Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆಯಲ್ಲಿ ಪಡಿತರ ಅಕ್ಕಿಗೆ ಕನ್ನ; ಬೈಕ್​ನಲ್ಲಿ ಸಾಗಿಸುವಾಗ ಹಿಂಬಾಲಿಸಿ ಹಿಡಿದ ಸ್ಥಳೀಯರು

ಅನ್ನಭಾಗ್ಯ, ಜನರ ಹಸಿವು ನೀಗಿಸಲು ಇರುವ ಒಂದು ಮಹತ್ವದ ಯೋಜನೆ.ಇಂತಹ ಯೋಜನೆಯನ್ನೇ ಕೆಲವರು ಕಳ್ಳದಂಧೆ ಮಾಡಿಕೊಂಡು ಕನ್ನ ಹಾಕುತ್ತಿದ್ದಾರೆ. ಪಡಿತರ ಅಂಗಡಿಯಿಂದಲೇ ಅಕ್ಕಿ ಸಾಗಿಸುತ್ತಿದ್ದವ ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಕಳ್ಳದಂಧೆಗೆ ಸಾಕ್ಷಿಯಾಗಿದೆ.

ಬಾಗಲಕೋಟೆಯಲ್ಲಿ ಪಡಿತರ ಅಕ್ಕಿಗೆ ಕನ್ನ; ಬೈಕ್​ನಲ್ಲಿ ಸಾಗಿಸುವಾಗ ಹಿಂಬಾಲಿಸಿ ಹಿಡಿದ ಸ್ಥಳೀಯರು
ಬಾಗಲಕೋಟೆಯಲ್ಲಿ ಪಡಿತರ ಅಕ್ಕಿ ಕಳ್ಳತನ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 13, 2023 | 10:29 PM

ಬಾಗಲಕೋಟೆ, ಡಿ.13: ಬಾಗಲಕೋಟೆ(Bagalakote)ಯ ವಿದ್ಯಾಗಿರಿಯಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ (Annabhagya) ಅಕ್ಕಿಗೆ ಕನ್ನ ಹಾಕುತ್ತಿದ್ದವನನ್ನ ಸ್ಥಳೀಯರೇ ಹಿಂಬಾಲಿಸಿ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಬಡವರ ಮಧ್ಯಮವರ್ಗದವರ ಹಸಿವು ನೀಗಿಸೋದಕ್ಕೆ ಸರಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ. ಆದರೆ, ಇಂತಹ ಅನ್ನಭಾಗ್ಯಕ್ಕೆ ಕನ್ನ ಹಾಕುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ವಿದ್ಯಾಗಿರಿಯ ಶಿವಾನಂದ ಬಿದರಿ ಎಂಬಾತ ವಿದ್ಯಾಗಿರಿ ಎಂಟನೇ ಕ್ರಾಸ್ ಪಡಿತರ ಅಂಗಡಿಯಿಂದ ಅಕ್ಕಿ ಕಳ್ಳ ಸಾಗಾಣಿಕೆ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಪಡಿತರ ಅಂಗಡಿ ಮಾಲೀಕ ಸುರೇಶ್ ಗಡಗಡೆ ಎಂಬುವರಿಂದ ಕೆಜಿಗೆ 10 ರೂನಂತೆ ಆಕ್ರಮವಾಗಿ ಖರೀಧಿಸಿ, ಅಕ್ಕಿಯನ್ನು ಹಿಟ್ಟು ಮಾಡಿ ಕೆಜಿಗೆ 25 ರಂತೆ ಮಾರಾಟ ಮಾಡುವ ಕಳ್ಳದಂಧೆ ಇತನದ್ದಾಗಿದೆ. ಇನ್ನು ರೆಡ್ ಹ್ಯಾಂಡ್ ಆಗಿ ಸಿಕ್ಕ ಶಿವಾನಂದ ‘ನಾನು ರೇಷನ್ ಅಂಗಡಿಯಿಂದ ತಂದಿದ್ದು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಶಿವಾನಂದ ಬಿದರಿ ಬೈಕ್ ಮೇಲೆ ಪಡಿತರ ಅಕ್ಕಿಯನ್ನು ಸಾಗಿಸುವುದನ್ನು ಸ್ಥಳೀಯರು ಪ್ರತ್ಯಕ್ಷವಾಗಿ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಜೊತೆಗೆ ಆಹಾರ ಇಲಾಖೆ ಹಾಗೂ ನವನಗರ ಠಾಣೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಶಿವಾನಂದ ಬಿದರಿ ಮನೆಯಲ್ಲಿ 17 ಗೊಬ್ಬರ ಚೀಲದಲ್ಲಿ ಒಟ್ಟು 13 ಕ್ವಿಂಟಲ್ ಪಡಿತರ ಅಕ್ಕಿ ಇರುವುದು ಕಂಡು ಬಂದಿದೆ. ಆಹಾರ ಇಲಾಖೆ ನಿರೀಕ್ಷಕರು ಪರಿಶೀಲನೆ ನಡೆಸಿ ಅಕ್ಕಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ರಾಮನಗರ: ಡಿಸಿಎಂ ಡಿಕೆ ಶಿವಕುಮಾರ್​ ತವರು ಜಿಲ್ಲೆಯಲ್ಲೇ ಅನ್ನಭಾಗ್ಯ ಅಕ್ಕಿ ಕಳವು ಆರೋಪ; ಓರ್ವನ ಬಂಧನ

ಜೊತೆಗೆ ಶಿವಾನಂದ ಬಿದರಿ ವಿರುದ್ದ ಕೇಸ್ ಮಾಡಿದ್ದಾರೆ. ಆದರೆ, ರೇಷನ್ ಅಂಗಡಿ ಮಾಲೀಕ ಸುರೇಶ್ ಗಡಗಡೆ ವಿರುದ್ದ ಕೇಸ್ ಮಾಡಿಲ್ಲ. ವಿಚಾರಣೆ ಮಾಡಿ ನಂತರ ಕೇಸ್ ಹಾಕೋದಾಗಿ ಹೇಳುತ್ತಿದ್ದಾರೆ. ಇದರಿಂದ ಆಹಾರ ಇಲಾಖೆ ಅಧಿಕಾರಿಗಳು ರೇಷನ್ ಅಂಗಡಿ ಮಾಲೀಕನ ರಕ್ಷಣೆ ಮಾಡುತ್ತಿದ್ದಾರಾ ಎಂಬ ಸಂಶಯ ಮೂಡಿದೆ. ಇನ್ನು ಇಂತಹ ಆಕ್ರಮವನ್ನು ಪ್ರಶ್ನೆ ಮಾಡಿದ್ದಕ್ಕೆ ಅಂಧ ವ್ಯಕ್ತಿ ಬಸವರಾಜ ಶೆಲ್ಲಿಕೇರಿ ಎಂಬುವವರ ರೇಷನ್ ಕಾರ್ಡನ್ನೇ ಸುರೇಶ್ ಗಡಗಡೆ ರದ್ದು ಮಾಡಿದ್ದಾನಂತೆ. ಇದು ಬಹಳ ದಿನದಿಂದ ನಡೆಯುತ್ತಿದ್ದು, ರೇಷನ್ ಅಂಗಡಿ ಮಾಲೀಕನ ಮೇಲೆ ಶಿಸ್ತು ಕ್ರಮವಾಗಬೇಕು. ಆತನ ಲೈಸನ್ಸ್ ರದ್ದು ಪಡಿಸಬೇಕೆಂದು ಆಗ್ರಹ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಿರಂತರವಾಗಿ ಇಂತಹ ಕಳ್ಳದಂಧೆ ನಡೆಯುತ್ತಲೇ ಇದೆ. ಅನ್ನಭಾಗ್ಯಕ್ಕೆ ಕನ್ನ ಹಾಕಿ ಜೇಬು ತುಂಬಿಸಿಕೊಳ್ಳುವ ಕುಳಗಳು ಹೆಚ್ಚಾಗಿದ್ದಾರೆ. ಸದ್ಯ ಇವರು ಮಾತ್ರ ಸಿಕ್ಕಿಬಿದ್ದಿದ್ದು, ಆಹಾರ ಇಲಾಖೆ ಅಧಿಕಾರಿಗಳು ಇಂತಹ ಆಕ್ರಮ ಕುಳಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ