ಬಾಗಲಕೋಟೆ: ರಂಗೋಲಿಯಲ್ಲಿ ಅರಳಿತು ಅಪ್ಪು ಭಾವಚಿತ್ರ; ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ

| Updated By: preethi shettigar

Updated on: Dec 26, 2021 | 9:12 AM

Puneeth Rajkumar: ಅಪ್ಪು ಹೆಗಲ ಮೇಲೆ ಕಸ್ತೂರಿ ನಿವಾಸ ಸ್ಟೈಲ್​ನಲ್ಲಿ ಪಾರಿವಾಳ ಕೂತ ಭಾವಚಿತ್ರ ಸಂಪೂರ್ಣವಾಗಿ ಅರಳಿದ್ದು ರಂಗೋಲಿಯಲ್ಲಿ ಎಂಬುದೇ ವಿಶೇಷ. ಹುಬ್ಬಳ್ಳಿಯ ನವನಗರ ಮೂಲದ ರಂಗೋಲಿ ಕಲಾವಿದ ಶಿವಲಿಂಗಪ್ಪ ಬಡಿಗೇರ ಅವರಿಗೆ ಅಪ್ಪು ರಂಗೋಲಿ ಚಿತ್ರ ಬಿಡಿಸೋದಕ್ಕಾಗಿಯೇ ವಿಶೇಷವಾಗಿ ಆಹ್ವಾನ ನೀಡಲಾಗಿತ್ತು.

ಬಾಗಲಕೋಟೆ: ರಂಗೋಲಿಯಲ್ಲಿ ಅರಳಿತು ಅಪ್ಪು ಭಾವಚಿತ್ರ; ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ
ಪುನೀತ್ ಭಾವಚಿತ್ರ
Follow us on

ಬಾಗಲಕೋಟೆ: ಪುನೀತ್​ ರಾಜ್​ಕುಮಾರ್​(Puneeth Rajkumar) ಅಗಲಿ ಇದೀಗ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಅಪ್ಪು ನೆನೆಪು ಮಾತ್ರ ಪದೇ ಪದೇ ವಿವಿಧ ರೂಪದಲ್ಲಿ ಅನಾವರಣ ಆಗುತ್ತಿದೆ. ಅಪ್ಪು ಮೇಲೆ ಅಭಿಮಾನಿಗಳು ಎಷ್ಟರಮಟ್ಟಿಗೆ ಅಭಿಮಾನ ಇಟ್ಟುಕೊಂಡಿದ್ದಾರೆ ಎಂಬುವುದು ಇದರಿಂದ ಸಾಬೀತಾಗುತ್ತಲೇ ಇದೆ. ಹಳ್ಳಿ, ನಗರ, ಪಟ್ಟಣದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಪವರ್ ಸ್ಟಾರ್ ಅಭಿಮಾನ ಪ್ರಕಟವಾಗುತ್ತಲೇ ಇದೆ. ಇನ್ನು ಇದಕ್ಕೆ ಬಾಗಲಕೋಟೆ ತೋಟಗಾರಿಕೆ ಮೇಳ ಕೂಡ ಸಾಕ್ಷಿ ಆಯ್ತು. ಹೌದು ಬಾಗಲಕೋಟೆ ತೋಟಗಾರಿಕೆ ವಿವಿ ವತಿಯಿಂದ ನಡೆದ ತೋಟಗಾರಿಕೆ ಮೇಳದಲ್ಲಿ ಎಲ್ಲರನ್ನೂ ಸೆಳೆದಿದ್ದು ಫಲಪುಷ್ಪ ಪ್ರದರ್ಶನ (Flower show). ಆದರೆ ಫಲಪುಷ್ಪ ಪ್ರದರ್ಶನದಲ್ಲಿ ಕೇಂದ್ರ ಬಿಂದು ಅಥವಾ ಆಕರ್ಷಣೆಯಾಗಿದ್ದು ಅಪ್ಪು ಚಿತ್ರ.

ರಂಗೋಲಿಯಲ್ಲಿ ಅರಳಿ ನಗು ಬೀರಿದ ಅಪ್ಪು ಅಮರಶ್ರೀ
ಫಲಪುಷ್ಪ ಪ್ರದರ್ಶನದಲ್ಲಿ ನೂರಾರು ಕಲರ್ ಪುಲ್ ಹೂಗಳಿದ್ದವು.‌ ತರಹೇವಾರಿ ತರಕಾರಿ, ಹಣ್ಣುಗಳಿದ್ದವು. ಆದರೆ ಹೂ-ಹಣ್ಣುಗಳ ಮಧ್ಯೆ ಎಲ್ಲರನ್ನೂ ಸೆಳೆದಿದ್ದು ಮಾತ್ರ ಪುನೀತ್ ರಾಜ್​ಕುಮಾರ್​ ಭಾವಚಿತ್ರ. ತೋಟಗಾರಿಕೆ ಮೇಳದ ಮೊದಲ ದಿನವಾದ ನಿನ್ನೆ ಎಲ್ಲರ ಗಮನ ಸಾಗಿದ್ದು, ಫಲಪುಷ್ಪ ಪ್ರದರ್ಶನದ ಕಡೆ. ಆದರೆ ಒಳಹೊಕ್ಕ ತಕ್ಷಣ ಎಲ್ಲರನ್ನು ಸೆಳೆದಿದ್ದು, ಪುನೀತ್ ನಗುಮುಖದ ಭಾವಚಿತ್ರ. ಅದರಲ್ಲೂ ರಂಗೋಲಿಯಲ್ಲಿ ಭಾವಚಿತ್ರವನ್ನು ರಚಿಸಿದ್ದು, ಪ್ರಮುಖ ವಿಶೇಷವಾಗಿತ್ತು. ಅಪ್ಪು ಭಾವಚಿತ್ರ ಕಂಡ ಜನರು ಅದರ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಶುರುಮಾಡಿದರು.

ಅಪ್ಪು ಭಾವಚಿತ್ರ ರಚನೆಗಾಗಿಯೇ ನೀಡಲಾಗಿತ್ತು ರಂಗೋಲಿ ಕಲಾವಿದರಿಗೆ ಆಹ್ವಾನ
ಅಪ್ಪು ಹೆಗಲ ಮೇಲೆ ಕಸ್ತೂರಿ ನಿವಾಸ ಸ್ಟೈಲ್​ನಲ್ಲಿ ಪಾರಿವಾಳ ಕೂತ ಭಾವಚಿತ್ರ ಸಂಪೂರ್ಣವಾಗಿ ಅರಳಿದ್ದು ರಂಗೋಲಿಯಲ್ಲಿ ಎಂಬುದೇ ವಿಶೇಷ. ಹುಬ್ಬಳ್ಳಿಯ ನವನಗರ ಮೂಲದ ರಂಗೋಲಿ ಕಲಾವಿದ ಶಿವಲಿಂಗಪ್ಪ ಬಡಿಗೇರ ಅವರಿಗೆ ಅಪ್ಪು ರಂಗೋಲಿ ಚಿತ್ರ ಬಿಡಿಸೋದಕ್ಕಾಗಿಯೇ ವಿಶೇಷವಾಗಿ ಆಹ್ವಾನ ನೀಡಲಾಗಿತ್ತು. ಆ ಪ್ರಕಾರ ಹುಬ್ಬಳ್ಳಿಯಿಂದ ಬಾಗಲಕೋಟೆ ತೋಟಗಾರಿಕೆ ವಿವಿಗೆ ಬಂದ ಶಿವಲಿಂಗಪ್ಪ ಬಡಿಗೇರ ನಾಲ್ಕು ತಾಸುಗಳ ಸಮಯದಲ್ಲಿ ರಂಗೋಲಿಯಲ್ಲಿ ಅಪ್ಪು ಭಾವಚಿತ್ರ ಬಿಡಿಸಿದ್ದಾರೆ.ಸ್ವ ತಃ ಶಿವಲಿಂಗಪ್ಪ ಅಪ್ಪು ಹಾಗೂ ರಾಜ್​ಕುಮಾರ್​ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.

ನಾನು ರಾಜ್​ಕುಮಾರ್​ ಹಾಗೂ ಪುನೀತ್​ ಅವರ ಕಟ್ಟಾ ಅಭಿಮಾನಿ. ರಾಜ್​ಕುಮಾರ್ ಹಾಗೂ ಪುನೀತ್ ಅವರ ಅನೇಕ ರಂಗೋಲಿ ಚಿತ್ರ ಬಿಡಿಸಿದ್ದೇನೆ. ನನ್ನ ಕಲೆಯನ್ನು ಗುರುತಿಸಿ ನನಗೆ ಆಹ್ವಾನ ನೀಡಿದ್ದಾರೆ‌. ಈ ಚಿಕ್ಕ ವಯಸ್ಸಲ್ಲಿ ಅಪ್ಪು ನಿಧನ ನನ್ನನ್ನು ಬಹಳ ಕಾಡಿದೆ. ಜನರಿಗೆ ಸಾಕಷ್ಟು ಒಳ್ಳೆಯ ಕಾರ್ಯ ಮಾಡಿದ ಅಪ್ಪುವಿನದ್ದು ಹೂವಿನಂತ ಮನಸ್ಸು. ಆದ ಕಾರಣ ಹೂಗಳ‌ ಮಧ್ಯೆ ಪವರ್ ಸ್ಟಾರ್ ಪುನೀತ್ ರಂಗೋಲಿ ಭಾವಚಿತ್ರ ಬಿಡಿಸಿದ್ದೇನೆ ಎಂದು ಕಲಾವಿದ ಶಿವಲಿಂಗಪ್ಪ ಬಡಿಗೇರ ಹೇಳಿದ್ದಾರೆ.

ಒಟ್ಟಾರೆ ಯಾವುದೇ ಸಂಭ್ರಮ ಇರಲಿ, ಸಭೆಗಳಿರಲಿ ಬಹುತೇಕ ಕಡೆ ಬ್ಯಾನರ್ ಅಥವಾ ಭಾವಚಿತ್ರದ ಮೂಲಕ ಪುನೀತ್ ಅವರನ್ನು ಅಭಿಮಾನಿಗಳು ನೆನೆಯುತ್ತಲೇ ಇದ್ದಾರೆ. ಪುನೀತ್ ಮೇಲಿನ ಜನರ ಅಭಿಮಾನಕ್ಕೆ ತೋಟಗಾರಿಕೆ ಮೇಳದ ರಂಗೋಲಿ ಭಾವಚಿತ್ರ ಕೂಡ ಸಾಕ್ಷಿಯಾಗಿದೆ.

ವರದಿ: ರವಿ ಮೂಕಿ

ಇದನ್ನೂ ಓದಿ:
ಅಮೇಜಾನ್​ ಪ್ರೈಮ್​ನಲ್ಲಿ ಪಿಆರ್​ಕೆ ವಾರ; ಒಂದು ತಿಂಗಳಲ್ಲಿ ಅಪ್ಪು ನಿರ್ಮಾಣದ ಮೂರು ಹೊಸ ಸಿನಿಮಾ ರಿಲೀಸ್​?

ಪುನೀತ್​ ರಾಜ್​ಕುಮಾರ್​ ಭಾವಚಿತ್ರ ಹಿಡಿದುಕೊಂಡು ಶಬರಿಮಲೆ ಯಾತ್ರೆ ಮಾಡಿದ ಅಭಿಮಾನಿಗಳು

Published On - 9:10 am, Sun, 26 December 21