ಬಿಜೆಪಿ ಬಣ ರಾಜಕೀಯ: ದೆಹಲಿಯಲ್ಲಿ ತಂತ್ರ-ಪ್ರತಿತಂತ್ರ! ವಿಜಯೇಂದ್ರ ವಿರುದ್ಧ ಮತ್ತೆ ದೂರು ನೀಡಲಿದೆ ಭಿನ್ನರ ಬಣ
ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧದ ಬಣ ಮತ್ತು ವಿಜಯೇಂದ್ರ ಬೆಂಬಲಿಗರ ಬಣಗಳ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಇದೀಗ ಬಹಿರಂಗ ಸಮರಕ್ಕೆ ತಿರುಗುತ್ತಿದೆ. ರಾಜ್ಯವನ್ನು ಗುದ್ದಾಟದ ಅಖಾಡ ಮಾಡಿದ್ದ ಬಣಗಳು, ಈಗ ದೆಹಲಿಯನ್ನು ವೇದಿಕೆ ಮಾಡಿಕೊಂಡಿವೆ. ಬಂಡಾಯ ಬಣ ಮತ್ತೆ ದೆಹಲಿಗೆ ತೆರಳಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಒತ್ತಡ ಹೇರಲು ತಂತ್ರ ರೂಪಿಸಿದೆ.

ಬೆಂಗಳೂರು, ಜುಲೈ 21: ಕರ್ನಾಟಕ ಬಿಜೆಪಿಯಲ್ಲಿ (BJP) ಬಣ ರಾಜಕೀಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಒಂದು ಕಡೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಬೆಂಬಲಿಗರು ದೆಹಲಿಗೆ ತೆರಳಿ ವಿರೋಧಿ ಬಣದ ವಿರುದ್ಧ ದೂರು ನೀಡಿದರೆ, ಈಗ ವಿಜಯೇಂದ್ರ ವಿರೋಧಿ ಬಣವೂ ದೆಹಲಿ ಯಾತ್ರೆಗೆ ಸಜ್ಜಾಗಿದೆ. ಕಳೆದ ವಾರ ದೆಹಲಿಗೆ ತೆರಳಿದ್ದ ಎಂಪಿ ರೇಣುಕಾಚಾರ್ಯ ತಂಡ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಅವರನ್ನು ಭೇಟಿಯಾಗಿ, ದಾವಣಗೆರೆಯಲ್ಲಿ ಪ್ರತ್ಯೇಕ ಸಮಾವೇಶ ನಡೆಸಿದ ಬಗ್ಗೆ ದೂರು ಸಲ್ಲಿಸಿತ್ತು.
ಇದೀಗ ವಿಜಯೇಂದ್ರ ವಿರುದ್ಧದ ಬಣ ಮುಂದಿನ ವಾರ ದೆಹಲಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದೆ. ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಭಿನ್ನರ ತಂಡದ ಸದಸ್ಯರು ಈ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ. ಇವರ ಜೊತೆಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಬಿ.ಪಿ. ಹರೀಶ್ ಕೂಡ ತೆರಳಲಿದ್ದಾರೆ.
ಅಕ್ರಮ ಬಾಂಗ್ಲಾ ನಿವಾಸಿಗಳ ಮಾಹಿತಿ ಸಲ್ಲಿಕೆ ನೆಪದಲ್ಲಿ ದೆಹಲಿ ಟೂರ್
ಈ ತಂಡದ ಮುಖ್ಯ ಅಜೆಂಡಾ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಮುಂದುವರೆಯಬಾರದು ಎಂಬುದು ಎನ್ನಲಾಗಿದೆ. ಅಕ್ರಮ ಬಾಂಗ್ಲಾ ನಿವಾಸಿಗಳ ಮಾಹಿತಿ ಸಲ್ಲಿಕೆ ನೆಪದಲ್ಲಿ ವಿಜಯೇಂದ್ರ ಬೆಂಬಲಿಗರ ವಿರುದ್ಧ ದೂರು ನೀಡಲು ಈ ತಂಡ ಮುಂದಾಗಿದೆ. ಅಕ್ರಮ ವಲಸಿಗರ ಕುರಿತು ಈಗಾಗಲೇ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವರದಿ ಸಂಗ್ರಹಿಸಿದೆ.
ರಾಜ್ಯಾಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ಗೆ ಮತ್ತಷ್ಟು ಒತ್ತಡ ಹೇರಲು ತಂತ್ರ
ಈ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಗೃಹ ಇಲಾಖೆ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಅವರನ್ನು ಭೇಟಿ ಮಾಡಿ ಸಲ್ಲಿಸುವ ಸಾಧ್ಯತೆಯಿದೆ. ಇಂದು ಸಂಸತ್ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸಚಿವರ ಲಭ್ಯತೆಯನ್ನು ನೋಡಿಕೊಂಡು ಭೇಟಿ ಮಾಡಲು ಪ್ರತ್ಯೇಕ ತಂಡ ಯೋಜನೆ ರೂಪಿಸಿದೆ. ರಾಜ್ಯಾಧ್ಯಕ್ಷ ಬದಲಾವಣೆಯ ಈ ಸಮಯದಲ್ಲಿ ಮತ್ತಷ್ಟು ಒತ್ತಡ ಹೇರಿ ವಿಜಯೇಂದ್ರರನ್ನು ಬದಲಿಸುವಂತೆ ತಂಡ ಹೈಕಮಾಂಡ್ ಮುಂದೆ ಮನವಿ ಮಾಡಲಿದೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಸಕ್ರಿಯವಾದ ಭಿನ್ನರ ಬಣ: ಹುಟ್ಟು ಹಬ್ಬದ ನೆಪದಲ್ಲಿ ಶಕ್ತಿ ಪ್ರದರ್ಶನ, ಭಾರೀ ರಣತಂತ್ರ
ಒಟ್ಟಾರೆಯಾಗಿ ಕರ್ನಾಟಕ ಬಿಜೆಪಿಯ ಆಂತರಿಕ ಕಚ್ಚಾಟ ಇದೀಗ ದೆಹಲಿ ಮಟ್ಟಕ್ಕೆ ತಲುಪಿದ್ದು, ವರಿಷ್ಠರು ಈ ಬೆಳವಣಿಗೆಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.







