ಬಾಗಲಕೋಟೆ: ನಕಲಿ ವೈದ್ಯೆಯಿಂದ ಗರ್ಭಪಾತ ದಂಧೆ, ಕೋಣೆ ಸೀಜ್ ಮಾಡಿ ಎಚ್ಚರಿಕೆ ಕೊಟ್ಟ ಆರೋಗ್ಯಾಧಿಕಾರಿ
ಕವಿತಾ ಬದನ್ನವರ ಮಹಿಳೆರಿಗೆ ಗರ್ಭಪಾತ ಮಾಡುವ ದಂಧೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇವರು ಹಿಂದೊಮ್ಮೆ ಯಾವುದೋ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬಾಗಲಕೋಟೆ: ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಕಲಿ ವೈದ್ಯೆಯಿಂದ ಗರ್ಭಪಾತ(Abortion) ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮನೆಯ ಒಂದು ಕೋಣೆಯನ್ನೇ ಆಸ್ಪತ್ರೆಯನ್ನಾಗಿ ಮಾಡಿಕೊಂಡು ಕವಿತಾ ಬದನ್ನವರ ಎಂಬ ನಕಲಿ ವೈದ್ಯೆ(Fake Doctor) ಗರ್ಭಪಾತ ದಂಧೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಮನೆ ಮೇಲೆ ಮುಧೋಳ ತಾಲ್ಲೂಕಾ ಆರೋಗ್ಯಾಧಿಕಾರಿ ದಾಳಿ ನಡೆಸಿ ನಕಲಿ ವೈದ್ಯೆ ಕವಿತಾಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕವಿತಾ ಬದನ್ನವರ ಮಹಿಳೆರಿಗೆ ಗರ್ಭಪಾತ ಮಾಡುವ ದಂಧೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇವರು ಹಿಂದೊಮ್ಮೆ ಯಾವುದೋ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅಲ್ಲಿಂದ ಕಲಿತಿದ್ದ ಚೂರು ಪಾರು ಕೆಲಸವನ್ನೇ ಬಂಡವಾಳ ಮಾಡಿಕೊಂಡು ಗರ್ಭಪಾತ ದಂಧೆಗೆ ಇಳಿದಿದ್ದಾರೆ. ಮನೆಯಲ್ಲಿ ಹೆರಿಗೆ ಕಾಟ್, ಎಕ್ಷಾಮಿನೇಷನ್ ಟೇಬಲ್, ಎಮ್ ಟಿ ಪಿ(ಮೆಡಿಕಲ್ ಟರ್ಮಿನೇಷನ್ ಆಪ್ ಪ್ರೆಗ್ಮೆನ್ಸಿ) ಪರಿಕರಗಳು ಪತ್ತೆಯಾಗಿವೆ. ಮನೆಯಲ್ಲೇ ಒಂದು ಔಷಧಿ ಅಂಗಡಿ, ನಕಲಿ ಆಸ್ಪತ್ರೆ ಇದ್ದು ಔಷಧ ಅಂಗಡಿಯನ್ನು ತಾಲ್ಲೂಕಾ ಆರೋಗ್ಯಾಧಿಕಾರಿ ವೆಂಕಟೇಶ್ ಮಲಘಾಣ್ ಸೀಜ್ ಮಾಡಿದ್ದಾರೆ.
ಕವಿತಾ ಬದನ್ನವರ ಹಾಗೂ ಗರ್ಭಪಾತದ ಬಗ್ಗೆ ಮಾತಾಡಲು ಹೋದ ವ್ಯಕ್ತಿ ಮಾತುಕತೆ
ಕವಿತಾ ಬದನ್ನವರ: ಪರಿಚಯ ಇಲ್ಲದೆ ಹೇಗೆ ಮಾಡಲಿ ಹೇಳ್ರಿ. ಯಾಕೆಂದರೆ ರಿಸ್ಕ್ ಇದೆ ನನಗೆ. ಯಾರಾದರೂ ಒಬ್ಬರು ಪರಿಚಯದವರನ್ನು ಕರೆದುಕೊಂಡು ಬನ್ನಿ. ಗರ್ಭಪಾತ ಬಗ್ಗೆ ಮಾತಾಡಲು ಬಂದ ವ್ಯಕ್ತಿ:ನಾವು ಮೂಡಲಗಿಯಿಂದ ಬರಬೇಕು ಯಾರು ಪರಿಚಯ ಇರಬೇಕು ಹೇಳ್ರಿ. ಕವಿತಾ: ನಿಮ್ಮನ್ನು ಮೊದಲು ಯಾರು ನನ್ನ ಬಳಿ ಕರೆದುಕೊಂಡು ಬಂದಿದ್ದರು. ಅಲ್ಲಿ ಏನು ಮಾಡಿದ್ದೆ ನಾನು ವ್ಯಕ್ತಿ :ಸ್ಕ್ಯಾನ್ ಮಾಡಿ ಹೇಳಿದ್ರಲ್ಲಾ.. ಕವಿತಾ: ಎಲ್ಲಿ ವ್ಯಕ್ತಿ: ನನಗೆ ಪ್ಲ್ಯಾಷ್ ಇಲ್ಲ ಈಗ ಇಲ್ಲಿ ಕೇಳಿದೆ ಇಲ್ಲೊಬ್ಬರು ಹಾಸ್ಪಿಟಲ್ ಇದೆ ಅಂದ ಕೂಡಲೆ ಇಲ್ಲಿ ಬಂದ್ವಿ. ಕವಿತಾ: ಇಲ್ಲ ನಮಗೆ ಯಾರು ಪರಿಚಯ ಇಲ್ಲ ವ್ಯಕ್ತಿ: ಏನು ಸಮಸ್ಯೆ ಅಂದರೆ ಮೇಡಮ್ ಮೂರು ಹೆಣ್ಣು ಆಗಿವೆ, ಒಂದಾದರೂ ಗಂಡು ಇರಲಿ ಅನ್ನೋದು ಅಷ್ಟೆ ಆಸೆ ಕವಿತಾ: ಚೆಕ್ ಮಾಡಸೋಕೆ ಹೋದರೆ ಅದು ಹೆಣ್ಣಾಯಿತು ಅಂದ್ರೆ ಏನು ಮಾಡೋದು ವ್ಯಕ್ತಿ: ಅಬೋರ್ಷನ್ ಮಾಡಿಸೋದು ಇನ್ನೇನು ಮಾಡೋದು ಕವಿತಾ: ಯಾರು ಪರಿಚಯ ಇಲ್ಲಾಂದ್ರೆ. ನನಗೆ ಡೈರೆಕ್ಟ್ ಮಾಡೋದಕ್ಕೆ ಬರೋದಿಲ್ಲ. ಸಮಸ್ಯೆ ಅಕ್ಕತಿ. ವ್ಯಕ್ತಿ :ಪರಿಚಯ ಯಾರದ್ದು ಹೇಳೋಣ ಹೇಳ್ರಿ, ನಮಗಂತೂ ಈ ಕಡೆ ಯಾರು ಗೊತ್ತಿಲ್ಲ.ನೀವು ಸ್ವಲ್ಪ ಅನುಕೂಲ ಮಾಡಿದ್ರ ಅನುಕೂಲ ಅಕ್ಕತಿ. ಕರಕೊಂಡ ಬರ್ತನಿ ಒಂದು ತಾಸು ಅಕ್ಕತಿ. ಕವಿತಾ :ಹೌದ ಸಾರಿ ಟೆಸ್ಟ್ ಗೆ ಎಷ್ಟು ತಗೊಂಡಿದ್ದೆ ನಿಮಗೆ(ಹಣ) ವ್ಯಕ್ತಿ :ನೆನಪು ಇಲ್ಲ ಮೇಡಮ್ ಅದಕ್ಕ ಕೇಳಕೊಂಡು ಹೋಗಬೇಕು ಅಂತ ಬಂದಿದ್ದು ಕವಿತಾ :20ಸಾವಿರ ರೂಪಾಯಿ ತಗೊತಿನಿ. ವ್ಯಕ್ತಿ :ಎಷ್ಟು ರಿ. ಕವಿತಾ: 20 ಸಾವಿರ. ವ್ಯಕ್ತಿ : ಅಂದರೆ ಚೆಕ್ ಮಾಡೋಕೆ ಅಷ್ಟ 20 ಸಾವಿರ ತಗೊತಿರಿ ಮೇಡಮ್. ಕವಿತಾ :ಚೆಕ್ ಮಾಡೋಕೆ ಅಷ್ಟೇ. ವ್ಯಕ್ತಿ :ಮತ್ತ ಹೆಣ್ಣ ಇತ್ತಂದ್ರ ಅಬೋರ್ಷನ್ ಗೆ ಬೇರೆ ಅಕ್ಕತಿ, ಟೋಟಲ್ ಆಗಿ ಎಷ್ಟ ಅಕ್ಕತಿರಿ ಎರಡು ಕೂಡಿ (ಚೆಕ್ಕಿಂಗ್ ಆ್ಯಂಡ್ ಅಬೋರ್ಷನ್) ಕವಿತಾ :ನಾ ಪೇಷಂಟ್ ನೋಡತಿನಿ ಪಸ್ಟ್, ಪೇಷಂಟ್ ಹೆಂಗದ ಏನು ಅದರ ಮ್ಯಾಲ ಡಿಪೆಂಡ್ .. ವ್ಯಕ್ತಿ :ಹೌದ್ರಿ…ನೋಡಿ ತುಗೊರಿ ಮೇಡಮ್ 20 ಅಂದ್ರ ಬಾಳ ಅಕ್ಕತಿ ನಾವು ಏನು ಮಾಡೋದು ಕವಿತಾ : ಇಲ್ಲ ಇಲ್ಲ ಇವತ್ತಿಂದ ಇದ ಜಸ್ಟ್ ರಾಯಭಾಗದವರ ಪೇಷಂಟ್ ಕರಕೊಂಡ ಹೋದ್ರ ಅವರನ್ನ ಕೇಳಬೇಕಿತ್, ಅವರಿಗೆ 24 ಸಾವಿರ ರೂಪಾಯಿ ತಗೊಂಡಿನಿ.
ಆರೋಗ್ಯಾಧಿಕಾರಿ ಹಿಗ್ಗಾಮುಗ್ಗಾ ತರಾಟೆ
ಕವಿತಾ ಬದನ್ನವರಗೆ ಆರೋಗ್ಯಾಧಿಕಾರಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನೀನು ಒಂದು ಹೆಣ್ಣು, ನಿನ್ನನ್ನು ತಂದೆ ತಾಯಿ ಹೆಣ್ಣು ಅಂತ ಆಗಲೆ ಕುತ್ತಿಗೆ ಹಿಸುಕಿ ಸಾಯಿಸಿದ್ರೆ ಏನು ಮಾಡುತ್ತಿದ್ದಿ? ಹಿಂದೆ ರೇಡ್ ಮಾಡೋಕೆ ಬಂದಾಗ ನನ್ ಗಂಡನ ಸಲುವಾಗಿ ಸಲಾಯನ್ ತಂದಿನಿ ಅಂದಳು. ನೀ ಮಾತಾಡಿದ ವಿಡಿಯೋ ಇದೆ ನನ್ನ ಬಳಿ. ಮಗು ಗಂಡು, ಹೆಣ್ಣು ಎನ್ನುವುದನ್ನು ಚೆಕ್ ಮಾಡುವುದಕ್ಕೆ 20 ಸಾವಿರ ಪಡಿತಿಯಾ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಎಂತಹ ಮನೆ ಕಟ್ಟಿಸಿದ್ದೀಯಾ? ಯಾರಿಗಾದರೂ ಇಂತ ಮನೆ ಕಟ್ಟಿಸೋಕೆ ಆಗುತ್ತಾ? ನಾಮ್ಮಂತಹ ನೌಕರಿ ಮಾಡೋರಿಗೆ ಇಂತಹ ಮನೆ ಕಟ್ಟಿಸೋಕೆ ಆಗೋದಿಲ್ಲ. ಈ ಸಾರಿ ಎಫ್ಐಆರ್ ಮಾಡಿ ಒಳಗೆ ಹಾಕಿಸ್ತಿನಿ ಎಂದು ಮುಧೋಳ ಟಿಹೆಚ್ಒ ವೆಂಕಟೇಶ್ ಮಲಘಾಣ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:40 am, Sat, 20 August 22




