
ಬಾಗಲಕೋಟೆ, ಆಗಸ್ಟ್ 14: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜುಲೈ 25ರಂದು ನಡೆದಿದ್ದ ವೈನ್ ಶಾಪ್ ಮ್ಯಾನೇಜರ್ ಕಾರು ಸ್ಫೋಟ ಪ್ರಕರಣದ (Car Blast) ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ನಾಲ್ಕು ಎಕರೆ ಜಮೀನಿನ ವಿವಾದ ಹಾಗೂ ಹಣಕಾಸಿನ ವಿಚಾರಕ್ಕಾಗಿ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಕಾರನ್ನು ಸ್ಫೋಟಿಸಿ ಕೊಲೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ಪ್ರಮುಖ ಸಂಚುಕೋರ ಶಿವಾನಂದ ಪರಸಪ್ಪ ಜಲ್ಲಿ (29), ಸ್ಫೋಟಕ ಇಡಲು ಸಹಕರಿಸಿದ ರೇವಣಪ್ಪ ನಿಂಗಪ್ಪ ಜಲ್ಲಿ (24), ಮೊಬೈಲ್ ಹಾಗೂ ಬೆದರಿಕೆ ಸಂದೇಶ ರವಾನೆಗೆ ನೆರವಾದ ಹೆಬ್ಬಾಳಟ್ಟಿ ಗ್ರಾಮದ ಮಹಾದೇವ ಬೀರಪ್ಪ ಸಂಗಾಪುರ (21) ಮತ್ತು ಕೃತ್ಯಕ್ಕೆ ಸಾಥ್ ನೀಡಿದ ಬಬಲೇಶ್ವರದ ಮಲ್ಲಿಕಾರ್ಜುನ ಮುರಗೆಪ್ಪ ಭದ್ರಾಪನವರ (23) ಬಂಧಿತ ಆರೋಪಿಗಳು. ಸ್ಫೋಟಕಗಳನ್ನು ಪೂರೈಸಿದ್ದ ಮತ್ತೊಬ್ಬ ಪ್ರಮುಖ ಸೂತ್ರಧಾರ ಗಜಾನನ ಸಂಗಾಪುರ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಹಿಪ್ಪರಗಿಯಲ್ಲಿ ಬಾರ್ ಮುಂದೆ ನಿಲ್ಲಿಸಿದ್ದ ಕಾರು ಸ್ಫೋಟ: ತಪ್ಪಿದ ಭಾರಿ ದುರಂತ
ಜುಲೈ 25ರ ರಾತ್ರಿ 10.45ರ ಸುಮಾರಿಗೆ ಹಿಪ್ಪರಗಿ ಗ್ರಾಮದ ಯುವರಾಜ ವೈನ್ ಶಾಪ್ ಮ್ಯಾನೇಜರ್ ಹನುಮಂತ ಅಥಣಿ ಅವರ ಮಹೀಂದ್ರಾ ಎಕ್ಸ್‌ಯುವಿ 300 ಕಾರು ಭೀಕರವಾಗಿ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಕಾರಿನ ಬಿಡಿಭಾಗಗಳು ನೂರಾರು ಮೀಟರ್ ದೂರ ಹಾಗೂ ಮರಗಳ ಮೇಲೂ ಹಾರಿ ಬಿದ್ದಿದ್ದವು. ಆ ಸಮಯದಲ್ಲಿ ಮ್ಯಾನೇಜರ್ ಹನುಮಂತ, ಕಾರು ಹತ್ತಲು ಹೋಗುವ ಮುನ್ನ ಕ್ಯಾಶ್ ಕೌಂಟರ್ ಬಳಿ ಕೆಲ ಕ್ಷಣ ನಿಂತಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಬೆಳಗಾವಿ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಶ್ವಾನದಳ ಹಾಗೂ ಬಾಂಬ್ ಪತ್ತೆ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಪೊಲೀಸರ ತನಿಖೆ ವೇಳೆ ಜಮೀನು ವಿವಾದವೇ ಈ ಕೃತ್ಯಕ್ಕೆ ಕಾರಣ ಎಂಬುದು ಬೆಳಕಿಗೆ ಬಂದಿದೆ. ಹನುಮಂತ ಹೆಬ್ಬಾಳಟ್ಟಿ ಗ್ರಾಮದ ಲಿಂಗಪ್ಪ ಎಂಬುವರಿಗೆ 40 ಲಕ್ಷ ರೂ ಸಾಲ ನೀಡಿದ್ದು, ಹಣ ಮರಳಿಸದ ಕಾರಣ ಅವರ 4 ಎಕರೆ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಬಳಿಕ ಲಿಂಗಪ್ಪನ ಸಹೋದರನ ಮಗ ಶಿವಾನಂದ ಜಲ್ಲಿ, ತಾನು 67 ಲಕ್ಷ ರೂ ನೀಡುವುದಾಗಿ ಹೇಳಿ ಹೊಲವನ್ನು ಬಿಡಿಸಿಕೊಂಡಿದ್ದ. ಆದರೆ ಮೊದಲ ಕಂತು ಮತ್ತು ಬಡ್ಡಿ ಹಣವನ್ನು ನೀಡದೆ ಸತಾಯಿಸುತ್ತಿದ್ದ. ಹನುಮಂತ ಹಣ ನೀಡುವಂತೆ ಅಥವಾ ಜಮೀನು ಬಿಡುವಂತೆ ನಿರಂತರ ಒತ್ತಡ ಹೇರುತ್ತಿದ್ದರು. ಇದರಿಂದ ಆಕ್ರೋಶಗೊಂಡ ಶಿವಾನಂದ, ಹನುಮಂತನನ್ನು ಮುಗಿಸಿದರೆ ಹಣವನ್ನೂ ನೀಡಬೇಕಿಲ್ಲ ಮತ್ತು ಆಸ್ತಿಯೂ ಉಳಿಯುತ್ತದೆ ಎಂದು ಸಂಚು ರೂಪಿಸಿದ್ದ.
ಬೆಳಗಾವಿಯ ಅಥಣಿ ಹಾಗೂ ವಿಜಯಪುರದ ಕಲ್ಲೂರಿನಲ್ಲಿ ಜಿಲೆಟಿನ್ ಮತ್ತು ಡೆಟೋನೇಟರ್ ಖರೀದಿಸಿ, ಘಟನೆಯ ರಾತ್ರಿ ಕಾರಿನ ಮುಂಭಾಗದ ಎಡಗಡೆಯ ಟೈರ್ ಹಿಂಭಾಗ 30 ಜಿಲೆಟಿನ್ ಕಡ್ಡಿಗಳ ಸ್ಫೋಟಕವನ್ನು ಇರಿಸಲಾಗಿತ್ತು. ಬಳಿಕ ವೈನ್ ಶಾಪ್ ಪಕ್ಕದ ಕಬ್ಬಿನ ಗದ್ದೆಯಲ್ಲಿ 100 ಮೀಟರ್ ದೂರ ಕುಳಿತು ಡೆಟೋನೇಟರ್ ವೈರ್ ಮೂಲಕ ಕಾರನ್ನು ಸ್ಫೋಟಿಸಲಾಗಿತ್ತು. ಆದರೆ ಕೊಲೆ ಯತ್ನ ವಿಫಲವಾಗಿತ್ತು.
ಇದನ್ನೂ ಓದಿ: Car Blast Case: ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್ಪಿ ಹೇಳಿದ್ದೇನು?
ಆಗಸ್ಟ್ 6ರಂದು ಕದ್ದ ಸಿಮ್ ಕಾರ್ಡ್ ಬಳಸಿ ಹನುಮಂತ ಮತ್ತು ಅವರ ಸಹೋದರ ಬಸವರಾಜ್‌ಗೆ ವಾಟ್ಸ್‌ಆ್ಯಪ್ ಹಾಗೂ ಎಸ್‌ಎಂಎಸ್ ಮೂಲಕ ಹಣ ಮತ್ತು ಜಮೀನಿನ ಬೇಡಿಕೆ ಕೈಬಿಡುವಂತೆ ಬೆದರಿಕೆ ಸಂದೇಶ ರವಾನಿಸಲಾಗಿತ್ತು. ಇದೇ ಕದ್ದ ಸಿಮ್ ಕಾರ್ಡ್ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ ಪೊಲೀಸರು, ಸತತ 20 ದಿನಗಳ ಕಾರ್ಯಚರಣೆಯ ನಂತರ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.