ಬಾಗಲಕೋಟೆ: ಪೊಲೀಸ್ ಠಾಣೆ ಅಂದರೆ ಸಾಕು ಜನರು ಒಂದು ಕ್ಷಣ ದಿಗಿಲುಗೊಳ್ಳುತ್ತಾರೆ. ಅಪ್ಪಿ ತಪ್ಪಿಯೂ ಆ ಕಡೆ ತಲೆ ಹಾಕಿ ಕೂಡ ಮಲಗುವುದಕ್ಕೂ ಇಷ್ಟಪಡುವುದಿಲ್ಲ. ಆದರೆ ಬಾಗಲಕೋಟೆ ಪೊಲೀಸ್ ಠಾಣೆಗೆ (Police station) ಹೋದರೆ ಭಯ ಇರುವುದಿಲ್ಲ. ಏಕೆಂದರೆ ಇಲ್ಲಿಗೆ ಭೇಟಿ ನೀಡಿದಾಗ ಸುಂದರ ಹಸಿರು ಗಾರ್ಡನ್ ಮೊದಲಿಗೆ ಸ್ವಾಗತ ಮಾಡುತ್ತದೆ. ಇನ್ನು ಒಳಗಡೆ ಹೋದರೆ ಹೈಟೆಕ್ ಠಾಣೆ, ಸ್ವಚ್ಚಂದವಾಗಿ ಕಾಣುವ ಆವರಣ, ಸುಸಜ್ಜಿತ ಕಟ್ಟಡ ಎಲ್ಲವೂ ವ್ಯವಸ್ಥಿತವಾಗಿದೆ. ಸದ್ಯ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪೊಲೀಸ್ ಠಾಣೆ ಎಲ್ಲರನ್ನು ಆಕರ್ಷಿಸಿದೆ.
ಅಮೀನಗಡ ಪೊಲೀಸ್ ಠಾಣೆಯ ಆವರಣ ಸುತ್ತಲೂ ಸ್ವಚ್ಛಂದವಾಗಿ ನಳನಳಿಸುತ್ತಿದೆ. ಇದಕ್ಕೆ ಕಾರಣ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ. ಠಾಣೆಯ ಸಿಬ್ಬಂದಿಗಳ ಪರಿಶ್ರಮದಿಂದಾಗಿ ಅಮೀನಗಡ ಪೊಲೀಸ್ ಠಾಣೆ ನೋಡುಗರ ಗಮನ ಸೆಳೆಯುವುದರ ಜೊತೆಗೆ ಪ್ರತಿಶತ ನೂರರಷ್ಟು ಕೇಸ್ಗಳನ್ನು ಡಿಸ್ಪೋಜಲ್ (ಎಫ್ಐಆರ್ ಆದ ಕೇಸ್ ಕೋರ್ಟ್ಗೆ ಚಾರ್ಜಶೀಟ್ ಸಲ್ಲಿಸೋದು)ಮಾಡಿರುವ ಖ್ಯಾತಿ ಹೊಂದಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರಶಸ್ತಿ ಜೊತೆಗೆ ನಗದು ಕೂಡ ಪಡೆದುಕೊಂಡಿದೆ. ಇಲಾಖೆಯ 71 ಲಕ್ಷ ರೂಪಾಯಿ ಅನುದಾನದಲ್ಲಿ ಇಷ್ಟೆಲ್ಲ ಸುಧಾರಣೆ ಮಾಡಲಾಗಿದೆ.
ಉತ್ತಮ ವಾತಾವರಣ ಹೊಂದಿದ ಠಾಣೆ, ಕೇಸ್ ದಾಖಲಾತಿಯಲ್ಲಿ ಶಿಸ್ತುಬದ್ದ ಠಾಣೆ ಎಂದು ಪ್ರಶಂಸೆಗೆ ಅಮೀನಗಢ ಠಾಣೆ ಪಾತ್ರವಾಗಿದೆ ಎಂದು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.
ಇನ್ನು ಪೊಲೀಸ್ ಠಾಣೆಗೆ ಬರುವ ದಾರಿಯನ್ನು ಸಿಸಿ ರೋಡ್ ಮಾಡಲಾಗಿದೆ. ಠಾಣೆಯ ಮುಂಭಾಗದಲ್ಲಿ ಮಿನಿ ಪಾರ್ಕ್ ರೀತಿಯಲ್ಲಿ ಸಿಂಗರಿಸಲಾಗಿದೆ. ಅಲ್ಲದೇ ಠಾಣೆಯ ಆವರಣದಲ್ಲಿ ಕಾಂಕ್ರೀಟ್ ಹಾಗೂ ಫ್ಲೂರ್ ಟೈಲ್ಸ್ ಅಳವಡಿಸಲಾಗಿದೆ. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಅಲ್ಲದೇ, ಪೊಲೀಸ್ ಠಾಣೆಗೆ ಬಂದವರಿಗೆ ಸರಿಯಾಗಿ ಕುಳಿತುಕೊಳ್ಳುವುದಕ್ಕೆ ಸೂಕ್ತ ಜಾಗೆ ಕಲ್ಪಿಸಲಾಗಿದೆ. ಅಮೀನಗಢ ಪೊಲೀಸ್ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಅವರ ಕಾಳಜಿ ಮೂಲಕ ಠಾಣೆ ಈಗ ವಿಭಿನ್ನ ಠಾಣೆಯಾಗಿ ಹೊರಹೊಮ್ಮಿದೆ. ಇನ್ನು ಕಚೇರಿಯ ಒಳಗೆ ಕೂಡ ದೂರು ದಾಖಲಿಸಿಕೊಳ್ಳುವ ಸಿಬ್ಬಂದಿಯ ಸುತ್ತಲೂ ಗಾಜಿನ ಕೌಂಟರ್ ನಿರ್ಮಿಸಲಾಗಿದೆ. ಜೊತೆಗೆ ಒಂದೊಂದು ಬೀಟ್ಗೆ ತಕ್ಕಂತೆ ಒಂದೊಂದು ಹಳ್ಳಿಯ ದಾಖಲಾತಿ ಮಾಹಿತಿ ಎಲ್ಲಾ ಕಡತಗಳನ್ನು ಅಚ್ಚುಕಟ್ಟಾಗಿ ಪ್ರತ್ಯೇಕವಾಗಿ ಜೋಡಿಸಿ ಇಡಲಾಗಿದೆ. ಹೀಗಾಗಿ ಅಮೀನಗಡ ಪೊಲೀಸ್ ಠಾಣೆ ಸಿಬ್ಬಂದಿಯ ಕಾರ್ಯವೈಖರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ರವಿ ಮೂಕಿ
ಇದನ್ನೂ ಓದಿ:
ಪೊಲೀಸ್ ಠಾಣೆಯಲ್ಲಿ ಕಂಗನಾ ಬಿಂಕ ನೋಡಿ ಅಚ್ಚರಿ ಪಟ್ಟ ಪೊಲೀಸರು; ಹೈಲೈಟ್ ಆಯ್ತು ಮುತ್ತಿನ ನೆಕ್ಲೆಸ್
Sachin Atulkar: ವೈರಲ್ ಆಯ್ತು ಐಪಿಎಸ್ ಅಧಿಕಾರಿಯ ಫೋಟೋ; ಪೊಲೀಸ್ ಎಂದರೆ ಹೀಗೆ ಇರಬೇಕು ಎಂದ ನೆಟ್ಟಿಗರು
Published On - 9:09 am, Sat, 1 January 22