಅವಕಾಶವಿದ್ದು, ರಥೋತ್ಸವ, ಪಲ್ಲಕ್ಕಿ ಉತ್ಸವ ವೇಳೆ ಭಕ್ತರಿಗೆ ಅವಕಾಶವಿಲ್ಲ.
Also Read Paush Purnima 2022: ಪುಷ್ಯ ಪೂರ್ಣಿಮಾ ವ್ರತ ಮತ್ತು ಮಹತ್ವ, ಈ ದಿನ ಉಪವಾಸ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ
Published On - 7:23 am, Mon, 17 January 22