ದಾವಣಗೆರೆ: ಲಿಂಗಾಯತ ಪಂಚಪೀಠಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧ, 40 ವರ್ಷ ನಂತರ ಬೃಹತ್ ಶೃಂಗ ಸಮ್ಮೇಳನ
ದಶಕಗಳಿಂದ ಇದ್ದ ವೀರಶೈವ ಲಿಂಗಾಯತ ಸಮುದಾಯದ ಪಂಚಪೀಠಗಳ ಮುನಿಸು ಈಗ ತಣ್ಣಗಾಗುವ ಕಾಲ ಸನಿಹಕ್ಕೆ ಬಂದಿದ್ದು, ಇದಕ್ಕೆ ವೇದಿಕೆ ದಾವಣಗೆರೆಯಲ್ಲಿ ಸಿದ್ಧವಾಗಿದೆ. ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕಪ್ಪ ನೇತೃತ್ವದಲ್ಲಿ ಪಂಚಪೀಠಗಳು ಒಂದಾಗಲಿದ್ದು, ಜಾತಿ ಗಣತಿ ಹಾಗೂ ಇತರ ವಿಚಾರಗಳ ಸಂಬಂಧ ಸರ್ಕಾರಕ್ಕೆ ವೀರಶೈವ ಲಿಂಗಾಯತರ ಶಕ್ತಿ ಪ್ರದರ್ಶನ ಮಾಡಲು ವೇದಿಕೆ ಸಿದ್ದವಾಗಿದೆ.

ದಾವಣಗೆರೆ, ಜುಲೈ 21: ಕರ್ನಾಟಕದ ಪ್ರಬಲ ಸಮುದಾಯಗಳಲ್ಲಿ ಒಂದಾದ ವೀರಶೈವ ಲಿಂಗಾಯತ ಸಮುದಾಯ, ಜಾತಿಗಣತಿ ವರದಿಯಲ್ಲಿ ಅತಿ ಕಡಿಮೆ ಸಂಖ್ಯೆ ಎಂದು ಹೊರಹೊಮ್ಮಿತ್ತು. ಇದಕ್ಕೆ ರಾಜ್ಯ ಸರ್ಕಾರದ ವಿರುದ್ದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಮಠಾಧೀಶರು ವಿರೋಧವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ, ರಾಜ್ಯ ಸರ್ಕಾರಕ್ಕೆ ಠಕ್ಕರ್ ಕೊಡುವ ನಿಟ್ಟಿನಲ್ಲಿ, ಈಗ ಕೇಂದ್ರ ನಡೆಸಲಿರುವ ಜನಗಣತಿ ಹಾಗೂ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ (Veerashaiva Lingayat) ಸಮುದಾಯದ ಎಲ್ಲಾ ಒಳಪಂಗಡಗಳನ್ನು ಒಂದು ಮಾಡುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ (Davanagere) 40 ವರ್ಷಗಳ ನಂತರ ಮತ್ತೆ ಶೃಂಗ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಇಂದು ಮತ್ತು ನಾಳೆ ದಾವಣಗೆರೆ ರೇಣುಕಾ ಮಂದಿರದಲ್ಲಿ ಎರಡು ದಿನಗಳ ಕಾಲ ಸಮ್ಮೇಳನ ಅಯೋಜನೆ ಮಾಡಲಾಗಿದೆ. ಇದರಲ್ಲಿ ಪಂಚ ಪೀಠಗಳಾದ ರಂಭಾಪುರಿ ಪೀಠ, ಉಜ್ಜಯಿನಿ ಪೀಠ, ಕೇದರ ಪೀಠ, ಶ್ರೀ ಶೈಲ ಪೀಠ ಹಾಗೂ ಕಾಶಿ ಪೀಠದ ಪೀಠಾಧೀಶರು ಒಂದಾಗಲಿದ್ದಾರೆ.
ಹಲವು ತಾತ್ವಿಕ ಚಿಂತನೆಗಳಿಂದ ಈ ಪೀಠಾಧೀಶರು ಎಂದೂ ಯಾವುದೇ ಕಾರ್ಯಕ್ರಮದಲ್ಲಿ ಒಂದಾಗಿ ಭಾಗಿಯಾಗಿರಲಿಲ್ಲ. ಈ ಕಾರಣಕ್ಕೆ ಅವರನ್ನು ಒಂದು ಕಡೆ ಸೇರಿಸಿ ತಾವೆಲ್ಲ ಸಮಾಜದ ಉದ್ಧಾರಕ್ಕೆ ಸದಾ ಸಿದ್ದರಾಗಿದ್ದೇವೆ ಎಂದು ತೋರಿಸಲು ಶಾಮನೂರು ಶಿವಶಂಕರಪ್ಪ ಪಣ ತೊಟ್ಟಿದ್ದು, ಅದು ಸಾಕಾರಗೊಳ್ಳಲಿದೆ.
ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ ಸಾಧ್ಯತೆ
ವೀರಶೈವರ ಶಕ್ತಿ ಪ್ರದರ್ಶನ ಕೂಡ ಇದಾಗಿದ್ದು, ಜಾತಿ ಗಣತಿ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ. ಅಲ್ಲದೆ, ಇದು ಮೊದಲ ಹೆಜ್ಜೆ ಆಗಿದ್ದು, ಮುಂದೆ ಇನ್ನೂ ದೊಡ್ಡ ಮಟ್ಟದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಡಗಳನ್ನು ಸೇರಿಸಿ ಇದೇ ದಾವಣಗೆರೆಯಲ್ಲಿ ಬೃಹತ್ ಸಮವೇಶ ಆಯೋಜಿಸುವ ಚಿಂತನೆ ಕೂಡ ಇದೆ ಎನ್ನಲಾಗಿದೆ.
ವೀರಶೈವ ಲಿಂಗಾಯತ ಒಳ ಪಂಗಡಗಳನ್ನು ಒಂದಾಗಿಸುವ ಉದ್ದೇಶ
ಕಳೆದ 15 ವರ್ಷಗಳಿಂದ ವೀರಶೈವ ಸಮುದಾಯದ ತಾಯಿಬೇರು ಎನಿಸಿಕೊಳ್ಳುತ್ತಿರುವ ಪಂಚಪೀಠಗಳಾದ ವೀರಶೈವ ಸಮಾಜದ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶೈಲ ಮತ್ತು ಶ್ರೀ ಕಾಶಿ ಪಂಚ ಪೀಠಗಳು ಪರಸ್ಪರ ಮುನಿಸಿಕೊಂಡಿದ್ದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಮುನಿಸನ್ನು ಮರೆತು ಒಂದಾಗಲಿವೆ. ಇದರಿಂದ ಪಂಚಪೀಠಗಳ ಲಕ್ಷಾಂತರ ಭಕ್ತರ ದಶಕಗಳ ಕನಸು ನನಸಾಗಲಿದೆ. ಅಲ್ಲದೆ, ಅದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಒಂದಾಗುತ್ತಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ. ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳ ಪಂಗಡಗಳನ್ನು ಒಂದು ಮಾಡುವ ಉದ್ದೇಶದ ಜೊತೆಗೆ, ಪಂಚಪೀಠಗಳನ್ನು ಒಂದೇ ವೇದಿಕೆಗೆ ತರುವುದಕ್ಕೆ ಶೃಂಗ ಸಮ್ಮೇಳನ ಸಾಕ್ಷಿಯಾಗಲಿದೆ.
ಶೃಂಗ ಸಮ್ಮೇಳನದಲ್ಲಿ ಜಾತಿ ಜನಗಣತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೆ ಸರ್ಕಾರಕ್ಕೆ ವೀರಶೈವ ಲಿಂಗಾಯತ ಸಮುದಾಯದ ಶಕ್ತಿ ಏನು ಎನ್ನುವುದನ್ನು ತೋರಿಸುವುದಕ್ಕೆ ಇದು ಪ್ರಮುಖ ವೇದಿಕೆಯಾಗಲಿದೆ.
ಇದನ್ನೂ ಓದಿ: ಎಲ್ಲಾ ವೀರಶೈವ ಲಿಂಗಾಯತರು ಹಿಂದೂಗಳು, ಒಂದೇ ಮೀಸಲಾತಿ ಇರಬೇಕು: ವಚನಾನಂದಶ್ರೀ
ಒಟ್ಟಾರೆಯಾಗಿ ಬೆಣ್ಣೆ ನಗರಿ ದಾವಣಗೆರೆಯಲ್ಲಿ ದಶಕಗಳ ನಂತರ ಪಂಚ ಪೀಠಗಳು ಒಂದಾಗುತ್ತಿದ್ದು, ಇದನ್ನು ಕಣ್ತುಂಬಿಕೊಳ್ಳಲು ಭಕ್ತಗಣ ಕಾತುರದಿಂದ ಕಾಯುತ್ತಿದೆ. ಇಲ್ಲಿ ತಗೆದುಕೊಳ್ಳುವ ನಿರ್ಣಯಗಳು ರಾಜಕೀಯ ಮೇಲಾಟದ ಮೇಲೆ ಪ್ರಭಾವ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ.







