ಕ್ಯಾನ್ಸರ್ನಿಂದ ಮೃತಪಟ್ಟ ಪತಿ: ಶವ ಮನೆಯೊಳಗೆ ತರಲು ಬಿಡದ ಪತ್ನಿ, ವಿದ್ಯುತ್ ಕಂಬಕ್ಕೆ ಆಧಾರವಾಗಿಸಿ ಮೃತದೇಹ ಕೂರಿಸಿದ ಸ್ಥಳೀಯರು
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಸೋಮವಾರಪೇಟೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಕ್ಯಾನ್ಸರ್ನಿಂದ ಮೃತಪಟ್ಟ ಪತಿಯ ಶವವನ್ನು ಪತ್ನಿ ಮನೆಯೊಳಗೆ ತರಲು ಬಿಡಲಿಲ್ಲ. ಆಗ, ಸ್ಥಳಿಯರು ಶವವನ್ನು ಮನೆಯ ಎದುರಿನ ವಿದ್ಯುತ್ ಕಂಬಕ್ಕೆ ಆಧಾರವಾಗಿಸಿ ಕೂರಿಸಿದರು.
ಬಾಗಲಕೋಟೆ, ಜೂನ್ 12: ಬನಹಟ್ಟಿ (Rabkavi Banhatti) ನಗರದ ಸೋಮವಾರಪೇಟೆಯ ಗುರು ಕಿತ್ತೂರ (51) ಎಂಬುವರು ಕ್ಯಾನ್ಸರ್ನಿಂದ (Cancer) ಮೃತಪಟ್ಟಿದ್ದಾರೆ. ಕ್ಯಾನ್ಸರ್ಗೆ ಹೆದರಿ ಪತಿಯ ಶವವನ್ನು ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಮನೆಯೊಳಗೆ ತರಲು ಬಿಡದೆ ಅಮಾನವೀಯವಾಗಿ ವರ್ತಿಸಿದ್ದಾರೆ. ಬಳಿಕ ಸ್ಥಳೀಯರು ಮನೆಯ ಹೊರಗಿನ ವಿದ್ಯುತ್ ಕಂಬಕ್ಕೆ ಶವವನ್ನು ಆಧಾರವಾಗಿಸಿ ಕೂರಿಸಿದ್ದಾರೆ.
ಗುರು ಕಿತ್ತೂರು ಕಳೆದೆರಡು ತಿಂಗಳಿಂದ ಪತ್ನಿ ಮನೆಯಲ್ಲಿ ವಾಸವಾಗಿದ್ದರು. ಕ್ಯಾನ್ಸರ್ನಿಂದ ಜಿಗುಪ್ಸೆಗೊಂಡು ಗುರು ಕಿತ್ತೂರು ಇತ್ತೀಚಿಗೆ ಮನೆ ತೊರೆದಿದ್ದರು. ಮಂಗಳವಾರ (ಜೂನ್ 11) ರಂದು ಬನಹಟ್ಟಿ ನಗರದ ವೈಭವ ಚಿತ್ರಮಂದಿರ ಬಳಿಯ ರಸ್ತೆ ಪಕ್ಕ ಮೃತಪಟ್ಟರು. ನಂತರ ಸ್ಥಳೀಯರು ಶವವನ್ನು ಮನೆಗೆ ತಂದಾಗ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಮನೆಯೊಳಗೆ ಶವ ಕೂಡಿಸಬೇಡಿ ಅಂತ ಅಮಾನವೀಯವಾಗಿ ವರ್ತಸಿದರು.
ಇದನ್ನೂ ಓದಿ: ಅಂತ್ಯಸಂಸ್ಕಾರ ಸಿದ್ಧತೆ ವೇಳೆ ಕೆಮ್ಮಿದ ಮಗು, ಇಳಕಲ್ನಲ್ಲೊಂದು ಅಚ್ಚರಿ! ಆದರೆ ವೈದ್ಯರು ಹೇಳೋದೇ ಬೇರೆ
ಆಗ ಅಕ್ಕ-ಪಕ್ಕದ ಜನ ಅನಿವಾರ್ಯವಾಗಿ ಮನೆ ಮುಂದಿರುವ ವಿದ್ಯುತ್ ಕಂಬಕ್ಕೆ ಶವವನ್ನು ಆಧಾರವಾಗಿಸಿ ಕೂಡಿಸಿದರು. ಇದನ್ನು ಗಮನಿಸಿದ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ, ಗುರು ಕಿತ್ತೂರು ಅವರ ಪತ್ನಿ ಹಾಗೂ ಆಕೆಯ ಮನೆಯವರಿಗೆ ತಿಳುವಳಿಕೆ ಹೇಳಿದರು. ನಂತರ ಶವವನ್ನು ಮನೆಯಲ್ಲಿ ಕೂಡಿಸಲು ಅನುಮತಿ ನೀಡಿದರು. ಬಳಿಕ ಅಂತ್ಯಸಂಸ್ಕಾರ ನೆರವೇರಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ