ಬಾಗಲಕೋಟೆ: ದೇಣಿಗೆ ಕೊಡಿಸುವ ನೆಪದಲ್ಲಿ ವಂಚನೆ: ಎರಡು ದಿನದಲ್ಲೇ 2 ಕೋಟಿ ರೂ ಪಂಗನಾಮ
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಜಯ ಭಾರತ ಮಾತೆ ಎಂಬ NGO ಸಂಸ್ಥೆಗೆ 2 ಕೋಟಿಗೂ ಹೆಚ್ಚು ಹಣವನ್ನು ಅಂತಾರಾಜ್ಯ ಖದೀಮರು ವಂಚಿಸಿದ್ದಾರೆ. ದೇಣಿಗೆ ನೀಡುವುದಾಗಿ ನಂಬಿಸಿ, ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ್ದಾರೆ. ಸದ್ಯ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಗಲಕೋಟೆ, ನವೆಂಬರ್ 20: ದೇಣಿಗೆ ಕೊಡಿಸುವ ನೆಪದಲ್ಲಿ ನಗರದ ಅದೊಂದು ಎನ್‌ಜಿಓಗೆ (NGO) ಕೊಟ್ಯಂತರ ರೂ ವಂಚಿಸಿರುವುದು ಬೆಳಿಕಿಗೆ ಬಂದಿದೆ. ಅಂತರರಾಜ್ಯ ವಂಚಕರಿಂದ ಕೇವಲ ಎರಡೇ ದಿನದಲ್ಲಿ ಬರೋಬ್ಬರಿ 2 ಕೋಟಿ ರೂ.ಗೂ ಅಧಿಕ ಹಣ ವಂಚಿಸಲಾಗಿದೆ (Fraud). ಸಿಎಸ್ಆರ್ ದೇಣಿಗೆ ಹೆಸರಲ್ಲಿ ವಂಚಿಸಲಾಗಿದೆ. ಸದ್ಯ ಬಾಗಲಕೋಟೆ ಸಿಇಎನ್ ಪೋಲಿಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆದಿದೆ.
ಹಣ ನೆರವು ಕೋರಿದ್ದೇ ಮುಳುವಾಯ್ತಾ?
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ಜಯಭಾರತ ಮಾತೆ ನಗರ ಹಾಗೂ ಗ್ರಾಮೀಣ ಸೇವಾಸಂಸ್ಥೆ. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ ಜಿಲ್ಲೆಯಲ್ಲಿ ವೃದ್ದಾಶ್ರಮ ಹಾಗೂ ನಿರ್ಗತಿಕ ಕೇಂದ್ರಗಳನ್ನು ಈ ಸಂಸ್ಥೆ ನಡೆಸುತ್ತದೆ. ಇದಕ್ಕಾಗಿ ವಿವಿಧ ದಾನಿಗಳಿಂದ ಸಹಾಯ ನಿರೀಕ್ಷಿಸಿದ್ದರು. ಕಂಪನಿಗಳಿಂದ ಸಿಎಸ್ಆರ್ ಫಂಡ್ನಿಂದ ಹಣ ನೆರವು ಕೋರಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಮನವಿ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ 7.11 ಕೋಟಿ ರೂ.ದರೋಡೆ: ತಿರುಪತಿಯಲ್ಲಿ ಕಾರು ಪತ್ತೆ, ಇಬ್ಬರು ಶಂಕಿತರು ವಶಕ್ಕೆ
ಇದನ್ನು ಗಮನಿಸಿದ ಅಸ್ಸಾಂನ ಸುರ್ಜಿತ್ ಮತ್ತು ಸಿದ್ದಾರ್ಥ ಹಾಗೂ ಪಶ್ಚಿಮ ಬಂಗಾಳದ ಮಾನಷ್ ಗೋಷ್ ಜಯ ಭಾರತ ಮಾತೆ NGO ಕಾರ್ಯದರ್ಶಿ ಶಶಾಂಕ್ ಒಳವಾಡೆಯವರನ್ನು ಸಂಪರ್ಕಿಸಿದ್ದಾರೆ. ನಾವು ಫಂಡ್ ಕೊಡುತ್ತೇವೆ. ವಿವಿಧ ಕಂಪನಿಗಳಿಂದಲೂ ಫಂಡ್ ಕೊಡಿಸುತ್ತೇವೆ ಅಂತ ನಂಬಿಸಿದ್ದಾರೆ.
ಶಶಾಂಕ್ ಅವರ ಮೊಬೈಲ್ ಪಡೆದು ಅದರಲ್ಲಿ ಓಟಿಪಿ ಆ್ಯಪ್ ಹಾಕಿ, ಇವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 2,01,26,092 ರೂ ವಂಚಿಸಿದ್ದಾರೆ. ಜೂನ್ 18 ಮತ್ತು 19ರಂದು ಈ ಮೊತ್ತವನ್ನು ವಿವಿಧ ಖಾತೆಗೆ ಶಶಾಂಕ್ ಖಾತೆಯಿಂದ ವರ್ಗಾವಣೆ ಮಾಡಿ ನಾಮ ಹಾಕಿದ್ದಾರೆ. ಈ ಬಗ್ಗೆ ಶಶಾಂಕಕುಮಾರ್ ಒಳವಾಡೆ ಬಾಗಲಕೋಟೆ ಸಿಇಎನ್ ಪೋಲಿಸ ಠಾಣೆಗೆ ದೂರು ನೀಡಿದ್ದಾರೆ.
ಬಾಗಲಕೋಟೆ, ಬೆಳಗಾವಿ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ವೃದ್ದಾಶ್ರಮ, ನಿರ್ಗತಿಕ ವಸತಿ ಕೇಂದ್ರ ನಡೆಸುತ್ತಿದ್ದ ಶಶಾಂಕಕುಮಾರ್, ವಿವಿಧ ಕಂಪನಿಗಳಿಂದ ಸಿಎಸ್ಆರ್ ಫಂಡ್ಗಾಗಿ ಆನಲೈನ್ ನಲ್ಲಿ ಸಂಪರ್ಕ ಮಾಡುತ್ತಿದ್ದರು. ಮಾಹಿತಿ ಕಂಡು ಜೂನ್ ತಿಂಗಳಲ್ಲಿ ಜಮಖಂಡಿಗೆ ವಂಚಕರು ಆಗಮಿಸಿದ್ದರು. ತಾವು ಸೇರಿದಂತೆ ವಿವಿಧ ಕಂಪನಿಗಳಿಂದ ದೇಣಿಗೆ ಕೊಡಿಸುವ ನಾಟಕ ಕೂಡ ಆಡಿದ್ದರು.
ವಂಚನೆ ನಡೆದದ್ದು ಹೇಗೆ?
ದೇಣಿಗೆ ಯಾವ ಉದ್ದೇಶ ಸೇರಿದಂತೆ ಇತ್ಯಾದಿ ಮಾಹಿತಿ ಪಡೆದುಕೊಳ್ಳುತ್ತಾರೆ. ನಂತರ ಕೆವೈಸಿ ಮಾಡುವ ನೆಪದಲ್ಲಿ ಫೋನ ಪಡೆದುಕೊಂಡು ಅದರಲ್ಲಿ ಓಟಿಪಿ ಆ್ಯಪ್ ಹಾಕಿ ಅದನ್ನ ಹ್ಯಾಕ್ ಮಾಡಿದ್ದಾರೆ. ಬಳಿಕ ಜಯ ಭಾರತ ಮಾತೆ ಸಂಸ್ಥೆಯ ಬ್ಯಾಂಕ್ ಖಾತೆ ವಿವರ ಪಡೆದು ಎಲ್ಲೆಡೆ ಕ್ಯೂಆರ್ ಕೋಡ್ ಕಳಿಸಿದ್ದಾರೆ. ಜೂನ್ 18ರಿಂದ ವಿವಿಧ ದಾನಿಗಳಿಂದ ಹಣ ಜಮಾ ಆಗುತ್ತಾ ಹೋಗಿದೆ. ಅದೇ ಖಾತೆಯಲ್ಲಿದ್ದ ಹಣವನ್ನು ತಮಗೆ ಬೇಕಾದವರ ಖಾತೆಗೆ ಜಮಾ ಮಾಡುತ್ತಾ ಹೋಗಿದ್ದಾರೆ. ಹೀಗೆ ಒಂದುವರೆ ದಿನದಲ್ಲಿ ಬರೋಬ್ಬರಿ 2 ಕೋಟಿ ರೂ. ಹಣವನ್ನ ವಂಚಕರು ಲಪಟಾಯಿಸಿದ್ದಾರೆ.
ಒಂದುವರೆ ದಿನದಲ್ಲಿ ಆರ್ಟಿಜಿಎಸ್ ಹಾಗೂ ನೆಪ್ಟ್ ಮೂಲಕ ಎರಡು ಲಕ್ಷಕ್ಕೂ ಅಧಿಕ ಟ್ರಾನ್ಸಾಕ್ಷನ್ ಆಗಿದೆ. ಜೊತೆಗೆ ಶಶಾಂಕ್‌ಗೆ ಯಾವುದೇ ಬ್ಯಾಂಕ್ ಟ್ರಾನ್ಸಾಕ್ಷನ್ ಬಾರದಂತೆ ತಡೆದಿದ್ದಾರೆ. ಯಾವುದೇ ಮೆಸೇಜ್ ಬಾರದೆ ಇದ್ದಾಗ ಸಂಶಯ ಬಂದು ಬ್ಯಾಂಕ್ ಸಂಪರ್ಕಿಸಿದಾಗ ಮೋಸ ಹೋಗಿದ್ದು ಗೊತ್ತಾಗಿದೆ. ನಂತರ ಪೊಲೀಸರ ಮೊರೆ ಹೋಗಿದ್ದಾರೆ. ಈ ರೀತಿ ಆನ್ಲೈನ್ ವಂಚನೆಗಳು ಮೇಲಿಂದ ಮೇಲೆ ಆಗುತ್ತಿದ್ದು, ಸಾರ್ವಜನಿಕರು ಜಾಗೃತರಾಗಿರಬೇಕಿದೆ. ಪೊಲೀಸರು ವಂಚಕರ ಬಂಧಿಸಿ ಹಣ ಕೊಡಿಸುವ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಬೀದರ್: ಹೈವೇನಲ್ಲಿ ಸಿನಿಮೀಯ ಶೈಲಿಯಲ್ಲಿ ದರೋಡೆ; 23 ಲಕ್ಷ ರೂ ಮೌಲ್ಯದ ಚಿನ್ನಾಭರಣ ಲೂಟಿ
ಒಟ್ಟಿನಲ್ಲಿ ಆಧುನಿಕತೆ ತಂತ್ರಜ್ಞಾನ ಹೆಚ್ಚಾಗಿದ್ದು ಒಂದು ಕಡೆ ವರವಾದರೆ, ಇನ್ನೊಂದು ಕಡೆ ಇಂತಹ ವಂಚನೆ ದುರುಪಯೋಗಕ್ಕೆ ಕಾರಣವಾಗುತ್ತಿದೆ. ಇಂತಹ ವಂಚಕರನ್ನು ಬಂಧಿಸಿ ಮೋಸ ಹೋದವರಿಗೆ ನ್ಯಾಯ ಕೊಡಿಸುವ ಕಾರ್ಯ ಆಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




