ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್‌ ನೇಮಕ

ವಾರಗಳ ಹಿಂದೆ ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಮಾಡಿದ ಎಡವಟ್ಟನ್ನು ಸರ್ಕಾರ ಸರಿಪಡಿಸಿದೆ. ಕರ್ನಾಟಕ ಕ್ರೀಡಾ ಪ್ರಾಧಿಕಾರ ಅಧ್ಯಕ್ಷರಾಗಿ ಶಾಸಕ ವಿಜಯಾನಂದ ಕಾಶಪ್ಪನವರ್‌ (Vijayananda Kashappanavar) ಅವರ ನೇಮಕ ಆದೇಶವನ್ನಜು ರದ್ದುಪಡಿಸಲಾಗಿದ್ದು, ಇದೀಗ ಅವರಿಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್‌ ನೇಮಕ
Follow us
|

Updated on:Feb 17, 2024 | 5:22 PM

ಬೆಂಗಳೂರು, (ಫೆಬ್ರವರಿ 17): ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ (Veerashaiva lingayat development Corporation) ನೇಮಕ ಮಾಡಲಾಗಿದೆ. ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಮುಂದಿನ ಎರರು ವರ್ಷಗಳ ಅವಧಿಗೆ ನೇಮಕ ಮಾಡಿ ಆದೇಶಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಶಿಫಾರಸು ಮಾಡಿದ್ದಾರೆ. ಈ ಹಿಂದೆ ವಿಜಯಾನಂದ ಕಾಶಪ್ಪನವರ್‌ ಅವರನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನರನ್ನಾಗಿ ಮಾಡಿತ್ತು. ಆದ್ರೆ, ಕೆಲ ಕಾನೂನು ತೊಡಕುಗಳು ಎದುರಾಗಿದ್ದರಿಂದ ಇದೀಗ ಹಿಂದಿನ ಆದೇಶವನ್ನು ರದ್ದುಪಡಿಸಿ ಈಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಕಳೆದ ಜನವರಿ 27ರಂದು ರಾಜ್ಯ ಸರ್ಕಾರವು 35 ಮಂದಿ ಶಾಸಕರನ್ನು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಅದರಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ(Sports Authority) ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆದರೆ ಕ್ರೀಡಾ ಪ್ರಾಧಿಕಾರದ ಬೈಲಾದಲ್ಲಿ ಇದಕ್ಕೆ ಅವಕಾಶವಿಲ್ಲ. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಬೈಲಾದ ನಿಯಮದ ಪ್ರಕಾರ ಸಚಿವರೇ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗುತ್ತಾರೆ. ಅಂದರೆ ಈಗ ಕ್ರೀಡಾ ಸಚಿವರಾಗಿರುವ ನಾಗೇಂದ್ರ ಅವರೇ ಅಧ್ಯಕ್ಷರು. ಬೇಕಿದ್ದರೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಬಹುದು. ಈ ಎಡವಟ್ಟನ್ನು ಅರ್ಥ ಮಾಡಿಕೊಂಡ ಸರ್ಕಾರ ವಿಜಯಾನಂದ ಕಾಶಪ್ಪನವರ್‌ ಅವರನ್ನು ಈಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನೇಮಕ ಮಾಡಿದೆ. ಕಾಶಪ್ಪನವರ್‌ ಅವರು ಪಂಚಮಸಾಲಿ ಲಿಂಗಾಯತ 2A ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.

ಸಿದ್ದರಾಮಯ್ಯ ಶಿಫಾರಸ್ಸಿನಲ್ಲೇನಿದೆ?

ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್​ ಅವರನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ರದ್ದುಪಡಿಸಿ, ಮಾನ್ಯ ಶಾಸಕರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರನ್ನಾಗಿ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ನೇಮಿಸಿ, ಸಚಿವ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಿ ಆದೇಶ ಹೊರಡಿಸಲು ಸೂಚಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:29 pm, Sat, 17 February 24