ಬಾಗಲಕೋಟೆ: ರಾಜ್ಯದಲ್ಲಿ ಫೆಬ್ರುವರಿ ಮಾರ್ಚ್ ತಿಂಗಳಲ್ಲಿ ಭುಗಿಲೆದ್ದ ಹಿಜಾಬ್ ವಿವಾದ ನಂತರ ತಣ್ಣಗಾಗಿತ್ತು.ಆದರೆ ಇದೀಗ ಪುನಃ ಮಂಗಳೂರು ಭಾಗದಲ್ಲಿ ಮತ್ತೆ ಹಿಜಾಬ್ ವಿವಾದ ಶುರುವಾಗಿದೆ.ಇದೆ ಬೆನ್ನಲ್ಲೇ ಮುಸ್ಲಿಂ ವಿದ್ಯಾರ್ಥಿ ಬುರುಡೆ ಟೋಪಿ ಹಾಕಿಕೊಂಡು ಕಾಲೇಜಿಗೆ ಬಂದ ಹಿನ್ನೆಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪಿಎಸ್ ಐ, ಕಾಲೇಜು ಪ್ರಿನ್ಸಿಪಾಲ್, ಐದು ಜನ ಕಾನ್ಸ್‌ಟೇಬಲ್ ಗಳ ವಿರುದ್ಧ ವಿಧ್ಯಾರ್ಥಿ ಎಫ್ಐಆರ್ ದಾಖಲಿಸಿದ್ದಾನೆ.ಕಾಲೇಜು ಪ್ರಿನ್ಸಿಪಾಲ್,ಪಿಎಸ್ಐ,ಕಾನ್ಸ್‌ಟೇಬಲ್ ಸೇರಿ ಏಳು ಜನರ ವಿರುದ್ಧ ಬಾಗಲಕೋಟೆ ಜಿಲ್ಲೆ ತೇರದಾಳ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಜೆಎಮ್ಎಫ್ಸಿ ನ್ಯಾಯಾಲಯದ ಆದೇಶದನ್ವಯ ಎಫ್ಐಆರ್ ದಾಖಲಾಗಿದೆ.
ಅಷ್ಟಕ್ಕೂ ಆಗಿದ್ದು ಏನು? ಬುರುಡೆ ಟೋಪಿ ಹಾಕಿಕೊಂಡು ಬಂದಾಗ ಏನಾಯಿತು ಎಲ್ಲಿ ಆಗಿದ್ದು ಘಟನೆ?
ಫೆಬ್ರವರಿ ತಿಂಗಳಲ್ಲಿ ಆಗ ತಾನೆ ಹಿಕಾಬ್ ವಿವಾದ ಭುಗಿಲೆದ್ದಿತ್ತು. ಶಾಲಾಕಾಲೇಜುಗಳಲ್ಲಿ ವಸ್ತ್ರ ಕಡ್ಡಾಯ ಯಾವುದೇ ಅನ್ಯವಸ್ತ್ರ ಧರಿಸುವಂತಿಲ್ಲ ಎಂಬ ಚರ್ಚೆಗಳು ಶುರುವಾಗಿದ್ದವು. ಹಿಜಾಬ್ ಗಲಾಟೆ ಹಿನ್ನೆಲೆ ಪರಿಸ್ಥಿತಿ ಸೂಕ್ಷ್ಮವಾಗಿತ್ತು. ಇದೆ ವೇಳೆ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣದ ಪ್ರಥಮ ದರ್ಜೆ ಕಾಲೇಜಿಗೆ ನವೀದ್ ಥರಥರಿ ಎಂಬ ವಿದ್ಯಾರ್ಥಿ ಬುರುಡೆ ಟೋಪಿ ಹಾಕಿಕೊಂಡು ಬಂದಿದ್ದ. ಫೆಬ್ರವರಿ ೧೮ ರಂದು ಕಾಲೇಜಿಗೆ ಆತ ಬಂದಾಗ ಪ್ರಿನ್ಸಿಪಾಲ್ ಅಣ್ಣಪ್ಪಯ್ಯ ಪೂಜಾರಿ ಒಳಗೆ ಬಿಟ್ಟಿರಲಿಲ್ಲ. ಈ ವೇಳೆ ನವೀದ್ ಪ್ರಿನ್ಸಿಪಾಲ್ ಜೊತೆ ವಾಗ್ವಾದ ಮಾಡಿದ್ದ, ನಂತರ ಸ್ಥಳಕ್ಕೆ ಪೊಲೀಸರನ್ನು ಕರೆಸಿ ಹೊರಹಾಕಿದ್ದರು. ನನ್ನ ಮೇಲೆ ಹಲ್ಲೆಯಾಗಿದೆ ಎಂದು ನವೀದ್ ಜಮಖಂಡಿ ಆಸ್ಪತ್ರೆ ಸೇರಿದ್ದರು. ನಂತರ ಪ್ರಿನ್ಸಿಪಾಲ್ ಹಾಗೂ ಪೊಲೀಸರ ವಿರುದ್ಧ ದೂರು ನೀಡಲು ತೇರದಾಳ ಠಾಣೆಗೆ ಹೋದರೆ ದೂರು ಸ್ವೀಕರಿಸಲು ತೇರದಾಳ ಪೊಲೀಸರು ನಿರ್ಲಕ್ಷ್ಯ ಮಾಡಿದ ಹಿನ್ನೆಲೆ ಬನಹಟ್ಟಿ ಜೆ ಎಮ್ ಎಫ್ ಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ ನ್ಯಾಯಾಲಯದ ಆದೇಶದ ಅನ್ವಯ ತೇರದಾಳ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ೫ ಜನ ಪೇದೆಗಳು,
ಕಾಲೇಜಿನ ಪ್ರಿನ್ಸಿಪಾಲ್ ಅವರನ್ನು ಆರೋಪಿ ಮಾಡಿ ಪ್ರಕರಣ ದಾಖಲಾಗಿದೆ. ತೇರದಾಳ ಪಿಎಸ್ ಐ ರಾಜು ಬೀಳಗಿ.
ಪೊಲೀಸ್ ಕಾನಸ್ಟೇಬಲ್ ಗಳಾದ ಗಣಿ ಪಿ,ಹೆಚ್. ಮಲ್ಲಿಕಾರ್ಜುನ ಕೆಂಚಣ್ಣವರ,ಎಸ್ ಬಿ ಕಲಾಟೆ,ಎಸ್ ಸಿ ಮದನಮಟ್ಟಿ, ಕಾಡು ಸನ್ನತ್ತಿ, ಪ್ರಿನ್ಸಿಪಾಲ್ ಅಣ್ಣಪ್ಪಯ್ಯ ಪೂಜಾರಿ ಸೇರಿದಂತೆ ಏಳು ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಇನ್ನು ಈ ಬಗ್ಗೆ ಟಿರ್ವಿ ಜೊತೆ ಮಾತಾಡಿದ ವಿದ್ಯಾರ್ಥಿ ನವೀದ್ ತಂದೆ ಹಸನಸಾಬ್ “ಫೆಬ್ರವರಿ ೧೮ ರಂದು ಕಾಲೇಜಿಗೆ ಹೋದಾಗ ನನ್ನ ಮಗನಿಗೆ ಪ್ರಿನ್ಸಿಪಾಲ್ ಹಲ್ಲೆ ಮಾಡಿದರು. ಜೊತೆಗೆ ಪೊಲೀಸರನ್ನು ಕರೆಸಿದರು. ಪೊಲೀಸರು ನನ್ನ ಹಾಗೂ ಮಗನ ಮೇಲೆ ಹಲ್ಲೆ ಮಾಡಿ ತಳ್ಳಾಡಿ ನೂಕಿ ಹೊರ ಕಳಿಸಿದರು. ನಂತರ ನಮ್ಮ ಮೇಲೆ ಎಫ್ ಐರ್ ಕೂಡ ಮಾಡಿದ್ರು. ನಂತರ ನಾವು ದೂರು ಕೊಡಲು ಹೋದಾಗ ದೂರು ಪಡೆಯಲಿಲ್ಲ, ನಂತರ ನಾವು ಕೋರ್ಟ್ ಮೊರೆ ಹೋದೆವು. ಕೋರ್ಟ್ ಆದೇಶದ ಪ್ರಕಾರ ಎಫ್ ಐ ಆರ್ ಮಾಡಿಕೊಂಡಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ ಪ್ರಿನ್ಸಿಪಾಲ್, ಪಿ ಎಸ್ ಐ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಅವರ ಮೇಲೆ ಕ್ರಮ ಆಗಬೇಕು ಎಂದರು.
ವರದಿ: ರವಿ ಮೂಕಿ ಟಿರ್ವಿ ಬಾಗಲಕೋಟೆ
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:16 am, Mon, 30 May 22