ನಕಲಿ ಜಡ್ಜ್, ನಕಲಿ ಕೋರ್ಟ್ ಸೃಷ್ಟಿಸಿ ಬಾಗಲಕೋಟೆಯ ಸರ್ಕಾರಿ ನೌಕರನಿಗೆ 83 ಲಕ್ಷ ರೂ. ಟೋಪಿ ಹಾಕಿದ ಸೈಬರ್ ವಂಚಕರು

ಬಾಗಲಕೋಟೆಯಲ್ಲಿ ಆಘಾತಕಾರಿ ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹಿರಿಯ ಸರ್ಕಾರಿ ನೌಕರರೊಬ್ಬರು ನಕಲಿ ಪೊಲೀಸರು ಮತ್ತು ನ್ಯಾಯಾಲಯದ ನಾಟಕಕ್ಕೆ ಬಲಿಯಾಗಿ 83.22 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಆಧಾರ್ ಕಾರ್ಡ್ ದುರ್ಬಳಕೆ ಆರೋಪದ ಮೇಲೆ ಬೆದರಿಸಿ, ವರ್ಚುವಲ್ ವಿಚಾರಣೆ ನಡೆಸಿ ಹಣ ಸುಲಿಗೆ ಮಾಡಲಾಗಿದೆ. ಇಂತಹ ಸೈಬರ್ ಅಪರಾಧಗಳಿಂದ ಸಾರ್ವಜನಿಕರು ಎಚ್ಚರದಿಂದಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ನಕಲಿ ಜಡ್ಜ್, ನಕಲಿ ಕೋರ್ಟ್ ಸೃಷ್ಟಿಸಿ ಬಾಗಲಕೋಟೆಯ ಸರ್ಕಾರಿ ನೌಕರನಿಗೆ 83 ಲಕ್ಷ ರೂ. ಟೋಪಿ ಹಾಕಿದ ಸೈಬರ್ ವಂಚಕರು
ಸಾಂದರ್ಭಿಕ ಚಿತ್ರ
Image Credit source: AI image
Edited By:

Updated on: Jun 09, 2026 | 4:59 PM

ಬಾಗಲಕೋಟೆ, ಜೂ.9: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸೈಬರ್​ ವಂಚನೆಗಳು ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಒಂದಲ್ಲ ಒಂದು ಇಂತಹ ಸೈಬರ್​​​​ ವಂಚನೆ ಪ್ರಕರಣಗಳು ಕಂಡು ಬರುತ್ತಿದೆ. ಬೇರೆ ಬೇರೆ ವೇಷದಲ್ಲಿ ಬಂದು ಜನರಿಂದ ಹಣ-ಸಂಪತ್ತುಗಳನ್ನು ದೋಚುತ್ತಿದ್ದಾರೆ. ದೇಶಾದ್ಯಂತ ಸಾರ್ವಜನಿಕರನ್ನು ನಡುಗಿಸುತ್ತಿರುವ ‘ಡಿಜಿಟಲ್ ಅರೆಸ್ಟ್’ ಮತ್ತು ಸೈಬರ್ ವಂಚನೆಯ ಬಲೆಗೆ ಈಗ ಬಾಗಲಕೋಟೆಯ ಹಿರಿಯ ಸರ್ಕಾರಿ ನೌಕರರೊಬ್ಬರು ಬಲಿಯಾಗಿದ್ದಾರೆ. ನಕಲಿ ಪೊಲೀಸ್ ಠಾಣೆ, ನಕಲಿ ವಕೀಲರು ಹಾಗೂ ನಕಲಿ ಜಡ್ಜ್ ಸೃಷ್ಟಿಸಿ ಬೆದರಿಕೆ ಹಾಕಿದ ವಂಚಕರ ಗ್ಯಾಂಗ್, ಅವರಿಂದ ಬರೋಬ್ಬರಿ 83,22,000 ರೂಪಾಯಿ (83.22 ಲಕ್ಷ ರೂ.) ಸುಲಿಗೆ ಮಾಡಿದೆ. ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಚೇರಿಯ ಹಿರಿಯ ಟೈಪಿಸ್ಟ್‌ (Senior Typist) ಹೆಚ್.ವಿ. ಸುರೇಶ್ ರಾವ್ (59) ವಂಚನೆಗೊಳಗಾದ ವ್ಯಕ್ತಿ ಎಂದು ಹೇಳಲಾಗಿದೆ . ಈ ಸಂಬಂಧ ಬಾಗಲಕೋಟೆ ಸಿಇಎನ್ (CEN) ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ್ ರಾವ್ ಅವರಿಗೆ ವಂಚಕರ ಗ್ಯಾಂಗ್ ವಿವಿಧ ನಂಬರ್‌ಗಳಿಂದ ಕರೆ ಮಾಡಿ, ತಾವು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಇಲಾಖೆಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದರು. “ನಿಮ್ಮ ಆಧಾರ್ ಕಾರ್ಡ್ ಬಳಸಿ ಖರೀದಿಸಲಾದ ಸಿಮ್ ಕಾರ್ಡ್ ಒಂದರಿಂದ ಸಾರ್ವಜನಿಕರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಮುಂಬೈ ಕ್ರೈಂ ಬ್ರ್ಯಾಂಚ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ” ಎಂದು ಹೆದರಿಸಿದ್ದರು.

ವಂಚಕರು ಕೇವಲ ಆಡಿಯೋ ಕರೆಯಲ್ಲಿ ಬೆದರಿಸದೆ, ಸುರೇಶ್ ರಾವ್ ಅವರಿಗೆ ವಿಡಿಯೋ ಕಾಲ್ ಮಾಡಿದ್ದರು. ಇನ್ನು ವಂಚಕರು ಮೋಸ ಮಾಡಲು ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು. ವಿಡಿಯೋದಲ್ಲಿ ಅಸಲಿ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಸೆಟ್‌ಅಪ್‌ ಮಾದರಿಯನ್ನೇ ಸೃಷ್ಟಿಸಲಾಗಿತ್ತು. ಪೊಲೀಸರು, ವಕೀಲರು ಮತ್ತು ನ್ಯಾಯಾಧೀಶರ ವೇಷ ಧರಿಸಿದ್ದ ನಕಲಿ ಗ್ಯಾಂಗ್, ವಿಡಿಯೋ ಕಾಲ್ ಮೂಲಕ ಸುರೇಶ್ ರಾವ್ ಮತ್ತು ಅವರ ಕುಟುಂಬಸ್ಥರನ್ನು ವರ್ಚುಯಲ್ ವಿಚಾರಣೆಯ ನಾಟಕವಾಡಿ ತೀವ್ರ ಆತಂಕ ಸೃಷ್ಟಿಸಿತ್ತು. ಖ್ಯಾತ ಉದ್ಯಮಿ ನರೇಶ್ ಗೋಯಲ್ ಹಣ ಅಕ್ರಮ ವರ್ಗಾವಣೆ ಕೇಸ್‌ನಲ್ಲಿ ನಿಮ್ಮ ಮುಂಬೈನ ಕೆನರಾ ಬ್ಯಾಂಕ್ ಖಾತೆಗೆ ಹಣ ಬಂದಿದೆ. ಐಪಿಎಸ್ ಅಧಿಕಾರಿ ಬಾಲ್ ಸಿಂಗ್ ರಜಪೂತ್ ನಿರ್ದೇಶನದ ಮೇರೆಗೆ ನಾವು ತನಿಖೆ ಮಾಡುತ್ತಿದ್ದೇವೆ. ಅರೆಸ್ಟ್ ಆಗುವುದರಿಂದ ತಪ್ಪಿಸಿಕೊಳ್ಳಬೇಕಾದರೆ ಹಣ ನೀಡಬೇಕು ಎಂದು ಹೆದರಿಸಿದ್ದರು.

ಇದನ್ನೂ ಓದಿ: ‘ಶ್ರೀರಾಮ ದಶರಥನ ಮಗ ಅಲ್ಲ’: ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರೊ. ಭಗವಾನ್

ಈ ಕೇಸ್​​​​​​ ಕೈಬಿಡಲು ಮತ್ತು ಎಫ್‌ಐಆರ್ ರದ್ದುಪಡಿಸಲು ಮೊದಲ ಹಂತವಾಗಿ ಮಾರ್ಚ್ 18 ರಿಂದ ಏಪ್ರಿಲ್ 15 ರವರೆಗೆ ಐಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಖಾತೆಗಳ ಮೂಲಕ ಹಂತ ಹಂತವಾಗಿ 45 ಲಕ್ಷದ 22 ಸಾವಿರ ರೂಪಾಯಿಗಳನ್ನು ಹಾಕಿಸಿಕೊಂಡಿದ್ದರು. ಇದಾದ ಬಳಿಕ ಪ್ರಕರಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ಲಿಯರ್ ಮಾಡಲು ಕ್ರಿಪ್ಟೋ ಕರೆನ್ಸಿ ಖರೀದಿಸಿ ಅಮೆರಿಕನ್ ಡಾಲರ್‌ಗೆ ಕನ್ವರ್ಟ್ ಮಾಡಬೇಕು ಎಂದು ನಂಬಿಸಿದ್ದರು. ಇದನ್ನು ನಂಬಿದ ನೌಕರ ಸುರೇಶ್ ರಾವ್, ಫೆಬ್ರವರಿಯಿಂದ ಏಪ್ರಿಲ್ ಅವಧಿಯಲ್ಲಿ ಬೆಳಗಾವಿ ಮೂಲದ ಶಂಕರ್ ಶಿಂಧೆ ಎಂಬುವವರಿಂದ 38 ಲಕ್ಷ ರೂಪಾಯಿ ಮೌಲ್ಯದ ಯುಎಸ್‌ಡಿಟಿ ಡಾಲರ್ ಖರೀದಿಸಿ ವಂಚಕರ ಖಾತೆಗೆ ವರ್ಗಾಯಿಸಿದ್ದರು.

ಹಣ ಕಳೆದುಕೊಂಡು ಸಂಪೂರ್ಣ ದಾರಿ ಕಾಣದಾದಾಗ ತಮಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚನೆಯಾಗಿರುವುದು ಸುರೇಶ್ ರಾವ್ ಅವರಿಗೆ ಅರಿವಾಗಿದೆ. ಈ ಕುರಿತು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಸಿದ್ದಾರ್ಥ್ ಗೋಯಲ್ ಮಾಹಿತಿ ನೀಡಿದ್ದು, ಸಿಇಎನ್ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಈ ಬಗ್ಗೆ ಸಾರ್ವಜನಿಕವಾಗಿ ಎಲ್ಲರಿಗೂ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us