ದುಷ್ಟಶಕ್ತಿ ಓಡಿಸುತ್ತೇನೆಂದು ಹೋಟೆಲ್ನಲ್ಲಿ ಪೂಜೆ: ಮಹಿಳೆಗೆ 5 ಲಕ್ಷ ರೂ. ವಂಚಿಸಿದ ಜ್ಯೋತಿಷಿ
ಜ್ಯೋತಿಷಿಯೊಬ್ಬರು ಬೆಂಗಳೂರಿನ ಮಹಿಳೆಯೊಬ್ಬರಿಗೆ ಐದು ಲಕ್ಷ ರೂಪಾಯಿ ವಂಚಿಸಿದ್ದಾರೆ. ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಗೆ ಜ್ಯೋತಿಷಿ ನಿಮ್ಮಲ್ಲಿ ದುಷ್ಟಶಕ್ತಿಗಳು ಸೇರಿಕೊಂಡಿವೆ, ಪೂಜೆಗಳ ಮೂಲಕ ಓಡಿಸುವುದಾಗಿ ಹೇಳಿ ಹಣ ಪಡೆದಿದ್ದಾನೆ. ಮುಂದೇನಾಯ್ತು? ಪೂಜೆಗಳ ನಂತರ ಮಹಿಳೆಯ ಆರೋಗ್ಯ ಸುಧಾರಿಸಿತೇ? ಇಲ್ಲಿದೆ ಸಂಪೂರ್ಣ ವಿವರ.

ಬೆಂಗಳೂರು, ಮೇ 14: ನಿಮ್ಮಲ್ಲಿರುವ ದುಷ್ಟಶಕ್ತಿಯನ್ನು ಓಡಿಸುತ್ತೇನೆ ಎಂದು ಜ್ಯೋತಿಷಿ (Astrologer) ಬೆಂಗಳೂರಿನ (Bengaluru) ವಿಭೂತಿಪುರದ ನಿವಾಸಿಯಾಗಿರುವ 33 ವರ್ಷದ ಮಹಿಳೆಯಿಂದ ಐದು ಲಕ್ಷ ರೂ. ಪಡೆದು ವಂಚಿಸಿದ್ದಾನೆ. ವಂಚಕನ ವಿರುದ್ಧ ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮಹಿಳೆ 2023ರ ಡಿಸೆಂಬರ್ನಲ್ಲಿ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರು. ಅಲ್ಲದೆ, ಮಹಿಳೆಯ ಕೈ ಮತ್ತು ಕಾಲುಗಳು ಊದಿಕೊಂಡಿದ್ದವು. ಈ ವಿಚಾರವನ್ನು ವಂಚನೆಗೊಳಗಾದ ಮಹಿಳೆ ತನ್ನ ಸ್ನೇಹಿತರೊಬ್ಬರಿಗೆ ಹೇಳಿದ್ದಾರೆ.
ಆಗ, ಮಹಿಳೆಯ ಸ್ನೇಹಿತರು ಓರ್ವ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾರೆ. ಜ್ಯೋತಿಷಿ, ಮಹಿಳೆಗೆ ನಿಮ್ಮನ್ನು 15 ದುಷ್ಟಶಕ್ತಿಗಳು ಕಾಡುತ್ತಿವೆ. ಪೂಜೆಗಳನ್ನು ಮಾಡುವ ಮುಖಾಂತರ ದುಷ್ಟಶಕ್ತಿಗಳನ್ನು ಓಡಿಸಬಹುದು ಎಂದಿದ್ದಾರೆ. ನಂತರ, ವಂಚನೆಗೊಳಗಾದ ಮಹಿಳೆ 2023 ರ ಡಿಸೆಂಬರ್ 14 ರಂದು ತಮ್ಮ ಜಾತಕ ಮತ್ತು ಫೋಟೋಗಳನ್ನು ಜ್ಯೋತಿಷಿಗೆ ಕಳುಹಿಸಿದ್ದಾರೆ. ಹಾಗೇ, ಆನ್ಲೈನ್ ಮೂಲಕ ಹಣ ಪಾವತಿಸಿದ್ದಾರೆ. ಮೊದಲಿಗೆ ಮಹಿಳೆ ಜ್ಯೋತಿಷಿಗೆ 150 ರೂ. ನಂತರ 151 ರೂ. ವರ್ಗಾವಣೆ ಮಾಡಿದ್ದಾರೆ. ಬಳಿಕ, 1 ಲಕ್ಷ ರೂ. ನಗದು ರೂಪದಲ್ಲಿ ನೀಡುವುದರ ಜೊತೆಗೆ ಆನ್ಲೈನ್ನಲ್ಲಿ ಸುಮಾರು 4.2 ಲಕ್ಷ ರೂ. ವರ್ಗಾಯಿಸಿದ್ದಾರೆ.
ಹೋಟೆಲ್ನಲ್ಲಿ ಪೂಜೆ ನಡೆಸಿದ್ದ ಜ್ಯೋತಿಷಿ
2024ರ ಸೆಪ್ಟೆಂಬರ್ 09 ರಂದು ಜ್ಯೋತಿಷಿ ಕೋರಮಂಗಲದ ಹೋಟೆಲ್ವೊಂದರಲ್ಲಿ ಪೂಜೆ ಮಾಡಿದ್ದಾನೆ. ಈ ಪೂಜೆಯಲ್ಲಿ ವಂಚನೆಗೊಳಗಾದ ಮಹಿಳೆ ಕೂಡ ಭಾಗಿಯಾಗಿದ್ದರು. ಜ್ಯೋತಿಷಿ ಮೊದಲಿಗೆ ನಿಂಬೆ ಹಣ್ಣುಗಳನ್ನು ಕತ್ತರಿಸಿ, ಧೂಪ ಹಚ್ಚಿದ್ದಾನೆ. ನಂತರ ಮಹಿಳೆಯ ಮುಖಕ್ಕೆ ಬೂದಿ ಎರಚಿದ್ದಾನೆ. ನಂತರ, ಮಹಿಳೆಗೆ ನವಿಲು ಗರಿಗಳಿಂದ ಹೊಡೆದು, ಅವರ ಕೂದಲನ್ನು ಹಿಡಿದು “ಆತ್ಮ ದೂರ ಹೋಗು” ಎಂದು ಕಿರಿಚಿದ್ದಾನೆ. ಪೂಜೆಗಳೆಲ್ಲ ಮುಗಿದ ನಂತರ ದುಷ್ಟಶಕ್ತಿಗಳು ನಿಮ್ಮನ್ನು ಬಿಟ್ಟು ಹೋದವು ಎಂದಿದ್ದಾನೆ.
ಇದನ್ನೂ ಓದಿ: ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ, ಛತ್ತೀಸ್ಗಢ ಮೂಲದ ಟೆಕ್ಕಿ ಬಂಧನ
ಆದರೆ, ಮಹಿಳೆಯ ಆರೋಗ್ಯದಲ್ಲಿ ಮಾತ್ರ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆ ಹಣ ಮರುಪಾವತಿಸುವಂತೆ ಜ್ಯೋತಿಷಿಗೆ ಸಂಪರ್ಕಿಸಲು ಯತ್ನಿಸಿದರು. ಆದರೆ, ಜ್ಯೋತಿಷಿ ಮಾತ್ರ ಮಹಿಳೆಯ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ನಂತರ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಆಧಾರದ ಮೇಲೆ ಜ್ಯೋತಿಷಿ ವಿರುದ್ಧ ಬಿಎನ್ಎಸ್ ಸೆಕ್ಷನ್ 318ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




