ಕೊಪ್ಪಳದಲ್ಲಿ ಟಾಟಾ ಏಸ್ ವಾಹನ ಪಲ್ಟಿಯಾಗಿ ನರೇಗಾ ಕಾರ್ಮಿಕರಿಗೆ ಗಾಯ
ಕರ್ನಾಟಕದಲ್ಲಿ ಹಲವಾರು ರಸ್ತೆ ಅಪಘಾತಗಳು ಸಂಭವಿಸಿವೆ. ಕೊಪ್ಪಳದಲ್ಲಿ ಟಾಟಾ ಏಸ್ ವಾಹನ ಪಲ್ಟಿಯಾಗಿ 31 ನರೇಗಾ ಕಾರ್ಮಿಕರು ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೈಸೂರಿನಲ್ಲಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಕಾರು ಚಾಲಕ ಮೃತಪಟ್ಟಿದ್ದಾನೆ. ಬೆಂಗಳೂರಿನಲ್ಲಿ ಕಾರು ಡಿವೈಡರ್ ಮೇಲೆ ಹತ್ತಿದೆ.

ಕೊಪ್ಪಳ, ಮೇ 14: ಕಾರಟಗಿ (Kartagi) ತಾಲೂಕಿನ ಬರಗೂರು ಕಮಾನ್ ಬಳಿ ಟಾಟಾ ಏಸ್ ವಾಹನ ಪಲ್ಟಿಯಾಗಿ ಮುಸ್ಟೂರು ಗ್ರಾಮ ಪಂಚಾಯತಿಯ 31 ನರೇಗಾ (Nrega) ಕಾರ್ಮಿಕರಿಗೆ ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, 28 ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹುಬ್ಬಳ್ಳಿ ಮತ್ತು ಕೊಪ್ಪಳದ ಕಿಮ್ಸ್ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಗಾಯಾಳುಗಳನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸಚಿವ ಶಿವರಾಜ ತಂಗಡಗಿ ಆಸ್ಪತ್ರೆಗೆ ಭೇಟಿ ನೀಡಿ, ಕಾರ್ಮಿಕರ ಆರೋಗ್ಯ ವಿಚಾರಿಸಿದರು. ಬುಧವಾರ (ಮೇ.14) ಬೆಳಗ್ಗೆ ನರೇಗಾ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
KSRTC ಬಸ್ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಸಾವು
ಮೈಸೂರು, ಮೇ 14: ಕೆ.ಆರ್.ನಗರ ತಾಲೂಕಿನ ಮಂಚನಹಳ್ಳಿ ಬಳಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರು ಚಾಲಕ ಸುನೀಲ್ (34) ಮೃತ ದುರ್ದೈವಿ. ಇನ್ನು, ರಮೇಶ್ ಎಂಬುವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಸುನೀಲ್ ಮೈಸೂರಿನ ಕನಕದಾಸನಗರ ನಿವಾಸಿಯಾಗಿದ್ದು, ಮೈಸೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದರು. ಚಿಕ್ಕಮಗಳೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು. ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದಡೆ ನಂಜನಗೂಡು ತಾಲೂಕಿನ ಸಿಂಧುವಳ್ಳಿಪುರ ಗ್ರಾಮದ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಲಾರಿ ಉರುಳಿ ಬಿದ್ದಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಮಿಳುನಾಡು ಮೂಲದ ದಿನೇಶ್ (37) ಮೃತ ಕಾರು ಚಾಲಕ. ಆರು ಮಂದಿಗೆ ಗಂಭೀರ ಗಾಯವಾಗಿದೆ. ಕಾರು ಮೈಸೂರಿನಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿತ್ತು. ಗಾಯಾಳುಗಳಿನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಂಜನಗೂಡು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಮಾಡಿದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಭೀಕರ ಅಪಘಾತ: ಜವರಾಯನ ಅಟ್ಟಹಾಸಕ್ಕೆ 6 ಜನರು ಸ್ಥಳದಲ್ಲೇ ಸಾವು
ಡಿವೈಡರ್ ಮೇಲೆ ಹತ್ತಿದ ಕಾರು
ಬೆಂಗಳೂರು: ಮಹಾರಾಣಿ ಕಾಲೇಜಿನ ಬಸ್ ನಿಲ್ದಾಣ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದೆ. ಬೇರೆ ಕಾರನ್ನು ಓವರ್ ಟೇಕ್ ಮಾಡುವಾಗ ಅವಘಡ ಸಂಭವಿಸಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಕಾರಿನಲ್ಲಿದ್ದ ಮಹಿಳೆ ಪಾರಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Wed, 14 May 25