
ಬಾಗಲಕೋಟೆ, ಆಗಸ್ಟ್ 03: ಬಾಗಲಕೋಟೆಯ (Bagalkote) ಕಲಾಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯ್ಲಿ (Veerappa Moily) ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶಿರಹಟ್ಟಿಯ ಫಕೀರೇಶ್ವರ ಮಹಾಸಂಸ್ಥಾನ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ (Dingaleshwara Swamiji) ಮತ್ತು ಡಾ.ಎಂ.ಎಂ. ಕಲಬುರ್ಗಿ ಪ್ರತಿಷ್ಠಾನದ ಸಂಚಾಲಕ ಪ್ರೊ.ವೀರಣ್ಣ ರಾಜೂರ ಮಧ್ಯೆ ವಾಗ್ವಾದ ನಡೆಯಿತು. ಪ್ರೊ.ವೀರಣ್ಣ ರಾಜೂರ ಅವರು ವೀರಶೈವ-ಲಿಂಗಾಯತ (Veerashaiva-Lingayat) ಪ್ರತ್ಯೇಕ ಧರ್ಮ ಎಂದು ವಾದಿಸಿದರೆ, ವೀರಶೈವ- ಲಿಂಗಾಯತ ಒಂದೇ ಧರ್ಮ ಎಂದು ಸ್ವಾಮೀಜಿ ಪ್ರತಿವಾದಿಸಿದರು.
ಮೊಯ್ಲಿ ಅವರ ವಿಶ್ವಸಂಸ್ಕೃತಿ ಮಹಾಯಾನ ಕಾವ್ಯದಲ್ಲಿ ವೀರಶೈವ ಲಿಂಗಾಯತ ಧರ್ಮ ಅಂತ ಪ್ರಸ್ತಾಪ ಮಾಡಲಾಗಿದೆ. ಒಂದು ಧರ್ಮಕ್ಕೆ ಎರಡು ಹೆಸರಿರುವುದಿಲ್ಲ. ಹೀಗಾಗಿ, ವೀರಶೈವ ಲಿಂಗಾಯತ ಬೇರೆ ಎಂದು ಪ್ರೊ.ವೀರಣ್ಣ ರಾಜೂರ ಮಾತಾಡಿದರು. ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಒಂದು ಧರ್ಮಕ್ಕೆ ಎರಡು ಹೆಸರು ಇರಲ್ಲ ಎಂದು ಪ್ರೊ.ವೀರಣ್ಣ ರಾಜೂರ ಪ್ರತಿವಾದಿಸಿದರು.
ವೀರಣ್ಣ ರಾಜೂರ ಅವರು ಮೊಯ್ಲಿ ಅವರ ಕಾವ್ಯದಲ್ಲಿ ವೀರಶೈವ ಲಿಂಗಾಯತ ಅಂತ ಶಬ್ದ ಪ್ರಯೋಗ ಬಂದಿದೆ ಅಂದರು. ವೀರಣ್ಣ ರಾಜೂರ ಅವರು ಲಿಂಗಾಯತ ಅನ್ನೋದು ನಿರ್ಣಯಿಸಲ್ಪಟ್ಟಿದೆ ಅಂತ ಹೇಳಿದರು. ಆದರೆ ಎಲ್ಲಿ ಯಾವಾಗ ನಿರ್ಣಯ ಆಯ್ತು ನನಗಂತೂ ಗೊತ್ತಿಲ್ಲ. ನನ್ನ ವ್ಯಯಕ್ತಿಕ ವಿಚಾರ ಬಹುದೊಡ್ಡ ವಿಚಾರ ನಡೆದಾಗಲೂ ಹೇಳಿದ್ದೇನೆ. ವೀರಶೈವ-ಲಿಂಗಾಯತ ಅನ್ನೋದು ಬೇರೆಯಲ್ಲ ಅದು ಯಾವಾಗಲೂ ಒಂದೇ. ಅದನ್ನು ಯಾವಾಗಲೂ ಬೇರೆ ಮಾಡಬಾರದು ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಮತ್ತೆ ಭುಗಿಲೆದ್ದ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ: ಪಂಚಪೀಠಾಧ್ಯಕ್ಷರ ನಿರ್ಣಯಕ್ಕೆ ಲಿಂಗಾಯತ ಮಠಾಧಿಪತಿಗಳ ಸೆಡ್ಡು
ವೀರಣ್ಣ ರಾಜೂರ ಅವರು ಮೊಯ್ಲಿ ಅವರ ಕಾವ್ಯದಲ್ಲಿ ಒಂದು ದೋಷ ಎತ್ತಿ ಹಿಡಿದಿದ್ದಾರೆ. ಬಸವಣ್ಣನವರ ಕೈಯಲ್ಲಿ ಸ್ಥಾವರಲಿಂಗದ ಆಕಾರ ಇದೆ. ಅದು ಇಷ್ಟಲಿಂಗ ಆಗಬೇಕು ಅಂತ ಹೇಳಿದ್ದಾರೆ. ಅದು ನೆದರ ಚೂಕಿನಿಂದ ಆಗಿರತಕ್ಕಂತದ್ದು. ನಂತರದಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಬಸವಣ್ಣನವರ ಕೈಯಲ್ಲಿ ಇಷ್ಟಲಿಂಗ ಬರಬೇಕು ಅಂತ ನಾನೂ ಬಯಸುತ್ತೇನೆ. ಏಕೆಂದರೆ ಬಸವಣ್ಣನವರು ಇಷ್ಟಲಿಂಗ ಉಪಾಸಕರು ಎಂದರು.
ವೀರಶೈವ ಲಿಂಗಾಯತ ಬಗ್ಗೆ ಮೊಯ್ಲಿ ಅವರು ಶಾಸನ ಮಾಡಿಟ್ಟ ಹಾಗೆ ಬರೆದಿದ್ದಾರೆ. ವೀರಶೈವ ಲಿಂಗಾಯತ ಬೇರೆ ಅಂತ ಹೇಳ್ತಿರಲ್ಲಾ ಅವರ ಸಿದ್ಧಾಂತಗಳು ಯಾವವು? ಅಷ್ಟಾವರಣ, ಪಂಚಾಚಾರ, ಷಟಸ್ಥಲ ಈ ಮೂರನ್ನು ಬಿಟ್ಟು ಲಿಂಗಾಯತ ಮಾಡಲು ಸಾಧ್ಯ ಇದೆಯಾ? ಈ ಮೂರನ್ನು ಬಿಟ್ಟು ವೀರಶೈವರೂ ಹೋಗಲು ಆಗುವುದಿಲ್ಲ. ಲಿಂಗಾಯತರು ಬಿಟ್ಟಿರುವುದಕ್ಕೆ ಆಗುವುದಿಲ್ಲ. ಅಷ್ಟಾವರಣ, ಪಂಚಾಚಾರ, ಷಟಸ್ಥಲ ವೀರಶೈವ ಲಿಂಗಾಯತರ ಮೂಲಸ್ತಂಭಗಳು ಪ್ರೋ. ವೀರಣ್ಣ ರಾಜೂರ ಹೇಳಿದರು.
ದಿಂಗಾಲೇಶ್ವರ ಶ್ರೀ: ಸಾಮಾಜಿಕ ಸೌಕರ್ಯ ಪಡೆಯಲು ಲಿಂಗಾಯತ ಮಾಡುತ್ತೇವೆ ಅಂತೀರಲ್ಲ ಅದಕ್ಕೆ ನನ್ನ ವಿರೋಧವಿಲ್ಲ. ಅದಕ್ಕೆ ನೀವು ಏನಾದರೂ ಮಾಡಿ. ಆದರೆ ಸಾವಿರಾರು ವರ್ಷದಿಂದ ಬಂದ ಇತಿಹಾಸ ಬದಲಾವಣೆ ಮಾಡಿ. ನಾ ಮೊದಲನೇ ಪುಸ್ತಕದಲ್ಲಿ ಹಾಗೆ ಹೇಳಿದ್ದೀನಿ. ಎರಡನೇ ಪುಸ್ತಕದಲ್ಲಿ ಹಾಗೆ ಹೇಳಿದ್ದೀವಿ, ಅದನ್ನು ಬಿಡ್ರಿ ಇದನ್ನು ನಂಬ್ರಿ ಅಂದ್ರ ನಾವು ಅಷ್ಟು ಬುದ್ದಿಗೇಡಿಗಳಲ್ಲ ಎಂದು ಗರಂ ಆದರು.
ಪ್ರೋ. ವೀರಣ್ಣ ರಾಜೂರ: ನೀವು ಬುದ್ದಿಗೇಡಿಗಳಲ್ಲ ನೀವು ಶಾಣ್ಯಾರ ಅದಿರಿ. ಆದರೆ ನಾ ಹೇಳ್ತಿನಿ ನೋಡಿ ಒಂದು ಮಾತು. ಹೊಸ ಹೊಸ ಆಧಾರ ಸಿಕ್ಕಾಗ ನಾವು ಹಿಂದೆ ಮಾಡಿದ ತಪ್ಪು ತಿದ್ದುಕೊಳ್ಳೋದು ಸಹಜ. ಆದರೆ ಒಂದು ಧರ್ಮಕ್ಕೆ ಎರಡು ಹೆಸರು ಇರುವುದಿಲ್ಲ ಎಂದು ಸ್ವಾಮೀಜಿಗಳ ಹೇಳಿಕೆಗೆ ತಿರುಗೇಟು ನೀಡಿದರು.
Published On - 5:46 pm, Sun, 3 August 25