AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಭುಗಿಲೆದ್ದ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ: ಪಂಚಪೀಠಾಧ್ಯಕ್ಷರ ನಿರ್ಣಯಕ್ಕೆ ಲಿಂಗಾಯತ ಮಠಾಧಿಪತಿಗಳ ಸೆಡ್ಡು

ದಾವಣಗೆರೆಯಲ್ಲಿ ಕೆಲವೇ ದಿನಗಳ ಹಿಂದೆ ವೀರಶೈವ ಲಿಂಗಾಯತ ಪಂಚಪೀಠಾಧೀಶರ ನೇತೃತ್ವದಲ್ಲಿ ಶೃಂಗಸಭೆ ನಡೆದದ್ದು ಭಾರೀ ಸದ್ದು ಮಾಡಿದೆ. ಪಂಚಪೀಠಾಧೀಶರು ಒಟ್ಟಾಗಿ ಶೃಂಗಸಭೆ ನಡೆಸಿದ ಬೆನ್ನಲ್ಲೇ, ಲಿಂಗಾಯತ ಮಠಾಧೀಶರ ಒಕ್ಕೂಟ ಬಸವ ಸಂಸ್ಕೃತಿ ಅಭಿಯಾನಕ್ಕೆ ಅಣಿಯಾಗಿದೆ. ಇದರೊಂದಿಗೆ, ಸ್ವತಂತ್ರ ಲಿಂಗಾಯತ ಧರ್ಮದ ಕಿಚ್ಚು ಮತ್ತೆ ಹೊತ್ತಿಕೊಂಡಿದೆ.

ಮತ್ತೆ ಭುಗಿಲೆದ್ದ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ: ಪಂಚಪೀಠಾಧ್ಯಕ್ಷರ ನಿರ್ಣಯಕ್ಕೆ ಲಿಂಗಾಯತ ಮಠಾಧಿಪತಿಗಳ ಸೆಡ್ಡು
ಚಿತ್ರದುರ್ಗದ ಮುರುಘಾಮಠದಲ್ಲಿ ಸಭೆ ಸೇರಿದ ಲಿಂಗಾಯತ ಮಠಾಧೀಶರು, ಲಿಂಗಾಯತ ಮುಖಂಡರು
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Jul 28, 2025 | 8:03 AM

Share

ಚಿತ್ರದುರ್ಗ, ಜುಲೈ 28: ಲಿಂಗಾಯತ ಪ್ರತ್ಯೇಕ ಧರ್ಮದ ಬೆಂಕಿ ಮತ್ತೆ ಧಗಧಗಿಸಲು ಶುರುವಾಗಿದೆ. ದಾವಣಗೆರೆಯಲ್ಲಿ ಇದೇ ಜುಲೈ 22ಕ್ಕೆ ನಡೆದ ವೀರಶೈವ ಲಿಂಗಾಯತ (Veerashaiva Lingayat) ಪಂಚಪೀಠಾಧ್ಯಕ್ಷರ ಶೃಂಗಸಭೆ ಬೆನ್ನಲ್ಲೇ ಭಾನುವಾರ ಲಿಂಗಾಯತ (Lingayat) ಮಠಾಧೀಶರು, ಲಿಂಗಾಯತ ಮುಖಂಡರು ಚಿತ್ರದುರ್ಗದ ಮುರುಘಾಮಠದಲ್ಲಿ ಸಭೆ ಸೇರಿದ್ದಾರೆ. ಸಭೆ ಸೇರಿದ್ದು ಮಾತ್ರವಲ್ಲ, ವೀರಶೈವ ಪಂಚಪೀಠಾಧ್ಯಕ್ಷರು ಕೈಗೊಂಡ ನಿರ್ಣಯಗಳಿಗೆ ಅಸಮಾಧಾನ ಹೊರಹಾಕಿದ್ದಾರೆ. ಜಾತಿಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಪಂಚಪೀಠಾಧ್ಯಕ್ಷರ ಶೃಂಗಸಭೆ ನಿರ್ಣಯ ಕೈಗೊಂಡಿತ್ತು. ಇದಕ್ಕೆ ಬೇಕಾದ ಒಂದು ಪ್ರತ್ಯೇಕ ಕಾಲಂ ಇರಬೇಕೆಂದು ಪ್ರಧಾನಿಗೆ ಮನವಿ ಮಾಡುವುದಕ್ಕೂ ನಿರ್ಧರಿಸಿದ್ದರು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಲಿಂಗಾಯತ ಮಠಾಧೀಶರ ಒಕ್ಕೂಟ ಅಭಿಯಾನಕ್ಕೆ ಮುಂದಾಗಿದೆ.

ಧರ್ಮ ಮತ್ತು ಉಪಪಂಗಡ ಎರಡನ್ನೂ ದಾಖಲಿಸಲು ಜಾಗೃತಿ: ಸೆ. 1ರಿಂದ ‘ಬಸವ’ ಅಭಿಯಾನ

ವೀರಶೈವ ಲಿಂಗಾಯತ ಎಂದು ದಾಖಲಿಸಲು ಪಂಚಪೀಠಾಧ್ಯಕ್ಷರು ಹೇಳಿದ್ದರೆ, ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೂ, ಜಾತಿ ಕಾಲಂನಲ್ಲಿ ಉಪಪಂಗಡವನ್ನೂ ದಾಖಲಿಸುವಂತೆ ಲಿಂಗಾಯತ ಮಠಾಧೀಶರ ಒಕ್ಕೂಟ ಜಾಗೃತಿ ಮೂಡಿಸಲು ಮುಂದಾಗಿದೆ.

ರಂಭಾಪುರಿ ಶ್ರೀಗಳ ಬಗ್ಗೆ ವಚನಾನಂದ ಶ್ರೀ ಬಹಿರಂಗ ಕಿಡಿ

ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶ್ರೀಗಳ ವಿರುದ್ಧ ಲಿಂಗಾಯತ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆ ಎಂಬ ಮಾತಿಗೆ ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.

ಇದನ್ನೂ ಓದಿ
Image
ರೈತರಿಗೆ ಗೊಬ್ಬರ ಕೊರತೆಯ ಬರೆ: ಇಂದು ಕರ್ನಾಟಕದಾದ್ಯಂತ ಬಿಜೆಪಿ ಹೋರಾಟ
Image
ವೀರಶೈವ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ನಿರ್ಣಯಗಳು ಅಂಗೀಕಾರ
Image
LIVE: ದಾವಣಗೆರೆಯಲ್ಲಿ ವೀರಶೈವ ಪೀಠಾಚಾರ್ಯರ ಶೃಂಗ ಸಭೆ, ನೇರಪ್ರಸಾರ
Image
ಲಿಂಗಾಯತ ಪಂಚಪೀಠಗಳ ಶಕ್ತಿ ಪ್ರದರ್ಶನ: 40 ವರ್ಷ ನಂತರ ಬೃಹತ್ ಶೃಂಗ ಸಮ್ಮೇಳನ

ಸಾಣೆಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು ಕೂಡಾ ಪಂಚಪೀಠಾಧ್ಯಕ್ಷರ ನಿರ್ಣಯಗಳನ್ನು ವಿರೋಧಿಸಿದ್ದಾರೆ. ಅವರು ಸಂಕುಚಿತ ಮನೋಭಾವ ಬಿಡಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: 3 ದಶಕಗಳ ನಂತರ ನಡೆದ ವೀರಶೈವ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ನಿರ್ಣಯಗಳು ಅಂಗೀಕಾರ

ಒಟ್ಟಿನಲ್ಲಿ, ದಶಕಗಳ ಬಳಿಕ ಪಂಚಪೀಠಾಧೀಶರು ಒಗ್ಗೂಡಿ ನಿರ್ಣಯ ಕೈಗೊಂಡ ಬೆನ್ನಲ್ಲೇ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಸ್ವತಂತ್ರ ಧರ್ಮದ ಮಾನ್ಯತೆ ಕೂಗೆಬ್ಬಿಸಿದೆ. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು, ಗದಗದ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಶ್ರೀಗಳು, ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಈ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಧರ್ಮ ಯುದ್ಧ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಹೊಸ ಸಮಸ್ಯೆ ತಂದೊಡ್ಡಿರುವುದು ಸುಳ್ಳಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Mudnur
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More