
ಬಾಗಲಕೋಟೆ, ಮೇ 14: ಕ್ರಿಕೆಟ್ ಬಾಲ್ ವಿಚಾರಕ್ಕೆ ಜಗಳ ತೆಗೆದು ಯುವಕ ಒಡೆದ ಬಿಯರ್ (Beer) ಬಾಟಲ್ನಿಂದ ಶಿಕ್ಷಕನಿಗೆ (Teacher) ಇರಿದ ಘಟನೆ ಜಮಖಂಡಿ (Jamakandi) ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. ಶಿಕ್ಷಕ ರಾಮಪ್ಪ ಪೂಜಾರಿ (36) ಎಂಬುವರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪವನ್ ಜಾಧವ್ (21) ಬಾಟಲ್ನಿಂದ ಇರಿದಿರುವ ಯುವಕ.
ಬಿಎಲ್ಡಿಇ ಖಾಸಗಿ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ರಾಮಪ್ಪ ಪೂಜಾರಿ ಮತ್ತು ಪವನ್ ಜಾಧವ್ ಅಕಪಕ್ಕದ ಮನೆಯವರು. ಕ್ರಿಕೆಟ್ ಆಡುವಾಗ ಬಾಲ್ ಶಿಕ್ಷಕ ರಾಮಪ್ಪ ಪೂಜಾರಿ ಮನೆಯಲ್ಲಿ ಬಿದ್ದಿತ್ತು. ನಿಮ್ಮ ಮನೆಯಲ್ಲಿ ಬಾಲ್ ಹೋಗಿದೆ ಕೊಡಿ ಎಂದು ಆರೋಪಿ ಪವನ್ ಜಾಧವ್, ರಾಮಪ್ಪ ಪೂಜಾರಿಯವರಿಗೆ ಕೇಳಿದ್ದಾರೆ. ಅದಕ್ಕೆ, ರಾಮಪ್ಪ ಪೂಜಾರಿ ಇಲ್ಲಿ ಬಾಲ್ ಬಂದಿಲ್ಲ ಎಂದಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಕಿರಿಕ್ ಆಗಿದೆ.
ನಂತರ ಶಾಲೆಗೆ ಬಂದ ಪವನ್ ಸ್ಟಾಫ್ ರೂಂ ಒಳಗೆ ನುಗ್ಗಿ ಬಿಯರ್ ಬಾಟಲ್ನಿಂದ ಶಿಕ್ಷಕ ರಾಮಪ್ಪ ಪೂಜಾರಿಗೆ ಇರಿದಿದ್ದಾನೆ. ಇದರಿಂದ ಗಾಯಗೊಂಡ ರಾಮಪ್ಪ ಪೂಜಾರಿಯವರನ್ನು ಸಾವಳಗಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಳಗಿ ಠಾಣೆ ಪೊಲೀಸರು ಪವನ್ ಜಾದವ್ನನ್ನು ಬಂಧಿಸಿದ್ದಾರೆ.
ಬೀದರ್: ಕುಡುಗೋಲಿನಿಂದ ಕೊಚ್ಚಿ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಕಮಲನಗರ ತಾಲೂಕಿನ ಭೋಪಾಳಗಡ ಗ್ರಾಮದಲ್ಲಿ ನಡೆದಿದೆ. ಭೋಪಾಳಗಡ ಗ್ರಾಮದಲ್ಲಿ ನಿರ್ಮಲಾ (35) ಮೃತ ದುರ್ದೈವಿ. ಅಶೋಕ್ ಶಟಕಾರ ಕೊಲೆ ಮಾಡಿದ ಆರೋಪಿ.
ನಿರ್ಮಲಾ ಮತ್ತು ಅಶೋಕ್ ವಿವಾಹವಾಗಿ 20 ವರ್ಷವಾಗಿದೆ. ಆರೋಪಿ ಅಶೋಕ್ ನಿತ್ಯ ಹೆಂಡತಿ ಜೊತೆ ಜಗಳವಾಡುತ್ತಿದ್ದರು. ಗಂಡನ ಕಿರಿಕಿರಿಗೆ ಬೇಸತ್ತು ಪತ್ನಿ ನಿರ್ಮಲಾ ಬೆಳಕೋಣಿ ಗ್ರಾಮದಲ್ಲಿನ ತವರು ಸೇರಿದ್ದರು. 4-5 ದಿನದ ಹಿಂದಷ್ಟೇ ಮೃತ ನಿರ್ಮಲಾ ಮಕ್ಕಳ ಸಲುವಾಗಿ ಪತಿ ಮನೆಗೆ ಮರಳಿದ್ದರು. ಬುಧವಾರ (ಮೇ.14) ಪುನಃ ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದೆ.
ಇದನ್ನೂ ಓದಿ: ರಾಮನಗರದಲ್ಲಿ ಅಮಾನುಷ ಕೃತ್ಯ: ಅತ್ಯಾಚಾರ ಎಸಗಿ ಮೂಕ ಬಾಲಕಿ ಕೊಲೆ ಆರೋಪ
ಈ ವೇಳೆ ಅಶೋಕ್ ಶಟಕಾರ ಕುಡುಗೋಲಿನಿಂದ ಪತ್ನಿ ನಿರ್ಮಲಾರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ನಿರ್ಮಲಾ ತಮ್ಮ ಮಹಾದೇವ ಆರೋಪಿ ಅಶೋಕ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.