ಮಕ್ಕಳಿಗೆ ಕಾಯಿಲೆಗಳು ಬಾರದಿರಲಿ ಅಂತ ದಾವಣಗೆರೆಯಲ್ಲಿ ವಿಶಿಷ್ಟ ಆಚರಣೆ: ಅಜ್ಜಿ ಹಬ್ಬ
ಭಾರತದಲ್ಲಿ ಪ್ರತಿಯೊಂದು ಆಚರಣೆಯ ಹಿಂದೆ ಒಂದೊಂದು ಕಾರಣ ಇರುತ್ತದೆ. ಮಳೆಗಾಲದ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಜಾಸ್ತಿ. ಇಂತಹ ರೋಗಗಳ ನಿಯಂತ್ರಣಕ್ಕೆ ದಾವಣಗೆರೆ ನಗರದ ನಿಟ್ಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶಿಷ್ಟ ಹಬ್ಬ ಆಚರಿಸಲಾಗುತ್ತದೆ. ಅದು ಯಾವ ಅಬ್ಬ? ಯಾವ ಕಾರಣಕ್ಕೆ ಮಾಡಲಾಗುತ್ತದೆ? ಇಲ್ಲಿದೆ ವಿವರ

ದಾವಣಗೆರೆ, ಜುಲೈ 19: ದಾವಣಗೆರೆ (Davanagere) ನಗರದ ನಿಟ್ಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಲ್ಲಿ ಆಷಾಢ ಮಾಸದಲ್ಲಿ (Ashada Masa) ಪ್ರತಿದಿನ ವಿಶೇಷ ಪೂಜೆಗಳು ನೆರವೇರಿದವು. ಆದರೆ, ಆಷಾಢ ಮಾಸದ ಕೊನೆ ಶುಕ್ರವಾರ ಮತ್ತು ಶನಿವಾರ (ಜು.18, 19) ಎರಡು ದಿನಗಳಕಾಲ ದೇವಸ್ಥಾನದಲ್ಲಿ ನಡೆದ ಪೂಜೆ ಮಾತ್ರ ಭಾರಿ ವಿಶೇಷತೆಯಿಂದ ಕೂಡಿದೆ. ಈ ಪೂಜೆಗೆ ಅಜ್ಜಿ ಹಬ್ಬ ಎಂದು ಕರೆಯಲಾಗುತ್ತದೆ. ಅಜ್ಜಿ ಹಬ್ಬ ಮಾಡಲು ಕಾರಣವೂ ಇದೆ. ಮಕ್ಕಳ ಮೈಮೇಲೆ ಗುಳ್ಳೆಗಳು ಆಗುವುದು, ಜ್ವರ ಬರುವುದನ್ನು ತಪ್ಪಿಸಲು ಎರಡು ದಿನಗಳ ಕಾಲ ದೇವಿಗೆ ವಿಶೇಷ ಪೂಜೆ ಮಾಡುತ್ತಾರೆ.
ದೇವಸ್ಥಾನದ ಆವರಣದಲ್ಲಿಯೇ ಒಂದು ದೇವಿ ಮೂರ್ತಿ ತಯಾರಿಸಿ ಇಡಲಾಗಿರುತ್ತದೆ. ಈ ಮೂರ್ತಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ಬಾಳೆ ಎಲೆಯಲ್ಲಿ ತಂದ ಸಿಹಿ ಪದಾರ್ಥಗಳ ನೈವದ್ಯೆ ಅರ್ಪಿಸುತ್ತಾರೆ. ಬಳಿಕ ದೇವಿಗೆ ಪ್ರದಕ್ಷಿಣೆ ಹಾಕಿ, 20 ಸುತ್ತು ದಾರ ಸುತ್ತುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳಿಗೆ ಕಾಯಿಲೆ ಬರಲ್ಲ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಇದನ್ನೂ ನೋಡಿ: ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಭಾರತದಲ್ಲಿ ಪ್ರತಿಯೊಂದು ಕಾರಣಕ್ಕೂ ಒಂದೊಂದು ಹಬ್ಬಗಳಿವೆ. ಮಳೆಗಾಲದಲ್ಲಿ ಮಕ್ಕಳಿಗೆ ರೋಗ ಬರಬಾರದು ಎನ್ನುವುದಕ್ಕೆ ರೀತಿ ಹಬ್ಬ ಮಾಡಲಾಗುತ್ತಿದೆ. ವಿಶೇಷವಾಗಿ ಮಧ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂತಹ ಅಜ್ಜಿ ಹಬ್ಬ ಪ್ರಸಿದ್ಧಯಾಗಿದೆ. ಇದು ಜನರ ನಂಬಿಕೆ ಮತ್ತು ತಮ್ಮ ಮಕ್ಕಳ ಆರೋಗ್ಯ ಚೆನ್ನಾಗಿರಲಿ ಅಂತ ಈ ರೀತಿ ಮಾಡುತ್ತಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Sat, 19 July 25



