ಬಾಗಲಕೋಟೆ: ದೇಶಾದ್ಯಂತ ಭಾರೀ ಸಂಚಲನ ಎಬ್ಬಿಸಿರುವ ಬಾಲಿವುಡ್ನ ದಿ ಕೇರಳ ಸ್ಟೋರಿ(The Kerala Story) ಸಿನಿಮಾ ವೀಕ್ಷಿಸಲು ಕಾಲೇಜು ಆಡಳಿತ ಮಂಡಲಿ ವಿದ್ಯಾರ್ಥಿಗಳಿಗೆ ಅರ್ಧ ದುನದ ರಜೆ ನೀಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಿಲ್ಲೆಯ ಇಳಕಲ್ನಲ್ಲಿರುವ ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ್ ಮೆಡಿಕಲ್ ಕಾಲೇಜು(Sri Vijay Mahantesh Ayurvedic Medical College) ಬುಧವಾರ ಮಧ್ಯಾಹ್ನ ತನ್ನ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಿದ್ದು ವಿವಾದಾತ್ಮಕ ಚಲನಚಿತ್ರ ಎಂದೆನಿಸಿಕೊಂಡಿರುವ ‘ದಿ ಕೇರಳ ಸ್ಟೋರಿ’ ವೀಕ್ಷಿಸಲು ಎಲ್ಲಾ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಬಿಎಎಮ್ಎಸ್ ಮೊದಲ ವರ್ಷದಿಂದ ಫೈನಲ್ ವರ್ಷದ ಎಲ್ಲಾ ವಿದ್ಯಾರ್ಥಿಗಳು ಸಿನಿಮಾ ನೋಡುವಂತೆ ತಿಳಿಸಿದ್ದಾರೆ.
ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ಸಿ.ದಾಸ್ ಅವರು ಮೇ 23 ರಂದು ಹೊರಡಿಸಿದ ನೋಟಿಸ್ನಲ್ಲಿ, ಪಟ್ಟಣದ ಶ್ರೀನಿವಾಸ್ ಟಾಕೀಸ್ನಲ್ಲಿ ಮಧ್ಯಾಹ್ನ 12 ರಿಂದ 03 ರವರೆಗೆ ಎಲ್ಲಾ ಪದವಿ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ (ಬಿಎಎಂಎಸ್) ವಿದ್ಯಾರ್ಥಿನಿಯರಿಗೆ ಉಚಿತವಾಗಿ ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 9 ರಿಂದ 12 ರವರೆಗೆ ಕ್ಲಾಸ್ ಅಟೆಂಡ್ ಮಾಡಿ ನಂತರ ಫ್ರೀಯಾಗಿ ದಿ ಕೇರಳಾ ಸಿನಿಮಾ ನೋಡಿ ಎಂದು ಪ್ರಾಂಶುಪಾಲರು ಕಾಲೇಜಿನಲ್ಲಿ ನೋಟಿಸ್ ಅಂಟಿಸಿದ್ದಾರೆ. ಸಿನಿಮಾಗಾಗಿ ತರಗತಿಗಳನ್ನು ಸ್ಥಗಿತಗೊಳಿಸಿದ್ದಾರೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿ ಸಿನಿಮಾ ವಿಚಾರವಾಗಿ ಗಲಾಟೆ, ಗೆಳೆಯನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಯುವತಿ
ಇನ್ನು ಮತ್ತೊಂದೆಡೆ ಬಾಗಲಕೋಟೆ ನಗರದ ಚಂದನ ಥಿಯೇಟರ್ ನಲ್ಲಿ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಂದ ದಿ ಕೇರಳ ಸಿನಿಮಾ ಫ್ರೀ ಶೋ ಆಯೋಜನೆ ಮಾಡಲಾಗಿದೆ. ಮೇ 23ರಿಂದ ಮೇ 25ರ ವರೆಗೆ ಮೂರು ದಿನ ಫ್ರೀ ಶೋ ಆಯೋಜಿಸಲಾಗಿದೆ. ಪ್ರತಿದಿನ 3 ಗಂಟೆಯಿಂದ ಸಂಜೆ 6 ರ ಶೋವನ್ನು ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಎಲ್ಲ ಹಿಂದೂ ವಿದ್ಯಾರ್ಥಿಗಳು ಒಟ್ಟಾಗಿ ನೋಡಿ ಎಂದು ಮಾಜಿ ಶಾಸಕ, ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.
ಹಲವು ರಾಜಕೀಯ ಪಕ್ಷಗಳ ವಿರೋಧದ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಮೇ 5 ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ನಿಂದ ಮಹಿಳೆಯರನ್ನು ಹೇಗೆ ಬಲವಂತವಾಗಿ ಮತಾಂತರಿಸಲಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಚಿತ್ರದ ಬಗ್ಗೆ ಮಾತನಾಡಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ