ಬಾಗಲಕೋಟೆ, ಫೆಬ್ರವರಿ 17: ಜಿಲ್ಲೆಯ ರಂಭಾಪುರಿ (rambhapuri Seer) ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಲಾದಗಿ ಮಠದ ಪೀಠಾಧಿಪತಿಯಾಗಿ ಗಂಗಾಧರ ಸ್ವಾಮೀಜಿ ನೇಮಕ ಭಕ್ತರನ್ನು ರೊಚ್ಚಿಗೆಬ್ಬಿಸಿದೆ. ಗಂಗಾಧರ ಸ್ವಾಮೀಜಿಯು ಮಠದ ದುರಸ್ತಿ, ಮಠದ ಹೊಲದ ಉಳುಮೆ ಮಾಡಿರುವುದು ಭಕ್ತರ ಕೋಪ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಬಾಗಲಕೋಟೆ ತಾಲೂಕಿನ ಕಲಾದಗಿಯ ಗುರುಲಿಂಗೇಶ್ವರ ಮಠದಲ್ಲಿ ಭಕ್ತರಿಂದ ಪ್ರತಿಭಟನೆ ಮಾಡಲಾಗಿದೆ. ರಂಭಾಪುರಿ ಶಾಖಾ ಮಠ ಎಂದು ನಾವು ಒಪ್ಪಿಕೊಳ್ಳುವುದೇ ಇಲ್ಲ. ಗುರುಲಿಂಗೇಶ್ವರ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಗುರುಲಿಂಗೇಶ್ವರಶ್ರೀ, ಅಡಿವೆಪ್ಪಶ್ರೀ, ಪಡದಪ್ಪಶ್ರೀ ನಮಗೆ ಗೊತ್ತು. ಇವರ್ಯಾರು ರಕ್ತಸಂಬಂಧದ ಸ್ವಾಮೀಜಿಗಳಲ್ಲ ಎಂದು ಆಕ್ರೋಶ ವಕ್ತಪಡಿಸಿದ್ದಾರೆ.
ಚಂದ್ರಶೇಖರ ಶಿವಾಚಾರ್ಯರು ರಂಭಾಪುರಿ ಪೀಠದ ಮೂಲ ಸ್ವಾಮೀಜಿ ಗಂಗಾಧರ ಸ್ವಾಮೀಜಿಯ ಸಂಬಂಧಿಕರು. ಈಗ ಇರುವ ಗಂಗಾಧರ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿಯ ಸಹೋದರಿಯ ಮಗ. ರಂಭಾಪುರಿ ಶ್ರೀಗಳು ಗಂಗಾಧರ ಸ್ವಾಮೀಜಿ ಮಠದ ಆಸ್ತಿ ಕಬಳಿಕೆ ಪ್ರಯತ್ನ ನಡೆಸಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.
ಇದನ್ನೂ ಓದಿ: ಗುರುಲಿಂಗೇಶ್ವರ ಮಠದಲ್ಲಿ ಭುಗಿಲೆದ್ದ ಭಕ್ತರ ಆಕ್ರೋಶ, ರಂಭಾಪುರಿ ಶ್ರೀ ಕಾರಿನ ಮೇಲೆ ಚಪ್ಪಲಿ ಎಸೆತ
ಕೃಷ್ಣಾ ಮೇಲ್ದಂಡೆ ಯೋಜನೆಯಿಂದ 50 ಎಕರೆ ಜಮೀನು ಮುಳುಗಡೆಯಾಗಿದೆ. ಜಮೀನಿಗೆ ಪರಿಹಾರ ರೂಪದಲ್ಲಿ ಕೋಟಿ ಕೋಟಿ ಹಣ ಬಂದಿದೆ. ಹೈಸ್ಕೂಲ್, ಪಿಯು ಕಾಲೇಜು, ಮಠ ಸಹ ಮುಳುಗಡೆ ಆಗಿದೆ. ಮೊದಲ ಹಂತದಲ್ಲಿ ಕೋಟಿಗೂ ಹೆಚ್ಚು ರೂಪಾಯಿ ಪರಿಹಾರ ಬಂದಿದೆ. ಪ್ರೌಢಶಾಲೆ ಮುಳುಗಡೆಯಾಗಿದ್ದು ಕೋಟಿ ರೂ. ಅನುದಾನ ಬಂದಿದೆ. ಮಠದ ಊರಿನಲ್ಲಿರುವ 20 ಮನೆ ಮುಳುಗಡೆಗೆ 3 ಕೋಟಿ ರೂ. ಬಂದಿದೆ. ಮುಳುಗಡೆ ಆಗಿರುವ 14 ಎಕರೆ ಜಮೀನು ಮೌಲ್ಯ 3.5 ಕೋಟಿ ರೂ. ಇನ್ನೂ 28 ಎಕರೆ ಮುಳುಗಡೆಯಾಗಲಿದೆ, 19 ಕೋಟಿ ರೂ. ಬರುವ ಸಾಧ್ಯತೆ ಇದೆ. ಹೀಗಾಗಿ ಪರಿಹಾರ ಹಣಕ್ಕಾಗಿ ಹುನ್ನಾರ ನಡೆದಿದೆ ಎಂದು ಭಕ್ತರು ಆರೋಪ ಮಾಡಿದ್ದಾರೆ.
ಮಠದ 17 ಲಕ್ಷ ರೂ. ಮೌಲ್ಯದ ಕಾರು, ಟ್ರ್ಯಾಕ್ಟರ್, ಬೈಕ್ ಕಣ್ಮರೆಯಾಗಿದೆ. ಗುರುಲಿಂಗೇಶ್ವರ ಶ್ರೀಗಳ ಚಿನ್ನದ ಕಿರೀಟ, ಚಿನ್ನದ ಸರ ನಾಪತ್ತೆಯಾಗಿದೆ. ಮಠದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲು ನಾವು ಬಿಡುವುದಿಲ್ಲ. ಗಂಗಾಧರಶ್ರೀಗಳನ್ನು ಮಠದ ಸ್ವಾಮೀಜಿ ಅಂತಾ ನಾವು ಒಪ್ಪಿಕೊಳ್ಳಲ್ಲ. ಮಠಕ್ಕೆ ಬೀಗ ಹಾಕುವವರೆಗೂ ನಾವು ಸ್ಥಳದಿಂದ ತೆರಳಲ್ಲವೆಂದು ಭಕ್ತರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಕ್ರೀಡಾ ಪ್ರಾಧಿಕಾರದಿಂದ ವಿಜಯಾನಂದ ಕಾಶಪ್ಪನವರ್ಗೆ ಕೊಕ್ ಕೊಟ್ಟು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನೀಡಿದ ಸರ್ಕಾರ
ಇಂಥಾ ಸೇಡಿನ ಸಮರದ ನಡುವೆ ಗುರುಲಿಂಗೇಶ್ವರ ಮಠದಲ್ಲಿ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು.. ಈ ಕಾರ್ಯಕ್ರಮದಲ್ಲಿ ಭಾಗವಹಿಸೋಕೆ ರಂಭಾಪುರಿ ಶ್ರೀಗಳು ಹೋಗಿದ್ರು.. ಆದ್ರೆ ಉದಗಟ್ಟಿ ಗ್ರಾಮಕ್ಕೆ ತೆರಳುತ್ತಿದ್ದ ರಂಭಾಪುರಿ ಶ್ರೀಗಳ ಕಾರನ್ನ ತಡೆಗಟ್ಟಲು ಭಕ್ತರು ಯತ್ನಿಸಿದ್ದಾರೆ. ಈ ವೇಳೆ ಶ್ರೀಗಳ ವಿರುದ್ಧ ಭಕ್ತರು ಧಿಕ್ಕಾರ ಕೂಗಿದ್ದಾರೆ. ಅಷ್ಟೇ ಅಲ್ಲ ಉದ್ರಿಕ್ತ ಮಹಿಳೆಯೊಬ್ಬರು ಶ್ರೀಗಳ ಕಾರಿನತ್ತ ಚಪ್ಪಲಿ ತೂರಾಟ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.